ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿಯಲ್ಲಿ ‘ಅರಣ್ಯ ನ್ಯಾಯ’: ಸಿಐಡಿ ತನಿಖೆ

Last Updated 10 ಮೇ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಉಪ ವಲಯ ಅರಣ್ಯಾಧಿಕಾರಿಗಳಿಗೆ ನಿಯಮಬಾಹಿರವಾಗಿ ಬಡ್ತಿ ನೀಡಿರುವ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಆದೇಶಿಸಿದ್ದಾರೆ.

‘ಚಾಲ್ತಿಯಲ್ಲಿರುವ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಡ್ತಿ ನೀಡಲಾಗಿದೆ. ನಿಯಮಗಳ ಪಾಲನೆ ಮಾಡುವಂತೆ ಇಲಾಖೆಯಿಂದ ಹಲವು ಸಲ ಸುತ್ತೋಲೆ ಹೊರಡಿಸಿದ್ದರೂ ಕಾನೂನುಬಾಹಿರವಾಗಿ ಬಡ್ತಿ ನೀಡಲಾಗಿದೆ. ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

‘ಕೆನರಾ ವೃತ್ತದ ಉಪ ವಲಯ ಅರಣ್ಯಾಧಿಕಾರಿಗಳ ಬಡ್ತಿ ವೇಳೆ ಅಕ್ರಮ ನಡೆದಿದ್ದು, ಆರು ತಿಂಗಳಲ್ಲೇ 158 ಬಾರಿ ಕಡತ ಅಧಿಕಾರಿಗಳ ಹಂತದಲ್ಲಿ ವರ್ಗಾವಣೆಯಾಗಿದೆ’ ಎಂದು ಆರೋಪಿಸಿ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯುದಯ ಮತ್ತು ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಸದಸ್ಯರು ಅರಣ್ಯ ಸಚಿವರಿಗೆ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

ಆ ದೂರಿನ ವಿಚಾರಣೆ ನಡೆಸಿದಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಮಿತಾ ಬಿಜ್ಜೂರ್, ‘ಪ್ರಕರಣದಲ್ಲಿ ಆಗಿನ ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹಾಗೂ ಶಾಖಾಧಿಕಾರಿ ಭಾಗಿಯಾಗಿಲ್ಲ’ ಎಂದು ಮೇ 8ರಂದು ವರದಿ ಸಲ್ಲಿಸಿದ್ದಾರೆ. ಅಲ್ಲದೇ, ‘ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ (ಸೇವಾ ನಿಯಮಗಳು) ಉಪ ಕಾರ್ಯದರ್ಶಿಗೆ ಸಂಬಂಧಿಸಿದಂತೆ ಆ ಇಲಾಖೆಯೇ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಪ್ರಸ್ತಾವನೆ ಕಳುಹಿಸಲಾಗಿದೆ’ ಎಂದೂ ಹೇಳಿದ್ದಾರೆ. ಅದರ ಬೆನ್ನಲ್ಲೇ, ಬಡ್ತಿ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವರು ಆದೇಶ ಹೊರಡಿಸಿದ್ದಾರೆ.

1974ರ ಕರ್ನಾಟಕ ನಾಗರಿಕ (ನಡತೆ) ಸೇವೆಗಳು ನಿಯಮಾವಳಿ ಪ್ರಕಾರ, ಸರ್ಕಾರಿ ನೌಕರರು ಕನ್ನಡ ಭಾಷಾ ಪರೀಕ್ಷೆ ಹಾಗೂ ಹುದ್ದೆಗೆ ನಿಗದಿತವಾದ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆ ಹೊಂದುವುದು ಕಡ್ಡಾಯ. ಇದೇ ನಿಯಮಾವಳಿಯ 4(2) ಅನ್ವಯ, ಈ ಅರ್ಹತೆ ಹೊಂದಿಲ್ಲದವರು ವೇತನ ಬಡ್ತಿ/ ಪದೋನ್ನತಿ ವೃಂದಕ್ಕೆ ಮುಂಬಡ್ತಿ ಹೊಂದುವಂತಿಲ್ಲ.

ಮಾರ್ಗಸೂಚಿಗಳ ಅನ್ವಯವೇ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಂತೆ ಗೋನಾಳ ಭೀಮಪ್ಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಇದರ ಪ್ರಕಾರ, 1987ರ ಮಾರ್ಗಸೂಚಿ ಪ್ರಕಾರವೇ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಬಡ್ತಿ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮುಂಬಡ್ತಿ ಅಕ್ರಮ ಇದೇ ಮೊದಲಲ್ಲ

ಅರಣ್ಯ ಇಲಾಖೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬಡ್ತಿ ನೀಡುತ್ತಿರುವುದು ಇದೇ ಮೊದಲಲ್ಲ. ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ 17 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್‌) ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ (ಡಿಸಿಎಫ್‌) ಕಳೆದ ವರ್ಷ ‍‍‍ಪದೋನ್ನತಿ ನೀಡಲಾಗಿತ್ತು. ಇಲಾಖೆಯಲ್ಲಿ ನಕಲಿ ಹುದ್ದೆಗಳನ್ನು ಸೃಷ್ಟಿಸಿ 1,163 ಮಂದಿಗೆ ಅರಣ್ಯ ರಕ್ಷಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿ (ಫಾರೆಸ್ಟರ್‌) ಹುದ್ದೆಗೆ ಬಡ್ತಿ ನೀಡಿರುವುದು ಇತ್ತೀಚೆಗೆ ಬಯಲಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT