ದಲಿತಕೇರಿಯಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕ...

7

ದಲಿತಕೇರಿಯಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕ...

Published:
Updated:
Deccan Herald

ಮಹಾತ್ಮಾ ಗಾಂಧಿ ಹಾಗೂ ದಲಿತಕೇರಿಗೆ ಅವಿನಾಭಾವ ಸಂಬಂಧವಿದೆ. ಅವರೊಂದಿಗೆ ನೇರ ಸಂಪರ್ಕವಿರದ್ದರೂ ಗಾಂಧೀಜಿ ಅವರ ತತ್ವ, ಆದರ್ಶಗಳ ಪ್ರಭಾವ ಮಾತ್ರ ದೇಶದ ಮೂಲೆ ಮೂಲೆಗಳಲ್ಲಿರುವ ಎಲ್ಲ ನಾಗರಿಕ ಮೇಲೆಯೂ ಆಗಿತ್ತು. ಅಂತಹ ಅಭಿಮಾನ, ಪ್ರೀತಿ, ಶ್ರದ್ಧೆ ಗಾಂಧೀಜಿ ಬದುಕಿದ್ದಾಗಲೂ ಇತ್ತು, ಅವರು ಹುತಾತ್ಮರಾದಾಗಲೂ ಇತ್ತು.  ಹೀಗಾಗಿಯೇ ರಾಷ್ಟ್ರ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಅವರ ಚಿತಾಭಸ್ಮದ ಕರಂಡಿಕೆಯನ್ನಿಟ್ಟು ಸ್ಮಾರಕ ನಿರ್ಮಾಣ ಮಾಡಲಾಯಿತು. ಹುಬ್ಬಳ್ಳಿಯಲ್ಲಿ ಇನ್ನಷ್ಟು ವಿಶೇಷ ಎನ್ನುವಂತೆ ಎರಡು ಕಡೆಗಳಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕವಿದೆ. ಹಳೇ ಹುಬ್ಬಳ್ಳಿ, ಅಯೋಧ್ಯಾನಗರದ ದಲಿತಕೇರಿಯಲ್ಲಿ ಹಾಗೂ ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕ ಮಂದಿರಗಳಿವೆ.

ಆದರೆ ಗಾಂಧೀಜಿ ಚಿತಾಭಸ್ಮ ಸ್ಮಾರಕ ಮಂದಿರ ದಲಿತಕೇರಿಯಲ್ಲಿ ಇರುವುದು ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರವೇ ಎನ್ನುತ್ತಾರೆ ಇಲ್ಲಿನ ಸಮಗಾರ ಸಮಾಜದ ಹಿರಿಯರು.

‘ಬಹುಶಃ ನಮಗೆ ತಿಳಿದಂತೆ ದಲಿತಕೇರಿಯಲ್ಲಿ ಗಾಂಧೀಜಿಯವರ ಚಿತಾಭಸ್ಮ ಇಟ್ಟು ಸ್ಮಾರಕ ನಿರ್ಮಿಸಿದ ಉದಾಹರಣೆ ರಾಜ್ಯದ ಯಾವ ಮೂಲೆಯಲ್ಲೂ ಇಲ್ಲ. ಹುಬ್ಬಳ್ಳಿಯ ಬಡಗಿ ಭದ್ರಾಪುರ ಹಾಗೂ ರಾಜಪ್ಪ ಕಲ್ಲಪ್ಪ ಅರಕೇರಿ ಎಂಬ ನಮ್ಮ ಸಮಾಜದ ಹಿರಿಯರು ಮಹಾತ್ಮರ ಮೇಲಿನ ಅಭಿಮಾನದಿಂದ ದೆಹಲಿಯ ರಾಜಘಾಟ್‌ಗೆ ಹೋಗಿ ಚಿತಾಭಸ್ಮ ಕರಂಡಿಕೆ ತಂದು, ಗಾಂಧೀಜಿ ಪುತ್ಥಳಿ ಮಾಡಿಸಿ ಅದರ ಕೆಳಗಡೆ ಇಟ್ಟು ಗೌರವ ಸಲ್ಲಿಸಿದ್ದಾರೆ’ ಎನ್ನುತ್ತಾರೆ  ಮಹಾತ್ಮಾಗಾಂಧಿ ಸಮಗಾರ ಸೇವಾ ಯುವಕ ಸಂಘ, ಶಿವಶರಣ ಹರಳಯ್ಯ (ಸಮಗಾರ) ಸಮಾಜ ಪಂಚ ಕಮಿಟಿಯ ಕಾರ್ಯದರ್ಶಿ ಮಂಜುನಾಥ ಅರಕೇರಿ.

 

ಆರಂಭದಲ್ಲಿ ಹೆಂಚಿನಮಾಡಿನ ಪುಟ್ಟ ಗುಡಿಸಲಿನಂತಿದ್ದ ಈ ಸ್ಮಾರಕ ಮಂದಿರವನ್ನು ಸಂಸದರ (ಪ್ರಹ್ಲಾದ ಜೋಶಿ)ಅನುದಾನದಲ್ಲಿ ದೊಡ್ಡದಾಗಿ ಕಟ್ಟಲಾಯಿತು. ಮೊದಲ ಮಹಡಿಯಲ್ಲಿ ಅಂಗನವಾಡಿಯನ್ನು ನಡೆಸಲಾಗುತ್ತಿದೆ. ನೆಲ ಮಹಡಿಯ ಸಭಾಂಗಣವನ್ನು ವಿವಿಧ ರಾಜಕೀಯ ಪಕ್ಷಗಳು ಕಿರು ಸಭೆ, ಸಮಾರಂಭಗಳಿಗೆ ಬಳಸುತ್ತಿದ್ದಾರೆ. ಯುವಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ,ಅಂಬೇಡ್ಕರ್‌ ಜಯಂತಿ, ಗಾಂಧಿ ಜಯಂತಿ ಇತ್ಯಾದಿ ಆಚರಣೆ ಮಾಡಲಾಗುತ್ತದೆ.

ಮಹಿಳಾ ವಿದ್ಯಾಪೀಠದಲ್ಲಿ ಗಾಂಧೀಜಿ ಚಿತಾಭಸ್ಮ ಸ್ಮಾರಕ

ಹುಬ್ಬಳ್ಳಿಯ ಇನ್ನೊಂದು ಪ್ರಮುಖ ಸ್ಥಳದಲ್ಲಿ ಗಾಂಧಿ ಚಿತಾಭಸ್ಮ ಸ್ಮಾರಕವಿದೆ. ವಿದ್ಯಾನಗರದ ಮಹಿಳಾ ವಿದ್ಯಾಪೀಠದಲ್ಲಿ 1948ರಲ್ಲಿ ಚಿತಾಭಸ್ಮದ ಕರಂಡಿಕೆ ತಂದು ಮಹಾತ್ಮಾಗಾಂಧಿ ಪ್ರಾರ್ಥನಾ ಮಂದಿರದಲ್ಲಿಟ್ಟು ಗೌರವ ಸಲ್ಲಿಸಲಾಗಿದೆ.

ಮಹಿಳಾ ವಿದ್ಯಾಪೀಠದ ಸ್ಥಾಪಕರಾದ ಸರ್ದಾರ್ ವೀರನಗೌಡ ಪಾಟೀಲ ಹಾಗೂ ನಾಗಮ್ಮ ಪಾಟೀಲ (ಸ್ವಾತಂತ್ರ್ಯ ಹೋರಟಗಾರ್ತಿ,ಬಾಂಬೇ ಕರ್ನಾಟಕದ ಮೊದಲ ಶಾಸಕಿ)ಅವರಿಗೆ ಗಾಂಧೀಜಿ ಅವರ ಮೇಲೆ ಅಪರಿಮಿತ ಗೌರವ. ಮಹಾತ್ಮರ ಮಾರ್ಗದರ್ಶನದಿಂದಲೇ ದಲಿತ ಮಕ್ಕಳಿಗೆ ಪಾಠಶಾಲೆ ಆರಂಭಿಸುವ ಕೆಲಸವನ್ನು 1934ರಲ್ಲಿಯೇ ಆರಂಭಿಸುತ್ತಾರೆ. ಬಳಿಕ ಮಹಿಳಾ ವಿದ್ಯಾಪೀಠ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು,ಸ್ನಾತಕೋತ್ತರ ತರಗತಿಗಳಿಂದಾಗಿ ಈಗ ಹೆಮ್ಮರವಾಗಿ ಬೆಳೆದಿದೆ.

‘ನಮ್ಮ ಅಪ್ಪ–ಅಮ್ಮನಿಗೆ ಗಾಂಧೀಜಿ ಅವರ ಮೇಲೆ ಬಹಳ ಪ್ರೀತಿ, ಅಭಿಮಾನ. ಹೀಗಾಗಿಯೇ ನಮ್ಮ ತಂದೆಯವರನ್ನು ಹರಿಜನ ಸೇವಾ ಸಂಘದ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಮಹಾತ್ಮರ ಸಲಹೆ, ಆಶೀರ್ವಾದದಿಂದ ಇಲ್ಲಿ ‘ಹರಿಜನ ಬಾಲಿಕಾಶ್ರಮ’ ಪ್ರಾರಂಭಿಸಿ ದಲಿತ ಮಕ್ಕಳಿಗೆ ಪಾಠ, ವಸತಿ ಆರಂಭಿಸಲಾಗುತ್ತದೆ. ದಾನಿಗಳ ನೆರವಿನಿಂದ ಮುಂದೆ ಪ್ರಾಥಮಿಕ, ಪ್ರೌಢಶಾಲೆ, ಪದವಿ, ಸ್ನಾತಕೋತ್ತರ ಕೇಂದ್ರ, ಐಟಿಐ, ನರ್ಸಿಂಗ್‌ ಕೋರ್ಸ್, ಡಿಇಡಿ, ವಸತಿಯುಕ್ತ ಶಿಕ್ಷಣ ಸೌಲಭ್ಯದವರೆಗೆ ವಿಸ್ತರಿಸಲಾಯಿತು. ಅದೇ ಮುಂದೆ ಮಹಿಳಾ ವಿದ್ಯಾಪೀಠವಾಗಿ ಹೆಸರಾಗುತ್ತದೆ. 1948ರಲ್ಲಿ ಗಾಂಧೀಜಿ ತೀರಿಕೊಂಡಾಗ ಅವರ ಚಿತಾಭಸ್ಮದ ಕರಂಡಿಕೆ ತಂದು ಪ್ರಾರ್ಥನಾ ಮಂದಿರದಲ್ಲಿ ಇಡಲಾಯಿತು. ಈಗಲೂ ನಮ್ಮ ಅನಾಥಾಶ್ರಮದ ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ಪ್ರಾರ್ಥನೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ ’ ಎನ್ನುತ್ತಾರೆ ಸಂಸ್ಥಾಪಕರ ಪುತ್ರಿ, ಮಹಿಳಾ ವಿದ್ಯಾಪೀಠದ ಟ್ರಸ್ಟಿ ಅಮಲಾ ಕಡಗದ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !