ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಕೆಂಪಾಂಬುಧಿ ಕೆರೆ

* ಒಡಲು ಸೇರುತ್ತಿದ್ದ ಕೊಳಚೆ ನೀರಿಗೆ ತಡೆ * ಪಕ್ಷಿಗಳ ಆವಾಸಸ್ಥಾನವಾಗಿ ಮಾರ್ಪಟ್ಟ ಜಲಮೂಲ
Last Updated 13 ಮಾರ್ಚ್ 2018, 12:34 IST
ಅಕ್ಷರ ಗಾತ್ರ

ಬೆಂಗಳೂರು: ಕೊಳಚೆ ನೀರು ಹಾಗೂ ಕಸದಿಂದ ಕಲುಷಿತಗೊಂಡಿದ್ದ ಕೆಂಪೇಗೌಡ ನಗರದ ಕೆಂಪಾಂಬುಧಿ ಕೆರೆ ಈಗ ಜೀವಕಳೆ ಪಡೆದಿದೆ. ನಳನಳಿಸುತ್ತಿರುವ ಜಲಮೂಲವು ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ವಿವಿಧ ಪಕ್ಷಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ನಗರ ನಿರ್ಮಾತೃ ಕೆಂಪೇಗೌಡ ಅವರು 16ನೇ ಶತಮಾನದಲ್ಲಿ ಕೆಂಪಾಂಬುಧಿ ಕೆರೆ ನಿರ್ಮಿಸಿದ್ದರು. ಆದರೆ, ನಿರ್ವಹಣೆಯ ಕೊರತೆಯಿಂದಾಗಿ ಜಲಮೂಲಕ್ಕೆ ಕೊಳಚೆ ನೀರು ಸೇರಿದ್ದರಿಂದ ಸಂಪೂರ್ಣವಾಗಿ ಕಲುಷಿತಗೊಂಡಿತ್ತು. ಅದರ ಒಡಲಿನ ತುಂಬೆಲ್ಲ ಹೂಳು ತುಂಬಿತ್ತು. ಅಂಗಳದಲ್ಲಿ ಕಟ್ಟಡ ತ್ಯಾಜ್ಯ, ಕಸ ಸುರಿಯಲಾಗುತ್ತಿತ್ತು. ದುರ್ವಾಸನೆ, ಸೊಳ್ಳೆಗಳ ಕಾಟದಿಂದ ಸುತ್ತಲಿನ ನಿವಾಸಿಗಳು ಕಂಗೆಟ್ಟಿದ್ದರು.

ಜಲಮೂಲಕ್ಕೆ ಕಾಯಕಲ್ಪ ನೀಡುವ ಉದ್ದೇಶದಿಂದ ಬಿಬಿಎಂಪಿ ಕೆರೆ ವಿಭಾಗವು ಒಂದೂವರೆ ವರ್ಷದ ಹಿಂದೆ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡಿತ್ತು.

ಕೆರೆಗೆ ಎರಡು ಕಡೆಗಳಿಂದ ಕೊಳಚೆ ನೀರು ಸೇರುತ್ತಿತ್ತು. ಆದರೆ, ಜಲಮೂಲದ ನೀರು ಮಾತ್ರ ಒಂದೇ ತೂಬಿನ ಮೂಲಕ ಹೊರ ಹೋಗುತ್ತಿತ್ತು. ಕೆರೆಯ ಪ್ರವೇಶದ್ವಾರದ ಬಳಿ ಹಾಗೂ ಬಂಡಿ ಮಹಾಕಾಳಮ್ಮ ದೇವಾಲ­ಯ ಬಳಿಯಿಂದ ಬರುತ್ತಿದ್ದ ತ್ಯಾಜ್ಯ ನೀರನ್ನು ಪ್ರತ್ಯೇಕ ಕಾಲುವೆಗಳ ಮೂಲಕ ಬೇರೆಡೆ ತಿರುಗಿಸಲಾಗಿದೆ. ಮಳೆ ನೀರು ಮಾತ್ರ ಕೆರೆಗೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.

