ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟರ ಕಂಡರೆ ಅವರಿಗೆ ಕಡು ಕೋಪವಿತ್ತು’

Last Updated 30 ಅಕ್ಟೋಬರ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಪತ್ರೆಯಲ್ಲಿ ಇರೋವಷ್ಟು ಭ್ರಷ್ಟಾಚಾರ ಬೇರೆಲ್ಲೂ ಇಲ್ಲವೇನೊ ಎಂಬಂತಹ ವಾತಾವರಣ ಅದು. ವೈದ್ಯರು, ನರ್ಸ್‌ಗಳು ಭ್ರಷ್ಟಾಚಾರ ಆಪಾದನೆಯಲ್ಲಿ ಅಮಾನತುಗೊಂಡರೆ ತುಂಬಾ ಖುಷಿಯಾಗುತ್ತಿದ್ದರು. ಮನೆಯಲ್ಲಿ ಇದ್ದುಕೊಂಡು ಪುಗಸಟ್ಟೆ ಸಂಬಳ ತಿನ್ನಬಹುದಲ್ಲಾ ಎಂಬಂತಹ ತರ್ಕ ಅವರದ್ದು. ಇಂತಹ ಗಳಿಗೆಯಲ್ಲಿ ಜನರಿಂದ ದುಡ್ಡು ಇಸಿದುಕೊಂಡ ಭ್ರಷ್ಟಾಚಾರದ ಆಪಾದನೆ ಹೊತ್ತವರ ಕೈಯಲ್ಲಿ ಮತ್ತೆ ಅದನ್ನು ಜನರಿಗೆ ಸ್ಥಳದಲ್ಲೇ ವಾಪಸು ಕೊಡಿಸಿದ್ದವರು ಲೋಕಾಯುಕ್ತ ಎನ್‌.ವೆಂಕಟಾಚಲ.

ವೆಂಕಟಾಚಲ ಅವರ ಜೊತೆ ನಾನು ವಿಚಕ್ಷಣಾ ದಳದ ನಿರ್ದೇಶಕನಾಗಿ ನಾಲ್ಕು ವರ್ಷಗಳ ಕಾಲ ₹ 1 ಸಂಬಳ ಪಡೆದು ಕೆಲಸ ಮಾಡಿದ್ದೇನೆ!. ಅವರು ಕೇವಲ ಬೆಂಗಳೂರಿನ ಲೋಕಾಯುಕ್ತ ಕಚೇರಿಯ ಒಳಗೆ ಕುಳಿತು ಕೆಲಸ ಮಾಡಲಿಲ್ಲ. ಬದಲಿಗೆ, ತಮ್ಮ ಅವಧಿಯಲ್ಲಿ ಎರಡು ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ತಾಲ್ಲೂಕು ಮಟ್ಟದಲ್ಲಿ ಸುತ್ತಿ ಲೋಕಾಯುಕ್ತರ ಅಧಿಕಾರ ಎಷ್ಟೆಂಬುದನ್ನು ಜಗಜ್ಜಾಹೀರು ಮಾಡಿದರು, ಮಾತ್ರವಲ್ಲ ಇಂತಹ ಸಾಂವಿಧಾನಿಕ ಸಂಸ್ಥೆ ಎಷ್ಟರಮಟ್ಟಿಗೆ ಜನಪರವಾಗಿ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು.

ಯಾವುದೇ ಊರಿಗೆ ಹೋದರೂ ಎಲ್ಲ ಸಂತ್ರಸ್ತರ ಅಹವಾಲುಗಳನ್ನು ಆಲಿಸಿ ಅಲ್ಲೇ ಬಗೆಹರಿಸಿ ಅವುಗಳಿಗೊಂದು ತಾರ್ಕಿಕ ತೀರ್ಪು ನೀಡುತ್ತಿದ್ದ ಅವರ ಗುಣ ಮೆಚ್ಚುವಂತಹುದು. ಅವರೊ ಳಗಿದ್ದ ಜನಪರ ಕಾಳಜಿ, ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಕಡು ಕೋಪವಿತ್ತು. ಅದಕ್ಕೆಂದೇ ಲೋಕಾಯುಕ್ತ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂಬ ಇಚ್ಛೆಯಿಂದ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಭರ್ತಿ ಮಾಡಿಕೊಂಡಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ತಮ್ಮ ತಂಡದ ಜೊತೆ ತಿರುಗಿ ಜನರ ದುಃಖ ದುಮ್ಮಾನಕ್ಕೆ ಗರಿಷ್ಠ ಪ್ರಮಾಣದಲ್ಲಿ ನೆರವಾದರು.

2005ರಲ್ಲಿ ಎಲ್ಲ ರಾಜ್ಯಗಳ ಲೋಕಾಯುಕ್ತರ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಆ ಸಮ್ಮೇಳನದಲ್ಲಿ ಬೇರೆಡೆಯಿಂದ ಬಂದಿದ್ದ ಲೋಕಾಯುಕ್ತರು, ವೆಂಕಟಾ ಚಲ ಅವರ ಕಾರ್ಯಕ್ಷಮತೆ ಕಂಡು ನಿಬ್ಬೆರಗಾಗಿದ್ದರು. ಒಬ್ಬ ಸಮರ್ಥ ಮನುಷ್ಯ ಅಧಿಕಾರ ದೊರೆತಾಗ ಹೇಗೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ವೆಂಕಟಾಚಲ. ಇವತ್ತು ಲೋಕಾಯುಕ್ತ ಎಂದರೆ ಏನು ಎಂದು ಕೇಳುವಂತಹ ಸ್ಥಿತಿ ಇದೆ. ನಮಗೆಲ್ಲಾ ಸ್ಫೂರ್ತಿ ಆಗಿದ್ದ ವೆಂಕಟಾಚಲ ಅವರ ನಿಧನ ತುಂಬಲಾರದ ನಷ್ಟವೇ ಸರಿ.

(ಲೇಖಕ: ಬಿಳಿಗಿರಿ ರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಕಾರ್ಯದರ್ಶಿ)

ಸಾಧನೆಯ ಹಾದಿ

ನಂಜೇಗೌಡ ವೆಂಕಟಾಚಲ ಅವರು 1930ರ ಜುಲೈ 3ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮಿಟ್ಟೂರಿನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು‌.

ಶಿಕ್ಷಣ: ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿಎಸ್ಸಿ ಹಾಗೂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

ಸನ್ನದು: ಮೈಸೂರು (ಈಗ ಕರ್ನಾಟಕ) ಹೈಕೋರ್ಟ್‌ನಲ್ಲಿ 1955ರ ನವೆಂಬರ್ 16ರಂದು ವಕೀಲರಾಗಿ ಸನ್ನದು ನೋಂದಣಿ ಮಾಡಿಸಿದರು.

ವೃತ್ತಿ ಜೀವನ: 1958ರಲ್ಲಿ ಆರ್‌.ಸಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದರು. ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಅವರು, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಹೊಂದಿದರು. 1963ರಿಂದ 1973ರವರೆಗೆ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿದ್ದರು‌.

ಹೈಕೋರ್ಟ್ ನ್ಯಾಯಮೂರ್ತಿ: 1973ರಿಂದ 1977ರವರೆಗೆ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿದ್ದ ಅವರು, 1977ರ ನವೆಂಬರ್ 28ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1992ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಸುಪ್ರೀಂ ಕೋರ್ಟ್‌ಗೆ: 1992ರ ಜುಲೈ 1 ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿ, 1995ರ ಜುಲೈ 2ರಂದು ನಿವೃತ್ತರಾದರು.

ಲೋಕಾಯುಕ್ತ: 2001ರ ಜುಲೈ 2ರಂದು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಇವರ ಕುರಿತಂತೆ ‘ಲಂಚ ಸಾಮ್ರಾಜ್ಯ‘ ಎಂಬ ಚಲನಚಿತ್ರವನ್ನೂ ನಿರ್ಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT