ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಟ ಆಸ್ತಿಕರಾಗಿದ್ದ ಗಾಂಧಿ ನಿಜ ಜಾತ್ಯತೀತವಾದಿ

ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಬರಗೂರು ರಾಮಚಂದ್ರಪ್ಪ ಅಭಿಮತ
Last Updated 29 ಡಿಸೆಂಬರ್ 2019, 15:00 IST
ಅಕ್ಷರ ಗಾತ್ರ

ಧಾರವಾಡ: ‘ಉತ್ಪಾದನಾ ಸಾಧನಗಳನ್ನು ಇಂದಿಗೂ ನಿಯಂತ್ರಿಸುತ್ತಿರುವ ಪುರುಷ, ಸಾಮಾಜಿಕ–ಆರ್ಥಿಕ ಸಂರಚನೆಯಲ್ಲಿ ಮಹಿಳೆಯನ್ನು ಎರಡನೆ ದರ್ಜೆ ನಾಗರಿಕಳನ್ನಾಗಿ ಪರಿಗಣಿಸುತ್ತಿದ್ದಾನೆ. ಗಾಂಧೀಜಿ ಅವರ ವಿಷಯದಲ್ಲೂ ಈ ವೈರುಧ್ಯ ಇದ್ದದ್ದು ವಿಪರ್ಯಾಸ’ ಎಂದು ಹಿರಿಯ ಲೇಖಕ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ ಮತ್ತು ಗದುಗಿನ ಲಡಾಯಿ ಪ್ರಕಾಶನ ಆಯೋಜಿಸಿದ್ದ ಕಸ್ತೂರಬಾ ಜೀವನ ಕಥನ ‘ನಾನು ಕಸ್ತೂರ್’ ಕೃತಿ ಬಿಡುಗಡೆ ಮತ್ತು ಗಾಂಧಿ ಮಾರ್ಗ ಅವಲೋಕನ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘1925ರ ಮೊದಲು ಗಾಂಧಿ ಹಾಗಿದ್ದರು. ನಂತರ ಗಾಂಧಿ ಬದಲಾಗುತ್ತ ನಡೆದರು. ಆದರೆ ಹಿಂದಿನ ಗಾಂಧಿಯವರನ್ನೇ ಹಿಡಿದುಕೊಂಡು ಇಂದಿಗೂ ಟೀಕಿಸಲಾಗುತ್ತದೆ. ಆದರೆ ಬದಲಾದ ಗಾಂಧಿ ಕುರಿತು ಬಹುತೇಕರು ಓದಿಲ್ಲ, ಅರ್ಥ ಮಾಡಿಕೊಂಡಿಲ್ಲ’ ಎಂದರು.

‘ಹಿಂದಿನ ಶತಮಾನದಲ್ಲಿದ್ದ ಧಾರ್ಮಿಕ ಸಾಮರಸ್ಯ ಇಂದು ಸಂಘರ್ಷವಾಗುತ್ತಿದೆ. ಸಾಮಾಜಿಕ ವಿವೇಕ, ಆರ್ಥಿಕ ಅವಿವೇಕ ಎನ್ನುವಂತಾಗಿದೆ. ಅಂದಿನ ಹೋರಾಟಗಳ ಕಲ್ಪನೆ ಬದಲಾಗಿ ಇಂದು ಚೀರಾಟಗಳಾಗುತ್ತಿವೆ. ಜೋರು ಕಂಠದಲ್ಲಿ ಮಾತನಾಡುವುದೇ ನಾಯಕರ ಲಕ್ಷಣವಾಗುತ್ತಿದೆ. ಗಾಂಧಿ ಜಾಗವನ್ನು ಗೋಡ್ಸೆ ಆಕ್ರಮಿಸಿಕೊಳ್ಳುವ ಅಪಾಯವಿದೆ’ ಎಂದು ಎಚ್ಚರಿಸಿದರು.

‘ದೇಶದಲ್ಲಿ ಧಾರ್ಮಿಕ, ಆರ್ಥಿಕ ಮೂಲಭೂತವಾದ ವಿಜೃಂಭಿಸುತ್ತಿದೆ. ಅಮೆರಿಕ ಪ್ರಣೀತ ಆರ್ಥಿಕತೆಯನ್ನು ಒಪ್ಪಿಕೊಂಡಿರುವ ದೇಶ ಅಪಾಯದ ಏಕಮುಖಿ ಆರ್ಥಿಕ ಹಾದಿಯಲ್ಲಿ ಸಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇಂಥ ಸಂಕೀರ್ಣ ಸ್ಥಿತಿಯಲ್ಲಿ ಎಡ, ಬಲ ಪಂಥೀಯರಾಗಿರುವವರು ಜನಪಂಥೀಯರಾಗುವ ಹಂತದಲ್ಲಿ ನಾವಿದ್ದೇವೆ. ಸಮಾಜದಲ್ಲಿ ಚಲನಶೀಲತೆ, ಸಹಿಷ್ಣುತೆ, ಸಮಾನತೆಯ ಆಶಯ ಹೊಂದಿರುವ ಮನುಷ್ಯ ಮನಸ್ಸುಗಳಿಂದ ನಾವು ಪಡೆಯಬೇಕು ಎನ್ನುವ ಸ್ಥಿತಿ ಇದೆ. ನಾವೆಷ್ಟು ಸರಿ ಎನ್ನುವ ಆತ್ಮಾವಲೋಕನವೂ ಅಗತ್ಯವಿದೆ’ ಎಂದು ವಿಶ್ಲೇಷಿಸಿದರು.

‘ಅಪ್ಪಟ ಆಸ್ತಿಕರಾಗಿದ್ದ ಗಾಂಧಿ ಒಬ್ಬ ನಿಜವಾದ ಜಾತ್ಯತೀತವಾದಿ. ರಾಮನಲ್ಲಿ ಅತೀವ ಶ್ರದ್ಧೆ, ನಂಬಿಕೆ ಇಟ್ಟುಕೊಂಡಿದ್ದರೂ ಎಂದೂ ಸ್ವಾತಂತ್ರ್ಯ ಹೋರಾಟಕ್ಕೆ ರಾಮನನ್ನು ಬಳಸಿಕೊಳ್ಳಲಿಲ್ಲ. ಧರ್ಮವನ್ನು ಮುನ್ನೆಲೆಗೆ ತರಲಿಲ್ಲ. ಉಪ್ಪು, ಖಾದಿಯಂಥ ಸಂಗತಿಗಳನ್ನು ಪ್ರತಿಭಟನೆಯ ಮಾರ್ಗವಾಗಿ ಬಳಸಿದರು. ಇವು ಕಳೆದ ಶತಮಾನದ ಅಪರೂಪದ ಜಾತ್ಯತೀತೆಯ ರೂಪಕಗಳು. ಅವರ ಪ್ರಯೋಗಗಳನ್ನು ಸಕಾರಾತ್ಮಕವಾಗಿ ಪ್ರಶ್ನಿಸಬಹುದೇ ಹೊರತು ನಿರಾಕರಣೆ ಸರಿಯಾದ ಮಾರ್ಗವಲ್ಲ’ ಎಂದು ಪ್ರತಿಪಾದಿಸಿದರು.

‘ತಾಯ್ತನವಿಲ್ಲದ ಸಮಾಜದಲ್ಲಿ ಇಂದು ನಾವಿದ್ದೇವೆ. ಹತ್ಯೆ, ಕೊಲೆ, ಅತ್ಯಾಚಾರ ಸೇರಿದಂತೆ ಹಲವು ಅನಿಷ್ಟಗಳು ನಿತ್ಯದ ಸಹಜ ಸಂಗತಿಗಳಾಗುತ್ತಿವೆ. ಇಂಥ ಸಂಕೀರ್ಣ ಸ್ಥಿತಿಯಲ್ಲಿ ಕಸ್ತೂರಬಾ ತ್ಯಾಗ, ಗಾಂಧೀಜಿಯವರ ಜಾತ್ಯತೀತತೆ ಅಗತ್ಯ ಮತ್ತು ಅನಿವಾರ್ಯ ಎನ್ನುವಂತಾಗಿದೆ’ ಎಂದು ಬರಗೂರ ಅಭಿಪ್ರಾಯಪಟ್ಟರು.

‘ದ್ವೀಪಗಳನ್ನು ದಾಟುತ್ತಲೇ ದ್ವೀಪವಾದವರು ಗಾಂಧೀಜಿ. ಅಂಥ ದ್ವೀಪದ ಒಳಗಡೆ ಇರುವ ದೀಪ ಕಸ್ತೂರಬಾ. ಡಾ.ಎಚ್‌.ಎಸ್‌.ಅನುಪಮಾ ಅವರು ರಚಿಸಿರುವ ‘ನಾನು ಕಸ್ತೂರ್‌’ ಕೃತಿ ಮಾನಸಿಕ ನೆಲೆಯಿಂದ ಭೌತಿಕ ಬದುಕನ್ನು ಕಟ್ಟಿಕೊಡುತ್ತದೆ. ಒಬ್ಬ ಸಾಮಾನ್ಯ ಮಹಿಳೆ ಅಸಾಮಾನ್ಯವಾದ ಕಥೆಯನ್ನು ಅತ್ಯಂತ ಆಪ್ತವಾಗಿ ನಿರೂಪಿಸುತ್ತದೆ. ಇದು ಕೃತಿಯ ವೈಶಿಷ್ಟ್ಯ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೋಳುವಾರು ಮಹಮ್ಮದ್‌ ಕುಂಞಿ, ಎಚ್‌.ಎನ್‌.ಆರತಿ, ಡಾ.ಎಚ್‌.ಎಸ್‌ ಅನುಪಮಾ, ಬಸವರಾಜ ಸೂಳಿಭಾವಿ, ಡಾ.ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಚಂದ್ರು ತುರವೀಹಾಳ್‌ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT