ಉಚಿತ ಬಸ್ ಪಾಸ್‌: ಸರ್ಕಾರ ‘ಫೇಲ್’

7
ಉಚಿತ ಖಚಿತವಿಲ್ಲ, ರಿಯಾಯ್ತಿ ಪಾಸೂ ಸಿಕ್ಕಿಲ್ಲ: ಇಲಾಖೆ ಗೊಂದಲದಿಂದ ಕಂಗಾಲಾದ ವಿದ್ಯಾರ್ಥಿಗಳು

ಉಚಿತ ಬಸ್ ಪಾಸ್‌: ಸರ್ಕಾರ ‘ಫೇಲ್’

Published:
Updated:
ಸಾಂದರ್ಭಿಕ ಚಿತ್ರ

ಬೆಂಗಳೂರು: ಉಚಿತ ಬಸ್‌ ಪಾಸ್ ಸಿಗುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಮೈತ್ರಿ ಸರ್ಕಾರದ ನಡೆ ನಿರಾಶೆ ಮೂಡಿಸಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದರು. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ವಿಷಯದಲ್ಲಿ ಗೊಂದಲ ಉಂಟಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಉಚಿತ ಬಸ್‌ ಪಾಸ್‌ ವಿತರಿಸಲು ಬದ್ಧ. ಅದನ್ನು ಬಜೆಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದು ವಾಗ್ದಾನ ಮಾಡಿದ್ದರು. ಬಜೆಟ್‌ ಮಂಡನೆಯಾಗಿ ಎರಡು ದಿನ ಕಳೆದರೂ ಈ ವಿಷಯದಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.

ಇದರಿಂದಾಗಿ ಉಚಿತ ಪಾಸ್‌ ಕಥೆ ಹಾಗಿರಲಿ, ರಿಯಾಯ್ತಿ ಪಾಸ್‌ ಕೂಡ ಸಿಗದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಬಂದಿದೆ. ಪ್ರತಿ ನಿತ್ಯ ಬಸ್‌ನಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಶೈಕ್ಷಣಿಕ ವರ್ಷ ಆರಂಭಗೊಂಡು ಒಂದು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಸ್‌ಗಳ ವಿತರಣೆ ಆಗಿಲ್ಲ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಪ್ರತಿನಿತ್ಯ ₹50 ರಿಂದ ₹100 ರವರೆಗೆ ಬಸ್‌ ಟಿಕೆಟ್‌ಗಾಗಿ ಖರ್ಚು ಮಾಡಬೇಕಾದ ಸಂಕಷ್ಟಕ್ಕೆ ಮಕ್ಕಳು ಮತ್ತು ಪೋಷಕರು ತುತ್ತಾಗಿದ್ದಾರೆ.

‘ಈಗ 9, 10 ನೇ ತರಗತಿಯವರು, 12 ನೇ ತರಗತಿಯವರು, ಪದವಿಯಲ್ಲಿ ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಹಳೆ ಪಾಸ್‌ ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ, ಹೊಸದಾಗಿ 8 ನೇ ತರಗತಿ, 11 ನೇ ತರಗತಿ ಮತ್ತು ಪ್ರಥಮ ಪದವಿಗೆ ಸೇರಿದವರಿಗೆ ಇನ್ನೂ ಹೊಸ ಪಾಸ್‌ಗಳನ್ನು ನೀಡಿಲ್ಲ. ಇವರಿಗೆ ಹಳೆ ಪಾಸ್‌ಗಳನ್ನು ಬಳಸಲು ಅವಕಾಶ ನೀಡುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಶಾಲಾ– ಕಾಲೇಜು ವಿದ್ಯಾರ್ಥಿಗಳು ಪಾಸ್‌ ಮಾಡಿಸುವಾಗ ಆಯಾಯ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರಿಂದ ಸಹಿ– ಸೀಲ್‌ ಹಾಕಿಸಿಕೊಂಡು ಹೋಗುವುದು ಕಡ್ಡಾಯ. ಆದರೆ, ಕೆಎಸ್‌ಆರ್‌ಟಿಸಿಯು ಪಾಸ್‌ಗಳನ್ನು ಮುದ್ರಿಸಿ ಕೊಟ್ಟಿಲ್ಲವಾದ ಕಾರಣ, ಸಾಕಷ್ಟು ಕಡೆಗಳಲ್ಲಿ ಅರ್ಜಿಯನ್ನೂ ವಿತರಿಸುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಹೊರೆ: ವಿವಿಧ ರಸ್ತೆ ಸಾರಿಗೆ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಬಸ್‌ ಪಾಸ್‌ ವಿತರಿಸದ ಕಾರಣ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ತಿಪ್ಪಗೊಂಡನಹಳ್ಳಿಯಿಂದ ಬೆಂಗಳೂರಿನ ವಿಜಯನಗರದ ಕಾಲೇಜಿಗೆ ಬರುವ ತೇಜಸ್ವಿನಿ ‘ಪ್ರಜಾವಾಣಿ’ ಜತೆ ಮಾತನಾಡಿ, ‘ನಮ್ಮ ಹಳ್ಳಿಯಿಂದ ವಿಜಯನಗರದ ಆರ್‌ಎನ್‌ಎಸ್‌ ಕಾಲೇಜಿಗೆ ಪ್ರತಿದಿನ ಬಂದು ಹೋಗಲು ₹ 120 ಬೇಕಾಗುತ್ತದೆ. ಒಂದು ತಿಂಗಳಿಗೆ ಸುಮಾರು ₹ 3,000 ಖರ್ಚಾಗಿದೆ. ಉಚಿತ ಪಾಸ್‌ ಮಾತು ಹಾಗಿರಲಿ, ರಿಯಾಯ್ತಿ ಪಾಸ್‌ ಕೂಡ ಕೊಟ್ಟಿಲ್ಲ’ ಎಂದರು.

‘ಪ್ರತಿ ದಿನ ತಿಟ್ಟಳ್ಳಿಯಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಬಸ್‌ನಲ್ಲಿ ಬರುತ್ತೇನೆ. ಪಾಸ್‌ ಇಲ್ಲದ ಕಾರಣ, ₹ 85 ಖರ್ಚಾಗುತ್ತಿದೆ. ನಮ್ಮ ಹಳ್ಳಿಯಿಂದ ಮೆಜೆಸ್ಟಿಕ್‌ಗೆ ₹ 25, ಮೆಜಿಸ್ಟಿಕ್‌ನಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ₹ 20 ಟಿಕೆಟ್‌ಗೆ ಖರ್ಚಾಗುತ್ತಿದೆ. ಬಡ ಕುಟುಂಬದ ನಮಗೆ ಇದು ಹೊರೆಯೇ ಆಗಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.

**

ಸಿಎಂ ತೀರ್ಮಾನಕ್ಕೆ

‘ಉಚಿತ ಬಸ್‌ ಪಾಸ್‌ ಸಂಬಂಧ ಮುಖ್ಯಮಂತ್ರಿಯವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪಾಸ್‌ ಕೊಡಬೇಕು ಎಂಬುದು ನನ್ನ ಅಪೇಕ್ಷೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುತ್ತವೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !