ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಞಾನಪೀಠ ಬಂದಾಗ ಪತ್ರ ಬರೆದು ತಿಳಿಸಿದ್ದ....

ನೆನಪು ಮೆಲುಕು ಹಾಕಿದ ಗಿರೀಶ ಕಾರ್ನಾಡರ ಸ್ನೇಹಿತ ವಿನಾಯಕ ಬಾರ್ಕೂರ್
Last Updated 10 ಜೂನ್ 2019, 15:50 IST
ಅಕ್ಷರ ಗಾತ್ರ

ಶಿರಸಿ: ‘ಸಿನಿಮಾವೊಂದರ ಶೂಟಿಂಗೆಂದು ಹಾವೇರಿಗೆ ಬಂದಿದ್ದ ಅವ, ಒಂದು ದಿನ ಬಿಡುವು ಮಾಡಿಕೊಂಡು ಶಿರಸಿಗೆ ಬಂದು ‘ಪಂಚವಟಿ’ ಹೋಟೆಲ್‌ನಲ್ಲಿ ತಂಗಿದ್ದ. ಸುತ್ತಲೂ ಪ್ರೆಸ್‌ನವರು ಕೂತಿದ್ರು. ಇನ್ನೇನು ಮಾತಾಡಬೇಕು ಎಂಬಷ್ಟರಲ್ಲಿ ನಾನು ರೂಮಿನ ಒಳ ಹೊಕ್ಕಿದೆ. ನನ್ನ ನೋಡಿದವನೇ ಜಿಗಿದಂತೆ ಎದ್ದು ಬಂದು ಗಟ್ಟಿಯಾಗಿ ತಬ್ಬಿಕೊಂಡ. ನನ್ನ ಹಳೆಯ ಸ್ನೇಹಿತ ಬಂದಿದ್ದಾನೆ. ಇದು ನನ್ನ–ಅವನ ನಡುವಿನ ಸಮಯ. ಉಳಿದವರೆಲ್ಲ ಹೋಗಬಹುದು ಎಂದುಬಿಟ್ಟ...’ ಹೀಗೆ ನೆನಪಿನ ಸುರುಳಿ ಬಿಚ್ಚುವಾಗ ವಿನಾಯಕ ಬಾರ್ಕೂರ್ ಕಣ್ಣು ತೇವವಾಗಿತ್ತು.

20 ವರ್ಷಗಳ ಹಿಂದೆ ಗಿರೀಶನನ್ನು ಭೇಟಿಯಾದ ಮೇಲೆ ಮತ್ತೆ ಅವನ್ನು ಕಾಣುವ ಅವಕಾಶ ಸಿಗಲಿಲ್ಲ. ಅದೇ ಕೊನೆಯ ಭೇಟಿಯಾಗಬಹುದೆಂದು ಯೋಚಿಸಿರಲೂ ಇಲ್ಲ ಎಂದು ಅವರು ಕೆಲಕ್ಷಣ ಮೌನರಾದರು.

ಇಲ್ಲಿನ ಮಾರಿಗುಡಿ ಸಮೀಪದ ವಿನಾಯಕ ಬಾರ್ಕೂರ್ ಮತ್ತು ಸಾಹಿತಿ ಗಿರೀಶ ಕಾರ್ನಾಡ ಅವರು ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸಹಪಾಠಿಗಳು. ಒಟ್ಟಿಗೇ ಆಟವಾಡಿದವರು, ಒಂದೇ ತಾಟಿನಲ್ಲಿ ಊಟ ಮಾಡುವಷ್ಟು ಆತ್ಮೀಯ ಸ್ನೇಹಿತರು. ಕಾರ್ನಾಡ ಜೊತೆಗಿನ ಒಡನಾಟವನ್ನು ಅವರು ‘ಪ್ರಜಾವಾಣಿ’ ಬಳಿ ಹಂಚಿಕೊಂಡರು. ‘ಗಿರೀಶ ಭಾರೀ ಹುಷಾರು ಹುಡುಗನಾಗಿದ್ದ. ಎಲ್ಲದರಲ್ಲೂ ಪರಿಣಿತ ಅವ. ಕ್ಲಾಸಿನಲ್ಲಿ ಇಂಗ್ಲಿಷ್ ತರಗತಿ ಇದ್ದರಂತೂ ಗಿರೀಶನೇ ಹೀರೊ. ಇಂಗ್ಲಿಷ್‌ ಮಾಸ್ತರರು ಪತ್ರ ಬರೆಯಿರೆಂದರೆ, ಒಂದು ನಿಮಿಷದಲ್ಲಿ ಪತ್ರ ಬರೆದು ತೋರಿಸುತ್ತಿದ್ದ. ಕ್ಲಾಸಿನಲ್ಲಿ ಬಿಡುವಿದ್ದಾಗ ನಾಟಕ ಬರೆಯುತ್ತಿದ್ದ’ ಎನ್ನುವಾಗ ಬಾರ್ಕೂರ್ ಮಾರಿಕಾಂಬಾ ಶಾಲೆಯ ಕೊಠಡಿಯಲ್ಲಿ ಕುಳಿತಂತೆ ಮಾತನಾಡುತ್ತಿದ್ದರು.

‘ಗಿರೀಶನ ತಂದೆ ಶಿರಸಿ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಆಗಿದ್ದಾಗ ವಸತಿ ಗೃಹದಲ್ಲಿದ್ದರು. ಇಲ್ಲಿಯೇ ನಿವೃತ್ತರಾದ ಮೇಲೆ ರಾಯರಪೇಟೆಯ ಬಾಳೂರು ಮನೆಯಲ್ಲಿ ಬಾಡಿಗೆಗಿದ್ದರು. ಶಾಲೆ ಮುಗಿದ ಮೇಲೆ ಸಂಜೆ ವೇಳೆಗೆ ಅವ ನಮ್ಮ ಮನೆಗೆ ಬರುತ್ತಿದ್ದ, ಇಲ್ಲ ನಾನು ಅವರ ಮನೆಗೆ ಹೋಗುತ್ತಿದ್ದೆ. 10ನೇ ತರಗತಿಗೆ ಅವ ಧಾರವಾಡಕ್ಕೆ ಹೋದ. ಶಿರಸಿ ಬಿಟ್ಟ ಮೇಲೆ ನಿರಂತರವಾಗಿ ನನಗೆ ಪತ್ರ ಬರೆಯುತ್ತಿದ್ದ. ಪತ್ರದಲ್ಲಿರುವುದು ಬಹುತೇಕ ಶಾಲೆಯ ಸ್ನೇಹಿತರ ನೆನಪುಗಳೇ ಆಗಿದ್ದವು. ಜ್ಞಾನಪೀಠ ಪ್ರಶಸ್ತಿ ಬಂದಾಗಲೂ ಪತ್ರ ಬರೆದು ತಿಳಿಸಿದ್ದ. ಮೊಮ್ಮಗನ ಮದುವೆಗೆ ಮಂಗಲಪತ್ರ ಕಳುಹಿಸಿದ್ದೆ. ಅದಕ್ಕೂ ಉತ್ತರಿಸಿದ್ದ’ ಎಂದ ಅವರು ಪತ್ರಕ್ಕಾಗಿ ಮನೆಯೆಲ್ಲ ತಡಕಾಡಿದರು.

1992ರಲ್ಲಿ ಬಿ.ಎಚ್.ಶ್ರೀಧರ ಪ್ರಶಸ್ತಿ:

ಸಾಹಿತಿ ಬಿ.ಎಚ್.ಶ್ರೀಧರ ಅವರ ಸ್ಮರಣೆಯಲ್ಲಿ ನೀಡುವ ಬಿ.ಎಚ್.ಶ್ರೀಧರ ಪ್ರಶಸ್ತಿಯನ್ನು 1992ರಲ್ಲಿ ಗಿರೀಶ ಕಾರ್ನಾಡರ ‘ತಲೆದಂಡ’ ಕೃತಿಗೆ ನೀಡಲಾಗಿತ್ತು. ‘ಸಾಹಿತಿಗಳಾದ ಸಿದ್ದಲಿಂಗ ಪಟ್ಟಣಶೆಟ್ಟಿ, ಜಿ.ಎಸ್.ಅವಧಾನಿ, ಆರ್.ಪಿ.ಹೆಗಡೆ ಒಳಗೊಂಡ ತಂಡ ಕಾರ್ನಾಡರನ್ನು ಆಯ್ಕೆ ಮಾಡಿತ್ತು. ನಂತರ ಹಾವೇರಿಯಲ್ಲಿ ಶೂಟಿಂಗ್‌ಗೆ ಬಂದಾಗ ಶಿರಸಿಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ನಾನು ಕಿರಣ ಭಟ್, ಸಿ.ಎನ್.ಹೆಗಡೆ ಸೇರಿ ಅವರೊಡನೆ ಚಹಾ ಕುಡಿಯುತ್ತ ಕೆಲವು ಹೊತ್ತು ಮಾತನಾಡಿದ್ದೆವು. ಅವರ ವ್ಯಕ್ತಿತ್ವ, ಸರಳತೆ ನಮಗೆ ಪುಳಕವುಂಟು ಮಾಡಿತ್ತು’ ಎಂದು ನೆನಪಿಸಿಕೊಂಡರು ಸಾಹಿತ್ಯ ಪ್ರಶಸ್ತಿ ಸಮಿತಿಯ ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT