ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಕಸಿಯುವ ಭಸ್ಮಾಸುರನಂತಾದ ಒಆರ್‌ಆರ್‌

ಮೇರೆ ಮೀರಿ ಬೆಳೆದಿದೆ ಮಹಾನಗರ– ದಟ್ಟಣೆ ಸಮಸ್ಯೆಗಿಲ್ಲ ಪರಿಹಾರ
Last Updated 9 ಏಪ್ರಿಲ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಮಹಾನಗರವು ಚದುರುವ ಸೂರ್ಯ ರಶ್ಮಿಯಂತೆ ದಶದಿಕ್ಕುಗಳತ್ತ ನಾಗಾಲೋಟದಿಂದ ಬೆಳೆಯುತ್ತಲೇ ಇದೆ. ಇಲ್ಲಿನ ಸಂಚಾರ ಸಮಸ್ಯೆ ಬಗೆಹರಿಸಲು ದಶಕಗಳ ಹಿಂದೆ ರೂಪಿಸಿದ ವರ್ತುಲ ರಸ್ತೆಯನ್ನು ಎಂದೋ ನುಂಗಿ ಹಾಕಿರುವ ನಗರವು ಆದರಾಚೆಗೂ ದಾಂಗುಡಿ ಇಟ್ಟಿದೆ. ನಂತರದ ಹಂತದಲ್ಲಿ ರೂಪಿಸಿದ ಹೊರವರ್ತುಲ ರಸ್ತೆಗಳು ನಗರದ ಒಡಲೊಳಗೆ ಸೇರಿ ಬಿಟ್ಟಿವೆ. ‘ಅಭಿವೃದ್ಧಿ’ ಬೆನ್ನು ಹತ್ತಿರುವ ನಗರದ ನಿವಾಸಿಗಳ ಅಮೂಲ್ಯವಾದ ಸಮಯವನ್ನು ನಷ್ಟಮಾಡುವ ‘ಭಸ್ಮಾಸುರ’ನಂತೆ ಈ ರಸ್ತೆಗಳು ಕಾಡುತ್ತಿವೆ.

ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಹೊರವರ್ತುಲ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇಲ್ಲಿದೆ.

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರ ನಡುವೆ ಮೆಟ್ರೊ ಮಾರ್ಗ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಹೊರವರ್ತುಲ ರಸ್ತೆಯ ಈ ಭಾಗದಲ್ಲಿ ವಾಹನ ದಟ್ಟಣೆ ಸಮಸ್ಯೆ ಹಾಗೂ ರಸ್ತೆಯ ಆಸುಪಾಸಿನ ಆರ್ಥಿಕ ಚಟುವಟಿಕೆಯ ಸಮಗ್ರ ಅಧ್ಯಯನ ನಡೆಸಿತ್ತು. ವಾಹನ ದಟ್ಟಣೆ ಸಮಸ್ಯೆಯಿಂದಾಗಿ ವರ್ಷವೊಂದರಲ್ಲಿ ಸರಾಸರಿ ₹ 20,713 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ ಎಂಬ ಬೆಚ್ಚಿ ಬೀಳಿಸುವ ಅಂಶ ಇದರಿಂದ ಬೆಳಕಿಗೆ ಬಂದಿತ್ತು. ಕಚೇರಿಗೆ ತೆರಳಲು ಈ ರಸ್ತೆಯನ್ನು ಬಳಸುವ ಉದ್ಯೋಗಿಗಳು ನಿತ್ಯ 2ರಿಂದ 4 ತಾಸು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಇದರಿಂದ ನಿತ್ಯ ಸರಾಸರಿ 90 ನಿಮಿಷ ಕೆಲಸದ ಅವಧಿ ನಷ್ಟವಾಗುತ್ತಿದೆ. ಒಬ್ಬ ಉದ್ಯೋಗಿಗೆ ವರ್ಷದಲ್ಲಿ ಸರಾಸರಿ 352.5 ತಾಸು ಕೆಲಸದ ಅವಧಿ ನಷ್ಟವಾಗುತ್ತದೆ. ಈ ಅಂಕಿ ಅಂಶಗಳು ಒಆರ್‌ಆರ್‌ನ ದಟ್ಟಣೆ ಸಮಸ್ಯೆಯ ತೀವ್ರತೆಗೆ ಕನ್ನಡಿ ಹಿಡಿಯುತ್ತವೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಾಹಿತಿ ತಂತ್ರಜ್ಞಾನ ಹಬ್‌ ನಡುವೆ ಸಂಪರ್ಕ ಕಲ್ಪಿಸುವಲ್ಲಿ ಹೊರವರ್ತುಲ ರಸ್ತೆಯು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಆಸುಪಾಸಿನಲ್ಲಿ 4 ಕೋಟಿ ಚದರ ಅಡಿಗಳಷ್ಟು ವಾಣಿಜ್ಯ ಕಚೇರಿ ತಾಣಗಳಿವೆ. ಇದು ಬೆಂಗಳೂರಿನ ಒಟ್ಟು ವಾಣಿಜ್ಯ ಕಚೇರಿ ತಾಣಗಳ ಪೈಕಿ ಶೇಕಡಾ 33ರಷ್ಟಾಗುತ್ತದೆ. ನಗರದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತಿರುವ ವಾಣಿಜ್ಯ ಕಚೇರಿಗಳಲ್ಲಿ ಬಹುಪಾಲು ಈ ರಸ್ತೆಯ ಆಸುಪಾಸಿನ ಪ್ರದೇಶಗಳಲ್ಲೇ ನೆಲೆಯೂರುತ್ತಿವೆ. ಈ ಬೆಳವಣಿಗೆಯಿಂದ ಹೊರವರ್ತುಲ ರಸ್ತೆಯ ಮೇಲಿನ ಒತ್ತಡ ಇನ್ನಷ್ಟು ಹೆಚ್ಚುತ್ತಿದೆ.

ಎಲ್ಲೆಲ್ಲಿ ಸಮಸ್ಯೆ: ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಆರಂಭವಾಗುವ ಮಾಗಡಿ ರಸ್ತೆ, ನಾಗರಬಾವಿ, ಮೈಸೂರು ರಸ್ತೆ, ಬನಶಂಕರಿ, ಜೆ.ಪಿ.ನಗರ, ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ ಮೂಲಕ ಸಿಲ್ಕ್‌ ಬೋರ್ಡ್‌, ಬೆಳ್ಳಂದೂರು, ಮಹದೇವಪುರ, ಕೆ.ಆರ್‌.ಪುರ, ನಾಗವಾರ, ಹೆಬ್ಬಾಳ, ಬಿಇಎಲ್‌ ವೃತ್ತ ಮೂಲಕ ನಗರವನ್ನು ಸುತ್ತುಹಾಕುತ್ತದೆ. ಈ ಪೈಕಿ ನಗರದ ತುಮಕೂರು ರಸ್ತೆ ಅಂಚೆಪಾಳ್ಯ ಬಳಿಯಿಂದ ಹೊಸೂರು ರಸ್ತೆ (ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌) ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸ್‌ ( ನೈಸ್‌) ರಸ್ತೆ ಇದೆ. ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಗಳನ್ನು ಇದು ಅಡ್ಡಹಾಯುತ್ತದೆ. ನೈಸ್‌ ರಸ್ತೆಗ ಸಮಾನಾಂತರವಾಗಿ ಸಾಗುವ ಒಆರ್‌ಆರ್‌ನಲ್ಲಿ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗೆ ಅಷ್ಟಾಗಿ ದಟ್ಟಣೆ ಸಮಸ್ಯೆ ಇಲ್ಲ.  ಬಿಇಎಲ್‌ ವೃತ್ತ, ಹೆಬ್ಬಾಳ, ನಾಗವಾರ, ಕೆ.ಆರ್‌.ಪುರವರೆಗೂ ಸಮಸ್ಯೆ ಕಡಿಮೆ ಇದೆ. ಆದರೆ, ಮೈಸೂರು ರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ, ಜಯದೇವ, ಬಿಟಿಎಂ ಬಡಾವಣೆ, ಸಿಲ್ಕ್‌ ಬೋರ್ಡ್‌, ಇಬ್ಬಲೂರು, ಬೆಳ್ಳಂದೂರು, ಮಾರತಹಳ್ಳಿ, ಮಹದೇವಪುರ, ಕೆ.ಆರ್‌.ಪುರ ನಡುವೆಯಂತೂ ಈ ಸಮಸ್ಯೆ ತೀವ್ರವಾಗಿದೆ.

ಗೊರಗುಂಟೆ ಪಾಳ್ಯ ಜಂಕ್ಷನ್‌, ಕೆ.ಆರ್‌.ಪುರ ಜಂಕ್ಷನ್‌, ಸಿಲ್ಕ್‌ಬೋರ್ಡ್‌ ಜಂಕ್ಷನ್‌ಗಳ ಬಳಿಯಂತೂ ವಾರದ ಬಹುತೇಕ ದಿನಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇರುತ್ತದೆ.

ಒಆರ್‌ಆರ್‌ನಲ್ಲಿ ದಟ್ಟಣೆ ಸಮಸ್ಯೆ ನಿವಾರಿಸಲು ನೈಸ್‌ ರಸ್ತೆಯ ಮಾದರಿಯಲ್ಲೇ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಯೋಜನೆಯನ್ನು ಬಿಡಿಎ 12 ವರ್ಷಗಳ ಹಿಂದೆಯೇ ರೂಪಿಸಿತ್ತು.  100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆರಂಭದಲ್ಲಿ ಇದರ ಅಂದಾಜು ವೆಚ್ಚ ₹500 ಕೋಟಿ ಇತ್ತು. 2013ರಲ್ಲಿ ಇದು ₹5,000 ಕೋಟಿಗೆ ಹೆಚ್ಚಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಎಂಟು ಪಥಗಳ ಮುಖ್ಯ ರಸ್ತೆಯನ್ನು ಹಾಗೂ ಆರು ಪಥಗಳ ಸರ್ವಿಸ್‌ ರಸ್ತೆಯನ್ನು ನಿರ್ಮಿಸುವ ಈ ಯೋಜನೆಗೆ ₹11,950 ಕೋಟಿ ಬೇಕಾಗುತ್ತದೆ.

ಈ ಯೋಜನೆಯ ಕಾಮಗಾರಿ ವೆಚ್ಚವನ್ನು ಭರಿಸಲು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಆಸಕ್ತಿ ತೋರಿದೆ. ಆದರೆ, ಭೂಸ್ವಾಧೀನ ವೆಚ್ಚವನ್ನು ಭರಿಸಲು ಯಾರೂ ಮುಂದಾಗುತ್ತಿಲ್ಲ. ಕೇಂದ್ರ ಭೂಸಾರಿಗೆ ಇಲಾಖೆಯೂ ಇದಕ್ಕೆ ಹೂಡಿಕೆ ಮಾಡಲು ನಿರಾಕರಿಸಿದೆ. ಭೂಸ್ವಾಧೀನಕ್ಕೆ ಹಣ ಹೊಂದಿಸುವುದು ಕಗ್ಗಂಟಾಗಿ ಪರಿಣಮಿಸಿದ್ದರಿಂದ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರಿಂಗ್‌ ಅಧಿಕಾರಿ ನಾಗೇಂದ್ರ.

ಇದು ಹೊರೆಯಾಗುವ ಕಾರಣ ಅವರಿಗೆ ನಗದು ರೂಪದಲ್ಲಿ ಪರಿಹಾರ ನೀಡುವ ಬದಲು ಅಭಿವೃದ್ಧಿಪಡಿಸಿದ ಜಾಗವನ್ನು ಬಿಟ್ಟುಕೊಡಲು ಬಿಡಿಎ ಪ್ರಸ್ತಾವ ಸಿದ್ಧಪಡಿಸಿತ್ತು. 100 ಮೀಟರ್‌ ಬದಲು 75 ಮೀಟರ್‌ ಅಗಲದ ರಸ್ತೆ ನಿರ್ಮಿಸಿ, ಇನ್ನುಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಭೂಮಿ ನೀಡಿದ ರೈತರಿಗೆ ಬಿಟ್ಟುಕೊಡಲು ಪ್ರಸ್ತಾಪಿಸಲಾಗಿತ್ತು. ಆದರೆ, ಇದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಮತ್ತೆ ನನೆಗುದಿಗೆ ಬಿದ್ದಿತ್ತು.  ಮೂರೂ ಸರ್ಕಾರಗಳೂ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಗಂಭೀರ ಪ್ರಯತ್ನ ನಡೆಸಿಲ್ಲ.

ಹೊರ ವರ್ತುಲ ರಸ್ತೆಯು ತುಮಕೂರು ರಸ್ತೆಯನ್ನು ಗೊರಗುಂಟೆ ಪಾಳ್ಯದ ಬಳಿ ಅಡ್ಡಹಾಯುತ್ತದೆ. ಒಆರ್‌ಆರ್‌ನಲ್ಲಿ ಕಂಠೀರವ ಸ್ಟುಡಿಯೊ ಬಳಿಯ ಮೇಲ್ಸೇತುವೆಯಿಂದ ಜಾಲಹಳ್ಳಿ ರೈಲ್ವೆ ಸೇತುವೆವರೆಗೆ ಅಂಡರ್‌ಪಾಸ್‌ ಹಾಗೂ ಅಲ್ಲಿಂದ ಬಿಇಎಲ್‌ ವೃತ್ತದವರೆಗೆ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಬಿಡಿಎ ಹೊಂದಿದೆ. ಇದರ ಮಣ್ಣು ಪರೀಕ್ಷೆ ಕಾಮಗಾರಿಯೂ ನಡೆದಿತ್ತು. 50 ಅಡಿ ಅಗಲದ ಚತುಷ್ಫಥ ರಸ್ತೆ ನಿರ್ಮಿಸುವ ಈ ಯೋಜನೆಗೆ ರಕ್ಷಣಾ ಇಲಾಖೆಗೆ ಸೇರಿದ 12 ಎಕರೆ 4 ಗುಂಟೆಯಷ್ಟು ಜಾಗ ಹಾಗೂ ಖಾಸಗಿಯವರ 20 ಎಕರೆ ಜಾಗದ ಅಗತ್ಯ ಇದೆ. ರಕ್ಷಣಾ ಇಲಾಖೆ ಜಾಗ ಹಸ್ತಾಂತರ ಆಗದ ಕಾರಣ ಈ ಯೋಜನೆ ನನೆಗುದ್ದಿಗೆ ಬಿದ್ದಿದೆ. ಹಾಗಾಗಿ ಈ ಯೊಜನೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಬಿಡಿಎ ಮುಂದಾಗಿದೆ.

