ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ– ಯಿಟ್ಜ್‌ಹಾಕ್‌ ಶಾಂತಿಗಾಗಿ ಪ್ರಾಣ ನೀಡಿದ ಮಹಾ ನಾಯಕರು: ಗಾಡಿ ಅರಿಯೆವ್‌

Last Updated 11 ನವೆಂಬರ್ 2018, 15:33 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಇಸ್ರೇಲ್‌ನ ಐದನೇ ಪ್ರಧಾನಿಯಿಟ್ಜ್‌ಹಾಕ್‌ ರಾಬಿನ್ ವಿಭಿನ್ನ ಕಾಲಘಟ್ಟಗಳಲ್ಲಿ ಶಾಂತಿ, ಅಹಿಂಸೆ ಪ್ರತಿಪಾದಿಸಿ, ಅದಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.

ಈ ಇಬ್ಬರು ನಾಯಕರನ್ನು ಸ್ಮರಿಸುವ‘ಶಾಂತಿ ಅನ್ವೇಷಣೆಯಲ್ಲಿ ನಾಯಕತ್ವದ ಪಾತ್ರ’ ಕುರಿತ ಸಂವಾದ ಕಾರ್ಯಕ್ರಮವನ್ನು ಕಾನ್ಸುಲೇಟ್‌ ಆಫ್‌ ಇಸ್ರೇಲ್‌ ನಗರದ ತಾಜ್ ವೆಸ್ಟ್‌ಎಂಡ್‌ನಲ್ಲಿ ಭಾನುವಾರ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದಟೆಲ್‌ಅವೀವ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗಾಡಿ ಅರಿಯೆವ್‌, ‘ಯಿಟ್ಜ್‌ಹಾಕ್‌ ರಾಬಿನ್ ಶಾಂತಿ ಪ್ರತಿಪಾದಿಸಿದ ಕಾರಣ ತಮ್ಮ ಜೀವವನ್ನೇ ಅರ್ಪಿಸಬೇಕಾಯಿತು, ಅವರ ಹತ್ಯೆಯ ಆಘಾತ ಇನ್ನೂ ಇಸ್ರೇಲಿಗಳ ಮನಸ್ಸಿನಲ್ಲಿ ಆಳವಾಗಿಯೇ ಉಳಿದಿದೆ’ ಎಂದರು.

ಯಿಟ್ಜ್‌ಹಾಕ್‌ ಹತ್ಯೆಯಾಗಿ 23 ವರ್ಷಗಳು ಕಳೆದಿವೆ. ಅವರು ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ. ಮುತ್ಸದ್ಧಿಯಾಗಿದ್ದರು. ಹೀಗಾಗಿ ಹತ್ಯೆಯ ಆಘಾತ ಹಸಿಯಾಗಿಯೇ ಉಳಿದಿದೆ. ಎರಡು ಬಾರಿ ಪ್ರಧಾನ ಮಂತ್ರಿ ಆಗಿದ್ದ ಅವರು, ಅದಕ್ಕೆ ಮುನ್ನ 27 ವರ್ಷಗಳು ಸೇನೆಯಲ್ಲಿದ್ದರು. ಸಾಮಾನ್ಯ ಸೈನಿಕರಾಗಿ ಸೇವೆ ಆರಂಭಿಸಿದ ಯಿಟ್ಜ್‌ಹಾಕ್‌ ಸೇನೆಯ ಅತ್ಯುನ್ನತ ಹುದ್ದೆಯಾದ ‘ಚೀಫ್‌ ಆಫ್‌ ದ ಜನರಲ್‌ ಸ್ಟಾಫ್‌’ಗೇರಿದರು. 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ದೇಶಕ್ಕೆ ಗೆಲುವು ತಂದುಕೊಟ್ಟರು. ಪ್ರಧಾನಿ ಆದ ಬಳಿಕ ಅವರು ಪ್ಯಾಲೆಸ್ತೇನ್‌ ಜತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಒಸ್ಲೋ ಒಪ್ಪಂದ ಎಂದೇ ಖ್ಯಾತಿ ಪಡೆದಿದೆ. ಆದರೆ, ಶಾಂತಿ ಬಯಸದ ಒಂದು ವರ್ಗ ಸಿಟ್ಟಿನಿಂದ ಅವರನ್ನು ಹತ್ಯೆ ಮಾಡಿತು ಎಂದು ಹೇಳಿದರು.

ಬೆಂಗಳೂರು ಲಿಟಲ್‌ ಥಿಯೇಟರ್‌ ಫೌಂಡೇಷನ್‌ನ ಸಂಚಾಲಯ ವಿಜಯ್‌ ಪದಕಿ ಮಾತನಾಡಿ, ಅಸಹನೆ ಮತ್ತು ಅಪಕ್ವತೆಯೇ ಗಾಂಧಿ ಮತ್ತುಯಿಟ್ಜ್‌ಹಾಕ್‌ ಅವರಂತಹ ನಾಯಕರ ಹತ್ಯೆಗೆ ಕಾರಣ. ಯಾವುದೇ ಒಂದು ವಿಚಾರದ ಬಗೆಗಿನ ಅಸಮ್ಮತಿಯನ್ನು ಸಹಿಸಿಕೊಳ್ಳುವ ಗುಣ ಎಲ್ಲಿಯವರೆಗೆ ಇರುವುದಿಲ್ಲ, ಅಲ್ಲಿಯವರೆಗೆ ಇಂತಹ ದುರ್ಘಟನೆಗಳನ್ನು ತಡೆಯಲು ಆಗುವುದಿಲ್ಲ. ಇತಿಹಾಸದಲ್ಲಿ 200 ಆಡಳಿತಗಾರರು, ಮಹಾನಾಯಕರ ಹತ್ಯೆಗಳು ನಡೆದಿವೆ ಎಂದರು.

ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ್‌ ಠಾಗೂರ್‌ ಮಧ್ಯೆ ಸಾಕಷ್ಟು ವಿಚಾರಗಳಲ್ಲಿ ಪರಸ್ಪರ ಸಹಮತ ಇರಲಿಲ್ಲ. ಆದರೂ ಸ್ನೇಹಿತರಾಗಿಯೇ ಇದ್ದರು. ಪರಸ್ಪರ ಗೌರವ ಹೊಂದಿದ್ದರು. ಆದರೆ, ಈಗ ಅಂತಹ ವಾತಾವರಣ ಎಲ್ಲೂ ಕಾಣಲು ಸಿಗುವುದಿಲ್ಲ. ಗಾಂಧಿ ಮತ್ತು ಠಾಗೂರ್ ಅವರ ಪರಂಪರೆ ಮುಂದುವರಿಯಬೇಕು ಎಂದು ಪದಕಿ ಹೇಳಿದರು.

ಇಸ್ರೇಲ್‌ ದೂತಾವಾಸ (ದಕ್ಷಿಣ ಭಾರತ) ಮುಖ್ಯಸ್ಥೆ ಡಾನಾ ಕ್ರುಶ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ದ ಪ್ರಾಫೆಟ್‌ ಅಂಡ್‌ ದ ಪೊಯೆಟ್‌’ ನಾಟಕದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT