ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳಿಗೆ ಶೇ 40 ರಷ್ಟು ಅಧಿಕ ವೆಚ್ಚ!

ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ: ಡಿಸಿಎಂ ಪರಮೇಶ್ವರ ಕಟು ವಿಮರ್ಶೆ
Last Updated 11 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಅಂದಾಜು ವೆಚ್ಚಕ್ಕಿಂತ ಶೇ 40 ರಷ್ಟು ಹೆಚ್ಚು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಇಲಾಖೆಯ ಕಾರ್ಯ ವೈಖರಿಯನ್ನು ಪರಮೇಶ್ವರ ಅವರು ಕಟು ವಿರ್ಮಶೆಗೆ ಒಳಪಡಿಸಿದರು. ಒಂದು ಹಂತದಲ್ಲಿ ಅಧಿಕಾರಿಗಳಿಗೆ ಮಾತನಾಡಲು ಬಿಡದೇ ಎಲ್ಲ ವಿಷಯಕ್ಕೂ ತಲೆ ತೂರಿಸುತ್ತಿದ್ದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನೂ ಪರಮೇಶ್ವರ ತರಾಟೆಗೆ ತೆಗೆದುಕೊಂಡರು. ಸಚಿವರಿಬ್ಬರ ಮಧ್ಯೆ ಟೀಕೆ–ಸಮರ್ಥನೆಯ ಜಟಾಪಟಿ ನಡೆಯಿತು.

ಯಾವುದೇ ಕಾಮಗಾರಿಯನ್ನು ಅಂದಾಜು ವೆಚ್ಚಕ್ಕಿಂತ ಹೆಚ್ಚು ಅಥವಾ ಕಡಿಮೆ ಮೊತ್ತದಲ್ಲಿ ಪೂರ್ಣಗೊಳಿಸುವುದಾದರೆ, ಅಂದಾಜು ಮಾಡುವ ಅಗತ್ಯವಾದರೂ ಏನಿದೆ. ಇದರಿಂದ ಕಾಮಗಾರಿ ಗುಣಮಟ್ಟದ ಬಗ್ಗೆಯೇ ಅನುಮಾನ ಮೂಡುತ್ತಿದೆ. ಗುತ್ತಿಗೆ ನೀಡುವುದಕ್ಕೂ ಮೊದಲು ಯೋಜನೆಯ ಅಂದಾಜು ವೆಚ್ಚದ ಬಗ್ಗೆ ಅಂದಾಜು ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದರು.

‘ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಅದನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತದೆ. ಅಂದಾಜು ವೆಚ್ಚವನ್ನು ಮೀರಿ ಖರ್ಚು ಮಾಡಲಾಗುತ್ತದೆ. ಕಾಮಗಾರಿಯ ಗುಣಮಟ್ಟವೂ ಅಷ್ಟಕಷ್ಟೆ. ಯೋಜನಾ ಬದ್ಧವಾಗಿ ಮಾಡಲು ಸಾಧ್ಯವಿಲ್ಲವೆ’ ಎಂದು ಪರಮೇಶ್ವರ ಅಧಿಕಾರಿಗಳನ್ನು ಪ್ರಶ್ನಿಸಿದರು.

2013 ರಿಂದ ಇಲ್ಲಿಯವರೆಗೆ ರಸ್ತೆ ನಿರ್ಮಾಣಕ್ಕಾಗಿ ₹50 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಈ ಹಣದಲ್ಲಿ ಸುಮಾರು 75 ಸಾವಿರ ಕಿ.ಮೀಗಳಷ್ಟು ರಸ್ತೆ ನಿರ್ಮಾಣ ಆಗಬೇಕಿತ್ತು. ಅಚ್ಚರಿ ಎಂದರೆ ರಸ್ತೆ ನಿರ್ವಹಣೆ ಹೊರತುಪಡಿಸಿ, ರಸ್ತೆ ನಿರ್ಮಾಣದ ಕಾರ್ಯ ಪೂರ್ಣಗೊಂಡಿಲ್ಲ. ಹಣ ವೃಥಾ ಪೋಲಾಗುತ್ತಿದೆ. ಹಣ ಎಲ್ಲಿಂದ ತರಬೇಕು ಎಂದು ಅವರು ಪ್ರಶ್ನಿಸಿದರು.

‘ಸಾಕಷ್ಟು ಹಣ ಖರ್ಚು ಮಾಡಿದ್ರೂ ಯಾಕೆ ರಸ್ತೆ ಹಾಳಾಗ್ತಾ ಇದೆ.ಎಷ್ಟು ರಸ್ತೆ ಮಾಡಿದ್ದೀರ ಲೆಕ್ಕ ಕೊಡಿ. ನಿಮ್ಮ ಬಳಿ ಸರಿಯಾದ ಪ್ಲಾನ್ ಇಲ್ಲ,ಪದೇ ಪದೇ ರೋಡ್ ಹಾಳಾದ್ರೆ, ಮತ್ತೆಷ್ಟು ದುಡ್ಡು ಸುರಿಯಬೇಕು?ತೀರ್ಥಹಳ್ಳಿಯಲ್ಲಿ ಶಾಲಾ ಸಂಪರ್ಕ ಸೇತುವೆ ಮಾಡಿದ್ದಾರೆ. ಆದರೆ, ಆ ಶಾಲೆಗೆ ಸೂಕ್ತ ರಸ್ತೆಯೇ ಇಲ್ಲ. ಇವೆಲ್ಲ ಎಂಜಿನಿಯರ್‌ಗೆ ಯಾಕೆ ಕಾಣಿಸಲ್ಲ’ ಎಂದು ಪರಮೇಶ್ವರ ಗರಂ ಆದರು.

ಮಧ್ಯೆ ಪ್ರವೇಶಿಸಿದ ಸಚಿವ ಎಚ್‌.ಡಿ.ರೇವಣ್ಣ ಅವರು, ‘ಇಲಾಖೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಒಬ್ಬ ಎಂಜಿನಿಯರ್‌ಗೆ ಒಬ್ಬ ಡ್ರೈವರ್‌ ಇದ್ದಾನೆ ಅಷ್ಟೆ. ನಮ್ಮ ಇತಿ ಮಿತಿಯಲ್ಲಿ ಒಳ್ಳೇ ಕೆಲಸ ನಡೆದಿದೆ. ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ’ ಎಂದು ಸಮರ್ಥಿಸಿಕೊಂಡರು.

ಆಗ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನಿಗದಿ ಮಾಡಬೇಕು. ಕೆಲಸ ತಡವಾದ ಕಡೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನೋಟಿಸ್‌ ನೀಡಬೇಕು. ಅಷ್ಟಕ್ಕೂ ಬಗ್ಗದಿದ್ದರೆ ಅಂತಹವರ ಹೆಸರುಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವೈಜ್ಞಾನಿಕ ಟೆಂಡರ್‌ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು’ ಎಂದು ಸೂಚಿಸಿದರು.

ನವೀಕರಣಕ್ಕೆ ₹1200 ಕೋಟಿ

ಶಾಲೆ ಮತ್ತು ಕಾಲೇಜುಗಳ ನವೀಕರಣಕ್ಕಾಗಿ ₹1200 ಕೋಟಿ ನೀಡಲಾಗಿದೆ.ಶಾಲಾ– ಕಾಲೇಜುಗಳ ಕಟ್ಟಡದ ನವೀಕರಣ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

‘ಒಟ್ಟು 6,433 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಒಟ್ಟು 405 ಕಿ.ಮೀ. ಉದ್ದದ 4 ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಘೋಷಿಸಲಾಗಿದೆ’ ಎಂದು ಸಚಿವ ರೇವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT