ಬುಧವಾರ, ಅಕ್ಟೋಬರ್ 23, 2019
27 °C
176 ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ವಿತರಣೆ l ಕೆಡಿಪಿ ಮಾದರಿ ಗ್ರಾಮಸಭೆ ನಡೆಸಲು ಸೂಚನೆ

ಗ್ರಾ.ಪಂ. ವ್ಯಾಪ್ತಿಯ ಆಸ್ತಿ, ದಾಖಲೆ ಗಣಕೀಕರಣ: ಬಿ.ಎಸ್.ಯಡಿಯೂರಪ್ಪ

Published:
Updated:

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ‍ಪಡುವ ಎಲ್ಲ ಆಸ್ತಿಗಳು ಮತ್ತು ದಾಖಲೆಗಳನ್ನು ಗಣಕೀಕರಣ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಕೆಡಿಪಿ ಮಾದರಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಲು ಮತ್ತು ಅದರಲ್ಲಿ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದರು.

‘ಈಗ ನೀಡುತ್ತಿರುವ ಪ್ರಶಸ್ತಿ ಇತರ ಗ್ರಾಮ ಪಂಚಾಯಿತಿಗಳಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಭ್ರಷ್ಟಾಚಾರ ಗ್ರಾಮ ಮಟ್ಟದಲ್ಲೇ ನಿರ್ಮೂಲನೆಗೊಂಡಾಗ ದೇಶವೂ ಭ್ರಷ್ಟಾಚಾರದಿಂದ ಮುಕ್ತವಾಗುತ್ತದೆ. ಗ್ರಾಮ ಸಭೆಗಳಲ್ಲಿ ಊರ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಜನರಿಗೆ ಅಗತ್ಯವಾದ ಕೆಲಸ ಮಾಡಬೇಕು. ಇದರಿಂದ ಗ್ರಾಮ ಪಂಚಾಯಿತಿ ವ್ಯವಸ್ಥೆ ಬಲಪಡಿಸುವುದು ಸಾಧ್ಯವಾಗುತ್ತದೆ’ ಎಂದರು.

ಉದ್ಯೋಗ ಖಾತರಿ ಸ್ಥಗಿತ ಇಲ್ಲ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ, ‘ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಉದ್ಯೋಗ ಖಾತರಿಯ ಕೂಲಿ ರೂಪದಲ್ಲಿ ಕೇಂದ್ರ ₹347 ಕೋಟಿ ಬಿಡುಗಡೆಮಾಡಿದ್ದು, ಒಟ್ಟಾರೆ ₹ 950 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಪ್ರಧಾನಿ ಅವರ ‘ಫಿಟ್ ಇಂಡಿಯಾ’ ಪರಿಕಲ್ಪನೆಯಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆದ ವ್ಯಾಯಾಮ ಶಾಲೆ (ಓಪನ್‌ ಜಿಮ್‌) ಹಾಗೂ ಪ್ರತಿ ಗ್ರಾಮದಲ್ಲೂ ಕನಿಷ್ಠ ಒಂದು ಆಟದ ಮೈದಾನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಗಳ ಮಟ್ಟದಲ್ಲಿ ಕುಡಿಯುವ ನೀರಿನ ಯೋಜನೆಗಳ ಮೇಲ್ವಿಚಾರಣೆಗಾಗಿ ಮತ್ತು ತುರ್ತು ಸ್ಪಂದನೆಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಗಳನ್ನು (ಟಾಸ್ಕ್‌ ಪೋರ್ಸ್‌) ರಚಿಸಲು ತೀರ್ಮಾನಿಸಲಾಗಿದೆ. ನವೆಂಬರ್‌ 1ರೊಳಗೆ ಈ ಕಾರ್ಯಪಡೆ ರಚಿಸಲಾಗುವುದು. ಪ್ರತಿ ಜಿಲ್ಲಾ ಪಂಚಾಯಿತಿಗೆ ಇದಕ್ಕಾಗಿ ₹1 ಕೋಟಿ ಅನುದಾನ ನೀಡಲಾಗುವುದು ಎಂದರು.

‘ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಉದ್ದೇಶದಿಂದ ಇಲಾಖೆಯ ರಾಜ್ಯಮಟ್ಟದ ಕೆಲವು ಪ್ರಮುಖ ಕಚೇರಿಗಳನ್ನು ಬೆಳಗಾವಿ ಸುವರ್ಣಸೌಧದಲ್ಲೂ ಸ್ಥಾಪಿಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವ ಅಧಿಕಾರ ಸಹ ನೀಡಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಪ್ರೆರೇಪಿಸಲು ಪ್ರತಿ ತಾಲ್ಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಗ್ರಾಮ ಪಂಚಾಯಿತಿಗಳನ್ನು ಆಯ್ಕೆಮಾಡಿ ಆ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳಿಗೆ ಪ್ರೇರಣೆ ನೀಡುವ ಸಭೆಯನ್ನು ನ.2ರಂದು ನಗರದ ಜಿಕೆವಿಕೆ ಸಭಾಂಗಣದಲ್ಲಿ ನಡೆಸಲಾಗುವುದು ಎಂದರು.

ಹಲವು ಪಂಚಾಯಿತಿಗಳಿಗೆ ರಾಷ್ಟ್ರಪ್ರಶಸ್ತಿ

ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯದ ವಿವಿಧ ಪಂಚಾಯತ್ ಸಂಸ್ಥೆಗಳಿಗೆ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ.

*  ದೀನ್‌ದಯಾಳ್ ಪಂಚಾಯಿತಿ ಸಶಕ್ತೀಕರಣ ಪುರಸ್ಕಾರ: ದಾವಣಗೆರೆ ಜಿಲ್ಲಾ ಪಂಚಾಯಿತಿ, ಮೂಡಿಗೆರೆ ತಾಲ್ಲೂಕು ಪಂಚಾಯಿತಿ, ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ, ರಾಜಾನುಕುಂಟೆ ಗ್ರಾಮ ಪಂಚಾಯಿತಿ (ಬೆಂಗಳೂರು ನಗರ), ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ (ಗ್ರಾಮಾಂತರ ಜಿಲ್ಲೆ), ಮೆನ್ನಬೆಟ್ಟು ಗ್ರಾಮ ಪಂಚಾಯಿತಿ (ದಕ್ಷಿಣ ಕನ್ನಡ).

*  ನಾನಾಜಿ ದೇಶಮುಖ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ: ಕರಿಮುದ್ದಣಹಳ್ಳಿ ಗ್ರಾಮ ಪಂಚಾಯಿತಿ (ಮೈಸೂರು ಜಿಲ್ಲೆ).

*  ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ: ರಾಜಾನುಕುಂಟೆ ಗ್ರಾಮ ಪಂಚಾಯಿತಿ.

** ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೀಮಿತ ಮತದಾರರಿರುತ್ತಾರೆ. ಸದಸ್ಯರ ನಡೆ, ನುಡಿ, ವ್ಯವಹಾರವನ್ನು ಗಮನಿಸುತ್ತಿರುತ್ತಾರೆ. ಭ್ರಷ್ಟಾಚಾರದ ಹತ್ತಿರ ಸುಳಿಯದಂತೆ ಎಚ್ಚರದಿಂದಿರಿ

ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)