ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ ಅಪೇಕ್ಷೆ ಈಡೇರಿಸುತ್ತೇನೆ, ಜನಪರ ಧ್ವನಿ ಎತ್ತುತ್ತೇನೆ: ಮಲ್ಲಿಕಾರ್ಜುನ

Last Updated 8 ಜೂನ್ 2020, 11:23 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನನ್ನನ್ನು ಆಯ್ಕೆ ಮಾಡಿದ್ದಾರೆ. ರಾಜ್ಯದ ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಆಪೇಕ್ಷೆಯನ್ನು ಈಡೇರಿಸುತ್ತೇನೆ. ಜನರ ಪರವಾದ ಧ್ವನಿ ಎತ್ತುತ್ತೇನೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದೇ 19ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಖರ್ಗೆ, ‘ಚುನಾವಣೆ ನಡೆದರೆ ಎಲ್ಲ ಶಾಸಕರು ನನ್ನನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಆಯ್ಕೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ರಾಜ್ಯಸಭೆ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಹಲವು ಹಿರಿಯ ನಾಯಕರು ಅವರಿಗೆ ಸೂಚಕರಾಗಿ ಸಹಿ ಹಾಕಿದ್ದೇವೆ. ಇದು ಸೋನಿಯಾ ಗಾಂಧಿಯವರ ನಿರ್ಧಾರ. ಖರ್ಗೆ ಅವರು ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆ ಪರಿಗಣಿಸಿ ಆಯ್ಕೆ ಮಾಡಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಖರ್ಗೆ ಬಯಲಿಗೆಳೆದಿದ್ದರು. ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಬಿಜೆಪಿಯವರು ಸೇರಿ ಅವರನ್ನು ಸೋಲಿಸಿದ್ದರು’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

‘11 ಚುನಾವಣೆಗಳಲ್ಲಿ ಸೋಲಿಲ್ಲದ ಸರದಾರನಾಗಿ ಖರ್ಗೆ ಗೆದ್ದು ಬಂದಿದ್ದರು. ಅವರು ಪಕ್ಷಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜನಮೆಚ್ಚಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಖರ್ಗಯವರಂಥ ನಾಯಕರು ರಾಜ್ಯಸಭೆಯಲ್ಲಿ ಇರಬೇಕು. ಬಿಜೆಪಿಯನ್ನು ಎದುರಿಸುವ ಶಕ್ತಿ ಅವರಿಗಿದೆ’ ಎಂದೂ ಹೇಳಿದರು.

ಖರ್ಗೆ ದೊಡ್ಡ ಆಸ್ತಿ: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಖರ್ಗೆಯವರು ರಾಷ್ಟ್ರಕ್ಕೆ ಒಂದು ದೊಡ್ಡ ಆಸ್ತಿ. ವಿರೋಧ ಪಕ್ಷದವರು ಕೂಡ ಅವರನ್ನು ಒಪ್ಪಿಕೊಂಡಿದ್ದಾರೆ. ಖರ್ಗೆಯವರನ್ನೇ ಆರಿಸಿ ಕಳುಹಿಸುವಂತೆ ಹೇಳಿದ್ದರು. ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಆಯ್ಕೆಯನ್ನು ನಾವೆಲ್ಲರೂ ಸರ್ವಸಮ್ಮತದಿಂದ ಒಪ್ಪಿಕೊಂಡಿದ್ದೇವೆ. ಜನರ ಪರ ಧ್ವನಿಯಾಗಿ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT