ಗುರುವಾರ , ಜೂಲೈ 2, 2020
28 °C
ಜೂನ್‌ 2ರಂದು ನಡೆಯುವ ಸಭೆಯಲ್ಲಿ ತೀರ್ಮಾನ

ಸಭಾಧ್ಯಕ್ಷರ ವಿರುದ್ಧ ಹಕ್ಕುಚ್ಯುತಿ ಲೆಕ್ಕಪತ್ರ ಸಮಿತಿಯ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಔಷಧ ಮತ್ತು ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ಹಾಗೂ ದಾಖಲೆಗಳ ಪರಿಶೀಲನೆಗೆ ತಡೆಯಾಜ್ಞೆ ನೀಡಿದ ವಿಧಾನ ಸಭಾಧ್ಯಕ್ಷರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಚಿಂತನೆ ನಡೆಸಿದೆ.

‌ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ, ‘ಜೂನ್‌ 2ರಂದು ನಡೆಯುವ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು’ ಎಂದರು.

‘ಸಭಾಧ್ಯಕ್ಷರ ಆದೇಶದಿಂದ ಶಾಸನ ಸಭೆಯ ಕರ್ತವ್ಯಕ್ಕೆ ಧಕ್ಕೆಯಾಗಿದೆ. ಸಮಿತಿಯ ಕರ್ತವ್ಯ ಹಾಗೂ  ಸ್ವಾತಂತ್ರ್ಯಕ್ಕೆ ಚ್ಯುತಿ ಮಾಡುವ ಪ್ರಯತ್ನವಿದು’ ಎಂದು ಅವರು ಹೇಳಿದರು.

‘ಕೋವಿಡ್‌– 19ಗೆ ಸಂಬಂಧಿಸಿದ ಔಷಧ ಮತ್ತು ವೈದ್ಯಕೀಯ ಪರಿಕರಗಳ ಖರೀದಿ ಮತ್ತು ನಿರ್ವಹಣೆಯ ಕಡತಗಳನ್ನು ಹಿರಿಯ ಅಧಿಕಾರಿಯೊಬ್ಬರ ಸುಪರ್ದಿಯಲ್ಲಿ ಸುರಕ್ಷತೆಯಿಂದ ಇರಿಸಬೇಕು’ ಎಂದು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಪಾಟೀಲರು ತಿಳಿಸಿದರು.

‘ಯಾವುದೇ ಭ್ರಷ್ಟಾಚಾರ ನಡೆದಿಲ್ಲ’ ಎಂದಿರುವ ಆರೋಗ್ಯ ಸಚಿವ  ಶ್ರೀರಾಮುಲುಗೆ ತಿರುಗೇಟು ನೀಡಿದ ಪಾಟೀಲರು, ‘ವೆಂಟಿಲೇಟರ್‌, ಮಾಸ್ಕ್, ಸ್ಯಾನಿಟೈಸರ್ ಎಷ್ಟು ಮೊತ್ತಕ್ಕೆ ಖರೀದಿ ಮಾಡಿದ್ದೀರಿ ಎನ್ನುವುದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿ’ ಎಂದು ಸವಾಲು ಹಾಕಿದರು.

‘ಭ್ರಷ್ಟರ ರಕ್ಷಣೆಯ ದುರುದ್ದೇಶವಿಲ್ಲ’
‘ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸೂಚನೆ ನೀಡಿರುವ ಹಿಂದೆ ಯಾವುದೇ ದುರುದ್ದೇಶವಿಲ್ಲ’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಸ್ಪಷ್ಟನೆ ನೀಡಿದ್ದಾರೆ.

‘ಸಮಿತಿಯ ಕಾರ್ಯಕ್ಕೆ ಅಡ್ಡಿಯುಂಟು ಮಾಡುವ ಮೂಲಕ ಭ್ರಷ್ಟಾಚಾರ ಎಸಗುವವರಿಗೆ ಸಭಾಧ್ಯಕ್ಷರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ದೇಶದಲ್ಲಿ ಕೊರೊನಾ ಹರಡುವಿಕೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿ ಆಧರಿಸಿ ಸಮಿತಿ ಸಭೆ ನಡೆಸದಂತೆ ಹಿಂದೆ ಸೂಚಿಸಲಾಗಿತ್ತು. ಮೇ 18ರಿಂದ ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ಸಭೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ವೈರಾಣು ಹರಡುವಿಕೆಯ ಗಂಭೀರತೆ ಪರಿಗಣಿಸಿ ಆರೋಗ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸ್ಥಳ ಭೇಟಿ, ಪ್ರವಾಸ, ಪರಿಶೀಲನೆ ನಡೆಸದಂತೆ ಸೂಚನೆ ನೀಡಲಾಗಿದೆ.  ಇದರ ಹಿಂದೆ ಆರೋಗ್ಯದ ಬಗೆಗಿನ ಕಳಕಳಿ ಬಿಟ್ಟರೆ ಯಾರನ್ನೂ ರಕ್ಷಿಸುವ ದುರುದ್ದೇಶವಿಲ್ಲ. ಲಾಕ್‌ಡೌನ್ ಇನ್ನಷ್ಟು ಸಡಿಲಗೊಂಡರೆ ಸ್ಥಳ ಭೇಟಿ ಮಾಡದಂತೆ ನೀಡಿರುವ ಆದೇಶವನ್ನು ಮರುಪರಿಶೀಲಿಸುವ ಕುರಿತು ಸಭಾಧ್ಯಕ್ಷರ ಗಮನಕ್ಕೆ ತರಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

‘ಕಾಂಗ್ರೆಸ್‌ನವರಿಗೆ ಕೆಲಸವಿಲ್ಲ’
‘ಕೋವಿಡ್‌ 19 ಸೋಂಕು ತಡೆಗೆ ಔಷಧ ಮತ್ತು ಆರೋಗ್ಯ ಪರಿಕರಗಳ ಖರೀದಿಯಲ್ಲಿ ಯಾವುದೇ ಅಕ್ರಮ, ಭ್ರಷ್ಟಾಚಾರ ನಡೆದಿಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

‘ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಕೆಲಸ ಇಲ್ಲದವರು ಏನೇನೊ ಆರೋಪ ಮಾಡುತ್ತಿದ್ದಾರೆ. ಎಲ್ಲ ಖರೀದಿಯನ್ನೂ ಸರ್ಕಾರ ಪಾರದರ್ಶಕವಾಗಿಯೇ ನಡೆಸಿದೆ’ ಎಂದೂ ಅವರು ಸಮರ್ಥಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು