ಕಾಳ್ಗಿಚ್ಚಿನಿಂದ ಕಾಡನ್ನು ಸಂರಕ್ಷಿಸಿದ ಕ್ಯಾಲೆಂಡರ್!

7
ಯಲ್ಲಾಪುರ ಅರಣ್ಯ ವಿಭಾಗದಲ್ಲಿ ಸಾರ್ವಜನಿಕ ಜಾಗೃತಿಯಿಂದ ಅರಣ್ಯ ಬೆಂಕಿ ಪ್ರಕರಣ ಇಳಿಕೆ

ಕಾಳ್ಗಿಚ್ಚಿನಿಂದ ಕಾಡನ್ನು ಸಂರಕ್ಷಿಸಿದ ಕ್ಯಾಲೆಂಡರ್!

Published:
Updated:
Prajavani

ಶಿರಸಿ: ತರಗೆಲೆಗಳು ಒಣಗಿ ಉದುರುವ ಜನವರಿಯಿಂದ ಮೇ ತಿಂಗಳವರೆಗೆ, ಕಾಡಿನ ಸಂರಕ್ಷಣೆ ಅರಣ್ಯ ಇಲಾಖೆಗೆ ದೊಡ್ಡ ಸವಾಲು. ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಅವರನ್ನೂ ಒಳಗೊಳ್ಳುವ ಮೂಲಕ ಬೆಂಕಿ ಹತ್ತಿಕ್ಕುವ ಸವಾಲನ್ನು ಎದುರಿಸುವ ಪ್ರಯತ್ನವನ್ನು ಯಲ್ಲಾಪುರ ಅರಣ್ಯ ವಿಭಾಗ ಮಾಡಿ, ಅದರಲ್ಲಿ ಯಶಸ್ಸನ್ನೂ ಕಂಡಿದೆ.

ಇದರ ಪರಿಣಾಮವಾಗಿ, ಯಲ್ಲಾಪುರ ಅರಣ್ಯ ವಿಭಾಗದ ಒಟ್ಟು ಭೌಗೋಳಿಕ ಪ್ರದೇಶದ ಶೇ 87ರಷ್ಟು ಅರಣ್ಯ ಪ್ರದೇಶದಲ್ಲಿ ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳೂ ಕಡಿಮೆಯಾಗಿವೆ.

ಅರಣ್ಯ ಜಿಲ್ಲೆಯೆಂದೇ ಖ್ಯಾತವಾಗಿರುವ ಉತ್ತರ ಕನ್ನಡದ ಕೆನರಾ ಅರಣ್ಯ ವೃತ್ತದಲ್ಲಿ 2017–18ನೇ ಸಾಲಿನಲ್ಲಿ ಅತಿ ಕಡಿಮೆ ಬೆಂಕಿ ಪ್ರಕರಣಗಳು ಯಲ್ಲಾಪುರದಲ್ಲಿ ದಾಖಲಾಗಿವೆ.

‘ಕಾಡಿನ ಬೆಂಕಿ ಪ್ರಕರಣಗಳಲ್ಲಿಶೇ 1ರಷ್ಟು ಮಾತ್ರ ಆಕಸ್ಮಿಕವಾಗಿ ಘಟಿಸುವಂಥವು. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಅಥವಾ ಅರಿವಿಲ್ಲದೇ ಕಾಡಿಗೆ ಬೆಂಕಿ ಬಿದ್ದು ಆಗುವ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ, ತಳಮಟ್ಟದ ಅಧ್ಯಯನ ನಡೆಸಲಾಯಿತು. ಜಾಗೃತಿ ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್‌ಗಳನ್ನು ‍ಅರಣ್ಯದಂಚಿನ ಮನೆಗಳಿಗೆ ತಲುಪಿಸಿದೆವು. ಇಲಾಖೆ ಸಿಬ್ಬಂದಿ ಖುದ್ದಾಗಿ ಹೋಗಿ 1,600ಕ್ಕೂ ಹೆಚ್ಚು ಮನೆಗಳಿಗೆ ಕ್ಯಾಲೆಂಡರ್ ವಿತರಿಸಿದರು’ ಎನ್ನುತ್ತಾರೆ ಯೋಜನೆಯ ರೂವಾರಿ, ಆಗಿನ ಡಿಸಿಎಫ್ ಆಗಿದ್ದ ಡಿ.ಯತೀಶ್‌ ಕುಮಾರ್.


 ಕಾಡಿನ ಬೆಂಕಿ ತಡೆಯಲು ಮಕ್ಕಳು ನಡೆಸಿದ ಜಾಗೃತಿ ಜಾಥಾ

‘ಪ್ರತಿವರ್ಷ ಹೆಚ್ಚು ಬೆಂಕಿ ಬೀಳುವ ಪ್ರದೇಶಗಳನ್ನು ಗುರುತಿಸಲಾಯಿತು. ಅಲ್ಲಿನ ಜನರನ್ನು ಇಲಾಖೆ ವಿಶ್ವಾಸಕ್ಕೆ ತೆಗೆದುಕೊಂಡು, ಹಸಿರು ಪಡೆ ರಚಿಸಲಾಯಿತು. ಈ ತಂಡಗಳು, ಅಗ್ನಿ ಅನಾಹುತ ನಡೆದರೆ ಮಾಹಿತಿ ನೀಡುವ ಜತೆಗೆ ಕಾವಲುಗಾರರ ಕೆಲಸವನ್ನೂ ನಿರ್ವಹಿಸಿದವು. ವಿದ್ಯಾರ್ಥಿಗಳು, ಗ್ರಾಮ ಅರಣ್ಯ ಸಮಿತಿ, ಗ್ರಾಮ ಪಂಚಾಯ್ತಿ ಸಿಬ್ಬಂದಿಯನ್ನು ಸೇರಿಸಿ ಜಾಥಾ ನಡೆಸಿದೆವು. ಸ್ಥಳೀಯರನ್ನೇ ಬಳಸಿಕೊಂಡು ಪ್ರದರ್ಶಿಸಿದ ಬೀದಿ ನಾಟಕಗಳು ಜನರ ಮನತಟ್ಟಿದವು. ಪ್ರತಿ ಊರಿನಲ್ಲಿ ಕಾರ್ಯಕ್ರಮ ನಡೆಸಿ, ಆಯಾ ಊರಿನ ಪ್ರಭಾವಿ ವ್ಯಕ್ತಿಗಳಿಂದಲೇ ಕಾಡಿನ ಸಂರಕ್ಷಣೆಯ ಪಾಠ ಮಾಡಿಸಿದೆವು. ಬುಡಕಟ್ಟು ಸಮುದಾಯದವರು ಭೂಮಿ ಮುಟ್ಟಿ ಆಣೆ ಮಾಡಿ, ಕಾಡನ್ನು ರಕ್ಷಿಸುವ ಪಣತೊಟ್ಟರು. ಶಾಲಾ ಮಕ್ಕಳಿಗೆ ಸ್ಟಿಕರ್ ವಿತರಣೆ, ಅರಣ್ಯ ಸಂರಕ್ಷಿಸಿದ ಗ್ರಾಮ ಅರಣ್ಯ ಸಮಿತಿಗೆ ಬಹುಮಾನ, ಕಾಡಂಚಿನಲ್ಲಿ ವನಭೋಜನ, ಇಂತಹ ರಚನಾತ್ಮಕ ಯೋಜನೆಗಳು ಫಲಕೊಟ್ಟವು’ ಎನ್ನುತ್ತಾರೆ ಮಂಚಿಕೇರಿ ಎಸಿಎಫ್ ಪ್ರಶಾಂತ ಪಿ.ಕೆ.ಎಂ.

‘ಆರು ವಲಯ ಹೊಂದಿರುವ ಯಲ್ಲಾಪುರ ವಿಭಾಗದಲ್ಲಿ ಇಡಗುಂದಿ ವಲಯದಲ್ಲಿ ಅರಬೈಲ್ ಘಟ್ಟ ಒಳಗೊಂಡು ಅತಿ ಹೆಚ್ಚು ಅರಣ್ಯ ಪ್ರದೇಶವಿದೆ. ಘಟ್ಟದಲ್ಲಿ ಬೆಂಕಿ ಬಿದ್ದರೆ ಆರಿಸುವುದು ದೊಡ್ಡ ಸವಾಲಾಗುತ್ತಿತ್ತು. ಇಲಾಖೆ ಮತ್ತು ಜನರ ನಡುವಿನ ನಿರಂತರ ಸಂಪರ್ಕದಿಂದಾಗಿ ಕಳೆದ 10 ವರ್ಷಗಳಲ್ಲಿ ಅತಿ ಕಡಿಮೆ ಸಂಖ್ಯೆಯ ಬೆಂಕಿ ಪ್ರಕರಣಗಳು ಇಲ್ಲಿ ಸಂಭವಿಸಿವೆ’ ಎಂಬುದು ಆಗಿನ ಆರ್‌ಎಫ್‌ಒ ಹಿಮವತಿ ಭಟ್ ಅವರು ನೀಡುವ ಮಾಹಿತಿ.

‘ನಿರಂತರ ಜಾಗೃತಿ ಕಾರ್ಯಕ್ರಮ ನಡೆಸಿದ ಫಲವಾಗಿ ಶೇ 40ರಷ್ಟು ಬೆಂಕಿ ಪ್ರಕರಣಗಳು ಕಡಿಮೆಯಾಗಿವೆ. ಈ ವರ್ಷ ಹೊಸದಾಗಿ ಒಂದು ನಿಮಿಷದ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದ್ದು, ಇನ್ನಷ್ಟು ಹೆಚ್ಚು ಜನರನ್ನು ತಲುಪುತ್ತೇವೆ’ ಎಂದು ಯಲ್ಲಾಪುರ ಡಿಸಿಎಫ್ ಆರ್.ಜಿ.ಭಟ್ಟ ‘ಪ್ರಜಾವಾಣಿ’ಗೆ ತಿಳಿಸಿದರು.

* ಕಳೆದ ವರ್ಷ ನಡೆಸಿರುವ ಜಾಗೃತಿ ಕಾರ್ಯಕ್ರಮಗಳ ಜತೆಗೆ ಇನ್ನಷ್ಟು ಹೊಸ ಯೋಜನೆಗಳನ್ನು ರೂಪಿಸಿ, ಕಾಡಿನ ಬೆಂಕಿ ಪ್ರಕರಣ ತಗ್ಗಿಸುವಲ್ಲಿ ಇಲಾಖೆ ವಿಶೇಷ ಆಸಕ್ತಿವಹಿಸಿದೆ

- ಆರ್.ಜಿ.ಭಟ್ಟ, ಡಿಸಿಎಫ್

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !