ಮಂಗಳವಾರ, ನವೆಂಬರ್ 12, 2019
27 °C

₹ 57 ಸಾವಿರ ದುರುಪಯೋಗ ಸಾಬೀತು; ಮೂವರಿಗೆ ಕಡ್ಡಾಯ ನಿವೃತ್ತಿ

Published:
Updated:

ಶಹಾಪುರ (ಯಾದಗಿರಿ ಜಿಲ್ಲೆ): ಸಮುದಾಯ ಅಭಿವೃದ್ಧಿ ಯೋಜನೆಯ ₹ 57 ಸಾವಿರ ದುರುಪಯೋಗ ಪಡಿಸಿಕೊಂಡ ಆರೋಪ ಸಾಬೀತಾಗಿದ್ದರಿಂದ ಶಹಾಪುರ ಪುರಸಭೆಯಲ್ಲಿ ಹಿಂದೆ ಕಾರ್ಯನಿರ್ವಹಿಸಿದ್ದ ಮೂವರು ಅಧಿಕಾರಿಗಳನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ಶಹಾಪುರ ಪುರಸಭೆ ಮುಖ್ಯಾಧಿಕಾರಿಯಾಗಿದ್ದ, ಸದ್ಯ ರಾಯಚೂರು ಜಿಲ್ಲೆ ಸಿರವಾರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸರೋಜಾ ಪಾಟೀಲ, ಶಹಾಪುರ ಪುರಸಭೆಯಲ್ಲಿ ಸಮುದಾಯ ಸಂಘಟಕರಾಗಿದ್ದ, ಪ್ರಸ್ತುತ ರಾಯಬಾಗ ಪಟ್ಟಣ ಪಂಚಾಯಿತಿಯಲ್ಲಿ ಸಮುದಾಯ ಸಂಘಟಕರಾಗಿರುವ ಲಕ್ಷ್ಮೀಶ ಮತ್ತು ಶಹಾಪುರ ಪುರಸಭೆಯಲ್ಲಿ ಸಮುದಾಯ ಸಂಘಟಕರಾಗಿದ್ದ, ಈಗ ಯಾದಗಿರಿ ನಗರಸಭೆಯಲ್ಲಿ ಸಮುದಾಯ ಸಂಘಟಕರಾಗಿರುವ ತಿಪ್ಪಮ್ಮ ಬಿರಾದಾರ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.

ಅಲ್ಲದೆ ದುರುಪಯೋಗವಾಗಿರುವ ₹ 57 ಸಾವಿರವನ್ನು ಈ ಮೂವರಿಂದ ಸಮನಾಗಿ ವಾರ್ಷಿಕ ಶೇ 8ರಷ್ಟು ಬಡ್ಡಿಯೊಂದಿಗೆ ವಸೂಲಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಏನಿದು ಪ್ರಕರಣ: 2011–12ನೇ ಸಾಲಿನ ಪುರಸಭೆಯ ಎಸ್‌ಜೆಎಸ್ಆರ್‌ವೈ ಯೋಜನೆಯ ನಗರ ಸಮುದಾಯ ಅಭಿವೃದ್ಧಿ (ಯುಸಿಡಿಎನ್) ಉಪ ಘಟಕದಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹ 57 ಸಾವಿರ ದುರ್ಬಳಕೆ ಮಾಡಿಕೊಂಡಿದ್ದು, ಇವರ ವಿರುದ್ಧ ತನಿಖೆ ನಡೆಸುವಂತೆ ಅಂದಿನ ಜಿಲ್ಲಾಧಿಕಾರಿ 2015 ಫೆಬ್ರವರಿ 18ರಂದು ಶಿಫಾರಸು ಮಾಡಿದ್ದರು.

ಪೌರಾಡಳಿತ ನಿರ್ದೇಶನಾಲಯವು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಿಂದ ತನಿಖೆ ನಡೆಸಿತ್ತು. 

‘ಕೌಶಲಾಭಿವೃದ್ಧಿ ತರಬೇತಿ ಬಗ್ಗೆ ಮಾರ್ಗದರ್ಶನ, ಸಾಮಾಜಿಕ ಅನಿಷ್ಠ ಪದ್ಧತಿಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ₹ 57 ಸಾವಿರ ಮುಂಗಡ ಹಣದ ಚೆಕ್ ಪಡೆದುಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೆ ಜಿಹ್ವೇಶ್ವರ ಕಲ್ಯಾಣ ಮಂಟಪದ ಬಾಡಿಗೆ, ಗುರುಪ್ರಸಾದ್‌ ಹೋಟೆಲ್‌ನಿಂದ ನಕಲಿ ಬಿಲ್ ಪಡೆದು ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ’ ಎಂದು ವಿಚಾರಣೆಯ ವರದಿಯಲ್ಲಿ ನಮೂದಿಸಲಾಗಿದೆ.

ಪ್ರತಿಕ್ರಿಯಿಸಿ (+)