ಕಹಿ ನಡುವೆಯೂ ‘ಅಮೃತ’ ಪಡೆದಳು...

ಶನಿವಾರ, ಏಪ್ರಿಲ್ 20, 2019
30 °C
ನೆಮ್ಮದಿಯ ಬದುಕನ್ನೇ ಕಸಿದುಕೊಂಡ ಅಪರೂಪದ ಕಾಯಿಲೆ ನಡುವೆ ಪದವಿ ಪೂರೈಸಿದ ಸಾಧನೆ

ಕಹಿ ನಡುವೆಯೂ ‘ಅಮೃತ’ ಪಡೆದಳು...

Published:
Updated:
Prajavani

ಕುಂದಾಪುರ: ಚಿಕ್ಕ ವಯಸ್ಸಿನಲ್ಲೇ ತನ್ನ ಪ್ರಾಯದ ಮಕ್ಕಳು ಓಡಾಡಿಕೊಂಡು ಶಾಲೆ–ಕಾಲೇಜಿಗೆ ತೆರಳಿ ವಿದ್ಯಾಭ್ಯಾಸ ಪಡೆದುಕೊಳ್ಳುವ ಹಂತದಲ್ಲಿ, ಕಾಡುವ ಕಾಯಿಲೆಯಿಂದಾಗಿ ಬದುಕು ಹಾಳಾಗಬಾರದು ಎನ್ನುವ ಹಠಕ್ಕೆ ಬಿದ್ದ ಆಕೆ ಶಾಲೆಗೆ ಹೋಗದೆ, ಕಾಲೇಜು ಮೆಟ್ಟಿಲು ಹತ್ತದೇ ಮನೆಯಲ್ಲಿಯೇ ಕುಳಿತು ಪದವಿ ಶಿಕ್ಷಣ ಮುಗಿಸಿದ್ದಳು. ಇದು ಈ ಯುವತಿಯ ಸಾಹಸಗಾಥೆ.

ಕುಂದಾಪುರ ಸಮೀಪದ ನಾಡಾ ಗುಡ್ಡೆಯಂಗಡಿಯ ಸಾಲಾಡಿ ಎಂಬಲ್ಲಿಯ ಬಡ ಕುಟುಂಬದ ಗೋಪಾಲ ಶೆಟ್ಟಿ ಹಾಗೂ ವಸಂತಿ ಶೆಟ್ಟಿ ದಂಪತಿಯ ಮಗಳು ಅಮೃತಾ ಶೆಟ್ಟಿ (27) ವಿಧಿಯಾಟಕ್ಕೆ ಸಡ್ಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ದಂಪತಿಯ 2 ಮಕ್ಕಳಲ್ಲಿ ಅಮೃತಾ ಹಿರಿಯವರು, ಕಿರಿಯ ಸಹೋದರ ಮನೀಶ್‌ ಖಾಸಗಿ ಬಸ್ಸಿನಲ್ಲಿ ನಿರ್ವಾಹಕ. ತಂದೆ ಗೋಕಾಕ್‌ನಲ್ಲಿ ಹೋಟೇಲ್‌ ನೌಕರರಾಗಿದ್ದಾರೆ. ತಾಯಿ ವಸಂತಿಯೇ ಮಗಳ ಬದುಕಿಗೆ ಆಧಾರವಾಗಿದ್ದಾರೆ. ಸಣ್ಣ ಮನೆಯೊಂದು ಬಿಟ್ಟರೆ ಈ ಕುಟುಂಬಕ್ಕೆ ತಮ್ಮದು ಎಂದು ಹೇಳಿಕೊಳ್ಳುವ ಆಸ್ತಿ ಇಲ್ಲ.

ಪ್ರಾಥಮಿಕ ಶಾಲಾ ಹಂತದಲ್ಲಿ ಎಲ್ಲ ಮಕ್ಕಳಂತೆ ಬೆಳವಣಿಗೆಯನ್ನು ಕಂಡಿದ್ದ ಅಮೃತಾಳಿಗೆ ಬರು ಬರುತ್ತಾ ನಾಲಿಗೆ ಹೊರ ಬರಲಾರಂಭಿಸಿತ್ತು. ನಾಲಿಗೆ ಮೇಲಿನ ಭಾರ ನಿಯಂತ್ರಣವಾಗದೆ ಇದ್ದಾಗ ಆಕೆಯ ದೇಹ ನಿಯಂತ್ರಣ ತಪ್ಪುತ್ತಿತ್ತು. ಕಷ್ಟ ಪಟ್ಟು 8ನೇ ತರಗತಿಯವರೆಗೂ ಮನೆಯಿಂದಲೇ ಶಾಲೆಗೆ ಹೋಗಿ ಬರುತ್ತಿದ್ದ ಆಕೆ 9ನೇ ತರಗತಿಗೆ ಕೊಲ್ಲೂರಿನ ಆಸ್ಪತ್ರೆಗೆ ಸೇರಿ ವಿದ್ಯಾಭ್ಯಾಸ ಮುಂದುವರಿಸಲು ತೀರ್ಮಾನಿಸಿದ್ದರು. ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದ ಕಾಯಿಲೆಯಿಂದಾಗಿ ಆಕೆ ಹಾಸ್ಟೆಲ್‌ ಹಾಗೂ ಶಾಲೆಯ ವ್ಯಾಸಂಗವನ್ನು ಬಿಡಬೇಕಾಯ್ತು.

ಶಾಲೆ ಬಿಟ್ಟರೂ ಓದಬೇಕು ಎನ್ನುವ ಛಲವನ್ನು ಬಿಡದ ಆಕೆ, ಮನೆಯಲ್ಲಿ ಕುಳಿತೇ ಬಾಹ್ಯ ಶಿಕ್ಷಣದ ಮೂಲಕ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಶಿಕ್ಷಣ ಪೂರೈಸಿದ್ದಾರೆ. ಶಿಕ್ಷಣದ ಬಳಿಕ ಸ್ವಲ್ಪ ಕಾಲ ಪತ್ರಿಕಾ ರಂಗದಲ್ಲಿ ದುಡಿದ ಆಕೆ, ಕಾಯಿಲೆಯ ಉಲ್ಬಣದಿಂದಾಗಿ ಅದನ್ನೂ ತ್ಯಜಿಸಿದ್ದಾರೆ.

ಈಕೆಯನ್ನು ಬಿಡದೆ ಕಾಡುತ್ತಿರುವ ಕಾಯಿಲೆಗೆ ವೈದ್ಯ ಲೋಕ ನೀಡಿದ ಹೆಸರು ಮಸ್ಕುಲರ್ ಡಿಸ್ಟ್ರೋಫಿ. ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಜಾರಿದ ದವಡೆಗಾಗಿ ಚಿಕಿತ್ಸೆ ಪಡೆದುಕೊಂಡ ಆಕೆ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಯಲ್ಲಿ ತಪಾಸಣೆ ಹಾಗೂ ಚಿಕಿತ್ಸೆಗೆಂದು ತೆರಳಿದಾಗ ತನ್ನನ್ನು ಕಾಡುವ ಕಾಯಿಲೆಯ ಮಾಹಿತಿ ದೊರಕಿದೆ. ನಡೆದಾಡಲು ಸಾಧ್ಯವಿಲ್ಲದ ಆಕೆಗೆ ತಾಯಿ ವಸಂತಿ ಶೆಟ್ಟಿ ಹಾಗೂ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಂಡಿರುವ ಊರುಗೋಲುಗಳೇ ಆಧಾರ. ದಾನಿಯೊಬ್ಬರು ನೀಡಿದ ವೀಲ್‌ ಚೇರ್‌ ಇದ್ದರೂ ಅದನ್ನು ಬಳಸದೆ ಇರುವ ಸ್ಥಿತಿ ಇದೆ. ವೈದ್ಯರನ್ನು ಕಾಣಲೆಂದು ಮನೆಯಿಂದ ಹೊರ ಬರಬೇಕಾದರೂ ಯಾರಾದರೂ ಎತ್ತಿಕೊಂಡೇ ಕರೆತರಬೇಕಾದ ಸ್ಥಿತಿ ಇದೆ.

ಚಿಕಿತ್ಸೆಗಾಗಿ ಅಮೃತಾ ಮನೆಯಿಂದ ಹೊರ ಬರುವುದೆ ಒಂದು ಪ್ರಯಾಸದ ಸ್ಥಿತಿ. 1 ಕಿ.ಮೀ. ದೂರವನ್ನು ಗದ್ದೆಯ ಅಂಚಿನಲ್ಲಿ ಸಾಗುವ ಆಕೆಗೆ ಊರುಗೋಲುಗಳು ಸಹಾಯ ಮಾಡುತ್ತಿಲ್ಲ. ರಸ್ತೆಗೆ ಸಂಪರ್ಕ ಕಲ್ಪಿಸುವ ದಾರಿಯಲ್ಲಿ ಸಿಗುವ ನೀರಿನ ತೋಡೊಂದಕ್ಕೆ ಸಣ್ಣ ಸ್ಲಾಬ್‌ ಹಾಕಿ, ಕಾಲುದಾರಿಯನ್ನು ಒಂದಷ್ಟು ಅಗಲ ಮಾಡಿದ್ದಲ್ಲಿ ದಾನಿಗಳು ನೀಡಿದ ವೀಲ್‌ ಚೇರ್‌ನಲ್ಲಿಯೇ ಆಕೆಗೆ ರಸ್ತೆಗೆ ಬರುವ ಅವಕಾಶ ದೊರಕುತ್ತದೆ.

ರಕ್ತ ಸಂಬಂಧಿಗಳ ನಡುವೆ ನಡೆಯುವ ವೈವಾಹಿಕ ಬಂಧಗಳಿಂದಾಗಿ ಈ ಕಾಯಿಲೆ ಬರುವ ಸಾಧ್ಯತೆ ಇದೆ. ಇದಕ್ಕೆ ನಿರ್ದಿಷ್ಟವಾದ ಔಷಧಿ ಇಲ್ಲ. ವಂಶವಾಹಿ ಸಮಸ್ಯೆಯಿಂದ ಕಾಣಿಸಿಕೊಳ್ಳುವ ಈ ಕಾಯಿಲೆ. ಮುಂದಿನ ಪೀಳಿಗೆಗೆ ಬರಬೇಕು ಎನ್ನುವ ನಿಯಮಗಳಿಲ್ಲ. ಒಂದೆರಡು ತಲೆಮಾರಿನ ನಂತರವೂ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಕಾಯಿಲೆ ಹೆಚ್ಚಾಗದ್ದಂತೆ ಔಷಧಿಯನ್ನು ರೋಗಿಗಳಿಗೆ ಚಿಕಿತ್ಸೆಯ ಹಂತದಲ್ಲಿ ನೀಡಲಾಗುತ್ತದೆ ಎನ್ನುತ್ತಾರೆ ವೈದ್ಯರು.

**

ನಾವೇನು ದೊಡ್ಡ ರಸ್ತೆ ಮಾಡಿಕೊಡಿ ಎಂದು ಕೇಳುತ್ತಿಲ್ಲ, ನನ್ನ ವೀಲ್‌ ಚೇರ್‌ ಹೋಗುವಷ್ಟು ಅವಕಾಶ ಮಾಡಿಕೊಡಿ. ಕನಿಷ್ಠ ನೀರಿನ ತೋಡಿಗಾದರೂ ಒಂದು ಕಲ್ಲು ಚಪ್ಪಡಿ ಹಾಕಿಕೊಡಲಿ.
–ಅಮೃತಾ, ಮಸ್ಕುಲರ್ ಡಿಸ್ಟ್ರೋಫಿ ಪೀಡಿತ ಯುವತಿ

**

ದಾನಿಗಳಿಗೆ ಮನವಿ
ಬಡತನದಲ್ಲಿಯೇ ಮನೆಯ ನಿರ್ವಹಣೆಯ ಜತೆ ಮಗಳ ಕಾಯಿಲೆಯ ಚಿಕಿತ್ಸೆ ವೆಚ್ಚವನ್ನು ಭರಿಸಬೇಕಾದ ಸ್ಥಿತಿ ಇದೆ. ಸಣ್ಣ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಕುಟುಂಬದ ಪ್ರಯತ್ನ ಅರ್ಧಕ್ಕೆ ನಿಂತಿದೆ. ಆಕೆಗೆ ಸಹಾಯ ಮಾಡುವವರು ಅಮೃತಾ ಜಿ ಶೆಟ್ಟಿ ನಾಡಾ ವಿಜಯ ಬ್ಯಾಂಕ್‌ ಖಾತೆ ಸಂಖ್ಯೆ115401010013163 (ಐಎಫ್‌ಎಸ್‌ಸಿ ಕೋಡ್‌ ವಿಐಜೆಬಿ0001154) ಕ್ಕೆ ಕಳುಹಿಸಬಹುದು. ಆಕೆಯನ್ನು ಸಂಪರ್ಕಿಸುವವರು 9900784356 ನ್ನು ಸಂಪರ್ಕಿಸಬಹುದು.

 

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !