ಗೆಜೆಟೆಡ್‌ ಪ್ರೊಬೇಷನರಿ 439 ಹುದ್ದೆ ಶೀಘ್ರ ಭರ್ತಿ

7
ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್‌ ಅವಧಿ ಮುಗಿಯುವುದರೊಳಗೆ ನೇಮಕಾತಿಗೆ ಸಿದ್ಧತೆ

ಗೆಜೆಟೆಡ್‌ ಪ್ರೊಬೇಷನರಿ 439 ಹುದ್ದೆ ಶೀಘ್ರ ಭರ್ತಿ

Published:
Updated:

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಟಿ. ಶ್ಯಾಂ ಭಟ್‌ ಅಧಿಕಾರದ ಅವಧಿ ಇದೇ ಡಿಸೆಂಬರ್‌ 8ಕ್ಕೆ ಅಂತ್ಯವಾಗಲಿದೆ. ಅಷ್ಟರೊಳಗೆ, 2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 439 ಹುದ್ದೆಗಳ ನೇಮಕಾತಿ ಪೂರ್ಣಗೊಳಿಸಲು ಸಿದ್ಧತೆ ನಡೆದಿದೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಹುದ್ದೆಗಳ ನೇಮಕಾತಿಗೆ 2017ರ ಆಗಸ್ಟ್‌ನಲ್ಲಿ ಪ್ರಾಥಮಿಕ ಪರೀಕ್ಷೆ, ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಆದರೆ, 10 ತಿಂಗಳು ಕಳೆದರೂ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿಲ್ಲ. ಇದೀಗ, ಫಲಿತಾಂಶ ಪ್ರಕಟಿಸಿ ತರಾತುರಿಯಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಪೂರ್ಣಗೊಳಿಸಲು ಕೆಪಿಎಸ್‌ಸಿ ತಯಾರಿ ನಡೆಸಿದೆ ಎಂಬ ಟೀಕೆ ವ್ಯಕ್ತವಾಗಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಪಿಎಸ್‌ಸಿ ಕಾರ್ಯದರ್ಶಿ ಆರ್‌.ಆರ್‌. ಜನ್ನು, ‘ಮೌಲ್ಯಮಾಪನ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಪರೀಕ್ಷಾ ನಿಯಂತ್ರಕರು ನೋಡಿಕೊಳ್ಳುತ್ತಾರೆ. ಅತಿ ಶೀಘ್ರದಲ್ಲೇ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು. ಮುಖ್ಯ ಪರೀಕ್ಷೆಯಿಂದ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಫಲಿತಾಂಶ ಪ್ರಕಟಣೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಅಗತ್ಯವಾದ ಸಿದ್ಧತೆ ಪೂರ್ಣಗೊಂಡಿದೆ. ಆದರೆ, ಫಲಿತಾಂಶ ಯಾವಾಗ ಪ್ರಕಟಿಸಬೇಕು ಎನ್ನುವುದು ಆಯೋಗಕ್ಕೆ ಬಿಟ್ಟ ವಿಚಾರ’ ಎಂದು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಕೃಷ್ಣ ಬಾಜಪೇಯಿ ಸ್ಪಷ್ಟಪಡಿಸಿದರು.

ಮುಖ್ಯ ಪರೀಕ್ಷೆಯ ಫಲಿತಾಂಶ ವಿಳಂಬವಾಗುತ್ತಿರುವ ಬಗ್ಗೆ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೆಪಿಎಸ್‌ಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

‘ಈಗಾಗಲೇ ಅಕ್ರಮಗಳು, ಎಡವಟ್ಟುಗಳು, ಭ್ರಷ್ಟಾಚಾರ ಆರೋಪಗಳಿಂದ ಸುದ್ದಿಯಲ್ಲಿರುವ ಕೆಪಿಎಸ್‌ಸಿ, ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ವಿಳಂಬ ನೀತಿ ಅನುಸರಿಸಿದೆ. ಏತನ್ಮಧ್ಯೆ, ತರಾತುರಿಯಲ್ಲಿ ನೇಮಕಾತಿ ಪೂರ್ಣಗೊಳಿಸಲು ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಅಭ್ಯರ್ಥಿಯೊಬ್ಬರು ದೂರಿದ್ದಾರೆ.

1998, 1999, 2004ನೇ ಸಾಲುಗಳಲ್ಲಿ 700ಕ್ಕೂ ಹೆಚ್ಚು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ನೇಮಕಾತಿ ಗೊಂದಲ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಅಕ್ರಮ ನಡೆದಿದೆ ಎಂಬ ಕಾರಣಕ್ಕೆ 2011ನೇ ಸಾಲಿನಲ್ಲಿ ನಡೆದ 362 ಹುದ್ದೆಗಳ ನೇಮಕಾತಿಯನ್ನು ರದ್ದುಪಡಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಈ ಮಧ್ಯೆ, 2014ನೇ ಸಾಲಿನಲ್ಲಿ ನಡೆದ 464 ಹುದ್ದೆಗಳ ನೇಮಕಾತಿ ಯಾವುದೇ ಗೊಂದಲಗಳಿಲ್ಲದೆ ನಡೆದಿದೆ.

ಅಧ್ಯಕ್ಷ, ಇಬ್ಬರು ಸದಸ್ಯರು ಶೀಘ್ರ ನಿವೃತ್ತಿ

ಅಧ್ಯಕ್ಷರು ಮತ್ತು 13 ಸದಸ್ಯರನ್ನು ಒಳಗೊಂಡ ಕೆಪಿಸಿಸಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ. ಸದಸ್ಯರ ಪೈಕಿ ಡಾ. ಮಂಗಳಾ ಶ್ರೀಧರ್‌ ನವೆಂಬರ್‌ನಲ್ಲಿ ಮತ್ತು ಡಾ. ಎಚ್‌.ಡಿ. ಪಾಟೀಲ ಡಿಸೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಅಧ್ಯಕ್ಷರು ಮತ್ತು ಸದಸ್ಯರ ನಿವೃತ್ತಿಗೂ ಮೊದಲೇ ಕೆಎಎಸ್‌ ಹುದ್ದೆಗಳ ನೇಮಕಾತಿ ಮುಗಿಸಲು ಸಿದ್ಧತೆ ನಡೆದಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಶ್ಯಾಂ ಭಟ್‌ ನಿವೃತ್ತಿಯ ನಂತರ ತಕ್ಷಣಕ್ಕೆ ಹಿರಿಯ ಸದಸ್ಯ ರಘುನಂದನ್‌ ರಾಮಣ್ಣ ಹಂಗಾಮಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಆಡಳಿತಾತ್ಮಕ ಪ್ರಕ್ರಿಯೆಯ ಅನುಸಾರ ರಾಜ್ಯ ಸರ್ಕಾರದ ಶಿಫಾರಸಿನ ಆಧಾರದಲ್ಲಿ ರಾಜ್ಯಪಾಲರು ಹೊಸ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ ಎಂದೂ ಮೂಲಗಳು ಹೇಳಿವೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !