ಶನಿವಾರ, ಡಿಸೆಂಬರ್ 14, 2019
25 °C
ತಜ್ಞರ ಸಮಿತಿ ಗುರುತಿಸಿದ್ದ 10 ಲಕ್ಷ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ವ್ಯಾಪ್ತಿ * ರಾಜ್ಯ ಸರ್ಕಾರದ ಕ್ರಮ

1.62 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಡಿತ

ಚಿರಂಜೀವಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿವೃದ್ಧಿ, ಅತಿಕ್ರಮಣ, ಮತ್ತಿತರ ಚಟುವಟಿಕೆಗಳಿಂದಾಗಿ ಅರಣ್ಯ ಪ್ರದೇಶ ಒತ್ತಡಕ್ಕೆ ಸಿಲುಕಿದ್ದು, 1.62 ಲಕ್ಷ ಹೆಕ್ಟೇರ್ ಭೂಮಿಯನ್ನು ಕಾಯ್ದಿಟ್ಟ ಅರಣ್ಯದ ವ್ಯಾಪ್ತಿಯಿಂದ ರಾಜ್ಯ ಸರ್ಕಾರ ಕೈಬಿಟ್ಟಿದೆ.

1995ರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಅರಣ್ಯ ಪ್ರದೇಶವನ್ನು ಗುರುತಿಸುವುದು ಹಾಗೂ ಅರಣ್ಯ ಸಂರಕ್ಷಣೆಗೆ ಒತ್ತುನೀಡುವ ಕಾರ್ಯಕ್ರಮಗಳನ್ನು ರೂಪಿಸಿತ್ತು. ನಂತರದ ದಿನಗಳಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಗುರುತಿಸಿದ ಭೂಮಿಯನ್ನೂ ನಿರಂತರವಾಗಿ ಕಡಿಮೆ ಮಾಡುತ್ತಾ ಬಂದಿದೆ.

ಮೊದಲ ಬಾರಿಗೆ ನೇಮಕಗೊಂಡಿದ್ದ ತಜ್ಞರ ಸಮಿತಿಯು ಸುಮಾರು 10 ಲಕ್ಷ ಹೆಕ್ಟೇರ್ ಭೂಮಿಯನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಗುರುತಿಸಿತ್ತು. ಈ ವಿಚಾರವನ್ನು 2002ರಲ್ಲಿ ಸುಪ್ರೀಂ ಕೋರ್ಟ್ ಗಮನಕ್ಕೂ ತರಲಾಗಿತ್ತು. ಆದರೆ ವರ್ಷಗಳು ಕಳೆದಂತೆ ಪದೇಪದೇ ಈ ಅರಣ್ಯ ಪ್ರದೇಶವನ್ನು ಪುನರ್ ಪರಿಶೀಲನೆಗೆ ಒಳಪಡಿಸಿದ್ದು, ನಿಧಾನವಾಗಿ ಕಡಿಮೆ ಮಾಡುತ್ತಾ ಬರಲಾಗಿದೆ. ಇತ್ತೀಚೆಗೆ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು 3.30 ಲಕ್ಷ ಹೆಕ್ಟೇರ್‌ಗೆ ಇಳಿಸಲಾಗಿದೆ ಎಂದು ಅದರಲ್ಲಿ ನಮೂದಿಸಲಾಗಿದೆ.

ಅರಣ್ಯ ಪ್ರದೇಶವನ್ನು ಕಡಿಮೆ ಮಾಡಿರುವುದಕ್ಕೆ ಹತ್ತು ಪ್ರಮುಖ ಕಾರಣಗಳನ್ನು ಸರ್ಕಾರ ಪಟ್ಟಿ ಮಾಡಿದೆ. ಖಾಸಗಿ ಭೂಮಿಯನ್ನು ಸರ್ಕಾರಿ ಜಮೀನು ಎಂದು ತಪ್ಪಾಗಿ ವರ್ಗೀಕರಿಸಿದ್ದು, ಈಗಾಗಲೇ ಅರಣ್ಯ ಪ್ರದೇಶವೆಂದು ಗುರುತಿಸಿದ್ದರೂ, ಅಂತಹ ಅರಣ್ಯ ಪ್ರದೇಶವನ್ನೂ ಮತ್ತೆ ಲೆಕ್ಕಕ್ಕೆ ತೆಗೆದುಕೊಂಡಿದ್ದು, ಸರ್ವೆ ನಂಬರ್‌ಗಳು ಪುನರಾವರ್ತನೆಯಾಗಿದ್ದ ಹಿನ್ನೆಲೆಯಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಪ್ರಮಾಣವೂ ಹೆಚ್ಚಳ ಕಂಡಿತ್ತು. ಈ ಲೋಪಗಳನ್ನು ಸರಿಪಡಿಸಿದ ನಂತರ ಕಾಯ್ದಿಟ್ಟ ಅರಣ್ಯ ಪ್ರದೇಶ ಕಡಿಮೆಯಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

‘2014ರ ಸರ್ಕಾರದ ಆದೇಶದಂತೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಇರಬೇಕಾದ ಮರಗಳ ಸಂಖ್ಯೆಗಿಂತ ಕಡಿಮೆ ಮರಗಳು ಇದ್ದ ಹಿನ್ನೆಲೆಯಲ್ಲಿ 1.6 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶವನ್ನು ಈಗ ಕೈಬಿಡಲಾಗಿದೆ’ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಎರಡು ಹೆಕ್ಟೇರ್ ಪ್ರದೇಶದಲ್ಲಿ ಕನಿಷ್ಠ 50 ಮರಗಳು ಸ್ವಾಭಾವಿಕವಾಗಿ ಬೆಳೆದಿದ್ದು, 30 ಸೆಂ.ಮೀ ಗಾತ್ರವನ್ನು ಹೊಂದಿರಬೇಕು. ಅಂತಹ ಪ್ರದೇಶವನ್ನು ಕಾಯ್ದಿಟ್ಟ ಅರಣ್ಯವೆಂದು ಗುರುತಿಸಬಹುದು ಎಂದು 2014ರ ಆದೇಶದಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ. ಅಂತಹ ಭೂಪ್ರದೇಶವನ್ನು ಕಾಯ್ದಿಟ್ಟ ಅರಣ್ಯದ ವ್ಯಾಪ್ತಿಗೆ ತರಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿತ್ತು. ಆದರೆ ಜಿಲ್ಲಾ ಮಟ್ಟದ ಸಮಿತಿಗಳ ಒತ್ತಡದಿಂದಾಗಿ ಈ ಭೂಮಿಯನ್ನು ಕೈಬಿಡುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಮಟ್ಟದ ಸಮಿತಿಗಳು ರಾಜಕಾರಣಿಗಳ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಿದ್ದು, ಕಂದಾಯ ಭೂಮಿಯನ್ನು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಘೋಷಿಸಲು ಅವಕಾಶ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು