ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ

7

ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ

Published:
Updated:

ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನಾಚರಣೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.

ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಭಾವಚಿತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಪುಷ್ಷ ನಮನ ಸಲ್ಲಿಸಿದರು.

‘ಸರ್ವರಿಗೂ ಸಮಪಾಲು, ಸಮಬಾಳು ಕಲ್ಪನೆಯಿದೆ. ಈ ಕಲ್ಪನೆಯನ್ನು ಜಾರಿಗೆ ತಂದವರು ದೇವರಾಜ ಅರಸು. ಶಿಕ್ಷಣ, ರಾಜಕೀಯದಲ್ಲಿ ಮೀಸಲಾತಿ ತಂದ ರಾಜೀವ್ ಗಾಂಧಿ ಕೂಡ ಧೀಮಂತ ನಾಯಕ’ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಬೇರೆಯವರು ಫಲ ಅನುಭವಿಸುತ್ತಾರೆ ಭಾಷಣವನ್ನೂ ಮಾಡ್ತಾರೆ. ಆದರೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುತ್ತಿಲ್ಲ. ಬಿಜೆಪಿಯವರು ಬರೀ ಭಾಷಣ ಹೊಡೆಯುತ್ತಾರೆ. ಗಿಮಿಕ್ ಮಾಡುವುದಷ್ಟೇ ಅವರ ಕೆಲಸ. ಆದರೆ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರೋದು ಕಾಂಗ್ರೆಸ್‌ನವರು ಎಂದರು.

ಬಿಜೆಪಿಯವರು ಮೀಸಲಾತಿ ವಿರೋಧಿಗಳು, ಮಂಡಲ್ ಆಯೋಗದ ವರದಿಗೆ ವಿರೋಧ ಮಾಡಿದ್ದು ಬಿಜೆಪಿ ನಾಯಕರೇ, ವರದಿ ವಿರುದ್ಧ ರಥಯಾತ್ರೆ ಮಾಡಿದವರು ಅಡ್ವಾಣಿ. ಮಹಿಳಾ ಮೀಸಲಾತಿಗೆ ವಿರೋಧಿಸಿದವರು ಬಿಜೆಪಿಯವರು. ಮೀಸಲಾತಿ ಬೇಡ ಎಂದಿದ್ದ ರಾಮಾ ಜೋಯಿಸ್ ಬಿಜೆಪಿಯವರು. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ವಿರೋಧವಿದೆ ಎಂದು ವಾಗ್ದಾಳಿ ನಡೆಸಿದರು.

ಕೆಳವರ್ಗದ ಪರ ಬಿಜೆಪಿ ಇಲ್ಲ. ಅವರ ಅಪಪ್ರಚಾರದಿಂದ ನಾವು ಸೋಲಬೇಕಾಯಿತು. ಜನರನ್ನು ದಾರಿ ತಪ್ಪಿಸುವುದೇ ಅವರ ಕೆಲಸ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಬಿಜೆಪಿ, ಆರ್‌ಎಸ್‌ಎಸ್‌ನವರು ಸನಾತನ ಧರ್ಮದ ಹೆಸರಿನಲ್ಲಿ ಉಗ್ರವಾದ ಮಾಡುತ್ತಿದ್ದಾರೆ. ಪ್ರಗತಿಪರ ಚಿಂತನೆ ಇಲ್ಲದವರು. ಅವರೇ ನಿಜವಾದ ಟೆರರಿಸ್ಟ್‌ಗಳು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಗೌರಿ ಲಂಕೇಶ್ ಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವುದು ಈಗ ಗೊತ್ತಾಗಿದೆ. ಗೌರಿ, ದಾಬೋಲ್ಕರ್, ಪನ್ಸಾರೆ ಹತ್ಯೆ ಮಾಡಿದವರು ಯಾರು. ನಾಲ್ಕು ವರ್ಷಗಳಿಂದ ಕಂಡುಹಿಡಿಯದಿದ್ದ ಸತ್ಯವನ್ನು ನಮ್ಮ ಪೊಲೀಸರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ಇದರ ಹಿಂದಿರುವವರು ಯಾರು ಎನ್ನುವುದು ಜಗತ್ತಿಗೇ ಗೊತ್ತಾಗಿದೆ. ಗೌರಿ ಹಂತಕರನ್ನು ಹಿಡಿಯುವ ಕೆಲಸ ನಮ್ಮ ಸರ್ಕಾರ ಮಾಡಿತು. ಆದರೆ ಮಹಾರಾಷ್ಟ್ರ ಸರ್ಕಾರ ಪನ್ಸಾರೆ ಮತ್ತು ದಾಬೋಲ್ಕರ್ ಕೊಲೆ ಮಾಡಿದವರ ಬಗ್ಗೆ ಚಕಾರ ಎತ್ತಲಿಲ್ಲ. ಇವರು ಸಹ ಭಯೋತ್ಪಾದಕರಷ್ಟೇ ಕ್ರೂರ ಎಂದರು.

‘ಅದೇ ಒಬ್ಬ ಮುಸ್ಲಿಂ ಇಂತಹ ಕೃತ್ಯ ಮಾಡಿದ್ರೆ ಸುಮ್ಮನೆ ಬಿಡುತ್ತಿದ್ದರಾ ? ಐಸಿಸ್ ಉಗ್ರಸಂಘಟನೆ ಪಾತ್ರ ಇದ್ದಿದ್ದರೆ ಪ್ರತಿದಿನ ಟಿವಿಗಳಲ್ಲಿ ಚರ್ಚೆ ಆಗುತ್ತಿತ್ತು. ವಾಜಪೇಯಿ ಅಂತ್ಯಸಂಸ್ಕಾರಕ್ಕೆ ಹೋದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಯಾರು ಇವರ ವಿರುದ್ಧ ಮಾತನಾಡುತ್ತರೊ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಇವರನ್ನು ಟೆರರಿಸ್ಟ್ ಅನ್ನದೆ ಬೇರೆ ದಾರಿಯಿಲ್ಲ’ ಎಂದು ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಎಚ್. ಆಂಜನೇಯ, ಮೋಟಮ್ಮ, ಭೈರತಿ ಸುರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !