ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಿವಸೇನಾ ಮಾಜಿ ಕಾರ್ಪೋರೇಟರ್ ಬಂಧನ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 15ನೇ ಆರೋಪಿಯನ್ನಾಗಿ ಮಹಾರಾಷ್ಟ್ರದ ಜಲ್ನಾ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಸೇನಾದ ಶ್ರೀಕಾಂತ್ ಪಂಗರ್ಕರ್ನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.
ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಸಂಬಂಧ ಸಿಬಿಐ ಅಧಿಕಾರಿಗಳು ಶ್ರೀಕಾಂತ್ನನ್ನು ಬಂಧಿಸಿದ್ದರು. ಗೌರಿ ಹತ್ಯೆಯಲ್ಲೂ ಆತನ ಪಾತ್ರವಿರುವುದಕ್ಕೆ ಪುರಾವೆ ಕಲೆ ಹಾಕಿದ್ದ ರಾಜ್ಯದ ಎಸ್ಐಟಿ ಪೊಲೀಸರು, ಮಹಾರಾಷ್ಟ್ರ ನ್ಯಾಯಾಲಯದ ಅನುಮತಿ ಪಡೆದು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದಿದ್ದರು. ನಗರದ ನ್ಯಾಯಾಲಯಕ್ಕೆ ಆತನನ್ನು ಸೋಮವಾರ ಹಾಜರುಪಡಿಸಿದರು.
‘ಗೌರಿ ಹತ್ಯೆಗೂ ಮುನ್ನ ಹಾಗೂ ಹತ್ಯೆ ನಂತರ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ನಡೆಸಿದ್ದ ಹಲವು ಸಭೆಗಳಲ್ಲಿ ಶ್ರೀಕಾಂತ್ ಭಾಗಿಯಾಗಿದ್ದ. ಹತ್ಯೆಯ ಸಂಚಿನಲ್ಲೂ ಆತನ ಪಾತ್ರವಿದೆ. ಆತನನ್ನು ಪ್ರಕರಣದ 15ನೇ ಆರೋಪಿಯನ್ನಾಗಿ ಬಂಧಿಸಿದ್ದೇವೆ. ಮಡಿಕೇರಿ, ಮಂಗಳೂರು, ಬೆಳಗಾವಿ ಸೇರಿದಂತೆ ಹಲವು ನಗರಗಳಿಗೆ ಆತನನ್ನು ಕರೆದೊಯ್ಯಬೇಕು. ಹೀಗಾಗಿ, ಕೆಲವು ದಿನಗಳವರೆಗೆ ನಮ್ಮ ಕಸ್ಟಡಿಗೆ ನೀಡಿ’ ಎಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಸೆಪ್ಟೆಂಬರ್ 28ರವರೆಗೆ ಶ್ರೀಕಾಂತ್ನನ್ನು ಎಸ್ಐಟಿ ಕಸ್ಟಡಿಗೆ ನೀಡಿತು.
1,200 ಬಾರಿ ಮೊಬೈಲ್ ಕರೆ: ‘ಗೋವಿಂದ ಪಾನ್ಸರೆ, ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಆರೋಪಿಗಳು ಬಳಸಿದ್ದ ನಾಡ ಪಿಸ್ತೂಲ್, ಪದೇ ಪದೇ ಜಾಮ್ ಆಗುತ್ತಿತ್ತು. ಮುಂದಿನ ವಿಚಾರವಾದಿ ಹತ್ಯೆಗೆ ಬೇರೊಂದು ಪಿಸ್ತೂಲ್ ಬಳಸಲು ನಿರ್ಧರಿಸಿದ್ದ ಅಮೋಲ್ ಕಾಳೆ, ಗುಣಮಟ್ಟದ ಪಿಸ್ತೂಲ್ಗಳನ್ನು ತರುವ ಜವಾಬ್ದಾರಿಯನ್ನು ಶ್ರೀಕಾಂತ್ಗೆ ವಹಿಸಿದ್ದ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
‘ಗೌರಿ ಹತ್ಯೆ ಬಳಿಕ ಬೆಳಗಾವಿಯ ಹೋಟೆಲೊಂದರಲ್ಲಿ ಸಭೆ ನಡೆಸಿದ್ದ ಕಾಳೆ, ಇನ್ನೊಬ್ಬ ಆರೋಪಿ ಸುಚಿತ್ ಹಾಗೂ ಶ್ರೀಕಾಂತ್ನನ್ನು ಅಲ್ಲಿಗೇ ಕರೆಸಿಕೊಂಡಿದ್ದ. ದೇಶದ ಹಲವು ವಿಚಾರವಾದಿಗಳನ್ನು ಹತ್ಯೆ ಮಾಡುವ ಬಗ್ಗೆ ಚರ್ಚಿಸಿದ್ದ. ಆ ಸಭೆ ಬಳಿಕ ನಿರಂತರವಾಗಿ ಸಂಪರ್ಕದಲ್ಲಿದ್ದ ಶ್ರೀಕಾಂತ್ ಹಾಗೂ ಕಾಳೆ, 1,200 ಬಾರಿ ಮೊಬೈಲ್ನಲ್ಲಿ ಮಾತನಾಡಿದ್ದರು. ಪಿಸ್ತೂಲ್ ಎಲ್ಲಿ ಖರೀದಿಸುವುದು? ಯಾವ ರೀತಿಯದ್ದಿರಬೇಕು? ಅದರ ಬಳಕೆ ಬಗ್ಗೆ ಯಾರಿಗೆ ತರಬೇತಿ ಕೊಡಬೇಕು ಎಂದೆಲ್ಲ ಚರ್ಚಿಸಿದ್ದರು. ಆ ಕರೆಗಳಿಂದಲೇ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ಶ್ರೀಕಾಂತ್ನನ್ನು ಗುರುತಿಸಿದ ಏಜೆಂಟ್: ‘ವಿಚಾರವಾದಿಗಳ ಹತ್ಯೆಗಾಗಿ ಆರೋಪಿಗಳು, ಹಿಟ್ ಲಿಸ್ಟ್ ಸಿದ್ಧಪಡಿಸಿದ್ದರು. ಆ ಲಿಸ್ಟ್ನಲ್ಲಿದ್ದವರನ್ನು ಮುಗಿಸಲೆಂದೇ ಮಹಾರಾಷ್ಟ್ರದ ಸೆಂಧ್ವ ಹಾಗೂ ಉತ್ತರ ಪ್ರದೇಶದ ಮುಂಗೇರ್ ಜಿಲ್ಲೆಗಳ ಕೆಲವರಿಂದ 15 ಪಿಸ್ತೂಲ್ಗಳನ್ನು ಖರೀದಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಸೆಂಧ್ವ ಹಾಗೂ ಮುಂಗೇರ್ಗಳಿಗೆ ವಿಶೇಷ ತಂಡ ಕಳುಹಿಸಲಾಗಿತ್ತು. ಎನ್ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರುದ್ರ ಪಾಟೀಲ, ಸಾರಂಗ್ ಅಕೋಲ್ಕರ್ ಸೇರಿದಂತೆ ಹಲವರ ಫೋಟೊಗಳನ್ನು ಪಿಸ್ತೂಲ್ ಮಾರಾಟದ ಏಜೆಂಟರಿಗೆ ತೋರಿಸಲಾಗಿತ್ತು. ಅವರ್ಯಾರೂ ಬಂದಿಲ್ಲವೆಂದು ಅವರೆಲ್ಲ ಹೇಳಿದ್ದರು’.
‘ಬರಿಗೈಲಿ ವಾಪಸ್ ಬಂದಿದ್ದ ತಂಡ, ಕೆಲವು ವಾರಗಳ ನಂತರ ಶ್ರೀಕಾಂತ್ನ ಫೋಟೊ ಸಮೇತ ಪುನಃ ಹೋಗಿತ್ತು. ಆತನ ಫೋಟೊವನ್ನು ಗುರುತಿಸಿದ್ದ ಏಜೆಂಟರು, ‘ಈತನೇ ಪಿಸ್ತೂಲ್ ಖರೀದಿಸಲು ಬಂದಿದ್ದ. ನಾನು ಬೇರೆಯವರ ಬಳಿ ಕಳುಹಿಸಿಕೊಟ್ಟಿದ್ದೆ’ ಎಂದಿದ್ದ. ಆತನ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದೇವೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಹತ್ಯೆ ದಿನ ಬೆಂಗಳೂರಿನಲ್ಲಿದ್ದ ಶ್ರೀಕಾಂತ್?
‘ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಬಳಿಯೇ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಆ ದಿನ ಶ್ರೀಕಾಂತ್ ಬೆಂಗಳೂರಿನಲ್ಲೇ ಇದ್ದ ಎಂಬ ಬಗ್ಗೆ ಪುರಾವೆಗಳು ಸಿಕ್ಕಿವೆ. ಅವುಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.
‘ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಆರೋಪಿಗಳ ಜೊತೆಯೂ ಶ್ರೀಕಾಂತ್ ಒಡನಾಟವಿಟ್ಟುಕೊಂಡಿದ್ದ. ಇತ್ತೀಚೆಗೆ ಕಸ್ಟಡಿಗೆ ಪಡೆದಿದ್ದ ಆ ಪ್ರಕರಣದ ಆರೋಪಿ ಸುಧನ್ವ ಗೊಂಧಾಳೇಕರ್, ಶ್ರೀಕಾಂತ್ ಬಗ್ಗೆ ಸಾಕಷ್ಟು ಮಾಹಿತಿ ಬಾಯ್ಬಿಟ್ಟಿದ್ದಾನೆ’ ಎಂದರು.
ನ್ಯಾಯಾಂಗ ಬಂಧನಕ್ಕೆ: ಪ್ರಕರಣದ ಆರೋಪಿಗಳಾದ ಬೆಳಗಾವಿಯ ಭರತ್ ಕುರ್ನೆ ಹಾಗೂ ಸುಚಿತ್ ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಉಳಿದ 12 ಆರೋಪಿಗಳನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅವರೆಲ್ಲರನ್ನೂ ಸೆಪ್ಟೆಂಬರ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.