ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಕಲ್ಯಾಣ ಯೋಜನೆ ಬಗ್ಗೆ ಜನ ಏಂತಾರೆ

ಬಡವರು ಎಲ್ಲಿಗೆ ಹೋಗಬೇಕು, ಹೇಗೆ ಬದುಕಬೇಕು * ಬಡವರು ಎಲ್ಲಿಗೆ ಹೋಗಬೇಕು, ಹೇಗೆ ಬದುಕಬೇಕು
Last Updated 9 ಮಾರ್ಚ್ 2019, 19:39 IST
ಅಕ್ಷರ ಗಾತ್ರ

ಅಹಿಂದ ವರ್ಗಗಳ ಕಲ್ಯಾಣದ ಸದುದ್ದೇಶದಿಂದ 25 ವರ್ಷಗಳ ಹಿಂದೆ ಜಾರಿಗೊಳಿಸಿರುವ ಗಂಗಾ ಕಲ್ಯಾಣ ಯೋಜನೆಯ ಭೌತಿಕ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ಈ ಕಾರ್ಯಕ್ರಮ ರಾಜಕಾರಣಿ, ಅಧಿಕಾರಿ, ಮಧ್ಯವರ್ತಿ ಮತ್ತು ಗುತ್ತಿಗೆದಾರರ ಕಪಿಮುಷ್ಟಿಯಲ್ಲಿ ಸಿಲುಕಿ ಹಳ್ಳ ಹಿಡಿದಿದೆ. ಈ ಬಗ್ಗೆ ಜನರ ಅಭಿಪ್ರಾಯ ಇಲ್ಲಿದೆ.

ಅರ್ಹರಿಗೆ ಆದ್ಯತೆ ಸಿಗಲಿ

ಅರ್ಹರಿಗೆ ಆದ್ಯತೆ ನೀಡಬೇಕು. ಕೊಳವೆಬಾವಿ ಕೊರೆದ ಬಳಿಕ ಕಾಲಮಿತಿಯೊಳಗೆ ವಿದ್ಯುತ್ ಸಂಪರ್ಕ ಒದಗಿಸಬೇಕು. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ಕಳಪೆ ಮತ್ತು ಕಡಿಮೆ ಪ್ರಮಾಣದಲ್ಲಿ ಸಲಕರಣೆಗಳನ್ನು ಪೂರೈಸುತ್ತಿದ್ದು, ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲು ದಿಟ್ಟ ಕ್ರಮಕೈಗೊಳ್ಳಬೇಕು.

–ಎಸ್.ಎಂ.ಪಾಟೀಲ,ಅಹಿಂದ ಮುಖಂಡ, ವಿಜಯಪುರ

ಶಾಸಕರಿಂದ ಆಯ್ಕೆ ಬೇಡ

ಶಾಸಕರು ಇಲ್ಲದ ಸಮಿತಿಯನ್ನು ರಚಿಸಿ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಕಳಪೆ ಸಾಮಗ್ರಿಗಳನ್ನು ವಿತರಿಸಿ, ಹೆಚ್ಚಿನ ದರ ನಮೂದಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸಮರ್ಪಕ ನಿರ್ವಹಣೆ ಮಾಡಬೇಕು. ಶಾಸಕರ ಹಿಂಬಾಲಕರು 2–3 ಕೊಳವೆಬಾವಿಗಳನ್ನು ಕೊರೆಸಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಬೇಕು. ವರ್ಷಗಟ್ಟಲೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಸತಾಯಿಸುವ ಅಧಿಕಾರಿಗಳಿಗೆ ಚಾಟಿ ಬೀಸಬೇಕು.

–ಡಿ.ಜಿ.ಸಾಗರ,ದಲಿತ ಹೋರಾಟಗಾರ, ಕಲಬುರ್ಗಿ

ಆದ್ಯತೆ ಮೇಲೆ ಪರಿಗಣಿಸಿ

ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಕೊಳವೆಬಾವಿ ಕೊರೆಸಲು ಅವಕಾಶ ಮಾಡಿಕೊಡಬೇಕು. ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು ಮತ್ತು ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಗಂಗಾ ಕಲ್ಯಾಣ ಯೋಜನೆಯ ಉದ್ದೇಶವೇ ವಿಫಲವಾದಂತಾಗುತ್ತದೆ.

ಈರಣ್ಣ ಬಡಿಗೇರ,ವಿಶ್ವಕರ್ಮ ಸಮುದಾಯದ ಮುಖಂಡ, ಧಾರವಾಡ

ಪ್ರತ್ಯೇಕ ನಿಗಮ ಮಾಡಲಿ

ಅರಣ್ಯವಾಸಿ, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಸೇರಿದಂತೆ ಮೂಲನಿವಾಸಿಗಳಿಗಾಗಿ ಪ್ರತ್ಯೇಕ ಮೂಲನಿವಾಸಿಗಳ ನಿಗಮವನ್ನು ಸ್ಥಾಪಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗುವ ಕೊಳವೆಬಾವಿಗಳು ಬಲಿಷ್ಠರ ಪಾಲಾಗುತ್ತಿವೆ. ಇದನ್ನು ತಪ್ಪಿಸಬೇಕು. ಕೊರಗ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಮಲೆಕುಡಿಯ, ಸಿದ್ಧಿ, ಹಕ್ಕಿಪಿಕ್ಕಿ ಸಮುದಾಯಗಳ ಅರ್ಹ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಮಂಜೂರು ಮಾಡಬೇಕು.

ಸೋಮಣ್ಣ ,ಬುಡಕಟ್ಟು ಸಮುದಾಯದ ಮುಖಂಡ,ಎಚ್.ಡಿ.ಕೋಟೆ

ದುರ್ಬಳಕೆ ಆಗುತ್ತಿದೆ ಅನುದಾನ

ಚಿತ್ರದುರ್ಗ ಬರದ ಜಿಲ್ಲೆ. ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಸಾವಿರ ಅಡಿಯ ಕೊಳವೆ ಬಾವಿಗಳಲ್ಲಿಯೂ ನೀರು ಬರುತ್ತಿಲ್ಲ. ಆದರೆ, ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ ಎಲ್ಲ ಕೊಳವೆಬಾವಿಗಳಲ್ಲಿ ನೀರು ಸಿಕ್ಕಿದೆ ಎಂಬ ದಾಖಲೆಗಳು ಸರ್ಕಾರಿ ಇಲಾಖೆಯಲ್ಲಿ ಲಭ್ಯ ಇವೆ. ಬಾವಿಯಲ್ಲಿ ನೀರು ಬೀಳದಿದ್ದರೂ ಪಂಪ್, ಪೈಪ್ ಸೇರಿ ಇತರ ಸೌಲಭ್ಯ ಪಡೆಯುವ ಉದ್ದೇಶದಿಂದ ಸುಳ್ಳು ಲೆಕ್ಕ ನೀಡಲಾಗುತ್ತಿದೆ. ಅಧಿಕಾರಿಗಳ ಉಸ್ತುವಾರಿಯಲ್ಲಿದ್ದಾಗ ನೈಜ ಫಲಾನುಭವಿಗಳನ್ನು ಹುಡುಕುವ ಪ್ರಯತ್ನ ನಡೆಯುತ್ತಿತ್ತು. ಇದನ್ನು ಶಾಸಕರ ವಿವೇಚನೆಗೆ ಬಿಟ್ಟ ಬಳಿಕ ಯೋಜನೆಯ ಫಲ ಅವರ ಹಿಂಬಾಲಕರಿಗೆ ಮಾತ್ರ ಸಿಗುತ್ತಿದೆ. ಸಚಿವ, ಶಾಸಕ, ಅಭಿವೃದ್ಧಿ ಅಧಿಕಾರಿ ಸೇರಿ ಈ ವ್ಯವಸ್ಥೆಯಲ್ಲಿ ಬರುವ ಪ್ರತಿಯೊಬ್ಬರು ಈ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಸಿ.ಮಹಲಿಂಗಪ್ಪ, ಹಿಂದುಳಿದ ವರ್ಗಗಳ ಮುಖಂಡ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT