ಗೌರಿ ಹತ್ಯೆ: ಸುಜಿತ್ ಅಡಗಿದ್ದು ಸುಧನ್ವನ ಸ್ನೇಹಿತನ ಮನೆಯಲ್ಲಿ!

7
ಮಹಾರಾಷ್ಟ್ರ ಎಟಿಎಸ್ ಜಪ್ತಿ ಮಾಡಿದ್ದ ಪಿಸ್ತೂಲ್‌ಗಳು ಗುಜರಾತ್ ಪ್ರಯೋಗಾಲಯಕ್ಕೆ

ಗೌರಿ ಹತ್ಯೆ: ಸುಜಿತ್ ಅಡಗಿದ್ದು ಸುಧನ್ವನ ಸ್ನೇಹಿತನ ಮನೆಯಲ್ಲಿ!

Published:
Updated:

ಬೆಂಗಳೂರು: ಮಹಾರಾಷ್ಟ್ರ ಎಟಿಎಸ್ ಬಲೆಗೆ ಬಿದ್ದಿರುವ ಮೂವರು ಹಿಂದೂ ಸಂಘಟನೆಗಳ ಮುಖಂಡರ ಪೈಕಿ ಸುಧನ್ವ ಗೊಂಧಾಳೇಕರ್‌ನು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಸುಜಿತ್ ಅಲಿಯಾಸ್ ಪ್ರವೀಣ್‌ಗೆ ತನ್ನ ಸ್ನೇಹಿತನ ಮನೆಯಲ್ಲೇ ಆಶ್ರಯ ಕಲ್ಪಿಸಿಕೊಟ್ಟಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ.

‘ಗೌರಿ ಹತ್ಯೆ ನಡೆದ (2017 ಸೆ.5) ಬಳಿಕ ಸುಜಿತ್ ಸತಾರದಲ್ಲಿ ತಲೆಮರೆಸಿಕೊಂಡಿದ್ದ. ಆತ ಉಳಿದುಕೊಂಡಿದ್ದ ಮನೆ, ಸುಧನ್ವನ ಸ್ನೇಹಿತನದಾಗಿತ್ತು. ಈಗಾಗಲೇ ಆ ಸ್ನೇಹಿತನನ್ನು ಭೇಟಿಯಾಗಿ ಹೇಳಿಕೆ ದಾಖಲಿಸಿಕೊಂಡಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2017ರ ಸೆಪ್ಟಂಬರ್‌ನಲ್ಲಿ ಕರೆ ಮಾಡಿದ್ದ ಸುಧನ್ವ, ‘ನನ್ನ ಗೆಳೆಯ ಮಂಜುನಾಥ್ ಎಂಬಾತ ಕೆಲಸದ ನಿಮಿತ್ತ ಸತಾರಾಕ್ಕೆ ಬಂದಿದ್ದಾನೆ. ಆತ ನಮ್ಮ ಸಂಸ್ಥೆಗೆ ತುಂಬಾ ಬೇಕಾದವನು. ಕೆಲ ದಿನಗಳವರೆಗೆ ನಿನ್ನ ಮನೆಯಲ್ಲೇ ಉಳಿಯುತ್ತಾನೆ. ಸೂಕ್ತ ವ್ಯವಸ್ಥೆ ಮಾಡು’ ಎಂದಿದ್ದ. ಸ್ನೇಹಿತನ ಆಪ್ತನೆಂಬ ಕಾರಣಕ್ಕೆ ಸೆಪ್ಟೆಂಬರ್ ತಿಂಗಳಲ್ಲಿ 15 ದಿನ ಆಶ್ರಯ ಕೊಟ್ಟಿದ್ದೆ. ಆತನ ಅಸಲಿ ಹೆಸರು ಪ್ರವೀಣ್ ಎಂದು ಗೊತ್ತಾಗಿದ್ದೇ ಇತ್ತೀಚೆಗೆ’ ಎಂದು ಆತ ಹೇಳಿಕೆ ಕೊಟ್ಟಿದ್ದಾಗಿ ಮೂಲಗಳು ತಿಳಿಸಿವೆ.

ಸುಧನ್ವ ಬಳಿ ಪಿಸ್ತೂಲ್?: ‘ಗೌರಿ ಅವರನ್ನು ಗುಂಡಿಕ್ಕಿ ಕೊಂದ ಪರಶುರಾಮ ವಾಘ್ಮೋರೆ, ನಂತರ ಪಿಸ್ತೂಲನ್ನು ಕುಣಿಗಲ್‌ನ ಸುರೇಶ್‌ಗೆ ಕೊಟ್ಟಿದ್ದ. ಅದನ್ನು ಹತ್ತು ದಿನ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ಸುರೇಶ್, ಕಾಳೆಯ ಸೂಚನೆಯಂತೆ ಬೇರೊಬ್ಬ ವ್ಯಕ್ತಿಗೆ ನೀಡಿದ್ದ. ಆ ವ್ಯಕ್ತಿ ಸುಧನ್ವನೇ ಇರಬಹುದು ಎಂಬ ಅನುಮಾನ ದಟ್ಟವಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಲು ಸುರೇಶ್‌ನನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಮೂಲಗಳು ಹೇಳಿವೆ.

‘ಎಟಿಎಸ್ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಜಪ್ತಿ ಆಗಿರುವ 11 ನಾಡಪಿಸ್ತೂಲ್‌ಗಳಲ್ಲಿ ಗೌರಿ ಹಾಗೂ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಗೆ ಬಳಕೆಯಾದ ಪಿಸ್ತೂಲ್ ಸಹ ಇರಬಹುದು. ಹೀಗಾಗಿಯೇ ಎರಡೂ ಪ್ರಕರಣಗಳ ಎಫ್‌ಎಸ್‌ಎಲ್ ವರದಿಗಳನ್ನು ಎಟಿಎಸ್‌ಗೆ ಕಳುಹಿಸಿದ್ದೇವೆ. ಖಚಿತತೆಗಾಗಿ ಪಿಸ್ತೂಲ್ ಹಾಗೂ ವರದಿಗಳನ್ನು ಗುಜರಾತ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಎಟಿಎಸ್ ಹೇಳಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕಾಳೆ ಹಾಗೂ ಪ್ರವೀಣ್ ಬಳಿ ಸಿಕ್ಕ ಡೈರಿಗಳಲ್ಲಿ ಕೋಡ್‌ವರ್ಡ್‌ನಲ್ಲಿ ಸುಧನ್ವನ ಹೆಸರಿತ್ತು. ಈ ಸಂಗತಿಯನ್ನು ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಎಸ್‌ಐಟಿ ಮತ್ತು ಸಿಬಿಐ ಜತೆ ಹಂಚಿಕೊಂಡಿದ್ದೆವು. ಸುಧನ್ವನ ಹೆಸರು ಹೊರಬರುತ್ತಿದ್ದಂತೆಯೇ ಎಟಿಎಸ್ ಆತನ ಮನೆ ಮೇಲೆ ದಾಳಿ ನಡೆಸಿತ್ತು’ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !