4
ಪರಶುರಾಮನನ್ನು ಭೇಟಿಯಾದ ಪೋಷಕರು lತಾಯಿ ಪ್ರೀತಿ ಕಂಡು ಮರುಗಿದ ಎಸ್‌ಐಟಿ!

‘ತಪ್ಪು ಮಾಡಿದ್ದರೆ ಒಪ್ಪಿಕೊ ಮಗ..’

Published:
Updated:
ಸಿಐಡಿ ಕಚೇರಿ ಆವರಣದಲ್ಲಿ ಮಗನಿಗಾಗಿ ಕಾಯುತ್ತ ಕುಳಿತಿದ್ದ ತಾಯಿ

ಬೆಂಗಳೂರು: ‘ತಪ್ಪು ಮಾಡಿದ್ದರೆ ಪೊಲೀಸರ ಮುಂದೆ ಒಪ್ಪಿಕೊಂಡುಬಿಡು ಮಗ. ಸುಮ್ಮನೆ ನೋವು ತಿನ್ನಬೇಡ. ನೀನು ಕೊಲೆ ಮಾಡಿಲ್ಲ ಎಂದರೆ ಯಾವುದಕ್ಕೂ ಅಂಜಬೇಡ. ಯಾರನ್ನೋ ರಕ್ಷಿಸಲು ನೀನು ಕೊಲೆಗಾರನ ಪಟ್ಟ ಕಟ್ಟಿಕೊಳ್ಳಬೇಡ...’

ಇದು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪರಶುರಾಮ್‌ ವಾಘ್ಮೋರೆಗೆ ಆತನ ತಾಯಿ ಹೇಳಿದ ಬುದ್ಧಿಮಾತು. ಮಗನನ್ನು ನೋಡಬೇಕೆಂದು 15 ದಿನಗಳಿಂದ ಪರಿತಪಿಸುತ್ತಿದ್ದ ಪರಶುರಾಮನ ಪೋಷಕರಿಗೆ ಭಾನುವಾರ ಬೆಳಿಗ್ಗೆ ಅದಕ್ಕೆ ಅವಕಾಶ ಸಿಕ್ಕಿತು.

ವಿಜಯಪುರದಿಂದ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ಬಂದ ತಂದೆ ಅಶೋಕ್ ವಾಘ್ಮೋರೆ ಹಾಗೂ ತಾಯಿ ಜಾನಕಿಬಾಯಿ, 11ರ ಸುಮಾರಿಗೆ ಸಿಐಡಿ ಕಚೇರಿಯತ್ತ ಧಾವಿಸಿದರು. ಕಲ್ಲಿನ ಮೇಲೆ ಕುಳಿತು ಕಾಯುತ್ತಿದ್ದ ತಾಯಿಯನ್ನು ಕಂಡು ಎಸ್‌ಐಟಿ ಪೊಲೀಸರೂ ಮರುಕಪಟ್ಟರು.

ಬಳಿಕ ಅಶೋಕ್, ಪ್ರಕರಣದ ತನಿಖಾಧಿಕಾರಿ ಎಂ.ಎನ್. ಅನುಚೇತ್ ಅವರಿಗೆ ಕರೆ ಮಾಡಿ ಮಗನನ್ನು ಕಾಣಲು ಅವಕಾಶ ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅನುಚೇತ್, ಅವರನ್ನು ಪರಶುರಾಮನ ಬಳಿ ಕರೆದುಕೊಂಡು ಹೋಗುವಂತೆ ಸಿಬ್ಬಂದಿಗೆ ಸೂಚಿಸಿದರು.

ಕಣ್ಣೀರು ಸುರಿಸುತ್ತಲೇ ಕಚೇರಿ ಒಳಹೋದ ಜಾನಕಿಬಾಯಿ, ಮಗನನ್ನು ತಬ್ಬಿ ಹಣೆಗೆ ಮುತ್ತಿಟ್ಟಿದ್ದಾರೆ. ‘ಯಾರನ್ನೋ ರಕ್ಷಿಸಲು ಹೋಗಿ ನಿನ್ನ ಭವಿಷ್ಯ ಹಾಳು ಮಾಡಿಕೊಳ್ಳಬೇಡ. ಪೊಲೀಸರ ಮುಂದೆ ಅಲ್ಲದಿದ್ದರೂ, ನನ್ನ ಬಳಿಯಾದರೂ ಎಲ್ಲವನ್ನೂ ಹೇಳು’ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಪರಶುರಾಮ, ‘ಅಮ್ಮ, ನಾನೇನೂ ಮಾಡಿಲ್ಲ. ನೀವ್ಯಾರು ಹೆದರಬೇಡಿ. ಆದಷ್ಟು ಬೇಗ ಬಿಡುಗಡೆಯಾಗಿ ಹೊರಬರುತ್ತೇನೆ’ ಎಂದಿದ್ದಾನೆ.

ಕೊನೆಗೆ ತಂದೆಯನ್ನು ಕರೆದ ಆತ, ‘ಅಮ್ಮನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಮೊದಲೇ ಬಿಪಿ, ಶುಗರ್‌ ಇತ್ತು. ನನ್ನಿಂದ ಇನ್ನೂ ಜಾಸ್ತಿ ಆಗಿರುತ್ತದೆ. ಎಲ್ಲರಲ್ಲೂ ಕ್ಷಮೆ ಕೋರುತ್ತೇನೆ. ನೀವಿಬ್ಬರು ನನ್ನನ್ನು ನಂಬಿದರೆ ಅಷ್ಟೇ ಸಾಕು’ ಎಂದು ದುಃಖತಪ್ತನಾಗಿದ್ದಾನೆ. ಅಶೋಕ್ ಸಹ ಕಣ್ಣೀರು ಸುರಿಸುತ್ತಲೇ ಮಗನಿಗೆ ಸಾಂತ್ವನ ಹೇಳಿದ್ದಾರೆ.

ಒಂದೂವರೆ ತಾಸಿನ ಮಾತುಕತೆ ಬಳಿಕ ಹೊರಬಂದ ಜಾನಕಿಬಾಯಿ, ‘ಮಗನನ್ನು ನೋಡಿ ಧೈರ್ಯ ಬಂತು. ಆತನಿಗೆ ಪೊಲೀಸರು ಹೊಡೆದಿಲ್ಲ. ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಆತ್ಮವಿಶ್ವಾಸ ತುಂಬಿ ಬಂದಿದ್ದೇನೆ. ಅವನ ಮುಖ ನೋಡಿ ಮನಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಶೋಕ್ ಮಾತನಾಡಿ, ‘ಪೊಲೀಸರು ಮಗನನ್ನು ಕರೆದುಕೊಂಡು ಹೋದ ಬಳಿಕ ಪತ್ನಿ ಹಾಸಿಗೆ ಹಿಡಿದಿದ್ದಳು. ಆತನನ್ನು ನೋಡಲೇಬೇಕೆಂದು ಅನ್ನ–ನೀರು ಬಿಟ್ಟು ಗಲಾಟೆ ಮಾಡುತ್ತಿದ್ದಳು. ಶುಕ್ರವಾರ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೂ ಯತ್ನಿಸಿದಳು. ಈ ವಿಷಯವನ್ನು ಪೊಲೀಸರಿಗೆ ತಿಳಿಸಿ ಅನುಮತಿ ಕೇಳಿದ್ದೆ. ಅವರು ಭೇಟಿಗೆ ಅವಕಾಶ ಕಲ್ಪಿಸಿದರು. ಹೆಂಡತಿ ಖಷಿಯಾಗಿದ್ದಾಳೆ. ಅಷ್ಟೇ ಸಾಕು’ ಎಂದು ಹೇಳಿದರು.

ಕಸ್ಟಡಿ ಅಂತ್ಯ: ಪರಶುರಾಮನ ಪೊಲೀಸ್ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಲಿದೆ. ‘ವಿಚಾರಣೆಗೆ ಸಹಕರಿಸಿದ್ದಾನೆ. ತನಗೆ ಗೊತ್ತಿರುವ ವಿಷಯಗಳನ್ನೆಲ್ಲ ಹೇಳಿದ್ದಾನೆ. ಹೀಗಾಗಿ, ಕಸ್ಟಡಿ ವಿಸ್ತರಿಸುವಂತೆ ಕೇಳುವುದಿಲ್ಲ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 22

  Happy
 • 2

  Amused
 • 3

  Sad
 • 3

  Frustrated
 • 7

  Angry

Comments:

0 comments

Write the first review for this !