ಮಾಜಿ ಶಾಸಕ ಎಂ.ಪಿ. ರವೀಂದ್ರ ನಿಧನ

7
ಬಹು ಆಂಗಾಂಗ ವೈಫಲ್ಯ

ಮಾಜಿ ಶಾಸಕ ಎಂ.ಪಿ. ರವೀಂದ್ರ ನಿಧನ

Published:
Updated:

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಪುತ್ರ, ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ರವೀಂದ್ರ (49) ಶನಿವಾರ ನಸುಕಿನಲ್ಲಿ ನಿಧನರಾದರು.

ಬಹು ಆಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿ ಬಳಲುತ್ತಿದ್ದ ಅವರು ನಗರ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫೆಬ್ರುವರಿಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಸಿಂಗಪುರದ ಮೌಂಟ್ ಎಲೆಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದರು. ಕೆಲಸ ಸಮಯದ ಬಳಿಕ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಬೆಂಗಳೂರಿನ ಗಾಂಧಿಭವನ ಬಳಿಯಿರುವ ವಲ್ಲಭ ನಿಕೇತನದಲ್ಲಿ ಬೆಳಗ್ಗೆ 9 ಗಂಟೆಯಿಂದ 10.30ರವರೆಗೆ ರವೀಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ನಂತರ ರಸ್ತೆ ಮುಖಾಂತರ ಹರಪನಹಳ್ಳಿಗೆ ತೆರಳಿ ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಸ್ಥಳೀಯ ಎ.ಡಿ.ಬಿ. ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭಾನುವಾರ ಅಂತ್ಯಕ್ರಿಯೆ: ಪಾರ್ಥಿವ ಶರೀರವನ್ನು ರವೀಂದ್ರ ಅವರ ಗ್ರಾಮ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಗೆ ಕೊಂಡೊಯ್ದು ಭಾನುವಾರ ಬೆಳಗ್ಗೆ 11 ಗಂಟೆಯವರೆಗೆ ಜಿ.ಬಿ.ಆರ್. ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಅಪರಾಹ್ನ 12 ಗಂಟೆಗೆ ದಿ.ಎಂ.ಪಿ.ಪ್ರಕಾಶ್ ಅವರ ಸಮಾಧಿ ಬಳಿ ಆಂತ್ಯಕ್ರಿಯೆ ನಡೆಸಲಾಗುವುದು ಎಂದು ರವೀಂದ್ರ ಅವರ ಮಾವ ವಿಜಯ ಹಿರೇಮಠ ತಿಳಿಸಿದ್ದಾರೆ.

ತಂದೆಯ ಹಾದಿಯಲ್ಲೇ ಸಾಗಿದ್ದ ಮುತ್ಸದ್ಧಿ ರಾಜಕಾರಣಿ

ರಂವೀಂದ್ರ ಅವರು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಪ್ರತಿಷ್ಠಿತ ಮಠದ ಪಾಟೀಲ ಕುಟುಂಬದವರು. ರಾಜಕೀಯ, ಸಹಕಾರಿ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತಂದೆ ಎಂ.ಪಿ.ಪ್ರಕಾಶ್ ಅವರ ಹಾದಿಯಲ್ಲೇ ಸಾಗಿದ ಮುತ್ಸದ್ಧಿ ರಾಜಕಾರಣಿ ಎಂದೂ ರಾಜಕೀಯ ವಲಯದಲ್ಲಿ ಹೆಸರಾಗಿದ್ದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಜಯದ ನಗೆಬೀರಿದ್ದರು. ಅಲ್ಲದೆ ಬಳ್ಳಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಕೆ.ಎಂ.ಎಫ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಹರಪನಹಳ್ಳಿ ಕ್ಷೇತ್ರಕ್ಕೆ ಶಾಶ್ವತ ಅಭಿವೃದ್ಧಿ ಕೆಲಸ ನೀಡಿದ ಹೆಗ್ಗಳಿಗೆ ಇವರಿಗಿದೆ. ಸಂವಿಧಾನದ 371ಜೆ ಪಡೆಯುವ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ನಡೆಸಿದ್ದರು. ಸರ್ಕಾರ ಇದಕ್ಕೆ ಕಿವಿಗೊಡದಿದ್ದಾಗ ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ತಾಲ್ಲೂಕಿನ ಜನದನಿ ಆಗಿ ನಿಂತಿದ್ದರು. ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರಿ ಹೈದರಾಬಾದ್ ಕರ್ನಾಟಕದ ಸೌಲಭ್ಯ ಪಡೆಯುವ ತುದಿಗಾಲಲ್ಲಿರುವ ಸಮಯದಲ್ಲಿ ರವೀಂದ್ರರು ಇಲ್ಲದ್ದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 5

  Sad
 • 1

  Frustrated
 • 1

  Angry

Comments:

0 comments

Write the first review for this !