ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿ

7

ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿ

Published:
Updated:
ಬಿಜೆಪಿ ಕಾರ್ಯಕಾರಿಣಿಗೆ ಮುನ್ನ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರು ಪಕ್ಷದ ಸಂಸ್ಥಾಪಕರ ಭಾವಚಿತ್ರಗಳಿಗೆ ಗೌರವ ಸಲ್ಲಿಸಿದರು

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರದ ನಾಯಕರು ಅಧಿಕಾರಕ್ಕಾಗಿ ಬಡಿದಾಡಿ, ಕಚ್ಚಾಡಿಕೊಳ್ಳುತ್ತಿದ್ದು ಸರ್ಕಾರ ಉರುಳುವ ಸ್ಥಿತಿಯಲ್ಲಿದೆ. ಇಂತಹ ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದಿದೆ. ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ರೈತ ಸಮುದಾಯ ಕಂಗಾಲಾಗಿದೆ. ಯಾವುದೇ ಸೌಲಭ್ಯಗಳು ಜನರಿಗೆ ತಲುಪುತ್ತಿಲ್ಲ. ಇವೆಲ್ಲವನ್ನೂ ಮುಂದಿಟ್ಟುಕೊಂಡು ಹಂತ ಹಂತವಾಗಿ ಹೋರಾಟ ನಡೆಸಲು ಅಣಿಯಾಗಬೇಕು ಎಂದು ಹೇಳುವ ಮೂಲಕ ಶಾಸಕರು, ಜಿಲ್ಲಾಧ್ಯಕ್ಷರನ್ನು ಹುರಿದುಂಬಿಸಿದರು. 

ಟಾರ್ಗೆಟ್ 25: ‘ರಾಜ್ಯ ಸರ್ಕಾರದ ವೈಫಲ್ಯ ಹಾಗೂ ನರೇಂದ್ರ ಮೋದಿ ಸರ್ಕಾರದ ಸಾಧನೆಯೇ ನಮಗೆ ವರವಾಗಲಿದೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 25 ಸ್ಥಾನ ಗೆಲ್ಲಿಸಿಕೊಂಡು ಬರುವ ಗುರಿ ನಮ್ಮ ಮುಂದಿದೆ. ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಅವರು ಗುರುವಾರ ಚುನಾವಣೆ ಕಹಳೆ ಮೊಳಗಿಸಿದ್ದಾರೆ. ಕರ್ನಾಟಕದಲ್ಲಿ ನಾವು ಹಿಂದೆ ಬೀಳಬಾರದು’ ಎಂದರು.

‘ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಬಿಜೆಪಿ ಬರಲು ಸಿದ್ಧರಾಗಿದ್ದಾರೆ. ಹೊರಗಿನವರು ಬಂದರೆ ನಮ್ಮ ಕುರ್ಚಿಗೆ ಅಡ್ಡಿಯಾಗುತ್ತದೆ ಎಂದು ನಮ್ಮವರು ಯೋಚಿಸುವುದು ಬೇಡ. ಯೋಚಿಸಿ, ಯೋಗ್ಯರು ಪ್ರಾಮಾಣಿಕರನ್ನು ಗುರುತಿಸಿ, ಅವರ ಮನೆಗಳಿಗೆ ಹೋಗಿ ಮನವೊಲಿಸಿ ಕರೆತಂದು ಚುನಾವಣೆ ಸನ್ನದ್ಧರಾಗಿ’ ಎಂದು ಹೇಳಿದರು.

ಶಾಸಕರ ಸೆಳೆಯಲು ಸಿಗದ ಸಮಯ: ‘104 ಶಾಸಕರು ಗೆದ್ದು ಅಧಿಕಾರ ಹಿಡಿದಾಗ ವಿಶ್ವಾಸ ಮತ ಸಾಬೀತು ಪಡಿಸಲು ಕೇವಲ 24 ಗಂಟೆ ಸಮಯ ನಿಗದಿ ಮಾಡಲಾಯಿತು. ಹೀಗಾಗಿ ನಮಗೆ ಅಗ್ನಿ ಪರೀಕ್ಷೆ ಎದುರಾಯಿತು. ಜೆಡಿಎಸ್, ಕಾಂಗ್ರೆಸ್‌ನ ಅನೇಕ ಶಾಸಕರು ಬಿಜೆಪಿ ಬರಲು ಸಿದ್ಧರಾಗಿದ್ದರು. ಸಮಯದ ಅಭಾವದಿಂದ ಹಿನ್ನಡೆಯಾಯಿತು. ಇದು ನಿಮ್ಮೆಲ್ಲರಿಗೂ ಅನುಭವಕ್ಕೆ ಬಂದಿದೆ’ ಎಂದು ಹೇಳಿದರು.

37 ಶಾಸಕರ ಬಜೆಟ್‌ !

ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿರುವುದು 37 ಶಾಸಕರ ಅಲ್ಪಮತದ ಬಜೆಟ್‌. ಅದಕ್ಕೆ ಕಾಂಗ್ರೆಸ್ ಬೆಂಬಲವೇ ಇಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಬಜೆಟ್‌ನಲ್ಲಿ ಸಾಲಮನ್ನಾ ಮಾಡದೇ ಇದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲು ಕಾರ್ಯಕಾರಿಣಿಯಲ್ಲಿ ನಿರ್ಧರಿಸಲಾಗಿದೆ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !