ಹೊನ್ನಾವರ: ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ

7

ಹೊನ್ನಾವರ: ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ

Published:
Updated:

ಹೊನ್ನಾವರ: ತಾಲ್ಲೂಕಿನ ಮೇಲಿನ ಇಡಗುಂಜಿ ಸಮೀಪದ ಕುಡಗಟ್ಟಿ ಎಂಬಲ್ಲಿ, ತೋಟದ ಬೇಲಿಗೆ ಸಿಲುಕಿದ್ದ ಚಿರತೆಯನ್ನು ರಕ್ಷಿಸಲು ಹೋದ ಅರಣ್ಯ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿದೆ.

ಆಹಾರ ಹುಡುಕಿಕೊಂಡು ಭಾನುವಾರ ಹಳ್ಳಿಯ ಕಡೆಗೆ ಬಂದಿದ್ದ ಚಿರತೆಯು, ಗಣಪಯ್ಯ ಗೌಡ ಎಂಬುವವರ ತೋಟದ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿಕೊಂಡು ನರಳಾಡುತ್ತಿತ್ತು. ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಅದನ್ನು ರಕ್ಷಿಸುವ ಕಾರ್ಯಾಚರಣೆಗೆ ಮುಂದಾದರು. 

ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್, ಚಿರತೆಗೆ ‘ಡಾರ್ಟ್’ ಮೂಲಕ ಅರಿವಳಿಕೆ ನೀಡಿದರು. ಆದರೆ, ಅದನ್ನು ನೋಡಲು ಸುತ್ತುವರಿದಿದ್ದ ಜನರು ಅರಿವಳಿಕೆಯ ಪರಿಣಾಮ ಉಂಟಾಗುವ ಮೊದಲೇ ಚಿರತೆಯ ಸಮೀಪಕ್ಕೆ ಹೋಗಿದ್ದರಿಂದ ಅದು ಗಾಬರಿಗೊಂಡಿತ್ತು. ಇದರಿಂದಾಗಿ, ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆಯ ಜೀಪ್‌ ಚಾಲಕ ಶೇಷು ಎನ್ನುವವರ ಮೇಲೆ ಅದು ದಾಳಿ ಮಾಡಿದೆ. ನಂತರ ಸ್ಥಳದಿಂದ ಪರಾರಿಯಾಗಿದೆ.

ಶೇಷು ಅವರ ಕೈಗೆ ಗಾಯವಾಗಿದ್ದು,  ಪಟ್ಟಣದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಅರಿವಳಿಕೆ ಪರಿಣಾಮ ಕೇವಲ ಅರ್ಧ ತಾಸಿನಷ್ಟು ಮಾತ್ರ ಇರುತ್ತದೆ. ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ತಪ್ಪಿಸಿಕೊಂಡಿರುವ ಚಿರತೆಯ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ’ ಎಂದು ನಂದೀಶ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !