ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆ ನೀರು ಕಳವು ತಡೆಗೆ ವಿಚಕ್ಷಣಾ ದಳ ರಚನೆ

Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಲೆಗಳಲ್ಲಿ ನೀರು ಕಳವು ತಡೆಗೆ ಇಂಧನ ಇಲಾಖೆ ಮಾದರಿಯಲ್ಲೇ ವಿಚಕ್ಷಣಾ ದಳ ರಚಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಲಾಶಯದಿಂದ ಬಿಟ್ಟ ನೀರು ನಾಲೆಯ ಕೊನೆಯವರೆಗೆ ಹೋಗುವುದಿಲ್ಲ. ಹಲವು ಮಂದಿ ಪಂಪ್‌ಸೆಟ್‌ ಅಕ್ರಮವಾಗಿ ಅಳವಡಿಸಿ ನೀರು ಕಳವು ಮಾಡುತ್ತಿದ್ದಾರೆ. ಕೆಲವರು ಟ್ರ್ಯಾಕ್ಟರ್ ಬಳಸಿ ಗೇಟ್‌ ತೆರೆಯುತ್ತಿದ್ದಾರೆ. ಪೊಲೀಸರ ಸಹಕಾರ ಪಡೆದು ಇದಕ್ಕೆಲ್ಲ ಕಡಿವಾಣ ಹಾಕಲಿದ್ದೇವೆ. ನಾಲ್ಕು ನೀರಾವರಿ ನಿಗಮಗಳಿಗೂ ಪ್ರತ್ಯೇಕ ದಳ ಸ್ಥಾಪಿಸಲಾಗುತ್ತದೆ. ಈ ಸಂಬಂಧ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ಮೇಕೆದಾಟು ಯೋಜನೆಗೆ ಆದ್ಯತೆ: ‘ಕಾವೇರಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇವೆ. ಈ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ‌ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದು ಅವರು ಹೇಳಿದರು.

‘ಸಾಮಾನ್ಯ ಜಲವರ್ಷದಲ್ಲಿ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಬಿಡಬೇಕಿದೆ. ಉತ್ತಮ ಮಳೆಯಾಗಿದ್ದರಿಂದ ಈ ವರ್ಷ ಈಗಾಗಲೇ 310 ಟಿಎಂಸಿ ಅಡಿ ನೀರು ಹರಿದುಹೋಗಿದೆ. ಹೆಚ್ಚುವರಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ನಮ್ಮಲ್ಲಿ ವ್ಯವಸ್ಥೆ ಇಲ್ಲ. ಹೀಗಾಗಿ, ಮೇಕೆದಾಟು ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಇದು ₹ 6 ಸಾವಿರ ಕೋಟಿಯ ಯೋಜನೆ. 60 ಟಿಎಂಸಿ ಅಡಿ ನೀರು ಸಂಗ್ರಹಿಸಿ ಇಟ್ಟುಕೊಳ್ಳಬಹುದು’ ಎಂದರು.

‘ಅಣೆಕಟ್ಟೆ ನಿರ್ಮಾಣದಿಂದ 4 ಸಾವಿರ ಎಕರೆ ಅರಣ್ಯ ಭೂಮಿ ಮುಳುಗಡೆಯಾಗಲಿದೆ. ಯೋಜನೆಗೆ ಶೇ 80ರಷ್ಟು ಭೂಮಿಯನ್ನು ನನ್ನ ಕ್ಷೇತ್ರದಲ್ಲೇ ಸ್ವಾಧೀನಪಡಿಸಿಕೊಳ್ಳಬೇಕಿದೆ. ಮಳವಳ್ಳಿ ಹಾಗೂ ಹನೂರು ಕ್ಷೇತ್ರಗಳಲ್ಲಿ ಉಳಿದ ಪ್ರದೇಶ ಭೂಸ್ವಾಧೀನ ಮಾಡಬೇಕಿದೆ. ರೈತರನ್ನು ಮನವೊಲಿಸಿ ಯೋಜನೆ ಕಾರ್ಯಗತ ಮಾಡಲಾಗುವುದು’ ಎಂದರು.

‘ನೀರಾವರಿ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರಲು ಹೊಸ ಆಲೋಚನೆಗಳನ್ನು ನೀಡುವಂತೆ ತಜ್ಞರು, ನಿವೃತ್ತ ಅಧಿಕಾರಿಗಳು ಹಾಗೂ ಹೋರಾಟಗಾರರಿಗೆ ಮನವಿ ಮಾಡಿದ್ದೆ. 146 ಮಂದಿ ಸಲಹೆಗಳನ್ನು ನೀಡಿದ್ದಾರೆ. ‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT