7
ಅಳುತ್ತ ಮೂಲೆ ಹಿಡಿದ ಪರಶುರಾಮ ವಾಘ್ಮೋರೆ

ಆರೋಪಿಗಳ ಮೇಲೆ ಜೈಲಿನಲ್ಲೂ ನಿಗಾ

Published:
Updated:

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಜಯಪುರದ ಪರಶುರಾಮ ವಾಘ್ಮೋರೆಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೆಲ್‌ನಲ್ಲಿ ಒಬ್ಬಂಟಿಯಾಗಿರಿಸಲಾಗಿದೆ. ಅದರಿಂದ ಮಾನಸಿಕವಾಗಿ ನೊಂದಿರುವ ಆತ, ಅಳುತ್ತ ಮೂಲೆಯಲ್ಲೇ ಕುಳಿತುಕೊಳ್ಳುತ್ತಿದ್ದಾನೆ.

‘ಸಾಮಾನ್ಯವಾಗಿ ಒಂದು ಸೆಲ್‌ನಲ್ಲಿ ಇಬ್ಬರನ್ನು ಇರಿಸುತ್ತೇವೆ. ಗೌರಿ ಹತ್ಯೆ ಪ್ರಕರಣ ಗಂಭೀರವಾಗಿರುವುದರಿಂದ, ವಾಘ್ಮೋರೆಯನ್ನಷ್ಟೇ ಒಂದು ಸೆಲ್‌ನಲ್ಲಿಟ್ಟಿದ್ದೇವೆ. ಆತ ಜೈಲಿಗೆ ಬಂದಾಗಿನಿಂದಲೂ ಪದೇ ಪದೇ ಅಳುತ್ತ ಮೂಲೆಯಲ್ಲೇ ಕುಳಿತುಕೊಳ್ಳುತ್ತಿದ್ದಾನೆ. ಆಹಾರ ನೀಡುವ ಸಿಬ್ಬಂದಿ ಮಾತನಾಡಿಸಿದರೂ ಮಾತನಾಡುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕಾರಾಗೃಹದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮೊದಲ ಎರಡು ದಿನ ಆಹಾರ ಸೇವಿಸಿರಲಿಲ್ಲ. ಈಗ ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಿದ್ದಾನೆ. ಆದರೆ, ಅಳುವುದು ಮಾತ್ರ ನಿಂತಿಲ್ಲ. ‘ನಾನು ತಪ್ಪು ಮಾಡಿದೆ’ ಎಂದಷ್ಟೇ ಸಿಬ್ಬಂದಿ ಬಳಿ ಹೇಳಿಕೊಳ್ಳುತ್ತಿದ್ದಾನೆ’ ಎಂದರು.

‘ಪ್ರಕರಣದ ಉಳಿದ ಆರೋಪಿಗಳಾದ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌, ಮನೋಹರ್ ದುಂಡಪ್ಪ ಯಡವೆ, ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್ ದೇಗ್ವೇಕರ್‌ ಹಾಗೂ ಅಜಿತ್ ಕುಮಾರ್ ಅಲಿಯಾಸ್ ಪ್ರವೀಣ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿರಿಸಿದ್ದೇವೆ. ಅವರ ಜತೆಗೆ ಸೆಲ್‌ನಲ್ಲಿ ಬೇರೊಂದು ಪ್ರಕರಣದ ಆರೋಪಿಗಳನ್ನು ಇರಿಸಿದ್ದೇವೆ’ ಎಂದು ಹೇಳಿದರು.

24 ಗಂಟೆಯೂ ಸೆಲ್‌ನಲ್ಲೇ ಬಂದಿ: ‘ಸಾಮಾನ್ಯ ಪ್ರಕರಣದ ಆರೋ‍ಪಿಗಳನ್ನು ಬ್ಯಾರಕ್‌ನಲ್ಲಿಡುತ್ತೇವೆ. ಅವರು ಬ್ಯಾರಕ್‌ನಲ್ಲಿ (50 ಮಂದಿ ಸಾಮರ್ಥ್ಯ) ಓಡಾಡಲು ಅವಕಾಶವಿರುತ್ತದೆ. ಗೌರಿ ಹತ್ಯೆ ಪ್ರಕರಣದ ಆರೋಪಿಗಳನ್ನು ಸೆಲ್‌ನಲ್ಲಿಟ್ಟಿದ್ದು, ಅವರು 24 ಗಂಟೆಯೂ ಅಲ್ಲಿಯೇ ಇರಬೇಕು. ಹೊರಗೆ ಹೋಗಲು ಅವಕಾಶವಿರುವುದಿಲ್ಲ’ ಎಂದು ಅಧಿಕಾರಿ ವಿವರಿಸಿದರು.

‘ಸೆಲ್‌ಗೇ ಆಹಾರ ಸರಬರಾಜು ಮಾಡುತ್ತೇವೆ. ಸೆಲ್‌ನೊಳಗೆ ಶೌಚಾಲಯವಿದ್ದು, ಅದನ್ನೇ ಆರೋಪಿಗಳು ಬಳಸುತ್ತಿದ್ದಾರೆ.  ನ್ಯಾಯಾಲಯದ ವಿಚಾರಣೆ ಇದ್ದಾಗ ಮಾತ್ರ ಅವರನ್ನು ಸೆಲ್‌ನಿಂದ ಹೊರಗೆ ಕರೆತರುತ್ತೇವೆ’ ಎಂದು ಹೇಳಿದರು.

ಬಿಗಿ ಭದ್ರತೆ: ಆರೋಪಿಗಳನ್ನು ಜುಲೈ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರಾಗೃಹದ ಹಿರಿಯ ಅಧಿಕಾರಿಯನ್ನು ಭೇಟಿಯಾಗಿರುವ ಎಸ್‌ಐಟಿ ಅಧಿಕಾರಿಗಳು, ‘ಇದೊಂದು ಗಂಭೀರ ಪ್ರಕರಣವಾಗಿದ್ದು. ತನಿಖೆ ಪ್ರಗತಿಯಲ್ಲಿದೆ. ಜೈಲಿನಲ್ಲಿ ಆರೋಪಿಗಳು ಒಟ್ಟಿಗೆ ಸೇರಲು ಬಿಡಬೇಡಿ’ ಎಂದು ಕೋರಿದ್ದಾರೆ ಎಂದು ಗೊತ್ತಾಗಿದೆ.

‘ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಪ್ರಕರಣದ ಮಾಹಿತಿ ಕಲೆಹಾಕಿದ್ದಾರೆ. ಜೈಲಿನಲ್ಲಿ ಆರೋಪಿ
ಗಳು ಒಂದಾದರೆ, ಪರಸ್ಪರ ಮಾತುಕತೆ ನಡೆಸಲಿದ್ದಾರೆ. ಅದು ತನಿಖೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಅವರನ್ನು ಒಟ್ಟಿಗೆ ಸೇರಲು ಬಿಡಬೇಡಿ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ’ ಎಂದು ಜೈಲಿನ ಮೂಲಗಳು ತಿಳಿಸಿವೆ.

‘ಪ್ರತಿ ಸೆಲ್‌ ಬಳಿ ಇಬ್ಬರು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತೆಯ ಮೇಲ್ವಿಚಾರಣೆ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು, ದಿನಕ್ಕೆ ನಾಲ್ಕು ಬಾರಿ ಸೆಲ್‌ ಬಳಿ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಆರೋಪಿ ಮಹಾರಾಷ್ಟ್ರದ ಅಮೋಲ್‌ ಕಾಳೆ
ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವೀಧರನಾದ ಆರೋಪಿ ಮಹಾರಾಷ್ಟ್ರದ ಅಮೋಲ್‌ ಕಾಳೆ, ಮರಾಠಿ ಹಾಗೂ ಇಂಗ್ಲಿಷ್‌ ಭಾಷೆಯ ಪುಸ್ತಕಗಳನ್ನು ನೀಡುವಂತೆ ಜೈಲಿನ ಸಿಬ್ಬಂದಿಯನ್ನು ಕೇಳುತ್ತಿರುವುದಾಗಿ ಗೊತ್ತಾಗಿದೆ.

ಜೈಲಿನ ಅಧಿಕಾರಿ, ‘ಓದಲು ಪುಸ್ತಕ ಬೇಕಾದರೆ ಅಧಿಕಾರಿಗಳ ಒಪ್ಪಿಗೆ ಅಗತ್ಯ. ಸದ್ಯಕ್ಕೆ ಯಾರೊಬ್ಬರೂ ಪುಸ್ತಕ ಕೇಳಿಲ್ಲ. ಸಿಬ್ಬಂದಿ ಬಳಿಯಷ್ಟೇ ವಿಚಾರಿಸುತ್ತಿರುವುದು ಗಮನಕ್ಕೆ ಬಂದಿದೆ. ಆರೋಪಿಗಳೇನಾದರೂ ಪುಸ್ತಕ ಕೇಳಿದರೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಿದ್ದೇವೆ’ ಎಂದರು.
ಗುಂಡುಗಳು ಮೇಲ್ನೋಟಕ್ಕೆ ಹೋಲಿಕೆ: ಪಬ್ಲಿಕ್ ಪ್ರಾಸಿಕ್ಯೂಟರ್

ಆರೋಪಿ ಕೆ.ಟಿ.ನವೀನ್‌ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯು 70ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಗುರುವಾರ ನಡೆಯಿತು.

ಜಾಮೀನಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ.ನರೇಂದ್ರ, ‘ಈ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದರು.

‘ನವೀನ್‌ಕುಮಾರ್‌ ಬಳಿ ಸಿಕ್ಕ ಗುಂಡುಗಳಿಗೂ, ಹತ್ಯೆಯಾದ ಗೌರಿಯವರ ದೇಹದಲ್ಲಿದ್ದ ಗುಂಡಿನ ಚೂರು ಹಾಗೂ ಘಟನಾ ಸ್ಥಳದಲ್ಲಿ ಸಿಕ್ಕ ಕಾಟ್ರೇಜ್‌ಗೂ ಮೇಲ್ನೋಟಕ್ಕೆ ಹೋಲಿಕೆ ಆಗುತ್ತಿದೆ. ಆ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಆ ವರದಿಗಳು ಹಾಗೂ ಕೆಲವು ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾಯಾಲಯ, ಕಾಲಾವಕಾಶ ನೀಡಿ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿತು.

ಮಂಪರು ಪರೀಕ್ಷೆಗೆ ಒಪ್ಪಿಗೆ: ‘ಆರೋಪಿ ಕೆ.ಟಿ.ನವೀನ್‌ಕುಮಾರ್‌ ಮಂಪರು ಪರೀಕ್ಷೆಗೆ ಒಳಪಡಲು ಒಪ್ಪಿದ್ದಾನೆ. ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದರೆ ಎಸ್‌ಐಟಿ ಅಧಿಕಾರಿಗಳ ಜತೆಗೆ ಹೋಗಲು ಸಿದ್ಧನಾಗಿದ್ದಾನೆ’ ಎಂದು ಆರೋಪಿ ಪರ ವಕೀಲ ವೇದಮೂರ್ತಿ, ನ್ಯಾಯಾಲಯಕ್ಕೆ ತಿಳಿಸಿದರು.

‘ಪ್ರಕರಣದಲ್ಲಿ ಆರೋಪಿಯ ಪಾತ್ರವಿಲ್ಲ. ದೋಷಾರೋಪ ಪಟ್ಟಿಯಲ್ಲಿಯೂ ನಿಖರ ಪುರಾವೆಗಳಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ವೇದಮೂರ್ತಿ ಕೋರಿದರು.

ಆರೋಪಿ ಕೆ.ಟಿ.ನವೀನ್‌ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯು 70ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಗುರುವಾರ ನಡೆಯಿತು.

ಜಾಮೀನಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ.ನರೇಂದ್ರ, ‘ಈ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದರು.

‘ನವೀನ್‌ಕುಮಾರ್‌ ಬಳಿ ಸಿಕ್ಕ ಗುಂಡುಗಳಿಗೂ, ಹತ್ಯೆಯಾದ ಗೌರಿಯವರ ದೇಹದಲ್ಲಿದ್ದ ಗುಂಡಿನ ಚೂರು ಹಾಗೂ ಘಟನಾ ಸ್ಥಳದಲ್ಲಿ ಸಿಕ್ಕ ಕಾಟ್ರೇಜ್‌ಗೂ ಮೇಲ್ನೋಟಕ್ಕೆ ಹೋಲಿಕೆ ಆಗುತ್ತಿದೆ. ಆ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಆ ವರದಿಗಳು ಹಾಗೂ ಕೆಲವು ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾಯಾಲಯ, ಕಾಲಾವಕಾಶ ನೀಡಿ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿಕೆ ಮಾಡಿತು.

ಮಂಪರು ಪರೀಕ್ಷೆಗೆ ಒಪ್ಪಿಗೆ: ‘ಆರೋಪಿ ಕೆ.ಟಿ.ನವೀನ್‌ಕುಮಾರ್‌ ಮಂಪರು ಪರೀಕ್ಷೆಗೆ ಒಳಪಡಲು ಒಪ್ಪಿದ್ದಾನೆ. ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದರೆ ಎಸ್‌ಐಟಿ ಅಧಿಕಾರಿಗಳ ಜತೆಗೆ ಹೋಗಲು ಸಿದ್ಧನಾಗಿದ್ದಾನೆ’ ಎಂದು ಆರೋಪಿ ಪರ ವಕೀಲ ವೇದಮೂರ್ತಿ, ನ್ಯಾಯಾಲಯಕ್ಕೆ ತಿಳಿಸಿದರು.

‘ಪ್ರಕರಣದಲ್ಲಿ ಆರೋಪಿಯ ಪಾತ್ರವಿಲ್ಲ. ದೋಷಾರೋಪ ಪಟ್ಟಿಯಲ್ಲಿಯೂ ನಿಖರ ಪುರಾವೆಗಳಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ವೇದಮೂರ್ತಿ ಕೋರಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !