ಶನಿವಾರ, ಫೆಬ್ರವರಿ 29, 2020
19 °C
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರದ್ದು ‘ಬರೀ ಬಹದ್ದೂರ್‌ ಗಿರಿ ಮಾತು’: ಪ್ರತಾಪ ಸಿಂಹ ಕಿಡಿ

ರಾಜ್ಯದಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜು: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮಡಿಕೇರಿ: ‘ರಾಜ್ಯದಲ್ಲಿ ಇನ್ನೂ ನಾಲ್ಕು ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಲ್ಲಿ ಸೋಮವಾರ ಹೇಳಿದರು.

‘ಕೇಂದ್ರದ ಸಹಯೋಗದಲ್ಲಿ ಯಾದಗಿರಿ, ಚಿಕ್ಕಮಗಳೂರು, ಹಾವೇರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೀಘ್ರವೇ ಹೊಸ ಕಾಲೇಜು ಸ್ಥಾಪಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ವೈದ್ಯಕೀಯ ಕಾಲೇಜು ಇರಬೇಕೆಂಬುದು ಸರ್ಕಾರದ ಅಪೇಕ್ಷೆ’ ಎಂದೂ ಅವರು ಹೇಳಿದರು.

‘ಎಚ್‌ಡಿಕೆ ಕೊಡುಗೆ ಶೂನ್ಯ’: ಸಂಸದ ಪ್ರತಾಪ ಸಿಂಹ ಮಾತನಾಡಿ, ‘22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದ ವೇಳೆ ಆಗ ತಾನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್‌.ಯಡಿಯೂರಪ್ಪ ಏಕಾಂಗಿಯಾಗಿ ರಾಜ್ಯವನ್ನು ಸುತ್ತಿದ್ದರು. ಸಂತ್ರಸ್ತರ ಕಣ್ಣೀರು ಒರೆಸಿದ್ದರು. ಉದಾರತನ ತೋರಿದ್ದ ಅವರು ಕುಸಿದು ಬಿದ್ದ ಪ್ರತಿ ಮನೆಗೆ ₹5 ಲಕ್ಷ ಪರಿಹಾರ ಘೋಷಿಸಿದ್ದರು. ಇಷ್ಟು ದೊಡ್ಡ ಮೊತ್ತದ ಪರಿಹಾರವನ್ನು ದೇಶದ ಯಾವ ಮುಖ್ಯಮಂತ್ರಿಯೂ ನೀಡಿಲ್ಲ’ ಎಂದು ಹೊಗಳಿದರು.

‘2018ರಲ್ಲೂ ಕೊಡಗಿನಲ್ಲೂ ಪ್ರವಾಹ ಉಂಟಾಗಿತ್ತು. ರಾಜ್ಯದ ಜನರೇ ನೀಡಿದ್ದ ನೆರವಿನಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ₹197 ಕೋಟಿಯಲ್ಲಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಒಬ್ಬ ಸಂತ್ರಸ್ತರಿಗೂ ಅವರಿಂದ ಮನೆ ನೀಡಲು ಆಗಿರಲಿಲ್ಲ. ಸಂತ್ರಸ್ತರು ನರಳುವಂತೆ ಆಗಿತ್ತು. ಅಂದು ಮಾದಾಪುರದಲ್ಲಿ ಕುಮಾರಸ್ವಾಮಿ ಅವರು ಬರೀ ಬಹದ್ದೂರ್‌ ಗಿರಿ ಮಾತನಾಡಿದ್ದರು. ಅಂದೇ ಅವರಿಗೆ ತಿರುಗೇಟು ನೀಡಿದ್ದೆ. ಈ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಶೂನ್ಯ’ ಎಂದು ಪ್ರತಾಪ ಸಿಂಹ ಕಿಡಿಕಾರಿದರು.

ಜನರ ಬೇಡಿಕೆ ಈಡೇರಿಕೆ: ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಬಜೆಟ್‌ ಮಂಡಿಸಿದ್ದ ಎಚ್‌.ಡಿ.ಕುಮಾರಸ್ವಾಮಿ, ಈಗಿನ ಜಿಲ್ಲಾ ಆಸ್ಪತ್ರೆಯನ್ನೇ ಮೇಲ್ದರ್ಜೆಗೇರಿಸುವ ಘೋಷಣೆ ಮಾಡಿದ್ದರು. ₹100 ಕೋಟಿ ಅನುದಾನದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವ ಭರವಸೆ ನೀಡಲಾಗಿತ್ತು.

ಅದಾದ ಬಳಿಕ ಮಡಿಕೇರಿಯಲ್ಲಿ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಾಣಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಸಹ ನಡೆದಿತ್ತು. ಚಿತ್ರರಂಗ ನಟ– ನಟಿಯರೂ ಅಭಿಯಾನ ಬೆಂಬಲಿಸಿ ‘ಟ್ವೀಟ್‌’ ಮಾಡಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಗುಡ್ಡಗಾಡು ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿದಂತೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು