ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನಕ್ಕೆ ಸಂದ ಕಾವ್ಯದ ಕಡುಮೋಹಿ

Last Updated 9 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾಗಿದ್ದ ಜಿ.ಕೆ. ರವೀಂದ್ರಕುಮಾರ್‌ (58) ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರು, ಪತ್ನಿ ಎಂ.ಆರ್‌. ಮಂದಾರವಲ್ಲಿ ಹಾಗೂ ಪುತ್ರ ಅನನ್ಯ ಅವರನ್ನು ಅಗಲಿದ್ದಾರೆ. ಗುರುವಾರ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಎರಡು ವಾರಗಳ ಹಿಂದಷ್ಟೆ ಜಿ.ಕೆ. ರವೀಂದ್ರಕುಮಾರ್‌ ಅವರು ‘ಪ್ರಜಾವಾಣಿ’ಯ ಭಾನುವಾರ ಪುರವಣಿಗೆ ಬರೆದ ಕವಿತೆಯ ಶೀರ್ಷಿಕೆ ‘ಕತೆ ಮುಗಿದ ಮೇಲೆ.’ ಕವಿತೆ ಶುರುವಾಗುವುದು ಹೀಗೆ: ‘ಶುಭಂ ಎಂದಾಗ ತೆರೆಯ ಮೇಲಿನ ಕತೆ ಮುಗಿವುದು/ಈಗ ಅದು ಹೇಳದೆಯೂ ಮುಗಿಸುವುದನ್ನು ಕಲಿತಿರುವರು’

ಹೌದು, ರವೀಂದ್ರಕುಮಾರ್‌ ಅವರ ಬದುಕು ಕೂಡ ‘ಶುಭಂ’ ಹೇಳದೆಯೇ ಕೊನೆಗೊಂಡಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯವರಾದ ರವೀಂದ್ರಕುಮಾರ್‌ ಕನ್ನಡ ಕಾವ್ಯಕ್ಕೆ ‘ಸಿಕಾಡ’, ‘‍ಪ್ಯಾಂಜಿಯಾ’ಗಳ ವಿಶಿಷ್ಟ ಜಗತ್ತನ್ನು ಪರಿಚಯಿಸಿದ ಕವಿ. ಕಾವ್ಯದ ಕಡುಮೋಹಿ. ‘ಬಡಿಸಿಟ್ಟ ಎಲೆ ಪಂಕ್ತಿಯಲ್ಲಿ ಯಾವ ಎಲೆ ನನ್ನದೋ’ ಎನ್ನುವ ಹುಡುಕಾಟ ಕವಿಯಾಗಿ ಅವರ ಪಾಲಿಗೆ ನಿರಂತರವಾಗಿತ್ತು. ಮಳೆಹುಳುವಿನ ಹಾಡನ್ನೂ ಕೇಳಿಸಿ
ಕೊಳ್ಳಬಲ್ಲವರಾಗಿದ್ದ ಅವರು, ಕಾವ್ಯರಚನೆ ತನ್ನ ಕಾಲದ ಅಂತಃಸಾಕ್ಷಿಯನ್ನು ಹಿಡಿಯುವ ಮಹತ್ವಾಕಾಂಕ್ಷೆಯ ಪ್ರಯತ್ನ ಎಂದು ನಂಬಿದ್ದವರು.

ಅವರ ‘ಸಿಕಾಡ’ ಮತ್ತು ‘ಪ್ಯಾಂಜಿಯಾ’ ಸಂಕಲನಗಳು ತಮ್ಮ ಶೀರ್ಷಿಕೆ ಹಾಗೂ ಭಿನ್ನ ವಸ್ತುಗಳ ಮೂಲಕ ಸಹೃದಯರ ಗಮನ ಸೆಳೆದಿದ್ದವು; ಆ ಪದ್ಯಗುಚ್ಛಗಳು ಕನ್ನಡ ಕಾವ್ಯಕ್ಕೆ ಹೊಸ ಸಂವೇದನೆಯನ್ನು ಸೇರಿಸಿದ್ದವು. ‘ಕದವಿಲ್ಲದ ಊರಿನಲ್ಲಿ’, ‘ಒಂದು ನೂಲಿನ ಜಾಡು’, ‘ಮರವನಪ್ಪಿದ ಬಳ್ಳಿ’ ಅವರ ಉಳಿದ ಸಂಕಲನಗಳು.

ವೈರುಧ್ಯದ ರೂಪಕಗಳನ್ನು ಎದುರುಬದುರಾಗಿಸಿ ಬದುಕಿನ ಅಸಂಗತತೆ ಹಾಗೂ ಸಂದಿಗ್ಧತೆಯನ್ನು ಚಿತ್ರಿಸುವ ವಿಶಿಷ್ಟ ಕಾವ್ಯಶೈಲಿ ಅವರದಾಗಿತ್ತು. ಕವಿಯೊಬ್ಬ ಕನ್ನಡದ ಮೂಲಕವೇ ಲೋಕದೊಂದಿಗೆ ನಡೆಸಬಹುದಾದ ಅನುಸಂಧಾನಕ್ಕೆ ಅವರ ಕಾವ್ಯ ಅತ್ಯುತ್ತಮ ಉದಾಹರಣೆ. ಕಾವ್ಯರಚನೆ ಎನ್ನುವುದು ಅವರ ಪಾಲಿಗೆ – ‘ಯಾರೋ ಸರಿಯಾಗಿ ಓದುತ್ತಿದ್ದಾರೆ/ಎಂಬ ಒಂದೇ ನಂಬಿಕೆಯಲ್ಲಿ/ಕಣ್ಣು ಕಟ್ಟಿಸಿಕೊಂಡು/ಕಟ್ಟಿದವರನ್ನೇ ಹುಡುಕಿಕೊಂಡು’ ಅಲೆಯುವ ಸೃಜನಶೀಲ ನಂಬಿಕೆಯಾಗಿತ್ತು.

ಕಾವ್ಯದ ಶಿಲ್ಪ ಹಾಗೂ ಲಯದ ಬಗ್ಗೆ ರವೀಂದ್ರಕುಮಾರ್‌ ಅವರಿಗೆ ವಿಶೇಷ ಆಸ್ಥೆ. ತಾನು ಕೆತ್ತುವ ಮೂರ್ತಿ ಪೂಜೆಗೊಳ್ಳುವುದೋ ಇಲ್ಲವೋ ಎನ್ನುವುದು ಅಸ್ಪಷ್ಟವಾಗಿದ್ದಾಗಲೂ ಶಿಲ್ಪಿಯೊಬ್ಬ ಶ್ರದ್ಧೆಯಿಂದ ಶಿಲ್ಪ ಕೆತ್ತುವ ಕ್ರಿಯೆಯನ್ನು ಅವರು ಬರವಣಿಗೆಗೆ ಹೋಲಿಸಿ
ದ್ದರು; ಅದು ತಮಗೆ ತಾವೇ ಹೇಳಿಕೊಂಡ ಮಾತಿನಂತೆಯೂ ಇತ್ತು.

ರವೀಂದ್ರಕುಮಾರ್‌ ಅವರದು ಕಂಚಿನಂಥ ಕಂಠ. ಸೃಜನಶೀಲ ರೂಪಕಗಳಿಗಾಗಿ ನಾಲ್ಕು ಬಾರಿ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಎಂಟು ಸಲ ರಾಜ್ಯ ಬಾನುಲಿ ಪ್ರಶಸ್ತಿಗಳನ್ನು ಪಡೆದಿದ್ದರು. ಅವರ ಕಾವ್ಯ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮುದ್ದಣ ಕಾವ್ಯ ಪ್ರಶಸ್ತಿ, ಕಡೆಂಗೋಡ್ಲು ಸ್ಮಾರಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಕಾವ್ಯವನ್ನು ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿ ಪರಿಗಣಿಸಿದ್ದರೂ, ಪ್ರಬಂಧ ಹಾಗೂ ವಿಮರ್ಶೆಯಲ್ಲೂ ಅವರಿಗೆ ಆಸಕ್ತಿಯಿತ್ತು. ಅವರ ಇತ್ತೀಚಿನ ಕೃತಿ ‘ತಾರಸಿ ಮಲ್ಹಾರ್‌’ ಭಾವಗೀತೆಯಷ್ಟು ಸೊಗಸಾದ ಪ್ರಬಂಧಗಳ ಸಂಕಲನ. ‘ಪುನರ್ಭವ’ ವಿಮರ್ಶಾ ಬರಹಗಳ ಸಂಕಲನ.

ಆಸ್ಪತ್ರೆಯಲ್ಲಿ ಅವರ ದೇಹದ ಸುತ್ತ ನೆರೆದಿದ್ದವರಲ್ಲಿ ಕವಿಗಳೇ ಹೆಚ್ಚು. ಆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಅವರು, ಈ ಹೊತ್ತಿನ ಕನ್ನಡ ಕಾವ್ಯ ಕೇಳುತ್ತ ಕೇಳುತ್ತ ಕಣ್ಮುಚ್ಚಿದಂತೆ ಕಾಣಿಸುತ್ತಿದ್ದರು. ಮೌನಕ್ಕಿಂತಲೂ ಮಿಗಿಲಾದ ಕಾವ್ಯವುಂಟೆ?

‘ಕತೆ ಮುಗಿದ ಮೇಲೆ’ ಕವಿತೆಯ ಕೊನೆಯ ಸಾಲುಗಳು ಹೀಗಿವೆ: ಮುಗಿದ ಕತೆಯಿಂದ ಬಂದುದೋ ಇರುವ ಕತೆಯಿಂದ ಹೋದುದೋ ನನ್ನ ಪಾತ್ರ ನನ್ನ ಹುಡುಕುವ ಮೊದಲು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT