ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಲಾಪ ನುಂಗಿದ ‘ಕಸ’

ಗೋವಿಂದರಾಜನಗರ ವಾರ್ಡ್‌ನ ಕಸ ಸಾಗಿಸುವ ಗುತ್ತಿಗೆದಾರ ಬದಲಾವಣೆಗೆ ಒತ್ತಾಯ
Last Updated 29 ನವೆಂಬರ್ 2018, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋವಿಂದರಾಜನಗರ ವಾರ್ಡ್‌ನಲ್ಲಿ ಕಸ ಸಾಗಿಸುವ ಗುತ್ತಿಗೆದಾರನ ವರ್ತನೆ ಉದ್ಧಟತನದಿಂದ ಕೂಡಿದ್ದು, ಆತನನ್ನು ಬದಲಾಯಿಸಬೇಕು’ ಎಂಬ ಒತ್ತಾಯ ಸಂಬಂಧಿಸಿ ಗದ್ದಲದಲ್ಲೇ ಗುರುವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಕಾಲಹರಣ ನಡೆಯಿತು.

‘ವಾರ್ಡ್‌ ನಂ 103ರಲ್ಲಿ ಕಸ ಎತ್ತುವ ಕಾಂಪ್ಯಾಕ್ಟರ್‌ ಗುತ್ತಿಗೆದಾರ ನರಸೇಗೌಡ ಎಂಬಾತ ಉದ್ಧಟತನದಿಂದ ವರ್ತಿಸುತ್ತಿದ್ದಾನೆ. ಅವನನ್ನು ಬದಲಾಯಿಸಲು ಪಾಲಿಕೆಯ ವಿಶೇಷ ಆಯುಕ್ತರು ಸೂಚಿಸಿದ್ದರೂ 24 ಗಂಟೆಯೊಳಗೆ ಕೆಲಸ ಮುಂದುವರಿಸುವಂತೆ ಆದೇಶ ಪಡೆದಿದ್ದಾನೆ’ ಎಂದು ಬಿಜೆಪಿ ಸದಸ್ಯರಾದ ಉಮೇಶ್‌ ಶೆಟ್ಟಿ, ಕಟ್ಟೆ ಸತ್ಯನಾರಾಯಣ ದೂರಿದರು.

ಮೇಯರ್‌ ಗಂಗಾಂಬಿಕೆ ಪ್ರತಿಕ್ರಿಯಿಸಿ, ‘ಈ ಬಗ್ಗೆ ಪರಿಶೀಲಿಸಲು ಎರಡು ದಿನ ಕಾಲಾವಕಾಶ ಕೊಡಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು’ ಎಂದು ಕೋರಿದರು.‘ಅದು ಅಸಾಧ್ಯ. ಈ ಬಗ್ಗೆ ನಿಲುವಳಿ ಮಂಡಿಸೋಣ ಅಭಿಪ್ರಾಯಕ್ಕೆ ಮತಗಣನೆ ಆಗಲಿ’ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.

‘ವಿಷಯ ಪರಿಶೀಲಿಸದೇ ಏನನ್ನೂ ಹೇಳಲಾಗದು. ಆಯುಕ್ತರು ಬಂದ ಮೇಲೆ ನಿರ್ಧರಿಸೋಣ’ ಎಂದು ಹೇಳಿದರೂ ಗದ್ದಲ ನಿಲ್ಲಲಿಲ್ಲ. ಊಟದ ವಿರಾಮದ ಬಳಿಕ ಸಭೆ ಮತ್ತೆ ಸೇರಿದಾಗಲೂ ಇದೇ ರಂಪಾಟ ಮುಂದುವರಿಯಿತು.

ವಿಶೇಷ ಆಯುಕ್ತ ರಂದೀಪ್‌ ಮಾತನಾಡಿ, ‘ನಾವು ಟೆಂಡರು ಕರೆಯುವುದಾಗಲಿ ಅಥವಾ ಇಂಥವರಿಗೇ ಗುತ್ತಿಗೆ ನೀಡಲಿಕ್ಕಾಗಲಿ ಅವಕಾಶ ಇಲ್ಲ. ಆದರೆ, ಸ್ಥಳೀಯ ಮಟ್ಟದಲ್ಲಿ ವಾರ್ಡ್‌ ಸಮಿತಿ, ಅಧಿಕಾರಿಗಳು ಸೇರಿ ಅಲ್ಲಿನ ಕಸ ಎತ್ತುವಿಕೆ ಸಂಬಂಧಿಸಿ ತಕ್ಷಣದ ಕ್ರಮ ಕೈಗೊಳ್ಳಬಹುದು. ಇಲ್ಲಿ ಲೋಪವಾಗಿದ್ದರೆ ಪರಿಶೀಲಿಸುತ್ತೇವೆ’ ಎಂದರು.

ಸಭೆಗೂ ಮುನ್ನ ಬಿಬಿಎಂಪಿ ರೋಶಿನಿ ಯೋಜನೆ ಕುರಿತು ಮೈಕ್ರೋಸಾಫ್ಟ್‌ ಸಂಸ್ಥೆಯ ಪ್ರತಿನಿಧಿಗಳು ವಿಡಿಯೊ ಪ್ರದರ್ಶಿಸಿದರು. ‘ಈ ಯೋಜನೆ ಅನುಷ್ಠಾನಗೊಳಿಸಿದ್ದಕ್ಕೆ ಮೈಕ್ರೋಸಾಫ್ಟ್‌ ಸಂಸ್ಥೆಗೆ ಅಮೆರಿಕದಲ್ಲಿ ಪ್ರಶಸ್ತಿ ಸಿಕ್ಕಿದೆ. ವಿಶ್ವದ ಯಾವುದೇ ದೇಶದಲ್ಲೂ ಇಂಥ ಯೋಜನೆ ಜಾರಿಯಾಗಿಲ್ಲ’ ಎಂದು ಹೇಳಿದರು.

**

ರೋಶಿನಿ ಯೋಜನೆಯ ವಿಶೇಷ

‘ಬಿಬಿಎಂಪಿಯ ಪ್ರತಿ ಶಾಲೆಯಲ್ಲೂ ಅತ್ಯಾಧುನಿಕ ಟಿವಿ ಪರದೆ, ಸ್ಮಾರ್ಟ್‌ ತರಗತಿಗಳನ್ನು ಅಳವಡಿಸಲಾಗುವುದು. ಪಠ್ಯ ವಿಷಯಗಳನ್ನೊಳಗೊಂಡ ಡೋಂಗಲ್‌ನ್ನು ಪ್ರತಿ ವಿದ್ಯಾರ್ಥಿಗೆ ನೀಡಲಾಗುತ್ತದೆ. ಅದನ್ನು ಮನೆಯಲ್ಲಿ ಸ್ಮಾರ್ಟ್‌ಫೋನ್‌ಗೆ ಜೋಡಿಸಿ ಪಠ್ಯ ವಿಷಯಗಳನ್ನು ಕಲಿಯಬಹುದು’ ಎಂದು ಯೋಜನೆಯ ಬಗ್ಗೆ ವಿವರ ನೀಡಿದ ಲತಾ ಅವರು ಹೇಳಿದರು.

‘ಈ ಡೋಂಗಲ್‌ಗೆ ಇಂಟರ್‌ನೆಟ್‌ ಸಂಪರ್ಕ ಇರುವುದಿಲ್ಲ. ಹಾಗಾಗಿ ದುರುಪಯೋಗವಾಗುವ ಸಾಧ್ಯತೆ ಇಲ್ಲ. ಮುಂದಿನ ಹಂತದಲ್ಲಿ ಎಲ್ಲ ಮಕ್ಕಳಿಗೂ ಟ್ಯಾಬ್‌ ನೀಡಲಾಗುತ್ತದೆ’ ಎಂದರು.

**

ಬಿಬಿಎಂಪಿಗೆ ಹೃದಯವಿಲ್ಲ...

ರೋಶಿನಿ ಯೋಜನೆಯೇನೋ ಸ್ವಾಗತಾರ್ಹ. ಆದರೆ, ಬಿಬಿಎಂಪಿಗೆ ಹೃದಯವಿಲ್ಲ. ಪಾಲಿಕೆಯ ಶಾಲೆಗಳ ಶಿಕ್ಷಕರ ಸಂಬಳ ಪೌರ ಕಾರ್ಮಿಕರಿಗಿಂತಲೂ ಕಡಿಮೆ ಇದೆ. ಮೊದಲು ಅದನ್ನು ಹೆಚ್ಚಳ ಮಾಡಿ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.

ಹೀಗೆ ಒತ್ತಾಯಗಳು ಹೆಚ್ಚುತ್ತಲೇ ಇದ್ದಾಗ ಆಡಳಿತ ಪಕ್ಷದ ಸದಸ್ಯರು, ‘ಆ ವಿಷಯವನ್ನು ಮತ್ತೆ ಮಾತನಾಡೋಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT