ಗುರುವಾರ , ನವೆಂಬರ್ 14, 2019
19 °C

ಸಸಿ ಮರವಾಗದೇ ಕಮರಿದ್ದು ಏಕೆ?

Published:
Updated:

ಗಿಡ ನೆಟ್ಟು ಪೋಷಿಸಲು ಅರಣ್ಯ ಇಲಾಖೆ ದಶಕಗಳಿಂದ ವೆಚ್ಚ ಮಾಡಿರುವ ಹಣವನ್ನು ಗಮನಿಸಿದರೆ ಕರ್ನಾಟಕ ಗೊಂಡಾರಣ್ಯದಿಂದ ಆವೃತವಾಗಬೇಕಿತ್ತು. ಆದರೆ ಆಗಿರುವುದಾದರೂ ಏನು ? ವರ್ಷದಿಂದ ವರ್ಷಕ್ಕೆ ಇರುವ ಅರಣ್ಯ ಪ್ರದೇಶವೂ ಕ್ಷೀಣಿಸುತ್ತಿದೆ. ಜೂನ್ 5 ವಿಶ್ವ ಪರಿಸರ ದಿನವನ್ನು ಆಚರಿಸುವ ಸಂದರ್ಭದಲ್ಲಿ ತ್ರಿಶಂಕು ಸ್ಥಿತಿಯಲ್ಲಿರುವ ಅರಣ್ಯ ಇಲಾಖೆಯ ಯೋಜನೆ ಬಗ್ಗೆ ಒಳನೋಟ ಬೆಳಕು ಚೆಲ್ಲಿದೆ...

**

ಮೈಸೂರು: ಅರಣ್ಯದ ಸಂರಕ್ಷಣೆ ಮತ್ತು ವಿಸ್ತರಣೆ ಕೇವಲ ಅಧಿಕಾರಿಗಳಿಂದ ಆಗುವ ಕೆಲಸ ಅಲ್ಲ ಎಂದು ಸರ್ಕಾರಕ್ಕೆ ಅರಿವಾದದ್ದು 1988ರಲ್ಲಿ. ಸ್ವಾತಂತ್ರ್ಯ ಬಂದು 41 ವರ್ಷಗಳವರೆಗೆ, ಸರ್ಕಾರ ಅರಣ್ಯ ಸಂರಕ್ಷಣೆ ವಿಷಯದಲ್ಲಿ ಜನರನ್ನು ದೂರವೇ ಇಟ್ಟಿತ್ತು. 1988ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಅರಣ್ಯ ನೀತಿ ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಿತು.‌

ನೀತಿ ಅನ್ವಯ ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಲಾಯಿತು. 1993ರಲ್ಲಿ ಈ ಕುರಿತು ಮೊದಲ ಆದೇಶ ಹೊರಬಿತ್ತು. ಗ್ರಾಮ ಅರಣ್ಯ ಸಮಿತಿಗಳ ರಚನೆಗೆ ಅನುವು ಮಾಡಿಕೊಡಲಾಯಿತು. 2002ರಲ್ಲಿ ಇದಕ್ಕೊಂದು ಸ್ಪಷ್ಟ ರೂಪ ನೀಡಲಾಯಿತು.

ಕೇವಲ ಗಿಡಗಳನ್ನು ನೆಡುವುದರಿಂದ ಅರಣ್ಯಗಳ ವಿಸ್ತರಣೆ ಆಗುವುದಿಲ್ಲ. ಬಂದೂಕು ಹಿಡಿದು ಕಾಯುವುದರಿಂದಷ್ಟೇ ಅರಣ್ಯ ಸಂರಕ್ಷಣೆ ಆಗುವುದಿಲ್ಲ. ಗುರಿ ಸಾಧನೆಗೆ ಜನರ ಸಹಕಾರ ಬೇಕು, ಅವರ ಪಾಲ್ಗೊಳ್ಳುವಿಕೆ ಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿಯಾಯಿತು.  ಕಾಡಂಚಿನ ಗ್ರಾಮಗಳ ಜನ ವಿವಿಧ ಕಾರಣಗಳಿಗೆ ಅರಣ್ಯದ  ಮೇಲೆ ಅವಲಂಬಿತರಾಗಿದ್ದರು. ಅದನ್ನುತಪ್ಪಿಸಿ ಅರಣ್ಯವನ್ನು ಕಾಪಾಡುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲು ನಿರ್ಧರಿಸಲಾಯಿತು.

ಅರಣ್ಯ ಇಲಾಖೆ ವ್ಯಾಪ್ತಿಗೇ ಬರುವ ‘ಸಿ’ ಮತ್ತು ’ಡಿ’ ದರ್ಜೆ ಭೂಮಿಗಳಲ್ಲಿ, ಗೋಮಾಳ, ಕೆರೆ ದಂಡೆ, ರಸ್ತೆಬದಿ, ಕಾಲುವೆ ದಂಡೆ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಬೆಳೆಸಿದ್ದ ಕಾಡು ಕಾಣೆಯಾಗಲು ಜನರ ಸಹಭಾಗಿತ್ವ ಇಲ್ಲದಿರುವುದೇ ಕಾರಣ ಎಂಬ ಕಾರಣಕ್ಕೆ ಈ ಯೋಜನೆ ರೂಪಿಸಲಾಗಿತ್ತು. ಕಂದಾಯ ಇಲಾಖೆಯ ವ್ಯಾಪ್ತಿಯ ಬಂಜರು ಭೂಮಿ, ‘ಸಿ’ ಮತ್ತು ‘ಡಿ’ ದರ್ಜೆಯ ಜಮೀನು, ಗೋಮಾಳಗಳು, ನಾಲೆ ಮತ್ತು ನದಿ ದಂಡೆಗಳಲ್ಲಿ ಅರಣ್ಯ ಬೆಳೆಸಲು ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಯಿತು.

ಎರಡು ರೂಪಾಯಿ ಪಾವತಿಸುವ ಮೂಲಕ ಸಮಿತಿ ಸದಸ್ಯತ್ವ ಪಡೆಯುವ ಅವಕಾಶ ನೀಡಲಾಯಿತು. ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮ ಲೆಕ್ಕಿಗ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಸರ್ಕಾರೇತರ ಸಂಸ್ಥೆಗಳ‌ ಪ್ರತಿನಿಧಿ ಸೇರಿದಂತೆ ಹಲವರನ್ನು ಪದನಿಮಿತ್ತ ಸದಸ್ಯರನ್ನಾಗಿ ಮಾಡಲಾಯಿತು. 10 ಚುನಾಯಿತ ಸದಸ್ಯರೂ ಇರುವಂತೆ ನೋಡಿಕೊಳ್ಳಲಾಯಿತು.

ಅರಣ್ಯ ಬೆಳೆಸುವ ಆರಂಭದ ಮೂರು ವರ್ಷಗಳವರೆಗಿನ ವೆಚ್ಚಗಳನ್ನು ಅರಣ್ಯ ಇಲಾಖೆಯೇ ಭರಿಸುವುದು, ಅಗತ್ಯ ಬಿದ್ದರೆ ಮತ್ತೂ ಮೂರು ವರ್ಷಗಳ ವೆಚ್ಚವನ್ನೂ ನೀಡಲು ಸೂಚಿಸಲಾಯಿತು. ಈ ಸಸಿಗಳ ರಕ್ಷಣೆಯ ಜವಾಬ್ದಾರಿಯನ್ನು ಸಮಿತಿ ಮತ್ತು ಇಲಾಖೆ ಜಂಟಿಯಾಗಿ ನಡೆಸಬೇಕಿತ್ತು.

ಹಳ್ಳ ಹಿಡಿಯಲು ಏನು ಕಾರಣ?
ಯೋಜನೆ ಫಲಪ್ರದವಾಗಿದ್ದರೆ ಎಲ್ಲ ಗೋಮಾಳ, ಗುಡ್ಡಗಳು, ಕಾಲುವೆ ಬದಿಗಳು, ನದಿ ದಂಡೆಗಳು ಅರಣ್ಯಮಯವಾಗಬೇಕಿತ್ತು. ಆದರೆ, ಈಗ ಬೆರಳೆಣಿಕೆಯಷ್ಟು ಮಾತ್ರ ಇದೆ. ಬಹುತೇಕ ಕಡೆಗಳಲ್ಲಿ ಗ್ರಾಮ ಅರಣ್ಯ ಸಮಿತಿ ರಚನೆಯಾಗಲಿಲ್ಲ. ಅಧಿಕಾರಿಗಳ ಅಸಡ್ಡೆಯಿಂದ ಹಲವು ಗ್ರಾಮಗಳಲ್ಲಿ ಯೋಜನೆ ಜಾರಿಯಾಗಲೇ ಇಲ್ಲ. ಆದರೆ ಅನುದಾನ ಮಾತ್ರ ಸಂಪೂರ್ಣ ಬಳಕೆ ಆಯಿತು.

ಜಾರಿಯಾದ ಕಡೆ ನಿರ್ವಹಣೆ ಸಮಸ್ಯೆ ಎದುರಾಯಿತು. ಗ್ರಾಮಸ್ಥರಿಗೆ ಯೋಜನೆಯಿಂದ ಆರ್ಥಿಕ ಲಾಭ ಬರುತ್ತದೆ ಎಂದು ಮೊದಲಿಗೆ ಆಸೆ ಹುಟ್ಟಿಸಲಾಯಿತು. ಅಧಿಕಾರಿಗಳ ಮಾತು ನಂಬಿ ಗ್ರಾಮ ಅರಣ್ಯ ಸಮಿತಿಗೆ ಸದಸ್ಯರಾದರು. ಆರಂಭದಲ್ಲಿ ನೀಡಿದ್ದು ಅಕೇಷಿಯಾ ಮತ್ತು ನೀಲಗಿರಿಯಂತಹವೇ. ಇವು ತಕ್ಷಣಕ್ಕೆ ಆದಾಯವನ್ನು ರೈತರಿಗೆ ನೀಡಲಿಲ್ಲ. ಇದರಿಂದಾಗಿ ನಿರ್ವಹಣೆ ಕಡೆಗೆ ರೈತರು ಹೆಚ್ಚಿನ ಗಮನ ಹರಿಸಲಿಲ್ಲ.

ಹಲವೆಡೆ ಒತ್ತುವರಿದಾರರ ಸಮಸ್ಯೆ ತಲೆ ದೋರಿತು. ಬಲಾಢ್ಯರು ಒತ್ತುವರಿಗಾಗಿಯೇ ಸಸಿಗಳನ್ನು ನಾಶಪಡಿಸುವ ತಂತ್ರಗಾರಿಕೆ ಹೆಣೆ ದರು. ನಿಧಾನವಾಗಿ ಒಂದೊಂದೇ ಸಸಿಗಳನ್ನು ನಾಶಪಡಿಸಿ ಒತ್ತುವರಿ ಮಾಡಿದರು. ಕೆರೆಯಂಗಳ, ಜಮೀನುಗಳ ಪಕ್ಕದಲ್ಲಿರುವ ಗೋಮಾಳಗಳಲ್ಲಿ ನೆಟ್ಟ ಸಸಿಗಳು ಹೀಗೆ ಆಹುತಿಯಾದವು.

ಅವೈಜ್ಞಾನಿಕ ಕಾರ್ಯತಂತ್ರ: ಗೋಮಾಳಗಳಲ್ಲಿ ನೆಟ್ಟ ಸಸಿಗಳು ಮರವಾಗುವುದು ಗ್ರಾಮಸ್ಥರಿಗೆ ಬೇಕಿರಲಿಲ್ಲ. ಹಸುಗಳಿಗೆ ಹುಲ್ಲು ಒದಗಿಸುವ ಏಕೈಕ ತಾಣವಾದ ಗೋಮಾಳಗಳು ಕಾಡಾಗಿ ಪರಿವರ್ತನೆಯಾದರೆ ಮೇವಿನ ಸಮಸ್ಯೆ ಉಂಟಾಗುತ್ತದೆ ಎಂದು ಸಸಿಗಳ ಕಡೆಗೆ ಹೆಚ್ಚಿನ ಗಮನ ಕೊಡಲಿಲ್ಲ. ಆರಂಭದಲ್ಲಿ ಎಲ್ಲೆಡೆಯೂ ಒಂದೇ ಬಗೆಯ ಸಸಿ ನೆಡಲು ಆರಂಭಿಸಿದ್ದೂ ಯೋಜನೆ ಹಿನ್ನಡೆಗೆ ಕಾರಣವಾಯಿತು. ಭೌಗೋಳಿಕವಾಗಿ ಆಯಾ ಪ್ರದೇಶಕ್ಕೆ ಅನುಗುಣವಾದ ಸಸಿಗಳನ್ನು ನೆಡದೇ ಇದ್ದುದು, ದೊಡ್ಡ ತೊಡಕಾಯಿತು. ಕನಿಷ್ಠ ರೈತನ ಬೇಡಿಕೆಗೆ ಅನುಗುಣವಾದ ಸಸಿಗಳನ್ನು ನೀಡಲಿಲ್ಲ.

ರೈತರಿಗೆ ಯೋಜನೆ ಕುರಿತು ಪ್ರಾಥಮಿಕ ಜ್ಞಾನ ನೀಡದೇ ಇರುವುದು, ನಿರ್ವಹಣೆ ತಾಂತ್ರಿಕ ಕೌಶಲ ಕಲಿಸದೇ ಇರುವುದು ಯೋಜನೆ ಹಳ್ಳ ಹಿಡಿಯಲು ಕಾರಣವಾಯಿತು. ಕೇವಲ ಕಾಗದದ ಮೇಲಿನ ಅಂಕಿಸಂಖ್ಯೆಗಳಿಗಷ್ಟೇ ಅರಣ್ಯಾಧಿಕಾರಿಗಳು ಸೀಮಿತರಾದರೇ ಹೊರತು ಸ್ಥಳಕ್ಕೆ ತೆರಳಿ ಎಷ್ಟು ಗಿಡ ಉಳಿದಿವೆ, ಎಷ್ಟು ನಾಶವಾಗಿವೆ ಎಂಬ ವಿವರಗಳನ್ನು ಕಲೆ ಹಾಕಲಿಲ್ಲ.

**
ಸಹಿಗಷ್ಟೇ ಸೀಮಿತ
ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಹುದ್ದೆ ಸಹಿ ಮಾಡಲಷ್ಟೇ ಸೀಮಿತ. ಚೆಕ್‌ ಡ್ಯಾಮ್‌ ನಿರ್ಮಾಣ, ಟ್ರೆಂಚ್‌ ಹೆಸರಿನಲ್ಲಿ ಅಪಾರ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಮಾಹಿತಿ ಕೇಳಿದರೆ ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಹುದ್ದೆ ಬದಲಾವಣೆ  ಬೆದರಿಕೆ ಹಾಕುತ್ತಿದ್ದರು. ಹುಡುಕಿಕೊಂಡು ಬಂದು ಚೆಕ್‌ಗೆ ಸಹಿ ಮಾಡಿಸಿಕೊಳ್ಳುತ್ತಿದ್ದರು.  ಈಗ ಸಮಿತಿಯ ಸ್ಥಿತಿ ಹೇಗಿದೆ ಎಂಬ ಮಾಹಿತಿ ಇಲ್ಲ.

-ಶಿವಕುಮಾರ್‌, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಜವನಳ್ಳಿ, ಮಂಡ್ಯ ತಾಲ್ಲೂಕು

**
ಚಟುವಟಿಕೆ ಇದೆ

ಕಳೆದ ಐದು ವರ್ಷದಿಂದ ಗ್ರಾಮ ಅರಣ್ಯ ಸಮಿತಿ ನಡೆಯುತ್ತಿಲ್ಲ. ಆದರೆ ಸಮಿತಿ ಅಡಿ ರಚನೆಯಾದ ಸ್ವಸಹಾಯ ಸಂಘ ಈಗಲೂ ಚಟುವಟಿಕೆ ನಡೆಸುತ್ತಿದೆ. ಕುರಿ ಸಾಕಣೆಗಾಗಿ ಸಂಘಕ್ಕೆ ₹ 32 ಸಾವಿರ ಹಣ ಬಿಡುಗಡೆ ಆಗಿತ್ತು. ಆ ಹಣ ಈಗ ₹ 5.5 ಲಕ್ಷಕ್ಕೆ ಹೆಚ್ಚಳವಾಗಿದೆ. ಪ್ರತಿ ತಿಂಗಳು ಸಭೆ ನಡೆಸುತ್ತೇವೆ. ಸಂಘದಿಂದ ಸಾಲವನ್ನೂ ವಿತರಣೆ ಮಾಡಲಾಗುತ್ತಿದೆ. ಸಂಘಕ್ಕೆ ಅರಣ್ಯ ಇಲಾಖೆ ಹಸ್ತಕ್ಷೇಪ ಇಲ್ಲದ ಕಾರಣ ಬಹಳ ಚೆನ್ನಾಗಿ ನಡೆಯುತ್ತಿದೆ. ಆದರೆ ಗ್ರಾಮ ಅರಣ್ಯ ಸಮಿತಿಯನ್ನು ಬೆಳೆಯಲು ಅಧಿಕಾರಿಗಳು ಬಿಡಲಿಲ್ಲ.

– ಜಯರಾಮೇಗೌಡ, ಫಲಾನುಭವಿ, ದುದ್ದ

**

ನಿರಾಸಕ್ತಿ ಕಾರಣ
ಗ್ರಾಮ ಅರಣ್ಯ ಸಮಿತಿಗಳು ನಿಷ್ಕ್ರಿಯಗೊಳ್ಳಲು ಜನರ ನಿರಾಸಕ್ತಿಯೇ ಪ್ರಮುಖ ಕಾರಣ. ಒಮ್ಮೆ ಸಸಿ ಹಾಕಿದರೆ ಫಲ ಬರಲು 25 ವರ್ಷ ಬೇಕು. ಅಲ್ಲಿಯವರೆಗೆ ಕಾಯುವ ತಾಳ್ಮೆ ಜನರಿಗೆ ಇಲ್ಲ. ಅರಣ್ಯ ಉತ್ಪನ್ನಗಳ ಲಾಭಕ್ಕಿಂತಲೂ ಅನುದಾನದ ಮೇಲೆಯೇ ಅವರಿಗೆ ಕಣ್ಣು. ಸುತ್ತು ನಿಧಿಯಿಂದ ಸಾಲ ಪಡೆದು ಮರುಪಾವತಿ ಮಾಡುವ ಜವಾಬ್ದಾರಿ ಇಲ್ಲ. ಒಮ್ಮೆ ಸೌಲಭ್ಯ ಪಡೆದವರು ಮತ್ತೊಮ್ಮೆ ಸಮಿತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ ಹೆಚ್ಚು.

ಎನ್‌.ಶಿವರಾಜು, ಉಪ ಅರಣ್ಯ, ಸಂರಕ್ಷಣಾಧಿಕಾರಿ, ಮಂಡ್ಯ

**
ಕೋಟಿ ಮೇಲೆ ಕಣ್ಣು

ನಾನೇ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷನಾಗಿ ಬಹಳ ಕೆಟ್ಟ ಅನುಭವ ಹೊಂದಿದ್ದೇನೆ. ಅರಣ್ಯ ಇಲಾಖೆ ಅಧಿಕಾರಿಗಳು ಕೋಟಿ ಹಣದ ಕಾಮಗಾರಿಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಅವರಿಗೆ ದೊಡ್ಡ ಗೋಡೆಗಳೇ ಬೇಕು, ಪರಿಸರ ಸ್ನೇಹಿ ಬೇಲಿಗಳು ಅವರಿಗೆ ಬೇಕಾಗಿಲ್ಲ. ಸಸಿ ನೆಡುವ ಕಾರ್ಯಕ್ರಮಗಳ ಮೇಲೆ ಅವರಿಗೆ ಆಸಕ್ತಿಯೇ ಇಲ್ಲ. ಗ್ರಾಮಗಳಲ್ಲಿ ರಾಜಕಾರಣ ಮನೆ ಮಾಡಿರುವ ಕಾರಣ ಗ್ರಾಮ ಅರಣ್ಯ ಸಮಿತಿಗಳು ಯಶಸ್ವಿಯಾಗಲಿಲ್ಲ. ಸರ್ಕಾರದಿಂದ ಎಷ್ಟು ಹಣ ಬರುತ್ತದೆ ಎಂದು ಚಿಂತಿಸುವವರೇ ಹೆಚ್ಚಾದರು. ಆದರೆ ಸರ್ಕಾರಕ್ಕೆ ತಾನೆಷ್ಟು ಕೊಡುತ್ತೇನೆ ಎಂಬ ಬಗ್ಗೆ ಯಾರೂ ಯೋಚಿಸಲಿಲ್ಲ. ಹೀಗಾಗಿ ಸಮಿತಿಗಳು ನಿಷ್ಕ್ರಿಯಗೊಂಡವು.

–ನಾಗೇಶ ಹೆಗಡೆ, ಪರಿಸರ ತಜ್ಞರು

 

ಇನ‌್ನಷ್ಟು ಸುದ್ದಿಗಳು
ಸಂರಕ್ಷಣೆ ಬದಲು ‘ಆದಾಯ’ದ ಮೇಲಷ್ಟೇ ಕಣ್ಣು: ಅನುದಾನ ‘ಅನ್ಯ’ ಕಾರ್ಯಕ್ಕೆ ಬಳಕೆ
ಹಳ್ಳಕ್ಕೆ ಬಿದ್ದ ‘ಪಾಲಿಸಿದರೆ ಪಾಲು’: ವೆಚ್ಚಕ್ಕುಂಟು ಲೆಕ್ಕಕ್ಕಿಲ್ಲ
ಸಮುದಾಯ ಆಧಾರಿತ ಯೋಜನೆ ‘ಪಾಲಿಸಿದರೆ ಪಾಲು’ಗೆ ಪೋಷಕರ ನಿರ್ಲಕ್ಷ್ಯ 
ಮರ ಪಟ್ಟಾ ಯೋಜನೆ ವೈಫಲ್ಯಕ್ಕೆ ಜಾಗೃತಿಯ ಕೊರತೆ 

ಪ್ರತಿಕ್ರಿಯಿಸಿ (+)