ಜಲಮೂಲದ ಸುತ್ತಲೂ 1.6 ಕಿ.ಮೀ ಉದ್ದ ಹಾಗೂ 5 ಅಡಿ ಅಗಲದ ನಡಿಗೆ ಪಥ ನಿರ್ಮಿಸಲಾಗಿದೆ. ಪ್ರವೇಶದ್ವಾರದ ಬಲ ಭಾಗದಲ್ಲಿ ಇರುವ ನಡಿಗೆ ಪಥಕ್ಕೆ ಡಾಂಬರು ಹಾಕಲಾಗಿದೆ. ಎಡಭಾಗದ ಪಥಕ್ಕೆ ಡಾಂಬರು ಹಾಕುವ ಕಾರ್ಯ ಭರದಿಂದ ಸಾಗಿದೆ. ಕೆಲ ಕಾರ್ಮಿಕರು ನಡಿಗೆ ಪಥವನ್ನು ಸ್ವಚ್ಛಗೊಳಿಸುತ್ತಿದ್ದರೆ, ಮತ್ತೆ ಕೆಲವರು ಜಲ್ಲಿ ಹಾಕುತ್ತಿದ್ದರು. ಅವರ ಹಿಂದೆಯೇ ಇದ್ದ ಯಂತ್ರಗಳು ಜಲ್ಲಿಯನ್ನು ಸಮತಟ್ಟು ಮಾಡುತ್ತಿದ್ದವು. ಪಾಲಿಕೆಯು ಇದರ ಪಕ್ಕದಲ್ಲೇ ಇರುವ ಖಾಲಿ ಜಾಗದಲ್ಲಿ ಉದ್ಯಾನ ನಿರ್ಮಿಸಲು ಉದ್ದೇಶಿಸಿದೆ. ಈ ಜಾಗವನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಸಮತಟ್ಟು ಮಾಡಲಾಗುತ್ತಿತ್ತು.

ಕೆರೆಯಲ್ಲಿ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಕಲ್ಯಾಣಿ ನಿರ್ಮಿಸಲಾಗಿದೆ. ಇದು ಸುಮಾರು 20 ಮೀಟರ್‌ ಅಗಲ ಇದೆ. ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸುವ ಉದ್ದೇಶದಿಂದ ಎರಡು ತೇಲುವ ದ್ವೀಪಗಳನ್ನು ಅಳವಡಿಸಲಾಗಿದೆ. ಇನ್ನೂ ಎರಡು ದ್ವೀಪಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ದ್ವೀಪಗಳಲ್ಲಿ ಹೂವಿನ ಗಿಡಗಳಿದ್ದು, ಅವು ನೀರಿನಲ್ಲಿರುವ ಖನಿಜಾಂಶಗಳನ್ನು ಹೀರಿಕೊಳ್ಳುತ್ತವೆ. ವಿವಿಧ ಬಣ್ಣಗಳಿಂದ ಕೂಡಿರುವ ಹೂವುಗಳು ಎಲ್ಲರ ಗಮನ ಸೆಳೆಯಲಿವೆ.

ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕೆಂಪೇಗೌಡ ಅವರು ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಿದ್ದ ಗೋಪುರಗಳ ಪೈಕಿ ಒಂದು ಗೋಪುರವು ಬಂಡಿ ಮಹಾಕಾಳಮ್ಮ ದೇವಾಲ­ಯದ ಪಕ್ಕದಲ್ಲಿಯೇ ಇದೆ. ಈ ಗೋಪುರವನ್ನು ಪ್ರಾಚ್ಯವಸ್ತು ಇಲಾಖೆಯು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.

‘ತಾಜ್ಯ ನೀರು ಜಲಮೂಲದ ಒಡಲು ಸೇರದಂತೆ ತಡೆಯುವುದೇ ನಮ್ಮ ಮುಂದಿದ್ದ ದೊಡ್ಡ ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ’ ಎಂದು ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಲಪಾತ ಮಾದರಿ ನಿರ್ಮಾಣ
ಬಂಡಿ ಮಹಾಕಾಳಮ್ಮ ದೇವಾಲ­ಯದ ಬಳಿ ಜಲಪಾತ ಮಾದರಿಯಲ್ಲಿ ಏರಿಯೇಷನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಇರುವ 10 ಲಕ್ಷ ಲೀಟರ್‌ ನೀರಿನ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿದ ನೀರನ್ನು ಜಲಪಾತಕ್ಕೆ ಹರಿಸಲಾಗುತ್ತದೆ.

ನೀರು ಕೆಳಗೆ ಧುಮ್ಮಿಕ್ಕುತ್ತದೆ. ಈ ವೇಳೆ ನೀರಿಗೆ ಆಮ್ಲಜನಕ ಪೂರೈಕೆ ಆಗುತ್ತದೆ. ಜಲಧಾರೆಗೆ ವಿವಿಧ ಬಣ್ಣದ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಜಲಪಾತ ಕಂಗೊಳಿಸಲಿದೆ.

ನಾಳೆ ಉದ್ಘಾಟನೆ
ಪುನಶ್ಚೇತನಗೊಂಡಿರುವ ಕೆಂಪಾಂಬುಧಿ ಕೆರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 14ರಂದು ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಹೀಗಾಗಿ, ನಡಿಗೆ ಪಥ ನಿರ್ಮಾಣ, ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗವನ್ನು ಸಮತಟ್ಟು ಮಾಡುವ ಕೆಲಸ, ಕೊಳಚೆ ನೀರು ಹರಿದು ಹೋಗುವ ಕಡೆಗಳಲ್ಲಿ ನಿರ್ಮಿಸಿರುವ ಸೇತುವೆ ಬಳಿ ತಡೆಗೋಡೆ ನಿರ್ಮಾಣ, ಜೀವಕಳೆ ಪಡೆದುಕೊಂಡಿರುವ ಕೆರೆಗಳ ಚಿತ್ರಗಳನ್ನು ಹೊಂದಿರುವ ದೊಡ್ಡ ಫಲಕಗಳಿಗೆ ಬಣ್ಣ ಬಳಿಯುವುದು, ಬೀದಿದೀಪಗಳ ಅಳವಡಿಕೆ... ಹೀಗೆ ಅನೇಕ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.

ಕೆರೆ ಪುನಶ್ಚೇತನಕ್ಕೆ ನಿವಾಸಿಗಳ ಸಂತಸ...

* ಕಲುಷಿತಗೊಂಡಿರುವ ಕೆರೆಯನ್ನು ಈಗ ಸರಿಪಡಿಸುತ್ತಿದ್ದಾರೆ. ಈ ಹಿಂದೆ ಕೆಟ್ಟ ವಾಸನೆ ಬರುತ್ತಿತ್ತು. ಈಗ ಯಾವುದೇ ವಾಸನೆ ಬರುತ್ತಿಲ್ಲ. ಕೆರೆ ನೋಡಲು ಸುಂದರವಾಗಿದೆ.
– ಕೇಶವ, ಗವಿಪುರ ಗುಟ್ಟಹಳ್ಳಿ ನಿವಾಸಿ

* ಈ ಮೊದಲು ಕೆರೆ ತುಂಬ ಕಳೆ ಗಿಡಗಳು ಬೆಳೆದಿದ್ದವು. ಅನೈತಿಕ ಚಟುವಟಿಕೆಯ ತಾಣವಾಗಿತ್ತು. ಈಗ ಸ್ವಚ್ಛಗೊಳಿಸಲಾಗಿದೆ. ವಾಯುವಿಹಾರಕ್ಕೆ ಅನುಕೂಲವಾಗಲಿದೆ.
–ಶ್ರೀನಿವಾಸ್‌, ಮಡಿವಾಳ ಮಾಚಿದೇವ ವಸತಿ ಸಮುಚ್ಚಯದ ನಿವಾಸಿ

* ಈ ಭಾಗದಲ್ಲಿ 25 ವರ್ಷಗಳಿಂದ ವಾಸವಾಗಿದ್ದೇನೆ. ಕೆರೆಯಂಗಳದ ರಸ್ತೆಯಲ್ಲಿ ಓಡಾಡಲು ಹೆದರಿಕೆ ಆಗುತ್ತಿತ್ತು. ಬಿಗಿ ಭದ್ರತೆ ಒದಗಿಸಬೇಕು. ಪುಡಾರಿಗಳಿಗೆ ಕಡಿವಾಣ ಹಾಕಬೇಕು.
– ಸುಶೀಲಾ, ಗವಿಪುರ ನಿವಾಸಿ

**

ಅಂಕಿ–ಅಂಶ

₹5.5 ಕೋಟಿ- ಕೆರೆಯ ಪುನಶ್ಚೇತನ ವೆಚ್ಚ
47 ಎಕರೆ 11 ಗುಂಟೆ - ಕೆರೆಯ ಒಟ್ಟು ವಿಸ್ತೀರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT