ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆಯಲ್ಲಿ ಆನಂದ್‌ ಸಿಂಗ್ ‘ವರ್ಗಾವಣೆ ಶಿಕಾರಿ’?

ಸ್ಥಳ ನಿಯುಕ್ತಿ– ಬಿಕರಿ ಆರೋಪ l ಕೆಎಟಿ ತಡೆಯಾಜ್ಞೆ ಇದ್ದರೂ ಎತ್ತಂಗಡಿ
Last Updated 11 ಮೇ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಮಧ್ಯೆಯೇ 43 ಅರಣ್ಯ ಸಂರಕ್ಷಣಾಧಿಕಾರಿಗಳು (ಆರ್‌ಎಫ್‌ಒ), ತಲಾ ಇಬ್ಬರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್‌) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು (ಎಸಿಎಫ್‌) ವರ್ಗಾವಣೆ ಮಾಡಿರುವ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಭರ್ಜರಿ ‘ಶಿಕಾರಿ’ ಮಾಡಿದ್ದಾರೆ ಎಂಬ ಆರೋಪ ಇಲಾಖೆಯಲ್ಲಿ ದೊಡ್ಡ ಸದ್ದು ಮಾಡಿದೆ.

30 ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಆರ್‌ಎಫ್‌ಒ) ಮತ್ತು ಆರು ಅರಣ್ಯ ರಕ್ಷಕರು ಮತ್ತು ಇಬ್ಬರು ಕಚೇರಿ ವ್ಯವಸ್ಥಾಪಕರನ್ನೂ ಎತ್ತಂಗಡಿ ಮಾಡಲಾಗಿದೆ. ಆರ್‌ಎಫ್‌ಓ, ಎಸಿಎಫ್‌ ಮತ್ತು ಡಿಸಿಎಫ್‌ಗಳು ಸೇರಿ ಒಟ್ಟು 100ಕ್ಕೂ ಹೆಚ್ಚು ಅಧಿಕಾರಿಗಳ ಮತ್ತೊಂದು ಪಟ್ಟಿಯೂ ಸಿದ್ಧವಾಗಿದೆ. ಆ ಮೂಲಕ, ಕೆಲವು ಆಯಕಟ್ಟಿನ ಜಾಗಗಳಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ನಿಯೋಜನೆ ಮಾಡಲು ಸಚಿವರು ಮುಂದಾಗಿದ್ದಾರೆ ಎಂಬ ಆಪಾದನೆಯೂ ಇದೆ.

ಏ. 27ರಿಂದ ಮೇ 8ರವರೆಗೆ ಹಂತ ಹಂತವಾಗಿ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಇದಕ್ಕೆ ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಆರ್‌ಎಫ್‌ಒ ಒಬ್ಬರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ಇದ್ದರೂ, ಅದನ್ನು ಉಲ್ಲಂಘಿಸಿ ಸಚಿವರ ಒತ್ತಡದ ಮೇಲೆ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಆರ್‌ಎಫ್‌ಒ ವಕೀಲರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ.

‘ವರ್ಗಾವಣೆ ಪಟ್ಟಿ ಪಾರದರ್ಶಕವಾಗಿ ತಯಾರಾಗಿಲ್ಲ. ವರ್ಗಾವಣೆಯ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ. ಆರ್‌ಎಫ್‌ಓಗಳ ಸ್ಥಳ ನಿಯುಕ್ತಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದೆ. ಬಹುತೇಕ ಎಲ್ಲ ವೃತ್ತಗಳ ಅರಣ್ಯ ಸಂರಕ್ಷಣಾಧಿಕಾರಿ, ಉಪ ಸಂರಕ್ಷಣಾಧಿಕಾರಿಗಳ ಎತ್ತಂಗಡಿಗೆ ಸಚಿವರು ಮುಂದಾಗಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು ದೂರಿದ್ದಾರೆ.

ಎಲ್ಲ ಆರೋಪಗಳು ನಿಜವಲ್ಲ: ಆನಂದ್‌ ಸಿಂಗ್‌

‘ಈ ಎಲ್ಲ ವರ್ಗಾವಣೆಗಳು ಫೆಬ್ರುವರಿ ತಿಂಗಳಲ್ಲಿಯೇ ಆಗಿವೆ. ಕಾಡ್ಗಿಚ್ಚು ಕಾರಣಕ್ಕೆ ಆಗ ಆದೇಶ ತಡೆ ಹಿಡಿಯಲಾಗಿತ್ತು. ಈಗ ಚಾಲನಾ ಆದೇಶ ನೀಡಲಾಗಿದೆ. ಆರೋಪಗಳು ನಿಜವಲ್ಲ’ ಎಂದು ಸಚಿವ ಆನಂದ್‌ ಸಿಂಗ್‌ ಪ್ರತಿಪಾದಿಸಿದ್ದಾರೆ.

‘ಅಧಿಕಾರಿಯೊಬ್ಬರ ಲೀಗಲ್‌ ನೋಟಿಸ್ ನಾನೂ ನೋಡಿದ್ದೇನೆ. ಆ ಅಧಿಕಾರಿ ಎರಡೂವರೆ ವರ್ಷದಿಂದ ಅಲ್ಲಿದ್ದಾರೆ. ವರ್ಗಾವಣೆ ಆದೇಶ ನೀಡುವ ಮೊದಲು ಕಡತಗಳನ್ನು ಪರಿಶೀಲಿಸಿದ್ದೇನೆ. ಯಾವುದೇ ಸಮಸ್ಯೆ ಆಗಲಾರದಂತೆ ನೋಡಿದ್ದೇನೆ. ಒಂದೇ ಕಡೆ ಇರಬೇಕು ಎಂದು ಅಧಿಕಾರಿ ಬಯಸಿದರೆ ಹೇಗೆ? ಎಲ್ಲರಿಗೂ ಅವಕಾಶ ಸಿಗಬೇಕಲ್ಲ’ ಎಂದೂ ಹೇಳಿದರು. ‘ಕೆಲವರಿಗೆ ವರ್ಗಾವಣೆ ಆದೇಶ ನೀಡಲು ಬಾಕಿ ಇದೆ. ಹಾಗೆಂದು, ಎಲ್ಲ ಆರೋಪಗಳು ನಿಜವಲ್ಲ. ಹೆಬ್ರಿಯಲ್ಲಿರುವ ಅಧಿಕಾರಿಯೊಬ್ಬರು ಒಂದೇ ವರ್ಷದಲ್ಲಿ 14 ಬಾರಿ ವರ್ಗಾವಣೆಗೊಂಡಿದ್ದೇನೆ ಎಂದಿದ್ದಾರೆ. ಅದು ಸುಳ್ಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT