ಸಂರಕ್ಷಣೆ ಬದಲು ‘ಆದಾಯ’ದ ಮೇಲಷ್ಟೇ ಕಣ್ಣು: ಅನುದಾನ ‘ಅನ್ಯ’ ಕಾರ್ಯಕ್ಕೆ ಬಳಕೆ

ಬುಧವಾರ, ಜೂನ್ 19, 2019
27 °C
ಇಲಾಖೆ ಕಪಿಮುಷ್ಟಿಯಲ್ಲಿ ಅರಣ್ಯ ಸಮಿತಿಗಳು: ಸಾರ್ವಜನಿಕರ ಸಹಭಾಗಿತ್ವಕ್ಕೆ ಅಧಿಕಾರಿಗಳ ತಕರಾರು

ಸಂರಕ್ಷಣೆ ಬದಲು ‘ಆದಾಯ’ದ ಮೇಲಷ್ಟೇ ಕಣ್ಣು: ಅನುದಾನ ‘ಅನ್ಯ’ ಕಾರ್ಯಕ್ಕೆ ಬಳಕೆ

Published:
Updated:

ಮಡಿಕೇರಿ: ರಾಷ್ಟ್ರೀಯ ಅರಣ್ಯ ನೀತಿ ಸಲಹೆಯಂತೆ ಅರಣ್ಯ ಸಂರಕ್ಷಣೆ, ಕಾಡು ಒತ್ತುವರಿ, ಕಾಳ್ಗಿಚ್ಚು, ಮರ ಕಡಿತಲೆ, ಅರಣ್ಯ ಉತ್ಪನ್ನಗಳ ಕಳ್ಳ ಸಾಗಣೆ ಹಾಗೂ ವನ್ಯಪ್ರಾಣಿಗಳ ಬೇಟೆ ತಡೆಯುವುದು… ಇಂತಹ ಪ್ರಮುಖ ಉದ್ದೇಶಗಳೊಂದಿಗೆ ರಾಜ್ಯದಲ್ಲಿ ನಾಲ್ಕು ಸಾವಿರದಷ್ಟು ಅರಣ್ಯ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದವು.

ಮೊದಲ ಬಾರಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಜನರ ಕಣ್ಗಾವಲಿನಲ್ಲಿ ಅರಣ್ಯ ಸಂರಕ್ಷಿಸಲು ಸಮಿತಿಗಳಿಗೆ ಮುನ್ನುಡಿಯನ್ನೂ ಬರೆಯಲಾಗಿತ್ತು. ನಿಜಕ್ಕೂ ಅವುಗಳ ಉದ್ದೇಶ ಈಡೇರಿದೆಯೇ? ಸಮಿತಿಗಳ ದುರ್ಬಳಕೆ ಆಗಿದೆಯೇ? ಅಥವಾ ಸುಳ್ಳು ಲೆಕ್ಕ ತೋರಿಸಲು ಸಾಧ್ಯವಾಗುತ್ತಿಲ್ಲವೆಂದು ಸಮಿತಿಗಳನ್ನೇ ಅರಣ್ಯಾಧಿಕಾರಿಗಳು ದೂರವಿಡುವ ಹುನ್ನಾರ ಮಾಡಿದ್ದಾರೆಯೇ ಎಂಬ ಸಂದೇಹವಿದೆ.  

ಸಾಕಷ್ಟು ಕಡೆ ಸಮಿತಿಗಳು ಅಧಿಕಾರಿಗಳ ‘ಕಪಿಮುಷ್ಟಿ’ಯಲ್ಲಿ ಸಿಲುಕಿವೆ ಎಂಬುದು ಸುಳ್ಳಲ್ಲ. ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ಆಯಾ ಗ್ರಾಮಸ್ಥರೇ ಆಗಿರುತ್ತಾರೆ. ಅದರಲ್ಲಿ ಬಹುತೇಕರಿಗೆ ಯೋಜನೆ ಆಳಅಗಲದ ಅರಿವಿಲ್ಲ. ಲೆಕ್ಕಪತ್ರ, ಅದರ ನಿರ್ವಹಣೆ, ಅನುದಾನ ಹಂಚಿಕೆ, ಕ್ರಿಯಾ ಯೋಜನೆ ತಯಾರಿ, ಸಭೆ ಕರೆಯುವ ಜವಾಬ್ದಾರಿ ಎಲ್ಲವೂ ಸದಸ್ಯ ಕಾರ್ಯದರ್ಶಿಯದ್ದು. ಕಾರ್ಯದರ್ಶಿ ಮಾತ್ರ ಆಯಾ ವಲಯದ ಅರಣ್ಯ ಇಲಾಖೆ ಉಪ ವಲಯ ಅರಣ್ಯಧಿಕಾರಿ. ಅರಣ್ಯ ಸಂರಕ್ಷಣೆಗೆ ಬರುವ ಅನುದಾನಕ್ಕೆ ಅಧಿಕಾರಿಗಳದ್ದು ಪಕ್ಕಾ ಇಲ್ಲದ ಲೆಕ್ಕ; ಹೆಸರಿಗಷ್ಟೇ ಗ್ರಾಮೀಣ ಜನರ ಸಹಭಾಗಿತ್ವ! 

ಸಮಿತಿಯು ಪ್ರತಿ ತಿಂಗಳು ಸಭೆ ಕರೆಯಬೇಕು. ಜಂಟಿ ಖಾತೆ ತೆರೆದು ಸಮಿತಿಗೆ ದೇಶ–ವಿದೇಶಗಳಿಂದ ಬಂದ ನೆರವನ್ನು ಕಾಡು ಬೆಳೆಸಲು ಹಾಗೂ ಅದರ ಸಂರಕ್ಷಣೆಗೆ ವಿನಿಯೋಗಿಸಬೇಕು. ಅದು ಆಗುತ್ತಿಲ್ಲ. ರಾಷ್ಟ್ರೀಯ ಅರಣ್ಯ ನೀತಿಯ ಉದ್ದೇಶ ಈಡೇರಿದ್ದರೆ ರಾಜ್ಯದಲ್ಲಿ ಕಾಡು ಕುಗ್ಗುವ ಪರಿಸ್ಥಿತಿಯೇ ಇರುತ್ತಿರಲಿಲ್ಲ.

ಇದನ್ನೂ ಓದಿ: ಹಳ್ಳಕ್ಕೆ ಬಿದ್ದ ‘ಪಾಲಿಸಿದರೆ ಪಾಲು’: ವೆಚ್ಚಕ್ಕುಂಟು ಲೆಕ್ಕಕ್ಕಿಲ್ಲ

ಕೊಡಗಿನಲ್ಲಿಯೇ 100ಕ್ಕೂಹೆಚ್ಚು ಗ್ರಾಮ ಅರಣ್ಯ ಸಮಿತಿಗಳಿದ್ದು ಕೆಲವು ಸಮಿತಿಗಳ ವ್ಯಾಪ್ತಿಯಲ್ಲಿ ಪ್ರವಾಸಿ ತಾಣಗಳಿವೆ. ಅದರಿಂದ ಬರುವ ‘ಆದಾಯ’ದ ಮೇಲಷ್ಟೇ ಕಣ್ಣು ಬೀಳುತ್ತಿದೆ. ಲಕ್ಷಾಂತರ ರೂಪಾಯಿ ಸ್ಥಳೀಯ ಆದಾಯದ ಜತೆಗೆ ವಿದೇಶಿ ನೆರವೂ ಸಿಗುತ್ತದೆ. ಅರಣ್ಯ ಸಂರಕ್ಷಣೆಗೆ ಪೂರಕವಾಗುವ ಕೆಲಸಕ್ಕೇ ಅನುದಾನ ಬಳಸಬೇಕು. ಆದರೆ, ಬೇಕಾಬಿಟ್ಟಿಯಾಗಿ ಸಿವಿಲ್‌ ಕಾಮಗಾರಿಗಳಿಗೆ ಹಣ ವಿನಿಯೋಗ ಆಗುತ್ತಿದೆ. ಸಮಿತಿಗಳನ್ನು ನೆಪವಾಗಿಸಿಕೊಂಡು ಅಧಿಕಾರಿಗಳೇ ‘ಕರಾಮತ್ತು’ ನಡೆಸುತ್ತಿದ್ದಾರೆ. ಕೆಲವೆಡೆ ಸಮಿತಿ ಅಧ್ಯಕ್ಷರೂ ಕೈಜೋಡಿಸಿದ್ದು ಸಂಪನ್ಮೂಲವು ‘ಪಾಲಿಸದವರ ಪಾಲಾಗುತ್ತಿದೆ’.

ಅರಣ್ಯದಲ್ಲಿ ಗುಂಡಿ ತೋಡಿ, ಗಿಡ ನೆಡುವ ‘ಸುಳ್ಳು ಖರ್ಚು’ ಗ್ರಾಮಸ್ಥರಿಗೆ ತಿಳಿಯುತ್ತದೆ ಎನ್ನುವ ಕಾರಣಕ್ಕೆ ಗ್ರಾಮ ಸಮಿತಿಗಳನ್ನೇ ದೂರವಿಡುವ ಹುನ್ನಾರ ಮತ್ತೊಂದೆಡೆ. ಈಗ ‘ಗ್ರಾಮ ಅರಣ್ಯ ಸಮಿತಿ ರಚಿಸುತ್ತೇವೆ’ ಎಂದು ಅರಣ್ಯ ಭವನಕ್ಕೆ ತೆರಳಿದರೆ, ಅರಣ್ಯಾಧಿಕಾರಿಗಳಿಂದ ಆ ಯೋಜನೆ ಈಗ ಜಾರಿಯಲ್ಲಿ ಇಲ್ಲ ಅನ್ನುವ ಉತ್ತರ ಸಿದ್ಧವಿರುತ್ತದೆ. ಅದು ಯೋಜನೆ ಅಲ್ಲ; ನಮ್ಮ ಅರಣ್ಯವನ್ನು ನಾವು ರಕ್ಷಿಸುತ್ತೇವೆಂದು ಅರ್ಜಿ ಸಲ್ಲಿಸಿದರೆ ಅದಕ್ಕೂ ಜಾಣ್ಮೆಯ ಪ್ರತ್ಯುತ್ತರ.  

ಸುಳ್ಳುಲೆಕ್ಕ ಬಹಿರಂಗವಾಗುತ್ತದೆ ಎಂಬ ಕಾರಣಕ್ಕೆ ‘ಜನರ ಸಹಭಾಗಿತ್ವದಿಂದಲೇ ಅರಣ್ಯಕ್ಕೆ ಆಪತ್ತಾಗಿದೆ’ ಎಂದು ವಾದಿಸುವ ಅಧಿಕಾರಿಗಳಿಗೇನೂ ಕೊರತೆಯಿಲ್ಲ. ಸಮಿತಿಗಳನ್ನೂ ದೂರವಿಡಲು ಪ್ರಯತ್ನ ನಿರಂತರವಾಗಿದೆ. ಆರಂಭದಲ್ಲಿ ಜನರ ಹೆಸರಿನಲ್ಲಿ ಹಲ್ಲುಗಾವಲು ಅಕೇಶಿಯಾ ತೋಪಾಗಿ ಪರಿವರ್ತನೆ ಆಗಿದ್ದವು. ಕ್ರಮೇಣ ಅರಣ್ಯಾಧಿಕಾರಿಗಳ ನಕಲಿ ಲೆಕ್ಕದ ಕರಾಮತ್ತು ಬಹಿರಂಗಗೊಂಡಿತ್ತು. 

ಇದನ್ನೂ ಓದಿ: ಸಸಿ ಮರವಾಗದೇ ಕಮರಿದ್ದು ಏಕೆ?

ಎನ್‌.ಸಿ. ಸಕ್ಸೆನಾ ಸೇರಿದಂತೆ ಹಲವರು ಅರಣ್ಯ ಸಮಿತಿಗಳ ಮೇಲೆ ಸ್ವತಂತ್ರವಾಗಿ ಅಧ್ಯಯನ ನಡೆಸಿದ್ದಾರೆ. ಅರಣ್ಯ ಸಂರಕ್ಷಿಸಲು ಬಂದಿದ್ದ ಅನುದಾನವು ಇಲಾಖೆ ಕಟ್ಟಡ ನಿರ್ಮಾಣಕ್ಕೆ, ರಸ್ತೆಗೆ, ಕಂಪೂಟ್ಯರ್‌ ಹಾಗೂ ವಾಹನ ಖರೀದಿ ಸೇರಿದಂತೆ ಮೂಲಸೌಲಭ್ಯಕ್ಕೆ ಹೆಚ್ಚು ಬಳಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಮೊದಲೇ ಗಿಡನೆಟ್ಟು ಬಳಿಕ ಸಮಿತಿ ಸದಸ್ಯರಿಗೆ ತೋರಿಸಿದ್ದ ಉದಾಹರಣೆಗಳೂ ಕಣ್ಮುಂದಿವೆ. 

ಕೊಡಗು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶವು ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ‘ಕಾಡು ಕುಗ್ಗುತ್ತಿದೆ’ ಎಂಬುದನ್ನು ಕೇಂದ್ರ ಪರಿಸರ ಸಚಿವಾಲಯವು ಬಿಡುಗಡೆ ಮಾಡಿದ್ದ ‘ಅರಣ್ಯಗಳ ಸ್ಥಿತಿಗತಿ’ ದ್ವೈವಾರ್ಷಿಕ ವರದಿಯಲ್ಲಿ ಸಾಬೀತಾಗಿದೆ.

ಅನ್ಯ ಚಟುವಟಿಕೆ ನಿಯಂತ್ರಿಸಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಅರಣ್ಯ ಸಮಿತಿ ಮೂಲಕ ಅರಣ್ಯ ಉಳಿಸಿ–ಬೆಳೆಸಬೇಕಿದ್ದ ಮಹತ್ವದ ಕನಸೊಂದು ಸಾಕಾರಗೊಂಡಂತೆ ಕಾಣಿಸುತ್ತಿಲ್ಲ. ಅದಕ್ಕೆ ಅರಣ್ಯಾಧಿಕಾರಿಗಳ ನಿರಾಸಕ್ತಿ, ಸಮಿತಿಗೇ ತನ್ನ ಕಾರ್ಯ ವೈಖರಿ ಮಾಹಿತಿ ಕೊರತೆಯೇ ಕಾರಣವಾಗಿದೆ. ಕೆಲವು ಸಮಿತಿಗಳೂ ಈ ಎಲ್ಲ ಅಡೆತಡೆಗಳ ಹೊರತಾಗಿಯೂ ಗ್ರಾಮಾಭಿವೃದ್ಧಿ ಹಾಗೂ ಅರಣ್ಯ ಸಂರಕ್ಷಣೆಗೆ ಪೂರಕವಾದ ಕೆಲಸಗಳನ್ನೇ ಮಾಡಿವೆ. ಆದರೆ, ಇಲಾಖೆ ಮಾತ್ರ ಅವುಗಳನ್ನು ಗುರುತಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.

ಇದನ್ನೂ ಓದಿ: ಮರ ಪಟ್ಟಾ ಯೋಜನೆ ವೈಫಲ್ಯಕ್ಕೆ ಜಾಗೃತಿಯ ಕೊರತೆ

‘ದೇವರಕಾಡು’ ಮಾಯ
ಕೊಡಗಿನಲ್ಲಿ ಮೀಸಲು ಹಾಗೂ ರಾಷ್ಟ್ರೀಯ ಅರಣ್ಯ ಪ್ರದೇಶದ ಜತೆಗೆ ವಿಶಿಷ್ಟ ಬಗೆಯ ‘ದೇವರ ಕಾಡು’ಗಳಿವೆ. ಬಯಲು ಸೀಮೆಯಲ್ಲಿ ದೇವಸ್ಥಾನದ ತೋಪುಗಳಿದ್ದಂತೆ ಕೊಡಗಿನಲ್ಲಿ ದೇವರಕಾಡುಗಳಿವೆ. ಹಿರಿಯರ ಅರಣ್ಯ ಪ್ರೇಮದಿಂದ ಪ್ರತಿ ಗ್ರಾಮದಲ್ಲೂ ಈ ಕಾಡುಗಳಿಗೆ ಮಹತ್ವವಿತ್ತು. ಕೊಡಗಿನಲ್ಲಿ ಹೆಚ್ಚು ದೇವರಕಾಡು ಹೊಂದಿದ್ದ ಕೀರ್ತಿ ಕ್ರಮೇಣ ಮಾಯವಾಗುತ್ತಿದೆ. ಬಹುತೇಕ ಕಡೆ ಒತ್ತುವರಿಗೆ ಸಿಲುಕಿವೆ. ಪ್ರಸ್ತುತ ಅರಣ್ಯ ಇಲಾಖೆ ಹದ್ದುಬಸ್ತಿನಲ್ಲಿದ್ದರೂ ಅಲ್ಲಿ ಮರಗಳು ಮಾತ್ರ ಕಾಣಿಸುತ್ತಿಲ್ಲ. 

‘ಪ್ರೀತಿ, ಅಭಿಮಾನ ಮೂಡಿಸಬೇಕು’
ಕಾಡು ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅರಿವು ಮೂಡಿಸಬೇಕು. ಗ್ರಾಮಸ್ಥರಲ್ಲಿ ಅರಣ್ಯದ ಮೇಲೆ ಪ್ರೀತಿ–ಅಭಿಮಾನ ಮೂಡುವಂತಹ ಚಟುವಟಿಕೆ ನಡೆಸಬೇಕು. ‘ವನಭೋಜನ’ ಆಯೋಜಿಸಬೇಕು. ಇದ್ಯಾವುದೂ ಕಾರ್ಯಗತ ಆಗದಿರುವುದರಿಂದ ಇಂತಹ ಸ್ಥಿತಿ ಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಬಿ. ಪ್ರಭು ಎಚ್ಚರಿಸುತ್ತಾರೆ. 

ಇದನ್ನೂ ಓದಿ: ಸಮುದಾಯ ಆಧಾರಿತ ಯೋಜನೆ ‘ಪಾಲಿಸಿದರೆ ಪಾಲು’ಗೆ ಪೋಷಕರ ನಿರ್ಲಕ್ಷ್ಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !