ಶನಿವಾರ, ಆಗಸ್ಟ್ 15, 2020
26 °C
* ಮರಾಠಿ, ಇಂಗ್ಲೀಷ್ ಭಾಷೆಯಲ್ಲಿತ್ತು ವಿವರ * ನರೇಂದ್ರ ನಾಯಕ್‌ಗೂ ವಾಘ್ಮೋರೆಯೇ ಶೂಟರ್ * ಕೈಬರಹ ಖಚಿತಪಡಿಸಿದ ಎಫ್‌ಎಸ್‌ಎಲ್

ಏಕಕಾಲದಲ್ಲೇ ನಾಲ್ವರನ್ನು ಕೊಲ್ಲುವವನಿದ್ದ ಕಾಳೆ!

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

01. ನರೇಂದ್ರ ನಾಯಕ್, 02. ವೀರಭದ್ರ ಚನ್ನಮಲ್ಲ ಸ್ವಾಮೀಜಿ, 03. ಗಿರೀಶ ಕಾರ್ನಾಡ, 04. ಕೆ.ಎಸ್.ಭಗವಾನ್

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಳಿಕ ಮತ್ತೊಂದು ದೊಡ್ಡಮಟ್ಟದ ಸಂಚು ರೂಪಿಸಿದ್ದ ಅಮೋಲ್ ಕಾಳೆ ನೇತೃತ್ವದ ತಂಡ, ‘ಏಕೀ ದಿವಸ್ ಚಾರ್ ಅಧರ್ಮಿಯೋಂಕಾ ವಿನಾಶ್’ ಹೆಸರಿನಲ್ಲಿ ಒಂದೇ ದಿನ ನಾಲ್ವರು ವಿಚಾರವಾದಿಗಳನ್ನು ಕೊಲ್ಲಲು ನಿರ್ಧರಿಸಿತ್ತು. ಆ ನಾಲ್ವರಿಗೆ ಗುಂಡು ಹೊಡೆಯಲು ಕಾಳೆ ಶೂಟರ್‌ಗಳನ್ನೂ ಆಯ್ಕೆ ಮಾಡಿದ್ದ!

ಆತನ ಡೈರಿಯೊಳಗೆ ಪತ್ತೆಯಾದ ಮೂರು ಚೀಟಿಗಳಲ್ಲಿ ಈ ವಿವರವಿದ್ದು, ಅದನ್ನು ನೋಡಿ ತನಿಖಾಧಿಕಾರಿಗಳು ಬೆಚ್ಚಿ ಬಿದ್ದಿದ್ದರು. ‘ಚೀಟಿಯಲ್ಲಿ ದಿನಾಂಕ ಬರೆದಿರಲಿಲ್ಲ. ಹೀಗಾಗಿ, ಯಾವ ದಿನ ಏನಾಗುತ್ತದೋ ಎಂದು ತಳಮಳ ಶುರುವಾಗಿತ್ತು. ಕಾಳೆ ನಮ್ಮ ವಶದಲ್ಲೇ ಇದ್ದರೂ, ಆತನ ಸಹಚರರು ಕೃತ್ಯ ಎಸಗಿಬಿಡಬಹುದು ಎನ್ನುವ ಆತಂಕದಲ್ಲೇ ತನಿಖೆ ಮುಂದುವರಿಸಿದ್ದೆವು. ಮುಂಜಾಗ್ರತಾ ಕ್ರಮವಾಗಿ ಆ ನಾಲ್ವರ ಮನೆ ಸಮೀಪ ಪೊಲೀಸ್ ಭದ್ರತೆ ಹೆಚ್ಚಿಸಿದ್ದೆವು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಹಿತಿ ಗಿರೀಶ ಕಾರ್ನಾಡ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕೆ.ಎಸ್. ಭಗವಾನ್ ಮತ್ತು ಮಂಗಳೂರಿನ ನರೇಂದ್ರ ನಾಯಕ್‌ ಅವರನ್ನು ಏಕಕಾಲದಲ್ಲೇ ಕೊಲ್ಲುವುದು ಕಾಳೆಯ ಸಂಚಾಗಿತ್ತು. ಅವರ ಹೆಸರುಗಳ ಮುಂದೆ ಶೂಟರ್‌ಗಳ ಹೆಸರುಗಳನ್ನೂ ಕೋಡ್‌ವರ್ಡ್‌ನಲ್ಲಿ ಬರೆದಿಟ್ಟಿದ್ದ. ನಾಲ್ವರ ಚಲನವಲನಗಳ ಮೇಲೆ ನಿಗಾ ಇಡಲು ಹುಡುಗರನ್ನು ಬಿಟ್ಟಿದ್ದ ಆತ, ಕೃತ್ಯಕ್ಕಾಗಿಯೇ ಮದ್ದೂರಿನ ಕೆ.ಟಿ. ನವೀನ್‌ಕುಮಾರ್ ಹಾಗೂ ಮಹಾರಾಷ್ಟ್ರದ ಸ್ನೇಹಿತ ಸುಧನ್ವ ಗೊಂಧಾಳೇಕರ್‌ ಬಳಿ ಪಿಸ್ತೂಲ್‌ಗಳನ್ನು ಕೇಳಿದ್ದ’ ಎಂದು ಮಾಹಿತಿ ನೀಡಿದರು.

ವಾಘ್ಮೋರೆಯೇ ಶೂಟರ್: ‘ಗೌರಿ ಲಂಕೇಶ್‌ಗೆ ಗುಂಡು ಹೊಡೆದಿದ್ದು ‘ಬಿಲ್ಡರ್’ ಎಂದು ಅಮಿತ್ ದೆಗ್ವೇಕರ್ ಹೇಳಿಕೆ ಕೊಟ್ಟಿದ್ದ.

ಆ ನಂತರ ಡೈರಿ ಜಾಲಾಡಿದ್ದ ಪೊಲೀಸರು, ‘ಬಿಲ್ಡರ್’ ಕೋಡ್‌ವರ್ಡ್‌ನ ಮುಂದೆ ಬರೆಯಲಾಗಿದ್ದ ಮೊಬೈಲ್ ಸಂಖ್ಯೆಯ ಸುಳಿವು ಆಧರಿಸಿ ವಿಜಯಪುರದ ಪರಶುರಾಮ ವಾಘ್ಮೋರೆ ಯನ್ನು ಬಂಧಿಸಿದ್ದರು. ಆದರೆ, ಚೀಟಿಯಲ್ಲಿ ನರೇಂದ್ರ ನಾಯಕ್‌ ಹೆಸರಿನ ಮುಂದೆಯೂ ‘ಬಿಲ್ಡರ್’ ಕೋರ್ಡ್‌ವರ್ಡ್ ಇತ್ತು. ಅಂದರೆ, ಅವರನ್ನೂ ವಾಘ್ಮೋರೆಯೇ ಗುಂಡಿಕ್ಕಿ ಕೊಲ್ಲುತ್ತಿದ್ದ ಎಂಬುದು ಸ್ಪಷ್ಟವಾಯಿತು’ ಎಂದು ಅಧಿಕಾರಿಗಳು ಹೇಳಿದರು. 

‘ಇನ್ನು ಭಗವಾನ್‌ ಅವರನ್ನು ಕೊಲ್ಲುವುದಕ್ಕೆ ಶ್ರೀರಂಗಪಟ್ಟಣದ ಅನಿಲ್‌ ಆಯ್ಕೆಯಾಗಿದ್ದ. ಅದಕ್ಕಾಗಿ ಆತನಿಗೆ ಏರ್‌ಗನ್‌ ಕೊಟ್ಟು ಶಸ್ತ್ರಾಸ್ತ್ರ ತರಬೇತಿಯನ್ನೂ ಕೊಡಿಸುತ್ತಿದ್ದ. ಆಗಾಗ್ಗೆ ನವೀನ್ ಆತನನ್ನು ಭೇಟಿಯಾಗಿ, ‘ಶಸ್ತ್ರಾಸ್ತ್ರ ತರಬೇತಿ ಹೇಗೆ ನಡೆಯುತ್ತಿದೆ. ಕುಳಿತುಕೊಂಡು, ಮಲಗಿಕೊಂಡು ಗುಂಡು ಹೊಡೆಯುವುದನ್ನೂ ಕಲಿತುಕೋ’ ಎಂದು ಸೂಚಿಸುತ್ತಿದ್ದ. ತನ್ನನ್ನು ಶೂಟರ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಅನಿಲ್‌ಗೆ ಗೊತ್ತಿರಲಿಲ್ಲ. ಹೀಗಾಗಿ, ಆತನನ್ನು ಬಂಧಿಸದೆ, ಪ್ರಮುಖ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿದೆ. ನ್ಯಾಯಾಧೀಶರ ಮುಂದೆ ಅನಿಲ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ’ ಎಂದರು

‘ಕಾರ್ನಾಡ ಅವರ ಹೆಸರನ್ನು ‘ಕಾಕಾ’ ಹಾಗೂ ನಿಡುಮಾಮಿಡಿ ಸ್ವಾಮೀಜಿ ಹೆಸರನ್ನು ‘ಸ್ವಾಮಿ’ ಹೆಸರಿನ ಕೋಡ್‌ ವರ್ಡ್‌ಗಳಲ್ಲಿ ಬರೆಯಲಾಗಿತ್ತು. ಅವರಿಗೆ ಗುಂಡು ಹೊಡೆಯಲು ಕಾಳೆ ಇಬ್ಬರು ಯುವಕರಿಗೆ (ತನಿಖಾಧಿಕಾರಿಗಳ ಕೋರಿಕೆ ಮೇರೆಗೆ ಹೆಸರು ಹಾಕಿಲ್ಲ) ಬೆಳಗಾವಿಯ ಭರತ್‌ ಜಮೀನಿನಲ್ಲೇ ತರಬೇತಿ ಕೊಡಿಸಿದ್ದ. ಅವರನ್ನೂ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ’ ಎಂದು ವಿವರಿಸಿದರು. 

ಕಾಳೆಯದ್ದೇ ಕೈಬರಹ: ‘ಚೀಟಿಗಳಲ್ಲಿ ಮರಾಠಿ ಹಾಗೂ ಇಂಗ್ಲಿಷ್‌ ಭಾಷೆ ಇತ್ತು. ಎಲ್ಲ ಆರೋಪಿಗಳ ಕೈಬರಹ ಸಂಗ್ರಹಿಸಿ, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೆವು. ಆ ಚೀಟಿಯಲ್ಲಿನ ಬರವಣಿಗೆ, ಕಾಳೆಯ ಕೈಬರಹಕ್ಕೆ ಹೋಲಿಕೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಗೌರಿ ಮನೆಗೆ ‘ಗೋಶಾಲೆ’ ಹೆಸರು

ಕಾಳೆ, ತನ್ನ ಬಳಿ ಇದ್ದ ಎರಡು ಡೈರಿಗಳ ಪೈಕಿ ಒಂದನ್ನು ಗೌರಿ ಹತ್ಯೆಯ ಕಾರ್ಯಾಚರಣೆಗೇ ಮೀಸಲಿಟ್ಟಿದ್ದ. ಅಮ್ಮ, ಗೋಶಾಲೆ, ಬಾಕ್ಸ್‌ ಟ್ರಾನ್ಸ್‌ಫರ್, ಅಭ್ಯಾಸ.. ಎಂಬ ಸಂಕೇತ ಪದಗಳು ಅದರಲ್ಲಿದ್ದವು. ಅವುಗಳ ಬಗ್ಗೆ ಕೇಳಿದಾಗ, ‘ಅಮ್ಮ ಎಂದರೆ ಗೌರಿ ಲಂಕೇಶ್, ಗೋಶಾಲೆ ಎಂದರೆ ಅವರ ಮನೆ, ಬಾಕ್ಸ್ ಟ್ರಾನ್ಸ್‌ಫರ್ ಎಂದರೆ ಪಿಸ್ತೂಲ್ ಹಸ್ತಾಂತರಿಸುವುದು ಹಾಗೂ ಅಭ್ಯಾಸ ಎಂದರೆ ಅವರ ಚಲನವಲನಗಳ ಮೇಲೆ ನಿಗಾ ಇಡುವುದು’ ಎಂಬ ವಿವರಣೆಯನ್ನು ಕಾಳೆ ಕೊಟ್ಟ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಎಲ್ಲರ ಮೊಬೈಲ್‌ನಲ್ಲೂ ಅದೊಂದೇ ಭಾಷಣ

‘2012ರಲ್ಲಿ ಗೌರಿ ಲಂಕೇಶ್ ಮಾಡಿದ್ದ ಭಾಷಣದ ತುಣುಕೊಂದು ಎಲ್ಲ ಆರೋಪಿಗಳ ಮೊಬೈಲ್‌ಗಳಲ್ಲೂ ಇತ್ತು. ಮಂಗಳೂರಿನಲ್ಲಿ ಮಾಡಿದ ಆ ಭಾಷಣವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡದಿದ್ದರೆ ಅವರು ಬದುಕುಳಿಯುತ್ತಿದ್ದರೇನೋ’ ಎನ್ನುತ್ತಾರೆ ತನಿಖಾಧಿಕಾರಿಗಳು. ಆ ಭಾಷಣದ ವಿವರ ಹೀಗಿತ್ತು... 

‘ಹಿಂದೂ ಧರ್ಮದ ಉಳಿವಿಗಾಗಿ ನಾವು ಏನೇನೋ ಮಾಡಿದ್ದೇವೆ ಎಂದು ಕೆಲ ಸಂಘಟನೆಗಳು ಹೇಳಿಕೊಳ್ಳುತ್ತವೆ. ನಾನು ಅವರಿಗೆ ಒಂದು ಮಾತು ಕೇಳುತ್ತೇನೆ. ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ್ದು ಯಾರು? ಅವರ ಗ್ರಂಥ ಯಾವುದು ಅಂತ ನಮಗೆ ಗೊತ್ತು. ಇಸ್ಲಾಂ ಧರ್ಮ ಸ್ಥಾಪಿಸಿದ್ದು ಯಾರು? ಅವರ ಪವಿತ್ರ ಗ್ರಂಥ ಯಾವುದು ಅಂತ ಗೊತ್ತು. ಸಿಖ್, ಬೌದ್ಧ, ಜೈನ ಧರ್ಮಗಳ ಬಗ್ಗೆಯೂ ಗೊತ್ತು. ಆದರೆ ಹಿಂದೂ ಧರ್ಮ ಸ್ಥಾಪಿಸಿದ್ದು ಯಾರು ಎಂಬುದನ್ನು ಯಾರಾದರೂ ಹೇಳುತ್ತೀರಾ. ಅಪ್ಪ–ಅಮ್ಮ ಇಲ್ಲದ ಧರ್ಮ ಅದು. ಅದಕ್ಕೊಂದು ಗ್ರಂಥವಿಲ್ಲ. ಬ್ರಿಟಿಷರು ಬಂದು ಹೆಸರಿಡೋವರೆಗೆ ಒಂದು ಹೆಸರೂ ಗೊತ್ತಿರಲಿಲ್ಲ.’

‘ಯಾರು ಮುಸ್ಲೀಮನಲ್ಲವೋ, ಯಾರು ಕ್ರೈಸ್ತನಲ್ಲವೋ, ಯಾರು ಸಿಖ್ಖನಲ್ಲವೋ, ಯಾರು ಜೈನನಲ್ಲವೋ, ಯಾರು ಬೌದ್ಧನಲ್ಲವೋ, ಯಾರು ಯಾವುದೂ ಅಲ್ಲವೋ ಅವನೇ ಹಿಂದೂ. ಈ ಧರ್ಮ ಒಂದು ಶ್ರೇಣೀಕೃತ ವ್ಯವಸ್ಥೆ. ಅದರಲ್ಲಿ ಕೆಲವರು ಮಾತ್ರ ಉತ್ತಮರು. ಮಿಕ್ಕವರೆಲ್ಲರೂ ನೀಚರು. ಮಹಿಳೆಯರಂತೂ ಎರಡನೇ ವರ್ಗದವರು. ಇಂಥ ಧರ್ಮವನ್ನು ಸಂರಕ್ಷಿಸಬೇಕಂತೆ. ನಮಗಿರೋದು ಸಂವಿಧಾನ. ಅದು ನಮ್ಮ ಧರ್ಮ...’ ಎಂದು ಗೌರಿ ಭಾಷಣ ಮಾಡಿದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.