ಘಟಪ್ರಭೆ ಮಲಿನ: ಸತೀಶ ಶುಗರ್ಸ್, ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಸ್‌ಗೆ ನೋಟಿಸ್‌

7

ಘಟಪ್ರಭೆ ಮಲಿನ: ಸತೀಶ ಶುಗರ್ಸ್, ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಸ್‌ಗೆ ನೋಟಿಸ್‌

Published:
Updated:
Deccan Herald

ಬಾಗಲಕೋಟೆ: ಘಟಪ್ರಭಾ ನದಿಗೆ ಕೈಗಾರಿಕಾ ತ್ಯಾಜ್ಯ ಹರಿಯಬಿಟ್ಟ ಆರೋಪದ ಮೇರೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಹುಣಶ್ಯಾಳದ ಸತೀಶ ಶುಗರ್ಸ್ ಹಾಗೂ ಹುಕ್ಕೇರಿ ತಾಲ್ಲೂಕು ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್ ಇಂಡಸ್ಟ್ರೀಸ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಷೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಬಾಗಲಕೋಟೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಎ.ಎಂ.ಮಣಿಯಾರ್ ನೀಡಿದ ವರದಿ ಆಧರಿಸಿ ಜು.27ರಂದು ಚಿಕ್ಕೋಡಿ ಕಚೇರಿಯಿಂದ ಎರಡೂ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಘಟಪ್ರಭಾ ನದಿ ನಿಮ್ಮ ಕಾರ್ಖಾನೆಗಳ ತ್ಯಾಜ್ಯದಿಂದ ಮಲಿನಗೊಳ್ಳುತ್ತಿದೆ. ಅದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳ ಒಳಗಾಗಿ ಉತ್ತರ ನೀಡಬೇಕು. ಇಲ್ಲದಿದ್ದರೆ ಕಾರ್ಖಾನೆಗಳನ್ನು ಮುಚ್ಚಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಣ್ಣಗೆಟ್ಟ ನೀರು: ‘ಮುಧೋಳ ಹೊರ ವಲಯದ ಸೇತುವೆ ಹಾಗೂ ತಾಲ್ಲೂಕಿನ ಢವಳೇಶ್ವರ ಬ್ಯಾರೇಜ್‌ ಬಳಿ ನದಿ ನೀರು ಮಲಿನಗೊಂಡು ಕಪ್ಪು ಹಾಗೂ ಕಂದುಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಸ್ಥಳೀಯರು ನೀಡಿದ ದೂರು ಆಧರಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸ್ಥಳ ಪರಿಶೀಲಿಸಿ ವರದಿ ನೀಡಿದ್ದಾರೆ. ನದಿ ನೀರಿನ ಮಾದರಿಯನ್ನು ತಪಾಸಣೆಗಾಗಿ ಬೆಳಗಾವಿಯ ಪ್ರಾದೇಶಿಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಮಣಿಯಾರ ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಅಪಾಯಕಾರಿ ತ್ಯಾಜ್ಯ: ಕಾರ್ಖಾನೆಗಳಲ್ಲಿ ಸಕ್ಕರೆ ತಯಾರಿಕೆ ನಂತರ ಉಳಿಯುವ ಕಬ್ಬಿನ ತ್ಯಾಜ್ಯ ಮೊಲಾಸಿಸ್ ಬಳಸಿ ಸ್ಪಿರೀಟ್ (ಮದ್ಯಸಾರ) ತಯಾರಿಸಲಾಗುತ್ತದೆ. ಈ ವೇಳೆ ಹೊರಬರುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರು ಸ್ಪೆಂಟ್‌ವಾಶನ್ನು (ಸ್ಲೋಪ್ಸ್) ನದಿಗೆ ಬಿಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಒಂದು ಲೀಟರ್ ಸ್ಪಿರಿಟ್ ಸಿದ್ಧಗೊಂಡರೆ 10ರಿಂದ 15 ಲೀಟರ್ ಸ್ಪೆಂಟ್‌ವಾಶ್ ಹೊರಬರುತ್ತದೆ. ಕಾರ್ಖಾನೆಗಳ ಡಿಸ್ಟಿಲರಿ ಸಾಮರ್ಥ್ಯ ಆಧರಿಸಿ ನಿತ್ಯ ಸಾವಿರಾರು ಲೀಟರ್ ಸ್ಪಿರೀಟ್ ಸಿದ್ಧಗೊಳ್ಳುತ್ತದೆ. ಈ ವೇಳೆ ಹೊರಬರುವ ಸ್ಪೆಂಟ್‌ವಾಶ್‌ನ ವೈಜ್ಞಾನಿಕ ವಿಲೇವಾರಿಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಮುಧೋಳದ ಪರಿಸರ ಹೋರಾಟಗಾರ ವಿಶ್ವನಾಥ ಉದಗಟ್ಟಿ ಆರೋಪಿಸುತ್ತಾರೆ.

‘ತ್ಯಾಜ್ಯ ಬೆರೆತ ನೀರನ್ನು ಹೊಲಗಳಿಗೆ ಹಾಯಿಸಿದರೆ ಬೆಳೆಗಳು ಹಾಳಾಗುತ್ತವೆ. ನದಿ ಪಾತ್ರದ ಜನ– ಜಾನುವಾರು ಕುಡಿಯಲು ಬಳಸುವುದರಿಂದ ಅವರ ಆರೋಗ್ಯದ ಪಾಡೇನು, ಜಲಚರಗಳ ಗತಿಯೇನು? ನದಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕಲುಷಿತಗೊಳ್ಳುವ ಅಪಾಯವಿದೆ’ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಣ್ಣೊರೆಸುವ ತಂತ್ರ: ‘ಘಟಪ್ರಭಾ ನದಿ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಮಲಿನವಾಗುವುದಿಲ್ಲ. ಬಾಗಲಕೋಟೆ ಜಿಲ್ಲೆ ಪ್ರವೇಶಿಸಿದ ನಂತರವೂ ಕೈಗಾರಿಕಾ ತ್ಯಾಜ್ಯ ಹೊತ್ತು ಸಾಗುತ್ತದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ, ಇಲ್ಲವೇ ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಕೆಲವು ಕಾರ್ಖಾನೆಗಳವರು ನದಿಗೆ ತ್ಯಾಜ್ಯ ಹರಿಬಿಡುತ್ತಾರೆ. ಈ ವೇಳೆ ನದಿ ಹೆಚ್ಚು ರಭಸವಾಗಿ ಹರಿಯುವುದರಿಂದ ಹಾಗೂ ಮಳೆ ನೀರಿನಿಂದ ಕೆಂಪು ಬಣ್ಣಕ್ಕೆ ತಿರುಗುವುದರಿಂದ ತ್ಯಾಜ್ಯದ ದಟ್ಟಣೆ ಕಾಣಸಿಗುವುದಿಲ್ಲ ಎಂಬುದು ಅವರ ಲೆಕ್ಕಾಚಾರ’ ಎಂದು ವಿಶ್ವನಾಥ ಹೇಳುತ್ತಾರೆ.

‘ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೂ ಇದು ಗೊತ್ತಿದೆ. ನದಿ ತೀರದ ನಿವಾಸಿಗಳು ದೂರು ಕೊಟ್ಟಾಗ ತಕ್ಷಣ ಸ್ಥಳಕ್ಕೆ ಬರುವುದಿಲ್ಲ. ನೀರು ತಿಳಿಗೊಂಡ ನಂತರ ಬರುತ್ತಾರೆ. ನೆಪ ಮಾತ್ರಕ್ಕೆ ಹೀಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಸಿ, ಇಲ್ಲವೇ ಕೇಸು ದಾಖಲಿಸಿ ಸುಮ್ಮನಾಗುತ್ತಾರೆ. ಕೆಲವರು ಸ್ಥಳ ಪರಿಶೀಲನೆಗೆ ಕಾರ್ಖಾನೆಯವರೇ ಕಳುಹಿಸಿಕೊಟ್ಟ ವಾಹನಗಳಲ್ಲಿ ಬರುತ್ತಾರೆ. ಕೊನೆಗೆ ಅವರ ಆತಿಥ್ಯ ಸ್ವೀಕರಿಸಿ ಮರಳುತ್ತಾರೆ’ ಎಂದು ಆರೋಪಿಸುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಸತೀಶ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸತೀಶ ಜಾರಕಿಹೊಳಿ ಅವರಿಗೆ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ. ವಿಶ್ವರಾಜ ಶುಗರ್ಸ್‌ನ ಅಧ್ಯಕ್ಷ ರಮೇಶ ಕತ್ತಿ ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು.

ಏನಿದು ಸ್ಪೆಂಟ್‌ವಾಶ್? 
‘ಸಕ್ಕರೆ ಕಾರ್ಖಾನೆಗಳ ಡಿಸ್ಟಿಲರಿಗಳಲ್ಲಿ ಆಲ್ಕೊಹಾಲ್ ತಯಾರಿಕೆ ವೇಳೆ ಮೊಲಾಸಿಸನ್ನು ಬಾಯ್ಲರ್‌ಗಳಲ್ಲಿ ಹುದುಗು ಬರಿಸಲಾಗುತ್ತದೆ. ಆಗ ಸಂಗ್ರಹವಾಗುವ ಮೇಲಿನ ತಿರುಳನ್ನು ಭಟ್ಟಿ ಇಳಿಸಲು ಬಳಸಲಾಗುತ್ತದೆ. ಕೆಳಗೆ ಉಳಿದುಕೊಳ್ಳುವ ಕೊಳಕು ದ್ರವ್ಯಗಳ ಸಾರವೇ ಸ್ಪೆಂಟ್‌ವಾಶ್’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಹೇಳುತ್ತಾರೆ.

‘ಅದರಲ್ಲಿ ವಿಷಕಾರಿ ರಾಸಾಯನಿಕ ಕ್ಷಾರ, ಹುದುಗುವಿಕೆ ನಂತರ ಬಾಯ್ಲರ್ ತೊಳೆದಾಗಿನ ನೀರು, ಕೀಲೆಣ್ಣೆ ಹೀಗೆ ಎಲ್ಲಾ ವರ್ಜ್ಯವೂ ಒಳಗೊಂಡಿರುತ್ತದೆ. ಸ್ಪೆಂಟ್‌ವಾಶ್ ಅನ್ನು ದೊಡ್ಡ ದೊಡ್ಡ ಟಬ್‌ಗಳಲ್ಲಿ ಇಟ್ಟು ಸೌರಫಲಕಗಳ ಬಳಸಿ ಅದರಲ್ಲಿನ ನೀರಿನ ಅಂಶ ಆವಿಯಾಗುವಂತೆ ಮಾಡಿ, ಉಳಿದ ಘನತ್ಯಾಜ್ಯವನ್ನು ಮಣ್ಣಿನಲ್ಲಿ ಹೂಳಲಾಗುತ್ತದೆ. ಇದು ವೈಜ್ಞಾನಿಕ ವಿಲೇವಾರಿ ಕ್ರಮ’ ಎಂದು ಮಾಹಿತಿ ನೀಡಿದರು.

* ಘಟಪ್ರಭಾ ನದಿ ಬಾಗಲಕೋಟೆ ಜಿಲ್ಲೆ ಪ್ರವೇಶಿಸುವ ಢವಳೇಶ್ವರ ಬಳಿ ಹೆಚ್ಚು ಮಲಿನಗೊಂಡಿರುವುದು ಕಂಡುಬಂದಿದೆ. ಸ್ಥಳ ಪರಿಶೀಲನೆ ನಡೆಸಿ ಮಂಡಳಿಗೆ ವರದಿ ಸಲ್ಲಿಸಿರುವೆ.
-ಎಂ.ಎ.ಮಣಿಯಾರ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !