ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋನಿಗೆ ಬಿದ್ದ ನಾಲ್ಕನೇ ಚಿರತೆ

ಕಣಿವಿ ಮಾರೆಮ್ಮ ದೇವಸ್ಥಾನ ಗುಡ್ಡದಲ್ಲಿ ಕಾಣಿಸಿಕೊಂಡ ಇನ್ನೊಂದು ಚಿರತೆ
Last Updated 3 ಜನವರಿ 2019, 18:55 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ದೇವಲಾಪುರ ಗ್ರಾಮದ ಕಾನಮಟ್ಟಿ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಚಿರತೆಯೊಂದು ಬೋನಿಗೆ ಬಿದ್ದಿದೆ.

ಗ್ರಾಮಸ್ಥರ ಬೇಡಿಕೆಗೆ ಮಣಿದು ಅರಣ್ಯ ಇಲಾಖೆಯು ಇತ್ತೀಚೆಗೆ ಈ ಪ್ರದೇಶದಲ್ಲಿ ಬೋನು ಇರಿಸಿತ್ತು. ಡಿ. 21ರಿಂದ ಇದುವರೆಗೆ ಒಟ್ಟು ನಾಲ್ಕು ಚಿರತೆಗಳು ಈ ಭಾಗದಲ್ಲಿ ಬೋನಿಗೆ ಬಿದ್ದಂತಾಗಿದೆ.

‘ಚಿರತೆ ಬೋನಿನಲ್ಲಿ ಬೀಳುತ್ತಿದ್ದಂತೆ ಆರ್ಭಟಿಸಿದೆ. ಬೋನಿನ ಸಮೀಪ ಕೂಡ ಹಾಕಿದ್ದ ನಾಯಿ ಜೋರಾಗಿ ಕೂಗುತ್ತಿತ್ತು. ಈ ಶಬ್ದ ಕೇಳಿ ಕಾನಮಟ್ಟಿಯಲ್ಲಿ ಭತ್ತ ಒಕ್ಕಣೆ ಮಾಡಿ ರಾಶಿ ಬಳಿ ಮಲಗಿದ್ದ ರೈತರು ಕೇಳಿಸಿಕೊಂಡು ಬೋನ್‌ ಬಳಿ ಹೋಗಿ ನೋಡಿದಾಗ ಚಿರತೆ ಸೆರೆಯಾಗಿರುವುದು ಗೊತ್ತಾಗಿದೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ’ ಎಂದು ಗ್ರಾಮದ ಮುಖಂಡ ಗೌಡ್ರು ಅಂಜಿನಪ್ಪ ತಿಳಿಸಿದರು.

‘ಬೋನಿನಲ್ಲಿ ಸೆರೆ ಸಿಕ್ಕಿರುವ ಹೆಣ್ಣು ಚಿರತೆಗೆ ಸುಮಾರು ನಾಲ್ಕು ವರ್ಷ ಇರಬಹುದು. ಎರಡು ಅಡಿ ಎತ್ತರ, ಮೂರುವರೆ ಅಡಿ ಉದ್ದ ಇದೆ. ಸದ್ಯ ದರೋಜಿ ಕರಡಿಧಾಮಕ್ಕೆ ಚಿರತೆಯನ್ನು ಸಾಗಿಸಲಾಗಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅವರು ಸೂಚಿಸಿದ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು’ ಎಂದು ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎನ್‌. ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿರತೆ ಪ್ರತ್ಯಕ್ಷ:

‘ರಾಜ್ಯ ಹೆದ್ದಾರಿ 29ರ ಸಮೀಪದ ಕಣಿವಿ ಮಾರೆಮ್ಮ ದೇಗುಲ ಬಳಿಯ ಗುಡ್ಡದಲ್ಲಿ ಗುರುವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಚಿರತೆ ನೋಡಿದ ಸ್ಥಳೀಯರು ಗಟ್ಟಿ ಧ್ವನಿಯಲ್ಲಿ ಕೂಗಿದ್ದರಿಂದ ಸೋಮಲಾಪುರ ಬೆಟ್ಟದ ಕಡೆಗೆ ಓಡಿ ಹೋಗಿದೆ. ಬುಧವಾರ ಸಂಜೆ 6.30ರ ಸುಮಾರಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದ ಹಳ್ಳದ ಬಳಿಯಿರುವ ಸ್ಮಶಾನದಲ್ಲಿಯೂ ಚಿರತೆ ಕಂಡಿದ್ದು, ಗ್ರಾಮಸ್ಥರು ಕೂಗಿದ್ದರಿಂದ ಓಡಿ ಹೋಗಿದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಡಿ.21, 28ರಂದು ಸೋಮಲಾಪುರದ ಎರದಮಟ್ಟಿಯಲ್ಲಿ ತಲಾ ಒಂದು, ಡಿ. 30ರಂದು ದೇವಲಾಪುರದ ಕರಿಮಟ್ಟಿಯಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಡಿ. 11ರಂದು ಸೋಮಲಾಪುರದ ಮೂರು ವರ್ಷದ ಬಾಲಕ ವೆಂಕಟಸ್ವಾಮಿ, ಡಿ. 25ರಂದು ದೇವಲಾಪುರದ ಒಂಬತ್ತು ವರ್ಷದ ಜಯಸುಧಾ ಚಿರತೆಗೆ ಬಲಿಯಾಗಿದ್ದಳು. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರಿಂದ ಎಚ್ಚೆತ್ತ ಇಲಾಖೆಯು ಚಿರತೆ ಚಲನವಲನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೋನು ಇರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT