ಮಂಗಳವಾರ, ಆಗಸ್ಟ್ 20, 2019
25 °C

ಕಸದ ಲಾರಿಗಳ ಸಂಚಾರಕ್ಕೆ ಗ್ರಾಮಸ್ಥರ ಅಡ್ಡಿ: ಸಾಲುಗಟ್ಟಿ ನಿಂತಿವೆ ನೂರಾರು ಲಾರಿಗಳು

Published:
Updated:

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ ತಾಲ್ಲೂಕು): ಹೋಬಳಿಯ ಕರೆಕಲ್ಲಪಾಳ್ಯ ಸಮೀಪ ಬೆಂಗಳೂರಿನಿಂದ ಕಸ ತುಂಬಿಕೊಂಡು ಬಂದಿದ್ದ ಲಾರಿಯೊಂದು ಲಾರಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದು, ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: ‘ಕಸದ ಮಾಫಿಯಾ’ ಕಟ್ಟಿ ಹಾಕುವವರು ಯಾರು?

ಮೃತನನ್ನು ಕಾಮನಗ್ರಹಾರ ನಿವಾಸಿ ರಂಗಪ್ಪ (55) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕಸ ತುಂಬಿದ ಲಾರಿಗಳು ತಣ್ಣೀರನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸವಿಲೇವಾರಿ ಘಟಕಕ್ಕೆ ಬರುತ್ತವೆ. ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಕಾರಣ ನೂರಾರು ಲಾರಿಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದು, ಪರಿಸ್ಥಿತಿ ತಿಳಿಗೊಳ್ಳದಿದ್ದರೆ ನಾಳೆ ಬೆಂಗಳೂರಿನ ಕಸ ಸಂಗ್ರಹದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಶವ ಇಟ್ಟು ರಸ್ತೆ ತಡೆ: ಮೃತರ ಕುಟುಂಬಕ್ಕೆ ಲಾರಿ ಮಾಲೀಕರು ಸೂಕ್ತ ಪರಿಹಾರ ನೀಡಬೇಕು. ಬೆಂಗಳೂರಿನಿಂದ ಬರುವ ಕಸದ ಲಾರಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕಾಮನಅಗ್ರಹಾರ ಸೇರಿದಂತೆ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಪ್ರತಿಭಟನೆ ನಡೆಸಿದರು. 

ಇದನ್ನೂ ಓದಿ: ದೊಡ್ಡಬಳ್ಳಾಪುರ: ಮೃತ ದೇಹವನ್ನಿಟ್ಟು ರಸ್ತೆ ತಡೆ


ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಕಾರಣ ನೂರಾರು ಕಸದ ಲಾರಿಗಳು ಸಾಲುಗಟ್ಟಿ ನಿಂತಿವೆ.

ಲಾರಿಗಳ ಸಂಚಾರ ಸ್ಥಗಿತ: ಕಸದ ಲಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಿಂದ ಕಸ ತುಂಬಿಕೊಂಡು ಬರುತ್ತಿರುವ ನೂರಾರು ಲಾರಿಗಳು ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತಿವೆ. ಲಾರಿಗಳ ಸಂಚಾರಕ್ಕೆ ಸ್ಥಳೀಯರು ಅವಕಾಶ ನೀಡದೇ ಇದ್ದರೆ ಬುಧವಾರ ಬೆಂಗಳೂರು ನಗರದಲ್ಲಿ ಕಸ ಸಂಗ್ರಹ ಮತ್ತು ಸಾಗಾಣಿಕೆಯ ಮೇಲೆ ಪರಿಣಾಮ ಬೀರಲಿದೆ. 

ಇದನ್ನೂ ಓದಿ: ಕಸ ಸಾಗಣೆ ಲಾರಿ ಚಾಲಕರಿಗಿಲ್ಲ ಆರು ತಿಂಗಳ ಸಂಬಳ

ಮಿತಿ ಮೀರಿದ ವೇಗ: ಬೆಂಗಳೂರಿನಿಂದ ರಾತ್ರಿ, ಹಗಲೆನ್ನದೆ ನೂರಾರು ಸಂಖ್ಯೆಯಲ್ಲಿ ಕಸ ತುಂಬಿದ ಲಾರಿಗಳು ಇಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಬರುತ್ತವೆ. ಕಸ ತುಂಬಿದ ಲಾರಿಗಳಿಂದ ವಾಸನೆ ಹೆಚ್ಚಾಗಿ ಬರುವುದರಿಂದ ಬಹುತೇಕ ಚಾಲಕರು ಕುಡಿದ ಅಮಲಿನಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಹೀಗಾಗಿಯೇ ಇಲ್ಲಿ ಅಪಘಾತಗಳು ಸದಾ ನಡೆಯುತ್ತಲೇ ಇರುತ್ತವೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಅಪಘಾತಗಳು ನಡೆದಾಗ ಮಾತ್ರ ಪೊಲೀಸರು ಲಾರಿ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವ, ಹಗಲಿನ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ಬರದಂತೆ ತಡೆಯುವ ಭರವಸೆ ನೀಡುತ್ತಾರೆ. ಆದರೆ ಇದುವರೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೊರಗುಂಟೆಪಾಳ್ಯ– ಬಿಬಿಎಂಪಿ ಕಸದ ಲಾರಿ ಗುದ್ದಿ ಸಾವು

ಇದು ಎರಡನೇ ಬಲಿ: ಬಿಬಿಎಂಪಿ ಕಸದ ಲಾರಿಗೆ ಸಿಕ್ಕಿ ಮೃತಪಟ್ಟಿರುವ ಎರಡನೇ ಪ್ರಕರಣ ಇದು. ಈ ಹಿಂದೆ ಇದೇ ರಸ್ತೆಯ ಚನ್ನಬಸವಯ್ಯನಪಾಳ್ಯ ಕ್ರಾಸ್‌ನಲ್ಲಿ ಸ್ಥಳೀಯ ನಿವಾಸಿಯೊಬ್ಬರು ನಡೆದುಕೊಂಡು ಹೋಗುವ ಸಂದರ್ಭ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು. ಈಗ ಬಿಬಿಎಂಪಿ ಲಾರಿ ಎರಡನೇ ಬಲಿ ಪಡೆದಿದೆ.

Post Comments (+)