ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುವಿನ ಚೀಲದಲ್ಲಿ ಇದ್ದದ್ದು 2 ಕೆ.ಜಿ. ಅಕ್ಕಿ

ಕದ್ದ ಆರೋಪದಲ್ಲಿ ಒದೆ ತಿಂದು ಸತ್ತಿದ್ದ ಬುಡಕಟ್ಟು ಯುವಕ
Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಪಾಲಕ್ಕಾಡ್: ಎರಡು ಕೆಜಿ ಅಕ್ಕಿ, 100 ಗ್ರಾಂ ದನಿಯಾ ಪುಡಿ, ಪುಟ್ಟ ಟಾರ್ಚ್, ಒಂದು ಮೊಬೈಲ್ ಚಾರ್ಜರ್... ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಜನರ ಗುಂಪು ಬುಡಕಟ್ಟು ಯುವಕ ಮಧು ಮೇಲೆ ಹಲ್ಲೆ ನಡೆಸುವಾಗ ಆತನ ಚೀಲದಲ್ಲಿ ಇದ್ದ ವಸ್ತುಗಳು ಇವು.

ಈ ವಿವರಗಳನ್ನು ಮಲಯಾಳ ಮನೋರಮಾ ಪ್ರಕಟಿಸಿದೆ.

ಕಳೆದ ಎರಡು ವರ್ಷ ಅವಧಿಯಲ್ಲಿ ಮುಕ್ಕಾಲಿ ಮತ್ತು ಅಲ್ಲಿನ ಸುತ್ತಲಿನ ಪ್ರದೇಶಗಳಲ್ಲಿನ ಅಂಗಡಿಯಿಂದ ಆಹಾರ ವಸ್ತುಗಳು ಕಳವು ಆಗುತ್ತಿತ್ತು. ಈ ಕಳ್ಳತನದ ಆರೋಪ ಮಧುವಿನ ಮೇಲೆ ಹೊರಿಸಲಾಗಿದೆ. ಆದರೆ ಆತ ಕಳ್ಳತನ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಗ್ರಾಮಸ್ಥರೂ ಅದನ್ನು ಸಾಬೀತು ಮಾಡಿಲ್ಲ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.

‘ಅವನು ಕಾಡಿನಲ್ಲೇ ವಾಸವಾಗಿದ್ದ. ಯಾರೊಬ್ಬರಿಗೂ ತೊಂದರೆ ಕೊಡುತ್ತಿರಲಿಲ್ಲ. ಯಾರಾದರೂ ಏನಾದರೂ ಕೊಟ್ಟರೆ ಮಾತ್ರ ತಿನ್ನುತ್ತಿದ್ದ. ಕಳ್ಳನೆಂದು ಹೇಳಿ ಅವನ ಕೈ ಕಟ್ಟಿ ಹಾಕಿ, ಹೊಡೆದರು. ಕಾಡಿನಲ್ಲಿ ಹೊಡೆದ ನಂತರ ಆತನ ಬೆನ್ನಮೇಲೆ ಭಾರಿ ತೂಕದ ಮೂಟೆ ಹೊರಿಸಿ ನಾಲ್ಕು ಕಿ.ಮೀ. ನಡೆಸಿದ್ದಾರೆ. ಆತ ಕುಡಿಯಲು ನೀರು ಕೇಳಿದರೆ, ತಲೆ ಮೇಲೆ ನೀರು ಸುರಿದಿದ್ದಾರೆ. ಅವನ ಎದೆ, ಹೊಟ್ಟೆಯನ್ನೆಲ್ಲಾ ತುಳಿದಿದ್ದಾರೆ. ಅವನು ಪಾಪದ ಹುಡುಗ. ಅಂಥವನಿಗೆ ಹೀಗೆಲ್ಲಾ ಮಾಡಬೇಕಿತ್ತಾ?’ ಎಂದು ಮಧುವಿನ ತಾಯಿ ಮಲ್ಲಿಕಾ ಕಣ್ಣೀರು ಹಾಕಿದ್ದಾರೆ ಎಂದು ಮಲಯಾಳ ಮನೋರಮಾ ವರದಿ ಮಾಡಿದೆ.
***
‘ಎದೆ, ಪಕ್ಕೆಯ ಮೂಳೆ ಪುಡಿ’

ಮಧು ಮೇಲೆ ಹಲ್ಲೆ ನಡೆಸಿದ ಸಂಬಂಧ ಅಗಳಿ ಪೊಲೀಸರು 16 ಜನರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

‘ಮಧುವಿನ ತಲೆಗೆ ಗಂಭೀರ ಗಾಯಗಳಾಗಿರುವುದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ. ಆತನೆ ಎದೆ ಮತ್ತು ಪಕ್ಕೆಯ ಮೂಳೆಗಳು ಮುರಿದು ಪುಡಿಯಾಗಿವೆ. ದೇಹದ ಹಲವೆಡೆ ಗಾಯಗಳಾಗಿವೆ. ಆತ ಆಂತರಿಕ ರಕ್ತ
ಸ್ರಾವದಿಂದ ಮೃತಪಟ್ಟಿದ್ದಾನೆ ಎಂದು ಶವಪರೀಕ್ಷೆ ವರದಿಯಲ್ಲಿ ವಿವರಿಸಲಾಗಿದೆ’ ಎಂದು ಅಗಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲ್ಲೆಯ ವಿಡಿಯೊ ಮತ್ತು ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮಧುವಿನ ಶವವನ್ನು ಅಟ್ಟಪ್ಪಾಡಿಗೆ ತರಲಾಗಿತ್ತು. ಅಲ್ಲಿನ ಬುಡಕಟ್ಟು ಪುನರ್ವಸತಿ ಕೇಂದ್ರದ ನಿವಾಸಿಗಳು ಅಂತ್ಯಸಂಸ್ಕಾರ ನಡೆಸಿದರು.ಮೃತನ ಕುಟುಬಂಕ್ಕೆ ರಾಜ್ಯ ಸರ್ಕಾರ ₹ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ. ಪರಿಹಾರವು ಶೀಘ್ರವೇ ಬಿಡುಗಡೆಯಾಗಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರವೂ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ವಿವರ ನೀಡುವಂತೆ ಕೇಂದ್ರ ಸರ್ಕಾರ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT