ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ದಿನ: ಸರ್ಕಾರ ಕ್ರಮಕ್ಕೆ ತರಾಟೆ

ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ ವನ್ಯಜೀವಿ ಮಂಡಳಿ
Last Updated 21 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದಲ್ಲಿ 2 ಲಕ್ಷಕ್ಕೂ ಅಧಿಕ ಮರಗಳನ್ನು ಬಲಿ ಪಡೆಯುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದ ಮರುದಿನವೇ ಅರಣ್ಯ ಸಂರಕ್ಷಣೆ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರನ್ನು ಪರಿಸರಪ್ರೇಮಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೂಲ್ಯ ನೈಸರ್ಗಿಕ ಸಂಪತ್ತಾದ ಕಾಡನ್ನು ಉಳಿಸಿ ಬೆಳೆಸಲು ಪಣ ತೊಡೋಣ’ ಎಂದು ಮುಖ್ಯಮಂತ್ರಿ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಾಖಿ ರಂಗಾ, ‘ಸ್ವಾಮಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗಕ್ಕಾಗಿ 600 ಎಕರೆ ಅರಣ್ಯ, ಸುಮಾರು 2.2 ಲಕ್ಷ ಮರಗಳನ್ನು ಕಡಿಯುತಿದ್ದೀರಿ. ಕೊರೊನಾ ಇರುವಾಗಲೂ ತರಾತುರಿಯಲ್ಲಿ ವನ್ಯಜೀವಿ ಮಂಡಳಿ ಸಭೆ ಕರೆದು ಯೋಜನೆಗೆ ಒಪ್ಪಿಗೆ ಕೊಟ್ಟಿದ್ದೀರಿ. ನಿಮ್ಮ ಅರಣ್ಯ ದಿನಾಚರಣೆ ಇದೆನಾ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಅರಣ್ಯ ಕಡಿದು ರೈಲ್ವೆ ಯೋಜನೆಗಾಗಿ ಹಸಿರು ನಿಶಾನೆ ನೀಡಿದ ಮೇಲೆ ಅರಣ್ಯ ಉಳಿಸಿ ಎನ್ನುವುದು ಸರಿ ಅನಿಸುವುದಿಲ್ಲ ಮಾನ್ಯ ಮುಖ್ಯಮಂತ್ರಿಗಳೇ. ಅರಣ್ಯ ಉಳಿಸುವ ನಿಮ್ಮ ನಿಲುವು ನಿಜವಾಗಿದ್ದಲ್ಲಿ ಯೋಜನೆಯನ್ನು ದಯವಿಟ್ಟು ಕೈಬಿಡಿ’ ಎಂದು ಪ್ರಖ್ಯಾತ್‌ ಪುತ್ತೂರು ಒತ್ತಾಯಿಸಿದ್ದಾರೆ.

‘ಇವತ್ತು ವಿಶ್ವ ಅರಣ್ಯ ದಿನ. ಕ್ಷಮಿಸಿ ನಾನು ಸಂಭ್ರಮಿಸುವುದಿಲ್ಲ. ಒಂದೆಡೆ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ಹೆಸರಿನಲ್ಲಿ 2ಲಕ್ಷ ಬಹೃತ್ ಮರಗಳ ಮಾರಣಹೋಮ ಹಾಗೂ ಅಮೂಲ್ಯ ಅರಣ್ಯ ಸಂಪತ್ತು ಸರ್ವನಾಶ. ಇನ್ನೊಂದೆಡೆ ಬನ್ನೇರುಘಟ್ಟ 24,710ಎಕರೆ ಕಾಡು ಸರ್ವನಾಶ. ಗಿಡ ನೆಡುವುದು ದೊಡ್ಡದಲ್ಲ ಉಳಿಸುವುದು ದೊಡ್ಡದು’ ಎಂದು ದೀಪು ಟ್ವೀಟ್‌ ಮಾಡಿದ್ದಾರೆ.

‘ಬನ್ನಿ ಕಾಡನ್ನು ಪ್ರೀತಿಸೋಣ, ಭೂಮಿ ಮತ್ತು ಪರಿಸರ ಸಮತೋಲನವಾಗಿರಬೇಕಾದರೆ ಅರಣ್ಯದ ಪಾತ್ರ ಬಹುಮುಖ್ಯ. ಈ ಕಾರಣಕ್ಕೆ ಅರಣ್ಯ ಸಂವರ್ಧನೆಗೆ ಪಣ ತೊಡಬೇಕು ಎಂಬ ಆಶಯ ಈ ದಿನದ್ದಾಗಲಿ. ಜೀವವೈವಿಧ್ಯದ ಉಳಿವಿಗೆ ಅರಣ್ಯ ಉಳಿಸಿ, ಅರಣ್ಯ ಬೆಳೆಸಿ’ ಎಂಬ ಶೆಟ್ಟರ್‌ ಅವರ ಟ್ವೀಟ್‌ಗೂ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

‘ಇದು ಮಗುವನ್ನು ಚಿವುಟಿ ತೊಟ್ಟಿಲು ತೂಗಿದಂತೆ. ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಬದಲು ಕಾಡು ಅಳಿಸಿ ನಾಡು ಉಳಿಸಿ ಎನ್ನುತ್ತಿದ್ದಿರಿ. ಇಷ್ಟಕ್ಕೂ ಈ ರೈಲು ಮಾರ್ಗದ ಅಷ್ಟೊಂದು ಅವಶ್ಯಕತೆ ಏನಿತ್ತು. ಲೊಂಡಾ -ಮಡಗಾಂವ್‌ ಮಾರ್ಗ ಇರಲಿಲ್ಲವೇ’ ಎಂದು ಗಜೇಂದ್ರ ಪಾಟೀಲ ಪ್ರಶ್ನಿಸಿದ್ದಾರೆ.

‘ಸರ್ ಈ ಮಾತನ್ನ ನೀವು ಹೇಳಬಾರದು. ಅರಣ್ಯವನ್ನು ಉಳಿಸುವವರು ನೀವಾಗಿದ್ದರೆ ಹುಬ್ಬಳ್ಳಿ–ಅಂಕೋಲಾ ರೇಲ್ವೆ ಮಾರ್ಗ ಕೈ ಬಿಡುತ್ತಿದ್ದಿರಿ’ ಎಂದು ರಮೇಶ ಗೌಡ ಜಿ. ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT