ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟಪ್ರಭೆ ಮುನಿಸು; ತತ್ತರ

ಕಲಾದಗಿ: ಸಾವಿರಾರು ಎಕರೆ ಹಣ್ಣಿನ ತೋಟ ನಾಶ
Last Updated 31 ಆಗಸ್ಟ್ 2019, 20:42 IST
ಅಕ್ಷರ ಗಾತ್ರ

ಬಾಗಲಕೋಟೆ: ಘಟಪ್ರಭೆಯ ಪ್ರವಾಹದ ಆರ್ಭಟಕ್ಕೆ ಸಿಲುಕಿ ‘ಕೃಷ್ಣಾ ಸೀಮೆಯಹಣ್ಣಿನ ಬುಟ್ಟಿ’ ಎನಿಸಿದ ತಾಲ್ಲೂಕಿನ ಕಲಾದಗಿ ಹೋಬಳಿ ಅಕ್ಷರಶಃ ನಲುಗಿದೆ.

ಬ್ರಿಟಿಷರ ಕಾಲದಲ್ಲಿ ಜಿಲ್ಲಾ ಕೇಂದ್ರ ಎನಿಸಿದ್ದ ಕಲಾದಗಿ ಈಗ ಸ್ಥಳೀಯವಾಗಿ ದೊಡ್ಡ ಹಣ್ಣಿನ ಮಾರುಕಟ್ಟೆ. ಇಲ್ಲಿ ಬೆಳೆಯುವ ದಾಳಿಂಬೆ ಹಾಗೂ ಸಪೋಟಾಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರತಿ ವರ್ಷ ಇಲ್ಲಿಂದ ಹೊರ ರಾಜ್ಯಗಳಿಗೆ ಮಾತ್ರವಲ್ಲದೇ ವಿದೇಶಕ್ಕೂ ರಫ್ತು ಆಗುತ್ತವೆ.

ಕಲಾದಗಿ ಸೇರಿದಂತೆ ಸುತ್ತಲಿನ ಅಂಕಲಗಿ, ಶಾರದಾಳ, ದೇವನಾಳ, ಗೋವಿಂದಕೊಪ್ಪ, ಸಂಶಿ, ಚಿಕ್ಕ ಸಂಶಿ, ಬೇವಿನಾಳ, ಸೊಕನಾದಗಿ, ಉದಗಟ್ಟಿಯಲ್ಲಿ ಸಾವಿರಾರು ಎಕರೆ ದಾಳಿಂಬೆ, ಚಿಕ್ಕು (ಸಪೋಟ), ಪಪ್ಪಾಯಿ, ಪೇರಲ (ಸೀಬೆ), ಮಾವು, ದ್ರಾಕ್ಷಿ, ಬಾಳೆ, ನಿಂಬೆ ತೋಟಗಳು ನಾಶವಾಗಿವೆ.

ವಾರಗಟ್ಟಲೇ ನೀರಿನಲ್ಲಿ ಮುಳುಗಿದ್ದ ಪರಿಣಾಮ ಹಣ್ಣಿನ ಸಮೇತ ಗಿಡಗಳು ಕಪ್ಪು ಬಣ್ಣಕ್ಕೆ ತಿರುಗಿದ್ದು ಸುಟ್ಟು ಹೋದಂತೆ ಕಾಣುತ್ತಿವೆ. ಬಾಳೆ ಗಿಡಗಳು ಮುರಿದುಬಿದ್ದು ಇಲ್ಲವೇ ಬುಡಸಮೇತ ನೀರಿನಲ್ಲಿ ತೇಲಿಕೊಂಡು ಹೋಗಿವೆ. ಕೆಲವು ಕಡೆ ನದಿ ಪಕ್ಕದ ಹೊಲಗಳಲ್ಲಿನ ಮಣ್ಣು ಹಾಗೂ ಕಬ್ಬಿನ ಸೋಗೆ ಕೊಚ್ಚಿ ಬಂದು ಹಣ್ಣಿನ ಗಿಡಗಳನ್ನು ಮುಚ್ಚಿಹಾಕಿದೆ. ನದಿಯಲ್ಲಿ ಪ್ರವಾಹ ಇಳಿದಿದ್ದರೂ ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪಿಸಿದ್ದು, ಹಣ್ಣಿನ ತೋಟ–ಕಬ್ಬಿನ ಗದ್ದೆಗಳು ಇನ್ನೂ ಜಲಾವೃತ ಆಗಿರುವುದು ‘ಪ್ರಜಾವಾಣಿ’ ಕಲಾದಗಿ ಹೋಬಳಿಯಲ್ಲಿ ಸಂಚರಿಸಿದಾಗ ಕಂಡುಬಂದಿತು. ನೀರು ಕಡಿಮೆ ಆದ ಕಡೆ ಕೆಸರು ತುಂಬಿದ್ದು, ತೋಟಗಳ ಒಳಗೆ ಕಾಲಿಡಲು ಆಗದಂತಹ ಪರಿಸ್ಥಿತಿ ಇದೆ.

‘ನಮ್ಮದು 40 ವರ್ಷದ ಹಳೆಯ ದಾಳಿಂಬೆ ತೋಟ. ಎರಡೇ ತಾಸಿನಲ್ಲಿ ಆರು ಎಕರೆ ಸಂಪೂರ್ಣ ಮುಳುಗಿ ಹೋಯ್ತು. ಬೇರೆ ಯಾವುದೇ ಅದಾಯದ ಮೂಲ ನಮಗಿಲ್ಲ. ನಾವು ಬೀದಿಗೆ ಬಂದಿದ್ದೇವೆ’ ಎಂದು ಕಲಾದಗಿಯ ಮೋದಿನ್‌ಸಾಬ್ ರೋಣ ಅಳಲು ತೋಡಿಕೊಂಡರು.

1,200 ಹೆಕ್ಟೇರ್ ದಾಳಿಂಬೆ ನಾಶ

‘ಕಲಾದಗಿ ಹೋಬಳಿಯಲ್ಲಿ ಪ್ರಾಥಮಿಕ ಸಮೀಕ್ಷೆ ಅನ್ವಯ 1,200 ಹೆಕ್ಟೇರ್ ಹಣ್ಣಿನ ಬೆಳೆಗಳು ನಾಶವಾಗಿವೆ. ಅದರಲ್ಲಿ 900 ಹೆಕ್ಟೇರ್ ದಾಳಿಂಬೆ ಸೇರಿದೆ. ನಿಖರ ಸಮೀಕ್ಷೆ ಈಗ ಆರಂಭಿಸಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಲ್ಲನಗೌಡ ಮೇಟಿ ತಿಳಿಸಿದರು.

‘ಎಂಟತ್ತು ದಿನ ನೀರಿನಲ್ಲಿ ಮುಳುಗಿದ್ದ ಕಾರಣ ಬೇರಿನ ಭಾಗದಿಂದ ಗಿಡದ ತುದಿಗೆ ಆಹಾರ ಪೂರೈಕೆ ಸ್ಥಗಿತಗೊಂಡಿದೆ. ಹಾಗಾಗಿ ಅವು ಕಪ್ಪು ಬಣ್ಣಕ್ಕೆ ತಿರುಗಿವೆ. ಕೆಲವು ತೋಟಗಳು ಸರಿಪಡಿಸಲಾಗದಷ್ಟು ಹಾನಿಯಾಗಿವೆ. ಇನ್ನೂ ಕೆಲವು ಸಾವಯವ ಗೊಬ್ಬರ, ಕೃತಕ ಪೋಷಕಾಂಶಗಳನ್ನು ಕೊಟ್ಟರೆ ಬದುಕಲಿವೆ. ಅವುಗಳ ಚೇತರಿಕೆಗೆ ಇನ್ನೂ ಒಂದು ವರ್ಷ ಬೇಕಾಗಲಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT