ಗುರುವಾರ , ನವೆಂಬರ್ 21, 2019
26 °C
ಮೈಸೂರಿನ ಸಿಎಫ್‌ಟಿಆರ್‌ಐನಿಂದ ತಯಾರಿ

ಕ್ರೀಡಾಪಟುಗಳಿಗೆ ‘ಜೆಲ್‌ ಸಾಲಿಡ್’ ಆಹಾರ

Published:
Updated:
Prajavani

ಚಿತ್ರದುರ್ಗ: ‘ಕ್ರೀಡಾಪಟುಗಳಿಗಾಗಿ ‘ಜೆಲ್‌ ಸಾಲಿಡ್’ ಎಂಬ ಪೌಷ್ಟಿಕ ಆಹಾರವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ತಯಾರಿಸಿದ್ದು, ಶೀಘ್ರ ಮಾರುಕಟ್ಟೆಗೆ ಬರಲಿದೆ.

‘ಕ್ರೀಡಾಕೂಟದಲ್ಲಿ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪೌಷ್ಟಿಕ ಆಹಾರ ಸಂಶೋಧಿಸಲಾಗಿದೆ. ಇದನ್ನು ಮೂರು ಹಂತಗಳಲ್ಲಿ ಸೇವಿಸಬಹುದು. ಕ್ರೀಡಾಪಟುಗಳ ಆಯಾಸವನ್ನು ಇದು ಕಡಿಮೆ ಮಾಡಲಿದೆ’ ಎಂದು ಸಂಸ್ಥೆಯ ಪ್ರಧಾನ ಸಂಶೋಧಕ ಡಾ.ಪಿ.ವಿ. ರವೀಂದ್ರ ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.

‘ಜೆಲ್‌ ಸಾಲಿಡ್ ಸ್ನಾಯುಗಳ ಬಲವರ್ಧನೆಗೂ ಪೂರಕವಾಗಿದೆ. ಲಾಲರಸ ಹೆಚ್ಚಿಸುವುದರಿಂದ ಕ್ರೀಡಾಪಟುಗಳ ಆಸಕ್ತಿ ಮತ್ತು ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಮಾರುಕಟ್ಟೆಗೆ ತರುವ ಉದ್ದೇಶದಿಂದ ಈಗಾಗಲೇ ಪೇಟೆಂಟ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಅಮೆರಿಕದಲ್ಲಿ ಕ್ರೀಡಾಪಟುಗಳಿಗಾಗಿ ಸಂಶೋಧಿಸಿರುವ ಪೌಷ್ಟಿಕ ಆಹಾರವನ್ನು ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಮಾತ್ರ ಸೇವಿಸಬಹುದು. ಆದರೆ, ಸಿಎಫ್‌ಟಿಆರ್‌ಐ ಎರಡು ಹೆಜ್ಜೆ ಮುಂದಿಟ್ಟಿದ್ದು, ಮೂರು ಹಂತಗಳಲ್ಲಿ ಉಪಯೋಗಿಸುವಂಥ ಆಹಾರ ಸಿದ್ಧಪಡಿಸಿದೆ’ ಎಂದು ತಿಳಿಸಿದರು.

‘ಹಣ್ಣು, ಗಿಡಮೂಲಿಕೆ, ಪಾರಂಪರಿಕ ಔಷಧ ಹಾಗೂ ಮಸಾಲೆ ಪದಾರ್ಥಗಳಿಂದ ಮಧುಮೇಹ ನಿಯಂತ್ರಿಸುವ ಮತ್ತು ರಕ್ತದೊತ್ತಡ ಹತೋಟಿಗೆ ತರುವ ಆಹಾರ ಸಂಶೋಧನಾ ಹಂತದಲ್ಲಿದೆ’ ಎಂದರು.

ಪ್ರತಿಕ್ರಿಯಿಸಿ (+)