ಮೆಟ್ರೊ ಸಂಪರ್ಕ: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಆರ್‌.ವಿ.ರಸ್ತೆ, ಜಯದೇವ, ಬಿಟಿಎಂ ಬಡಾವಣೆ ಹಾಗೂ ಸಿಲ್ಕ್‌ಬೋರ್ಡ್‌ವರೆಗೆ ಮೆಟ್ರೊ ಮಾರ್ಗವು ನಿರ್ಮಾಣವಾಗಲಿದೆ. ಈಗಾಗಲೇ ಯಲಚೇನಹಳ್ಳಿಯಿಂದ ಆರ್‌.ವಿ.ರಸ್ತೆವರೆಗೆ ಇರುವ ಮೆಟ್ರೊ ಮಾರ್ಗವು ಹೊರವರ್ತುಲ ರಸ್ತೆಗೆ ಸಮಾನಾಂತರವಾಗಿ ಸಾಗುತ್ತದೆ. ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಮೆಟ್ರೊ ಮಾರ್ಗ ನಿರ್ಮಿಸುವ ಯೋಜನೆಯನ್ನೂ ಎರಡನೇ ಹಂತದಲ್ಲಿ ನಿರ್ಮಿಸಲಾಗುತ್ತಿದೆ. ಬನಶಂಕರಿಯಿಂದ ಕೆ.ಆರ್‌.ಪುರದವರೆಗೆ ಮೆಟ್ರೊ ಸೌಕರ್ಯ ಸಿಕ್ಕಂತಾಗುತ್ತದೆ. ಮೂರನೇ ಹಂತದಲ್ಲಿ ಒಆರ್‌ಆರ್‌ನ ಇನ್ನುಳಿದ ಭಾಗದಲ್ಲೂ ಮಾರ್ಗ ನಿರ್ಮಿಸುವ ಮೂಲಕ ನಗರದಲ್ಲಿ ಮೆಟ್ರೊ ವರ್ತುಲವನ್ನು ರೂಪಿಸುವ ಚಿಂತನೆ ಸರ್ಕಾರದ ಮುಂದಿದೆ.

ಎರಡನೇ ಹಂತದ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ನಾಲ್ಕು ವರ್ಷಗಳಾದರೂ ಕಾಯಬೇಕು. ಮೂರನೇ ಹಂತದ ಮೆಟ್ರೊ ಯೋಜನೆಗೆ ಮಂಜೂರಾತಿ ಸಿಕ್ಕಿ ಅದು, ಮುಗಿಯುವಷ್ಟರಲ್ಲಿ ಇನ್ನೂ ಏಳೆಂಟು ವರ್ಷಗಳೇ ಬೇಕಾಗಬಹುದು. ಅಷ್ಟರಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತೆ ದುಪ್ಪಟ್ಟಾಗಿರುತ್ತದೆ.

ಒಆರ್‌ಆರ್‌ನ ಸಮಸ್ಯೆಗಳ ನಿವಾರ‌ಣೆಗೆ ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಯಲ್ಲೇ ಇಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಾತ್ಕಾಲಿಕ ಕ್ರಮಕೈಗೊಳ್ಳಬೇಕಾದ ಅನಿವಾರ್ಯ ಇದೆ.

ಪಿಆರ್‌ಆರ್‌ ಸಂಧಿಸುವ ಪ್ರಮುಖ ರಸ್ತೆಗಳು

ತುಮಕೂರು ರಸ್ತೆ, ಬಳ್ಳಾರಿ ರಸ್ತೆ,  ಹಳೆ ಮದ್ರಾಸ್‌ ರಸ್ತೆ,  ಹೊಸೂರು ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ಹೆಸರಘಟ್ಟ ರಸ್ತೆ, ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ

ಅಂಕಿ ಅಂಶ

61.93 ಕಿ.ಮೀ

ಒಆರ್‌ಆರ್‌ ಉದ್ದ

65.35 ಕಿ.ಮೀ

ಪಿಆರ್‌ಆರ್‌ ಉದ್ದ

ತಜ್ಞರು ಏನು ಹೇಳುತ್ತಾರೆ?

‘ಸುತ್ತಲಿನ ರಸ್ತೆಗಳೂ ಅಭಿವೃದ್ಧಿಯಾಗಲಿ’

ಪಿಆರ್‌ಆರ್‌ ಕ್ರಮೇಣ ಇನ್ನೊಂದು ವರ್ತುಲ ರಸ್ತೆಯಂತಾಗಲಿದೆ. ಕೆಲ ಸಮಯ ಬಿಟ್ಟು ವಾಹನ ದಟ್ಟಣೆ ಸಮಸ್ಯೆ ಅದರಲ್ಲೂ ಕಾಣಿಸಿಕೊಳ್ಳಲಿದೆ.  ಪಿಆರ್‌ಆರ್‌ ನಿರ್ಮಿಸುವಾಗ, ಅದನ್ನು ಸಂಧಿಸುವ ಇತರ ಪ್ರಮುಖ ರಸ್ತೆಗಳನ್ನು ಕನಿಷ್ಠ ಪಕ್ಷ ಅರ್ಧ ಕಿ.ಮೀಯಷ್ಟು ದೂರದವರೆಗಾದರೂ ಅಭಿವೃದ್ಧಿ
ಪಡಿಸಬೇಕು.

ಹೊರವರ್ತುಲ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಿಸುವ ಪ್ರಸ್ತಾವವಿದೆ. ಇದು ಕಾರ್ಯಗತಗೊಳ್ಳಲು ಇನ್ನೂ ಏಳೆಂಟು ವರ್ಷಗಳೇ ಹಿಡಿಯುತ್ತವೆ. ಈ ರಸ್ತೆಯನ್ನು ಇತರ ಪ್ರಮುಖ ರಸ್ತೆಗಳು ಅಡ್ಡ ಹಾಯುವ ಜಂಕ್ಷನ್‌ಗಳಲ್ಲಿನ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು. ಇದಕ್ಕಾಗಿ ಸರ್ವಿಸ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಅವುಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ರೂಪಿಸಬೇಕು. ಇಲ್ಲಿ ಪಾದಚಾರಿ ಮಾರ್ಗಗಳ ಪರಿಸ್ಥಿತಿ ಸುಧಾರಣೆ ಆಗಬೇಕು.

ವೈಟ್‌ಫೀಲ್ಡ್‌ನಂತಹ ಕಡೆ ಒಆರ್‌ಆರ್‌ ಆಸುಪಾಸಿನಲ್ಲಿ ಕೆಲವೆಡೆ ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ಪ್ರಾಂಗಣಗಳಿವೆ. ದಟ್ಟಣೆ ಸಮಸ್ಯೆ ಇರುವಲ್ಲಿ ಸಾರ್ವಜನಿಕ ವಾಹನಗಳು ಈ ಪ್ರಾಂಗಣಗಳ ಒಳಗಿನ ರಸ್ತೆಯನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕವಾಹನ ದಟ್ಟಣೆ ಸಮಸ್ಯೆ ನಿವಾರಿಸಬಹುದು.

–ವಿ.ರವಿಚಂದರ್‌, ನಗರ ಯೋಜನಾ ತಜ್ಞ

‘ಬಸ್‌ಗಳಿಗೆ ಪ್ರತ್ಯೇಕ ಪಥವಿರಲಿ’

ಒಆರ್‌ಆರ್‌ನಲ್ಲಿ ಸಾರ್ವಜನಿಕ ಸಾರಿಗೆಗೆ, ವಿಶೇಷವಾಗಿ ಬಸ್‌ಗಳ ಓಡಾಟಕ್ಕೆ ಪ್ರತ್ಯೇಕ ಪಥವನ್ನು ಕಾಯ್ದಿರಿಸಬೇಕು. ಕಂಪನಿಗಳ ಉದ್ಯೋಗಿಗಳು ಸಾರ್ವಜನಿಕ ವಾಹನ ಬಳಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲಿ ಅನೇಕ ಕಡೆ ಸಂಚಾರದ ಸಿಗ್ನಲ್‌ಗಳೇ ಇಲ್ಲ. ವಾಹನ ಚಾಲಕರು ಗೊಂದಲಕ್ಕೆ ಒಳಗಾಗುವ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸಬೇಕು.

ಒಆರ್‌ಆರ್ ಪಕ್ಕದಲ್ಲಿ ರೈಲ್ವೆ ಮಾರ್ಗವನ್ನು ನಿರ್ಮಿಸಬೇಕು. ರೈಲುನಿಲ್ದಾಣಗಳಿಂದ ಆಸುಪಾಸಿನ ಪ್ರದೇಶಗಳಿಗೆ ಸಂಪರ್ಕ ಸಾರಿಗೆ ಒದಗಿಸಬೇಕು. ಅಲ್ಲಲ್ಲಿ ವಾಹನ ನಿಲುಗಡೆ ಸಂಕೀರ್ಣಗಳನ್ನು ನಿರ್ಮಿಸಬೇಕು. ಪಾರ್ಕಿಂಗ್‌ ಶುಲ್ಕ ದುಬಾರಿ ಆಗದಂತೆ ಎಚ್ಚರ
ವಹಿಸಬೇಕು. ಆಗ ಖಾಸಗಿ ವಾಹನಗಳು ನಗರದೊಳಗೆ ಪ್ರವೇಶಿಸುವುದನ್ನು ತಡೆಯಲು ಸಾಧ್ಯ.

–ಲೋಕೇಶ್‌ ಹೆಬ್ಬಾನಿ, ಸಂಚಾರ ಸುರಕ್ಷತೆ ಕುರಿತು ವಿಶ್ವಬ್ಯಾಂಕ್‌ಗೆ ಸಲಹೆಗಾರ

ಆದ್ಯತೆ ಮೇರೆಗೆ ಯೋಜನೆ ಜಾರಿ

ಒಆರ್‌ಆರ್‌ ಆಸುಪಾಸಿನಲ್ಲಿರುವ ಕಂಪನಿಗಳಿಂದ ಸರ್ಕಾರಕ್ಕೆ ಅತಿಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ. ಒಆರ್‌ಆರ್‌ನಲ್ಲಿ ಅನೇಕ ಕಡೆ ಮೇಲ್ಸೇತುವೆಗಳ ನಿರ್ಮಾಣ ಆಗಿದ್ದು ಬಿಜೆಪಿ ಆಡಳಿತದ ಕಾಲದಲ್ಲಿ. ಈಗಿನ ಸರ್ಕಾರ ಇಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ.

ಈಗಿನ ಸರ್ಕಾರ ಟಿಡಿಆರ್‌ ವ್ಯವಸ್ಥೆಯನ್ನು ಹದಗೆಡಿಸಿದೆ. ರೈತರು ಟಿಡಿಆರ್‌ ಪಡೆದು ರಸ್ತೆಗೆ ಜಾಗ ಬಿಟ್ಟುಕೊಡಲು ಮುಂದಾಗುತ್ತಿಲ್ಲ. ಹಾಗಾಗಿ ಪಿಆರ್‌ಆರ್‌ ಯೋಜನೆ ನನೆಗುದಿಗೆ ಬಿದ್ದಿದೆ. ನಾವು ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಆದ್ಯತೆ ಮೇರೆಗೆ ಜಾರಿ
ಗೊಳಿಸುತ್ತೇವೆ. ರೈತರ ಮನವೊಲಿಸುತ್ತೇವೆ.

–ಅರವಿಂದ ಲಿಂಬಾವಳಿ, ಬಿಜೆಪಿ ಶಾಸಕ

ನಗರಕ್ಕೆ ಪ್ರತ್ಯೇಕ ಕಾರ್ಯಸೂಚಿ

ನಮ್ಮ ಪಕ್ಷವು ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾರ್ಯಸೂಚಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ವಿಮಾನನಿಲ್ದಾಣ ರಸ್ತೆ ಅಭಿವೃದ್ಧಿಪಡಿಸಿದ್ದು ನಮ್ಮ ಪಕ್ಷದ ಆಡಳಿತದ ಕಾಲದಲ್ಲಿ. ನಾವು ಅಧಿಕಾರಕ್ಕೆ ಬಂದರೆ ಐದು ವರ್ಷದೊಳಗೆ ಪಿಆರ್‌ಆರ್‌ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ. ಒಆರ್‌ಆರ್‌ ಸಂಚಾರ ದಟ್ಟಣೆಗೆ ಇರುವ ಪ್ರಮುಖ ಕಾರಣಗಳ ಬಗ್ಗೆ ಅಧ್ಯಯನ ನಡೆಸಿ, ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳುತ್ತೇವೆ.

–ಕೆ.ಗೋಪಾಲಯ್ಯ,  ಜೆಡಿಎಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT