ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮರಾಜ್ಯ ಜಾರಿಗೆ ಬರಲಿಲ್ಲ!

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಭಾರತೀಯ ಜನತಾ ಪಕ್ಷವು ರಾಮನ ಬಗ್ಗೆ ಮಾತನಾಡಿತ್ತು. ಯಂತ್ರ ನಾಗರಿಕತೆಯೆಂಬ ಅನೈತಿಕತೆಯಿಂದ ರೋಸಿ ಹೋಗಿದ್ದ ಭಾರತದ ಜನತೆ ಅವರ ಮಾತು ಕೇಳಿ ಸಂತಸಗೊಂಡಿತ್ತು. ‘ರಾಮರಾಜ್ಯವನ್ನು ಜಾರಿಗೆ ತಂದಾರು ಇವರು’ ಎಂಬ ಆಶಯದಿಂದ ಜನತೆ ಇವರನ್ನು ದೆಹಲಿಯ ಗದ್ದುಗೆಗೇರಿಸಿ ಕುಳ್ಳರಿಸಿತು. ಆದರೆ ಈಗ, ನಾಲ್ಕು ವರ್ಷಗಳ ನಂತರ, ನಿಧಾನವಾಗಿ ಅದೇ ಜನತೆಯ ಮನದಲ್ಲಿ ಅನುಮಾನಗಳು ಕಾಡತೊಡಗಿವೆ. ರಾಮರಾಜ್ಯವನ್ನು ಜಾರಿಗೆ ತರುವುದಿರಲಿ, ಭಾರತದಂತಹ ಬೃಹತ್ತಾದ ಹಾಗೂ ಸಂಕೀರ್ಣವಾದ ಪ್ರಜಾಪ್ರಭುತ್ವ ವ್ಯವಸ್ಥೆಯೊಂದನ್ನು ಆಳಲಿಕ್ಕೆ  ಭಾರತೀಯ ಜನತಾ ಪಕ್ಷ (ಭಾಜಪ) ಅರ್ಹವೇ ಎಂಬ ಅನುಮಾನವು ಜನತೆಯನ್ನು, ಅದರಲ್ಲೂ ಗ್ರಾಮೀಣ ಜನತೆಯನ್ನು ಗಾಢವಾಗಿ ಕಾಡತೊಡಗಿದೆ.

ಅನುಮಾನಗಳು ಹಲವು ರೀತಿಯವು. ಮೊದನೆಯದಾಗಿ, ಭಾಜಪ ಜಾರಿಗೊಳಿಸಲು ಯತ್ನಿಸುತ್ತಿರುವಪರಂಪರೆ ಪೊಳ್ಳಾದದ್ದು ಎಂದು ಗ್ರಾಮೀಣ ಜನರಿಗೆ ಅನ್ನಿಸತೊಡಗಿದೆ. ಕೇವಲ ಮೇಲ್ಜಾತಿ, ಮೇಲ್ವರ್ಗಗಳ ಪರವಾದದ್ದು ಅದು, ಯಂತ್ರ ನಾಗರಿಕತೆ ಯೊಟ್ಟಿಗೆ ರಾಜಿ ಮಾಡಿಕೊಂಡಂತ ಹದ್ದು ಅದು ಎಂದು ಅವರಿಗೆ ಅನ್ನಿಸತೊಡಗಿದೆ. ಗೋವಿನ ಉದಾಹರಣೆ ತೆಗೆದುಕೊಳ್ಳಿ. ಭಾಜಪ ಗೋರಕ್ಷಣೆಯ ಮಾತನ್ನಾಡಿದಾಗ, ಗೋ-ಆಧಾರಿತ ಕೃಷಿ ಪದ್ಧತಿಯನ್ನು ಉತ್ತೇಜಿಸುತ್ತದೆ ಅದು ಎಂದೇ ಜನರು ಭಾವಿಸಿದ್ದರು. ಹಾಗಾಗಲಿಲ್ಲ. ಭಾಜಪದ ಗೋರಕ್ಷಣಾ ಅಭಿಯಾನವು ಗ್ರಾಮಗಳನ್ನು ತಲುಪಲೇ ಇಲ್ಲ. ನಗರಗಳಕಸಾಯಿಖಾನೆಗಳ ಸುತ್ತ ನಡೆಯಿತು ಅಸಹಿಷ್ಣುತೆಯ ಒಂದು ಅಭಿಯಾನ. ಸತ್ತ ಗೋವನ್ನು ತಿನ್ನಬೇಕಾಗಿ ಬಂದಿರುವ ದುರದೃಷ್ಟ ದಲಿತ ಹಾಗೂ ಕಸಾಯಿಖಾನೆಗೆ ಅವುಗಳನ್ನು ತಲುಪಿಸುತ್ತಿರುವ ಮುಸಲ್ಮಾನನನ್ನು ಹಿಗ್ಗಾಮುಗ್ಗ ಬಡಿಯಿತು ಅಭಿಯಾನ.

ಭಾರತೀಯ ಪರಂಪರೆಗೆ ತವರುಮನೆಯಂತಿರುವ ಕೈ-ಉತ್ಪಾದಕ ಕ್ಷೇತ್ರಗಳತ್ತ ಭಾಜಪ ತಪ್ಪಿಯೂ ಕಣ್ಣು ಹಾಯಿಸಲಿಲ್ಲ. ಈ ಗ್ರಾಮೀಣ ಕ್ಷೇತ್ರ ಅಗಾಧವಾದದ್ದು. ದೇಶದ ಒಟ್ಟು ಉತ್ಪಾದಕತೆಯ ಅರವತ್ತು ಪ್ರತಿಶತವಿದೆ ಈ ಕ್ಷೇತ್ರದ ಉತ್ಪಾದಕತೆ. ಪರಿಸರ ರಕ್ಷಣೆ ಮಾಡುತ್ತಲೇ, ಬಡವರಿಗೆ ಉದ್ಯೋಗ ಹಾಗೂ ವರಮಾನಗಳನ್ನು ಒದಗಿಸುತ್ತಲೇ, ಉತ್ಪಾದಕತೆಯನ್ನು ನಿಭಾಯಿಸಿಕೊಂಡು ಬರುತ್ತಿದೆ ಇದು. ಭಾರತೀಯ ಭಾಷೆಗಳು, ಸಂಸ್ಕೃತಿ ಹಾಗೂ ಜೀವನಶೈಲಿಗಳ ಭಂಡಾರದಂತಿದೆ ಇದು.

ರಾಮರಾಜ್ಯವನ್ನು ನಿಜಕ್ಕೂ ನಿರ್ಮಿಸುವುದಿದ್ದರೆ ಅದಕ್ಕೆ ಇಲ್ಲಿ ಬುನಾದಿ ಹಾಕಬೇಕಾಗಿತ್ತು. ಅದರೆ ರಾವಣ ನಗರಿಯನ್ನು ಅಭಿವೃದ್ಧಿಗೆಂದು ಆಯ್ದುಕೊಂಡಿತು ಭಾಜಪ. ಮಾತ್ರವಲ್ಲ, ಕೈ-ಉತ್ಪನ್ನಗಳ ಮೇಲೆ ಜಿಎಸ್‌ಟಿ ಎಂಬ ಜಜಿಯಾ ತೆರಿಗೆ ವಿಧಿಸಿತು.

ಕೈ-ಉತ್ಪಾದಕ ಕ್ಷೇತ್ರದಡಿ ಪರಿಗಣನೆಗೆ ಬರುವ ಮಳೆ ಆಧಾರಿತ ಕೃಷಿ ಪದ್ಧತಿಯನ್ನೇ ತೆಗೆದುಕೊಳ್ಳಿ. ಯಂತ್ರಗಳ ಗದ್ದಲವಿಲ್ಲ ಇಲ್ಲಿ, ಭಾರಿ ಅಣೆಕಟ್ಟುಗಳ ಆಕ್ರೋಶವಿಲ್ಲ ಇಲ್ಲಿ, ರಾಸಾಯನಿಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳ ಆರ್ಭಟವಿಲ್ಲ ಇಲ್ಲಿ. ಇಲ್ಲಿ ಇರುವುದೇನಿದ್ದರೂ ರಾಮಸೀತೆಯರಂತೆ ನಿಸರ್ಗ ಹಾಗೂ ಮನುಷ್ಯ ಮಾತ್ರ. ರೈತ, ರೈತನ ಹೆಂಡತಿ, ಮಕ್ಕಳು, ಗೋವು, ನೇಗಿಲು ಇತ್ಯಾದಿ.

ಸಂತ ಪರಂಪರೆಗಳನ್ನು ಸಲಹಿಕೊಂಡು ಬಂದಿರುವ ಸರಳ ಕ್ಷೇತ್ರವಿದು. ಈ ಕ್ಷೇತ್ರವನ್ನು ಕಡೆಗಣಿಸಿ ಅದಾವ ರಾಮರಾಜ್ಯ ನಿರ್ಮಿಸೀತು ಭಾಜಪ! ಈ ಕ್ಷೇತ್ರ ಅನಾದರಕ್ಕೆ ಪಕ್ಕಾಗಿದೆ, ಹಸಿವಿನಿಂದ ತತ್ತರಿಸುತ್ತಿದೆ. ಭಾಜಪ ಸರ್ಕಾರ ಬಂದ ಮೇಲೆ ಗ್ರಾಮೀಣ ಹಸಿವು ಹೆಚ್ಚಿದೆಯೇ ಹೊರತು ಕಡಿಮೆಯಾಗಲಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಈಗ ತೆರಿಗೆಯ ಭಾರ ಬೇರೆ!

ಕೈ-ಉತ್ಪನ್ನಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿದ್ದರ ಬಗ್ಗೆ ದೇಶದಾದ್ಯಂತ ಪ್ರತಿಭಟನೆಗಳು ನಡೆದವು. ಕರ್ನಾಟಕವು ಪ್ರತಿಭಟನೆಗಳ ಕೇಂದ್ರ ಸ್ಥಾನದಲ್ಲಿ ನಿಂತಿತು. ಇಲ್ಲಿನ ರಾಜ್ಯ ಸರ್ಕಾರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದವು. ಒಟ್ಟಾರೆ ಪ್ರತಿಭಟನೆಗೆ ಮಣಿದ ಭಾಜಪ ಸರ್ಕಾರವು ಇಪ್ಪತ್ತೊಂಬತ್ತು ಕೈ-ಉತ್ಪನ್ನಗಳನ್ನು ಶೂನ್ಯ-ತೆರಿಗೆ ವ್ಯವಸ್ಥೆಯಡಿಯಲ್ಲಿ ತರುವುದಾಗಿ ಘೋಷಣೆ ಮಾಡಿತು. ಪ್ರತಿಭಟನೆ ನಿಂತಿತು. ಭಾಜಪ ಮಾತು ಮರೆತಿತು.

ಮಳೆ ಆಧಾರಿತ ಕೃಷಿ, ನೇಕಾರಿಕೆ, ಕುಶಲಕರ್ಮ, ಸುಸ್ಥಿರ ಹೈನುಗಾರಿಕೆ, ಮೀನುಗಾರಿಕೆ, ಕುಂಬಾರಿಕೆ, ಕಮ್ಮಾರಿಕೆ ಇತ್ಯಾದಿ ಹಲವು ಹತ್ತು ಕೈ-ಉತ್ಪಾದಕ ಕ್ಷೇತ್ರಗಳ ಬಡಜನರು ಈ ಬರ್ಬರ ತೆರಿಗೆಯ ಭಾರದಿಂದಾಗಿ ನಲುಗಿ ಹೋಗಿದ್ದಾರೆ. ಅವರು ಪಾವತಿಸಬೇಕಿರುವ ತೆರಿಗೆಗಿಂತ ಮಿಗಿಲಾಗಿ ತೆರಿಗೆ ವ್ಯವಸ್ಥೆಯ ಭಾರ, ಪರಕೀಯ ಭಾಷೆಯ ಭಾರ, ಕಂಪ್ಯೂಟರೀಕರಣದ ಭಾರ, ತೆರಿಗೆ ಅಧಿಕಾರಿಗಳ ಕಿರುಕುಳ, ಮಾಲು ಸಾಗಾಣಿಕೆಯಲ್ಲಿ ಆಗುತ್ತಿರುವ ಉಪದ್ರವ, ಕಚ್ಚಾ ನೂಲಿನ ಪೂರೈಕೆಯಲ್ಲಿ ಆಗುತ್ತಿರುವ ಅಡಚಣೆ, ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಗಳು ಗ್ರಾಮೀಣ ಉತ್ಪಾದಕರನ್ನು ಸೊರಗಿಸಿವೆ.

ಭಾಜಪ ಸರ್ಕಾರದಿಂದ ಯಾರಿಗಾದರೂ ನಿರಾಸೆಯುಂಟಾಗಿದ್ದರೆ ಅದು ಆ ಶ್ರೀರಾಮಚಂದ್ರನಿಗೇ ಸರಿ. ರಾಮರಾಜ್ಯವನ್ನಿವರು ಜಾರಿಗೆ ತರಲಿಲ್ಲ. ಸ್ವರಾಜ್ಯ, ಸ್ವದೇಶಿ, ಗ್ರಾಮ ಕೈಗಾರಿಕೆ, ವಿಕೇಂದ್ರೀಕೃತ ಆಡಳಿತ, ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ, ಮಹಿಳೆ ಹಾಗೂ ಮಕ್ಕಳ ಸಂರಕ್ಷಣೆ, ವೃದ್ಧರ ಸಂರಕ್ಷಣೆ ಇತ್ಯಾದಿ ಕಾರ‍್ಯಕ್ರಮಗಳನ್ನು ಜಾರಿಗೆ ತರಲಿಲ್ಲ. ಇವುಗಳೇನಿದ್ದರೂ ಸರ್ಕಾರದ ಜಾಹೀರಾತುಗಳಲ್ಲಿ ಫಳಫಳಿಸುತ್ತಿವೆ.

ಭಾಜಪ ಸರ್ಕಾರ ವಿದೇಶಿ ಬಂಡವಾಳಗಾರರ ಜೊತೆ ಶಾಮೀಲಾಗಿದೆ, ರಾವಣ ನಗರಿಗಳು ಹಾಗೂ ರಾವಣ ಕೈಗಾರಿಕೆಗಳ ನಿರ್ಮಾಣದಲ್ಲಿ ತೊಡಗಿದೆ. ಇದು ಗ್ರಾಮೀಣ ಜನತೆಗೆ ಅರಿವಾಗತೊಡಗಿದೆ.

ರಾಜಕೀಯ ಕ್ಷೇತ್ರದ ಉದಾಹರಣೆ ತೆಗೆದುಕೊಳ್ಳಿ: ತನ್ನನ್ನು ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳನ್ನೂ ದೇಶದ ರಾಜಕಾರಣದಿಂದಲೇ ಮುಕ್ತವಾಗಿಸುವ ಪಣ ತೊಟ್ಟಿದೆ ಭಾಜಪ. ತನ್ನ ಹಿರಿತನವನ್ನು ಒಪ್ಪಿಕೊಳ್ಳದ, ತನ್ನ ಬಾಲಬಡುಕನಾಗಿ ಉಳಿಯಲಾರದ ಎಲ್ಲ ಪಕ್ಷಗಳೂ ನಿರ್ನಾಮವಾಗಲಿ ಎಂದು ಹಾರೈಸುತ್ತಿದೆ. ‘ಕಾಂಗ್ರೆಸ್‌ಮುಕ್ತ ಭಾರತ’, ‘ಕಮ್ಯೂನಿಸ್ಟ್‌ಮುಕ್ತ ಭಾರತ’ ಎಂಬಿತ್ಯಾದಿ ಕಾರ‍್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಈ ಪಕ್ಷಕ್ಕೆ ಅತೀವ ಆಸಕ್ತಿ. ಇದು ಸರ್ವಾಧಿಕಾರಿ ನಿಲುವಲ್ಲದೆ ಮತ್ತೇನು ಹೇಳಿ? ಆಡಳಿತ ಪಕ್ಷದ ಆಡಳಿತ ವೈಖರಿಯನ್ನು ವಿರೋಧಿಸುವ ಅಗತ್ಯವಿರುತ್ತದೆ ಕೆಲವು ಜನಸಮುದಾಯಗಳಿಗೆ.

ಅವು ವಿರೋಧ ಪಕ್ಷಗಳ ಆಸರೆ ಪಡೆಯುತ್ತವೆ. ಅವುಗಳ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ ವಿರೋಧ ಪಕ್ಷವೆಂಬುದು. ಉದಾಹರಣೆಗೆ ಭಾರತೀಯ ಮುಸಲ್ಮಾನರನ್ನೇ ತೆಗೆದುಕೊಳ್ಳಿ. ಸಾಕಷ್ಟು ದೊಡ್ಡ ಸಂಖ್ಯೆಯ ಜನಸಮುದಾಯವದು. ಎಲ್ಲ ಜನಸಮುದಾಯಗಳಲ್ಲಿರುವಂತೆ ಅವರಲ್ಲಿಯೂ ಕಾಳಸಂತೆಕೋರರು, ಬಂಡಾವಾಳಶಾಹಿಗಳು, ಪ್ರತ್ಯೇಕತಾವಾದಿಗಳು, ಪುರೋಹಿತಶಾಹಿಗಳು, ಕಳ್ಳರು... ಎಲ್ಲರೂ ಇದ್ದಾರೆ. ಆದರೆ ಹೆಚ್ಚಿನ ಮುಸಲ್ಮಾನರು ನಿರ್ಗತಿಕರು. ದಲಿತರ ಬಲಬದಿಗೆ ನಿಲ್ಲುವವರು ಅವರು.

ಭಾಜಪವು ಈ ಸಮುದಾಯವನ್ನು ತಿರಸ್ಕರಿಸಿದೆ. ತಾನು ಪ್ರತಿನಿಧಿಸುವುದಿಲ್ಲ ಅವರನ್ನು ಎಂದು ನಿರ್ಧರಿಸಿದೆ. ಒಂದೇ ಒಂದು ಮುಸಲ್ಮಾನ ಅಭ್ಯರ್ಥಿಯನ್ನೂ ಅದು ನಿಲ್ಲಿಸುತ್ತಿಲ್ಲ ಚುನಾವಣೆಗಳಲ್ಲಿ. ಸಂತೋಷ! ಆದರೆ ಅವರಿಗೊಂದು ದನಿ ಬೇಡವೇ? ಅವರಿಗೆ ದನಿಯಾಗುವವರೆಲ್ಲರೂ ಮುಸಲ್ಮಾನರ ಓಲೈಕೆ ಮಾಡುವವರು, ರಾಷ್ಟ್ರವಿರೋಧಿಗಳು ಎಂದು ಬೊಬ್ಬೆ ಹಾಕುವುದು ಸರಿಯೇ? ಆಸರೆಯಿಲ್ಲದ ಭಾರತೀಯ ಮುಸಲ್ಮಾನನಿಗೆ ಆಸರೆ ನೀಡುವುದು ರಾಷ್ಟ್ರವಿರೋಧಿ ಕೆಲಸ ಹೇಗಾಗುತ್ತದೆಯೋ ಶ್ರೀರಾಮಚಂದ್ರನೇ ಬಲ್ಲ!

ಮುಖ್ಯ ಸಂಗತಿಯೆಂದರೆ, ತಾನೊಂದು ಆಳುವ ಪಕ್ಷ, ತಾನೊಬ್ಬ ದೊರೆ ಎಂಬ ಸಂಗತಿಯನ್ನೇ ಮರೆತಿರುವಂತಿದೆ ಭಾಜಪ. ದೊರೆಗಳು ದೇಶದ ಸಮಸ್ತ ಪ್ರಜೆಗಳನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳುವುದು ಕೇವಲ ನಾವಲ್ಲ, ಅದು ಸಾಕ್ಷಾತ್ ಮನುವಿನ ನಿಯಮ. ಮನುವಿನ ನಿಯಮವನ್ನೇ ಮರೆತಂತಿದೆ ಮನುವಾದಿ ಭಾಜಪ. ಜೈನರು, ಬೌದ್ಧರು, ಮುಸಲ್ಮಾನರು, ಕ್ರೈಸ್ತರು ಎಂಬಿತ್ಯಾದಿ ‘ಪರಕೀಯ’ರನ್ನು ಒಟ್ಟಿಗೆ ಕೊಂಡೊಯ್ಯುತ್ತಿದ್ದರು ಹಿಂದೂ ದೊರೆಗಳು ಎಂಬ ಸಂಗತಿಯನ್ನು ಭಾಜಪ ನೆನಪು ಮಾಡಿಕೊಳ್ಳುವುದು ಕ್ಷೇಮಕರ.

ಸಂವಿಧಾನವನ್ನು ಬದಲು ಮಾಡಬೇಕೆಂಬ ಒಳ ಆಶಯವಿದೆ ಭಾಜಪಕ್ಕೆ. ಆರೆಸ್ಸೆಸ್ಸಿನ ಅಧೀನ ಸಂಸ್ಥೆಗಳು ಈಗಾಗಲೇ ಹಲವಾರು ವರ್ಷಗಳಿಂದ ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತವಾಗಿರುವುದು ಗುಟ್ಟಿನ ಸಂಗತಿಯೇನಲ್ಲ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದ ಮಂಡಲ್ ಕಮಿಷನ್ನಿನ ವರದಿ ಹೊರ ಬಿದ್ದಾಗ, ಅದರ ವಿರುದ್ಧ ಹೋರಾಡಿದ್ದರು ಇಂದಿನ ಅನೇಕ ಭಾಜಪ ನಾಯಕರು. ಸಂತೋಷ! ಆದರೆ ದ್ವಂದ್ವವೇಕೆ? ಒಳ ಆಶಯವೇ ಬೇರೆ, ಹೊರಗಿನ ಮಾತೇ ಬೇರೆ ಎಂಬ ನಿಲುವೇಕೆ? ಶ್ರೀರಾಮಚಂದ್ರನ ನಡತೆಯಲ್ಲ ಅದು.

ಕಡೆಯದಾಗಿ ಭ್ರಷ್ಟಾಚಾರ! ಬಿಜೆಪಿಗೆ ಅತ್ಯಂತ ಪ್ರಿಯವಾದ ಸಮಸ್ಯೆಯಿದು. ಹಾಲಿ ನಡೆದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭಾಜಪ, ಕಾಂಗ್ರೆಸ್ ಸರ್ಕಾರವನ್ನು ಕಡುಭ್ರಷ್ಟ ಸರ್ಕಾರ ಎಂದು ಕರೆದಿದೆ. ಇದ್ದೀತು. ಆದರೆ ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದಾಗ, ಭಾಜಪ ಮಂತ್ರಿಗಳಾಗಿದ್ದ ಹಲವರು- ಮುಖ್ಯಮಂತ್ರಿ ಸಹಿತವಾಗಿ- ಭ್ರಷ್ಟಾಚಾರದ ಆಪಾದನೆ ಹೊತ್ತು ಜೈಲಿಗೆ ಹೋಗಿ, ಜಾಮೀನಿನ ಮೇಲೆ ಹೊರ ಬಂದವರು. ಇವರು ಮತ್ತೊಬ್ಬರ ಮೇಲೆ ಬೊಟ್ಟು ಮಾಡುವುದು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ತೂರುವ ಸಾಹಸವೇ ಸರಿ. ತನಿಖೆ ಎದುರಿಸುತ್ತಿರುವ ಯಡಿಯೂರಪ್ಪ, ಜನಾರ್ದನ ರೆಡ್ಡಿ ಮುಂತಾದವರನ್ನು ದೂರವಿಟ್ಟಾದರೂ ಭ್ರಷ್ಟಾಚಾರದ ಮಾತನ್ನಾಡಿದ್ದರೆ ವಾಸಿಯಿತ್ತು.

ನಡೆಯ ಭ್ರಷ್ಟತೆಗೆ ಕಲಶವಿಟ್ಟಂತಿದೆ ನುಡಿಯ ಭ್ರಷ್ಟತೆ! ಮೊನ್ನೆ ತಮ್ಮ ಭಾಷಣದಲ್ಲಿ ಪ್ರಧಾನಿಯವರು ಎದುರಾಳಿಗಳನ್ನು ನಾಯಿ ಎಂದು ಕರೆದಿದ್ದಾರೆ. ಹಿಂದೂಗಳ ಸದಭಿರುಚಿಯನ್ನು ಚುಚ್ಚಬಲ್ಲಂತಹ ಮಾತಿದು. ಇತ್ತ ಮುಧೋಳದ ನಾಯಿಗೂ ಅವಮಾನ. ಅತ್ತ ರಾಜಧರ್ಮಕ್ಕೂ ಅವಮಾನ. ಭಾರತದ ಪ್ರಧಾನಿ ಮಂತ್ರಿಗೆ ಶೋಭೆ ತರುವುದಿಲ್ಲ ಇಂತಹ ನುಡಿಗಳು.

ಒಟ್ಟು ಕತೆಯ ನೀತಿಯೆಂದರೆ ಭಾಜಪ ಇರಬೇಕು. ಕಾಂಗ್ರೆಸ್ ಇರುತ್ತದೆಯೋ ಕರಗಿ ಹೋಗುತ್ತದೆಯೋ, ಕಮ್ಯುನಿಸ್ಟರು ಇರುತ್ತಾರೆಯೋ ಕರಗಿ ಹೋಗುತ್ತಾರೆಯೋ, ಭಾರತೀಯ ಮುಸಲ್ಮಾನರು ಇರುತ್ತಾರೆಯೋ ಕರಗಿ ಹೋಗುತ್ತಾರೆಯೋ ಎಂಬುದನ್ನು ಅವರವರ ಪಾಡಿಗೆ ಬಿಡೋಣ. ಭಾಜಪ ನಿಯುಕ್ತವಾಗಿರುವುದು ಸಕಲ ಭಾರತೀಯರನ್ನೂ ಒಟ್ಟಾಗಿ ಸಲಹಲಿಕ್ಕಾಗಿ. ಇಷ್ಟೊಂದು ಅಸಹಿಷ್ಣುತೆ, ಇಷ್ಟೊಂದು ಅಸಹನೆಯು ರಾಜಧರ್ಮಕ್ಕೆ ಸಲ್ಲುವ ಸಂಗತಿಯಲ್ಲ.

ಬನ್ನಿ! ಭಾರತೀಯರೆಲ್ಲರೂ ಸೇರಿ ಭಾರತೀಯ ಪರಂಪರೆಯೊಂದನ್ನು ನಿರ್ಮಾಣ ಮಾಡೋಣ. ನಿಜವಾದ ಅರ್ಥದ ರಾಮರಾಜ್ಯ ಕಟ್ಟೋಣ. ಇದೇ ಮಾತನ್ನು, ಈ ಹಿಂದೆ, ಇಷ್ಟೇ ಕಟುವಾಗಿ ಕಾಂಗ್ರೆಸ್ಸಿಗೂ ಹೇಳಲಾಗಿದೆ, ಕಮ್ಯುನಿಸ್ಟರಿಗೂ ಹೇಳಲಾಗಿದೆ. ನಮಗೆ ಎಲ್ಲರೂ ಒಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT