ವಿಚಾರವಾದಿಗಳ ಹತ್ಯೆಗೆಂದೇ 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ

7
ಮಹಾರಾಷ್ಟ್ರದಲ್ಲೇ ಮೊಕ್ಕಾಂ ಹೂಡಿರುವ ಎಸ್ಐಟಿ ಅಧಿಕಾರಿಗಳು

ವಿಚಾರವಾದಿಗಳ ಹತ್ಯೆಗೆಂದೇ 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ

Published:
Updated:

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ, ದೇಶದಲ್ಲಿರುವ ವಿಚಾರವಾದಿಗಳನ್ನು ಹತ್ಯೆ ಮಾಡಲೆಂದೇ 22 ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡಿಸಿದ್ದ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಕಾಳೆ, ಪುಣೆಯ ಕಂಪನಿಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದ. ನಂತರ, ರಾಜೀನಾಮೆ ನೀಡಿ ಆಶ್ರಮವೊಂದಕ್ಕೆ ಸೇರಿದ್ದ. ಬಳಿಕ, ವಿಚಾರವಾದಿಗಳ ಹತ್ಯೆಗೆ ಸಂಚು ರೂಪಿಸಲಾರಂಭಿಸಿದ್ದ. ಈ ವಿಷಯವನ್ನು ಆತನೇ ಒಪ್ಪಿಕೊಂಡಿದ್ದಾನೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.

‘ಆಶ್ರಮದ ಪ್ರಚಾರದ ವೇಳೆಯಲ್ಲಿ ಕಾಳೆಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಕೆಲವು ಸಂಘಟನೆಗಳ ಮುಖಂಡರ ಪರಿಚಯವಾಗಿತ್ತು. ‘ನನಗೆ ಉತ್ಸಾಹಿ ಹಾಗೂ ಧೈರ್ಯವಂತ ಹುಡುಗರು ಬೇಕು’ ಎಂದು ಮುಖಂಡರಿಗೆಲ್ಲ ಹೇಳಿದ್ದ. ಅದರಂತೆ ಕೆಲವು ಮುಖಂಡರು, 60 ಹುಡುಗರ ವಿಳಾಸವನ್ನು ಕಾಳೆಗೆ ಕೊಟ್ಟಿದ್ದರು’

‘ಪ್ರತಿಯೊಬ್ಬ ಯುವಕನನ್ನು ವೈಯಕ್ತಿಕವಾಗಿ ಭೇಟಿ ಆಗಿದ್ದ ಕಾಳೆ, ಅವರೆಲ್ಲರ ಮಾಹಿತಿ ಕಲೆಹಾಕಿದ್ದ. 60 ಯುವಕರ ಪೈಕಿ 22 ಯುವಕರನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದ. ಅದರಲ್ಲಿ ವಿಜಯಪುರದ ಪರಶುರಾಮ ವಾಘ್ಮೋರೆ ಸಹ ಒಬ್ಬ’ ಎಂದು ಮೂಲಗಳು ತಿಳಿಸಿವೆ.

‘ಶಸ್ತ್ರಾಸ್ತ್ರ ತರಬೇತಿಗಾಗಿಯೇ ಬೆಳಗಾವಿ, ಮಡಿಕೇರಿ, ಗೋವಾ ಹಾಗೂ ಪುಣೆಯಲ್ಲಿ ಜಾಗ ಗುರುತಿಸಿದ್ದ. ಯಾರಿಗೂ ಅನುಮಾನ ಬಾರದಂಥ ಅದೇ ಸ್ಥಳಗಳಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡಿಸಿದ್ದ. ಅಂಥ ಯುವಕರ ಪೈಕಿ ಕೆಲವರ ಮಾಹಿತಿ ಮಾತ್ರ ಗೊತ್ತಾಗಿದೆ. ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರಿಗೂ ವಿಷಯ ತಿಳಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಮಹಾರಾಷ್ಟ್ರದಲ್ಲೇ ಮೊಕ್ಕಾಂ ಹೂಡಿರುವ ಎಸ್‌ಐಟಿ: ಅಮೋಲ್ ಕಾಳೆ ಡೈರಿಯಲ್ಲಿದ್ದ ಮಾಹಿತಿಯನ್ನು ರಾಜ್ಯದ ಎಸ್‌ಐಟಿ ಅಧಿಕಾರಿಗಳು, ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ಎಸ್‌ಐಟಿ ಜತೆ ಹಂಚಿಕೊಂಡಿದ್ದಾರೆ.  ಅಲ್ಲಿಯ ಅಧಿಕಾರಿಗಳು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಪಡೆಯಲೆಂದೇ ರಾಜ್ಯದ ಎಸ್‌ಐಟಿ ತಂಡ, ಮಹಾರಾಷ್ಟ್ರದಲ್ಲೇ ಮೊಕ್ಕಾಂ ಹೂಡಿದೆ.

‘ಮಹಾರಾಷ್ಟ್ರದ ವೈಭವ್ ರಾವತ್, ಸುಧನ್ವಾ ಗೊಂಧಲೇಕರ್ ಹಾಗೂ ಶರದ್‌ ಕಸಲ್ಕರ್ ಸೇರಿದಂತೆ ಹಲವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಗೌರಿ ಹತ್ಯೆ ಪ್ರಕರಣಕ್ಕೂ ಅವರಿಗೂ ಸಂಬಂಧವಿರುವ ಅನುಮಾನವಿದೆ. ಅದು ಖಚಿತವಾಗುತ್ತಿದ್ದಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ. 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !