ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕಿತ ಕಂಪನಿಯಿಂದ ರಾಹುಲ್‌ ಜಾಲತಾಣ ನಿರ್ವಹಣೆ: ಬಿಜೆಪಿ

ಮಾಹಿತಿ ಕಳವು: ಬಿರುಸಿನ ಆರೋಪ ಪ್ರತ್ಯಾರೋಪ: ಹಗರಣಗಳಿಂದ ಗಮನ ಬೇರೆಡೆಗೆ ತಿರುಗಿಸಲು ಸರ್ಕಾರದ ಯತ್ನ: ಕಾಂಗ್ರೆಸ್‌
Last Updated 22 ಮಾರ್ಚ್ 2018, 21:06 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್‌ ಪರವಾಗಿ ಫೇಸ್‌ಬುಕ್‌ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಕಳಂಕ ಹೊತ್ತಿರುವ ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಸೇವೆಯನ್ನು ಪಡೆದುಕೊಂಡಿರುವುದಕ್ಕೆ ಸಂಬಂಧಿಸಿ ಕಾಂಗ್ರೆಸ್‌ ವಿರುದ್ಧದ ವಾಗ್ದಾಳಿಯನ್ನು ಬಿಜೆಪಿ ತೀವ್ರಗೊಳಿಸಿದೆ. ಕಾಂಗ್ರೆಸ್‌ ಪಕ್ಷವು ಬಿಜೆಪಿ ಆರೋಪಕ್ಕೆ ಬಿರುಸಿನ ತಿರುಗೇಟು ನೀಡಿದೆ.

ಗುಜರಾತ್‌ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಸಂಸ್ಥೆಯ ಸೇವೆಯನ್ನು ಕಾಂಗ್ರೆಸ್‌ ಬಳಸಿಕೊಂಡಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜಾಲತಾಣಗಳ ನಿರ್ವಹಣೆಯನ್ನು ಇದೇ ಕಂಪನಿ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಈ ಕಂಪನಿಯ ಜತೆಗೆ ತಾನು ಯಾವುದೇ ಸಂಬಂಧ ಹೊಂದಿಲ್ಲ ಎಂದು ಬಿಜೆಪಿ ದೃಢವಾಗಿ ಹೇಳಿದೆ.

ಈ ಕಂಪನಿಯ ಸೇವೆಯನ್ನು ಕಾಂಗ್ರೆಸ್‌ ಬಳಸಿಕೊಂಡಿದೆ ಎಂಬ ವರದಿಗಳನ್ನು ಐದು ತಿಂಗಳಲ್ಲಿ ಆ ಪಕ್ಷ ಒಮ್ಮೆಯೂ ನಿರಾಕರಿಸಿಲ್ಲ. ಆದರೆ ಈಗ ಒಮ್ಮಿಂದೊಮ್ಮೆಲೆ ನಿರಾಕರಿಸುತ್ತಿರುವುದು ನೋಡಿದರೆ ಏನೋ ಅಡಗಿಸಿಡುತ್ತಿದೆ ಎಂಬುದು ಸ್ಪಷ್ಟ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

‘ಕೇಂಬ್ರಿಜ್‌ ಅನಲಿಟಿಕಾ ಕಂಪನಿ 2013ರಲ್ಲಿ ಆರಂಭವಾಗಿದೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಪಕ್ಷಕ್ಕೆ ಈ ಕಂಪನಿಯ ಜತೆ ಯಾವುದೇ ನಂಟು ಇಲ್ಲ’ ಎಂದು ಪ್ರಸಾದ್‌ ಅವರು ತಿಳಿಸಿದ್ದಾರೆ. ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಅವರ ಮಗ ಅಮ್ರೀಶ್‌ ತ್ಯಾಗಿ ಅವರ ನೇತೃತ್ವದ ಕಂಪನಿಯ ಸೇವೆಯನ್ನು 2010ರ ಬಿಹಾರ ಚುನಾವಣೆ ಮತ್ತು 2013ರ ದೆಹಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಯು ಪಡೆದುಕೊಂಡಿತ್ತು ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

**

‘ಬಿಜೆಪಿಯಿಂದಲೇ ಕೇಂಬ್ರಿಜ್‌ ಅನಲಿಟಿಕಾ ಸೇವೆ ಬಳಕೆ’

ಭಾರತದ 39 ಕಾರ್ಮಿಕರು ಇರಾಕ್‌ನಲ್ಲಿ ಹತ್ಯೆಯಾದ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಮಾಹಿತಿ ಕಳ್ಳತನದ ಹೊಸ ಕತೆಯನ್ನು ಬಿಜೆಪಿ ಸೃಷ್ಟಿಸಿದೆ ಎಂದು ಕಾಂಗ್ರೆಸ್‌ ಆಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಇಂತಹ ಕತೆ ಸೃಷ್ಟಿಸುವ ಮೂಲಕ ಮಾಧ್ಯಮವನ್ನು ಸರ್ಕಾರ ಬಲೆಗೆ ಕೆಡವಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಬಹುಕೋಟಿ ಹಗರಣ, ಪರಿಶಿಷ್ಟ ಜಾತಿ, ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿರುವುದು, ಇರಾಕ್‌ನಲ್ಲಿ ಸತ್ತವರ ಕುಟುಂಬದ ಸದಸ್ಯರು ಎತ್ತುತ್ತಿರುವ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರವು ಹೊಸ ಸುದ್ದಿ ಸೃಷ್ಟಿಸಿದೆ ಎಂದು ಟೀಕಿಸಿದ್ದಾರೆ.

ಬಿಹಾರ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್‌ ಮತ್ತು ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಸೇವೆಯನ್ನು ಬಿಜೆಪಿ ಬಳಸಿಕೊಂಡಿದೆ ಎಂಬ ಆರೋಪವನ್ನು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಪುನರುಚ್ಚರಿಸಿದ್ದಾರೆ.

ಮೋಸುಲ್‌ನಲ್ಲಿ ಭಾರತೀಯರ ಸಾವಿಗೆ ಸಂಬಂಧಿಸಿಯೂ ಅವರು ಸರ್ಕಾರವ ವಿರುದ್ಧ ಹರಿಹಾಯ್ದಿದ್ದಾರೆ. ಮೋಸುಲ್‌ನಿಂದ ಐಎಸ್‌ ಉಗ್ರರು ಅಪಹರಿಸಿದ 39 ಭಾರತೀಯರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂಬುದನ್ನು ಸೂಚಿಸುವ ಪುರಾವೆಗಳು ಸಿಕ್ಕರೂ ಅವರ ಕುಟುಂಬದ ಸದಸ್ಯರಿಗೆ ಸರ್ಕಾರ ಸುಳ್ಳು ಹೇಳುತ್ತಲೇ ಬಂತು ಎಂದು ಸುರ್ಜೇವಾಲಾ ಹೇಳಿದ್ದಾರೆ.

‘ಕುಟುಂಬದ ಸದಸ್ಯರು ಕೇಳುವ ಪ್ರಶ್ನೆಗಳು ಹೀಗಿವೆ: ಮೋದಿ ಸರ್ಕಾರ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ನಾಲ್ಕು ವರ್ಷಗಳಿಂದ ತಪ್ಪುದಾರಿಗೆಳೆದದ್ದು ಯಾಕೆ? ಸಾವು ಸಂಭವಿಸಿದ್ದು ಯಾವಾಗ ಎಂಬುದನ್ನು ಯಾಕೆ ಬಹಿರಂಗಪಡಿಸುತ್ತಿಲ್ಲ? ಅಪಹೃತ 39 ಮಂದಿ ಜೀವಂತ ಇದ್ದರು ಎಂಬುದಕ್ಕೆ ಸರ್ಕಾರದ ಬಳಿ ಇದ್ದ ಸಾಕ್ಷ್ಯಗಳು ಏನು? ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಯಾಕೆ ಏನನ್ನೂ ಹೇಳುತ್ತಿಲ್ಲ’ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಅರವಿಂದ ಗುಪ್ತಾ ಅವರು ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಸೇವೆಯನ್ನು ಹಿಂದೆ ಹೊಗಳಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ‘ಸುಳ್ಳಿನ ಇಲಾಖೆಯ ಸಚಿವ’ ಎಂದು ಕಾಂಗ್ರೆಸ್‌ ಬಣ್ಣಿಸಿದೆ. ಹಿಟ್ಲರ್‌ನ ಸರ್ಕಾರದಲ್ಲಿ ಪ್ರಚಾರ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಕುಖ್ಯಾತ ಗೊಬೆಲ್ಸ್‌ಗೆ ಪ್ರಸಾದ್‌ ಅವರನ್ನು ಹೋಲಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಸಾದ್‌ ಅವರು, ಚಿದಂಬರಂ ಅವರಂತಹ ಕಾಂಗ್ರೆಸ್‌ನ ಹಿರಿಯ ಮುಖಂಡರ ಮೇಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ತಾವು ಮಾತನಾಡುತ್ತಿರುವುದರಿಂದ ಕಾಂಗ್ರೆಸ್‌ಗೆ ನೋವಾಗಿದೆ ಎಂದಿದ್ದಾರೆ.

**

ಮಾಹಿತಿ ಕಳವು ತಡೆಗೆ ಕೃತಕ ಬುದ್ಧಿಮತ್ತೆ: ಫೇಸ್‌ಬುಕ್‌

ವಾಷಿಂಗ್ಟನ್‌ (ಪಿಟಿಐ): ಫೇಸ್‌ಬುಕ್‌ ಖಾತೆಗಳ ಮೂಲಕ ಮಾಹಿತಿ ಕಳ್ಳತನ ಮಾಡಿ ಅದನ್ನು ಚುನಾವಣೆ ಮೇಲೆ ಪ್ರಭಾವ ಬೀರುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಫೇಸ್‌ಬುಕ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ.

ಸುದ್ದಿಗಳನ್ನು ತಿರುಚುವ ಮತ್ತು ಚುನಾವಣೆಗಳ ಮೇಲೆ ಪ್ರಭಾವ ಬೀರುವ ಉದ್ದೇಶದ ಫೇಸ್‌ಬುಕ್‌ ಖಾತೆಗಳನ್ನು ಗುರುತಿಸುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 2017ರಲ್ಲಿ ನಡೆದ ಫ್ರಾನ್ಸ್‌ ಚುನಾವಣೆಗಳಲ್ಲಿ ಇದನ್ನು ಮೊದಲ ಬಾರಿಗೆ ಬಳಸಲಾಗಿತ್ತು ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

‘ಅಮೆರಿಕದಲ್ಲಿ 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಬಳಿಕ ಹೊಸ ಎಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಚುನಾವಣೆಯಲ್ಲಿ ಪ್ರಭಾವ ಬೀರುವ ಉದ್ದೇಶದಿಂದಲೇ ತೆರೆಯಲಾದ 30 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ರಷ್ಯಾ ಜತೆಗೆ ನಂಟು ಹೊಂದಿದ್ದ ಖಾತೆಗಳು. ಅಮೆರಿಕ ಚುನಾವಣೆಯಲ್ಲಿ ಅನುಸರಿಸಿದ್ದ ತಂತ್ರಗಳನ್ನೇ ಪುನರಾವರ್ತಿಸಲು ಇವರ ಬಯಸಿದ್ದರು ಎಂಬ ಅನುಮಾನ ನಮಗೆ ಇತ್ತು’ ಎಂಬ ಮಾಹಿತಿಯನ್ನು ಜುಕರ್‌ಬರ್ಗ್‌ ನೀಡಿದ್ದಾರೆ.

ಚುನಾವಣೆಗಳ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ ಬಳಕೆಯಾಗುತ್ತಿದೆ ಎಂಬ ಆರೋಪ ವ್ಯಕ್ತವಾದ ಬಳಿಕ ಮೊದಲ ಬಾರಿಗೆ ಜುಕರ್‌ಬರ್ಗ್‌ ಈ ಬಗ್ಗೆ ಮಾತನಾಡಿದ್ದಾರೆ.

‘ನಮ್ಮ ತಂತ್ರಜ್ಞಾನ ಈಗ ಇನ್ನಷ್ಟು ಉತ್ತಮಗೊಂಡಿದೆ. ಆದರೆ, ರಷ್ಯಾ ಮತ್ತು ಇತರ ಸರ್ಕಾರಗಳು ತಾವೇನು ಮಾಡಬೇಕು ಎಂದು ಬಯಸುತ್ತವೆಯೋ ಅದಕ್ಕೆ ಬೇಕಾದ ವಿಚಾರಗಳಲ್ಲಿ ಹೆಚ್ಚು ಆಧುನಿಕಗೊಂಡಿವೆ. ಹಾಗಾಗಿ ನಾವು ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸುತ್ತಲೇ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿ ಕಳವಿಗೆ ಅವಕಾಶ ನೀಡಿ ಭಾರತದ ಚುನಾವಣೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜುಕರ್‌ಬರ್ಗ್‌ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಭಾರತದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಬುಧವಾರ ಎಚ್ಚರಿಕೆ ನೀಡಿದ್ದರು.

**

ಸುಷ್ಮಾ ವಿರುದ್ಧ ಹಕ್ಕುಚ್ಯುತಿಗೆ ನಿರ್ಧಾರ

ಮೋಸುಲ್‌ನಲ್ಲಿ 39 ಭಾರತೀಯರ ಸಾವಿನ ಪ್ರಕರಣದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವಿರುದ್ಧ ಹಕ್ಕುಚ್ಯುತಿ ನಿಲುವಳಿ ಮಂಡಿಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ.

ದಾಖಲೆಗಳು ಮತ್ತು ಮಾಹಿತಿಯನ್ನು ಕ್ರೋಡೀಕರಿಸಿದ ಬಳಿಕ ಮೇಲ್ಮನೆಯಲ್ಲಿ ನಿಲುವಳಿ ಮಂಡಿಸಲಾಗುವುದು ಎಂದು ಕಾಂಗ್ರೆಸ್‌ ಸಂಸದರಾದ ಅಂಬಿಕಾ ಸೋನಿ, ಪ್ರತಾಪ್‌ ಬಾಜ್ವಾ ಮತ್ತು ಸಂಶೇರ್‌ ಸಿಂಗ್‌ ಡಲ್ಲೊ ಹೇಳಿದ್ದಾರೆ.

ಸುಷ್ಮಾ ಅವರು ಸದನಕ್ಕೆ ನಾಲ್ಕು ವರ್ಷ ತಪ್ಪು ಮಾಹಿತಿ ನೀಡಿದ್ದಾರೆ. ಅಪಹೃತರಾದ 39 ಭಾರತೀಯರು ಜೀವಂತವಾಗಿದ್ದಾರೆ ಎಂದು ಹೇಳಲು ಕಾರಣವಾದ ಅಂಶಗಳು ಏನು ಎಂಬುದನ್ನು ಅವರು ಬಹಿರಂಗ ಮಾಡಬೇಕು ಎಂದು ಈ ಸಂಸದರು ಆಗ್ರಹಿಸಿದ್ದಾರೆ.

**

ಗುಜರಾತ್‌ ಚುನಾವಣೆಯಲ್ಲಿ ಕೇಂಬ್ರಿಜ್‌ ಅನಲಿಟಿಕಾದ ಸೇವೆಯನ್ನು ಕಾಂಗ್ರೆಸ್‌ ಪಡೆದುಕೊಂಡಿದೆ ಎಂಬುದನ್ನು ಸಂಪೂರ್ಣ ಜವಾಬ್ದಾರಿ ಹೊತ್ತೇ ಹೇಳುತ್ತಿದ್ದೇನೆ. ರಾಹುಲ್‌ ಗಾಂಧಿಯ ಸಾಮಾಜಿಕ ಜಾಲತಾಣ ನಿರ್ವಹಣೆಯನ್ನೂ ಈ ಕಂಪನಿಯೇ ಮಾಡುತ್ತಿದೆ.

–ರವಿಶಂಕರ್‌ ಪ್ರಸಾದ್‌, ಕೇಂದ್ರ ಕಾನೂನು ಸಚಿವ

*

ಬಳಕೆದಾರರ ಮಾಹಿತಿಯ ರಕ್ಷಣೆ ಫೇಸ್‌ಬುಕ್‌ನ ಹೊಣೆ. ಅದು ಸಾಧ್ಯವಾಗದಿದ್ದರೆ ಅವರಿಗೆ ಸೇವೆ ನೀಡುವ ಅರ್ಹತೆ ನಮಗೆ ಇಲ್ಲ

–ಮಾರ್ಕ್‌ ಜುಕರ್‌ಬರ್ಗ್‌, ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ

*

ರಾಹುಲ್‌ ಟ್ವೀಟ್‌
ಸಮಸ್ಯೆ:
39 ಭಾರತೀಯರು ಸತ್ತರು; ಸುಳ್ಳು ಹೇಳಿದ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿತು. ಪರಿಹಾರ: ಕಾಂಗ್ರೆಸ್‌ ಮತ್ತು ಮಾಹಿತಿ ಕಳವಿನ ಕತೆ ಸೃಷ್ಟಿ. ಫಲಿತಾಂಶ: ಸರ್ಕಾರದ ಗಾಳವನ್ನು ಮಾಧ್ಯಮ ಕಚ್ಚಿಕೊಂಡಿತು; 39 ಭಾರತೀಯರ ವಿಚಾರ ಮಸುಕಾಯಿತು. ಸಮಸ್ಯೆ ಪರಿಹಾರವಾಯಿತು

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ

*

ಹಿಟ್ಲರ್‌ಗೆ ಗೊಬೆಲ್ಸ್‌ ಎಂಬ ಸಹಾಯಕನಿದ್ದ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ರವಿಶಂಕರ್‌ ಪ್ರಸಾದ್‌ ಇದ್ದಾರೆ. ಅತಿ ದೊಡ್ಡ ಮಾಹಿತಿ ಕಳ್ಳರು ಈಗ ಅತಿ ಹೆಚ್ಚು ಸದ್ದು ಮಾಡುತ್ತಿದ್ದಾರೆ

–ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ಮುಖ್ಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT