ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಚಿಕಿತ್ಸೆಗೆ ಮಗಳಿಂದ ಸಿಎಂಗೆ ಕೋರಿಕೆ: ಟಿಕ್‌ಟಾಕ್‌ ವಿಡಿಯೊ ವೈರಲ್‌ 

Last Updated 14 ಏಪ್ರಿಲ್ 2020, 15:18 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಪಟ್ಟಣದ ಜ್ಯೋತಿ ಕಟ್ಟಿಮನಿ ಎನ್ನುವವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರ ತಾಯಿಗೆ ಚಿಕಿತ್ಸೆ ಕೊಡಿಸುವಂತೆ ಟಿಕ್‌ಟಾಕ್‌ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್‌ ಆಗಿದೆ.

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಅವರು ಲಾಕ್‌ಡೌನ್‌ ನಂತರ ಪಟ್ಟಣಕ್ಕೆ ಮರಳಿದ್ದರು. ಅದಾದ ಕೆಲವೇ ದಿನಗಳಲ್ಲಿ (ಮಾ.28) ಅವರ ತಂದೆ ನಾಗಪ್ಪ ಕಟ್ಟಿಮನಿ ಮೃತಪಟ್ಟಿದ್ದರು. ಪಾರ್ಶ್ವವಾಯುವಿನಿಂದ ತಾಯಿ ಬಳಲುತ್ತಿದ್ದು, ಕೆಲಸವಿಲ್ಲದೆ ಕಂಗೆಟ್ಟಿ ಹೋಗಿರುವ ಅವರು ದಿಕ್ಕು ತೋಚದೆ ಟಿಕ್‌ಟಾಕ್‌ ಮೂಲಕ ಸಿ.ಎಂ. ಮೊರೆ ಹೋಗಿದ್ದಾರೆ.

‘ನಮಸ್ತೆ ಸರ್‌, ನಾನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಜ್ಯೋತಿ ಅಂತೇಳಿ. ಸರ್‌, ನಿಮ್ಮಿಂದ ಸಹಾಯ ಆಗಬೇಕಿದೆ. ನಮ್ಮ ತಂದೆ ಮೃತರಾಗಿ 15 ದಿನಗಳಾಗಿವೆ. ಅವರಿಗೆ ಹಠಾತ್ ಸ್ಟ್ರೋಕ್ ಆಗಿಬಿಡ್ತು ಮಾರ್ಚ್‌ 28ರಂದು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಿಲ್ಲ. ಬೇರೆ ಕಡೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದರು. ಅಲ್ಲಿಂದ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೂ ಸರಿಯಾಗಿ ಚಿಕಿತ್ಸೆ ದೊರೆಯದೇ ನಮ್ಮ ತಂದೆ ತೀರಿಕೊಂಡು ಬಿಟ್ರು. ಈಗ ನಮ್ಮ ತಾಯಿ ಯಶೋದಮ್ಮ ಪಾರ್ಶ್ವವಾಯುವಿನಿಂದ ಕಳೆದ ಎರಡೂವರೆ ವರ್ಷದಿಂದ ಬಳಲುತ್ತಿದ್ದಾರೆ. ಈಗ ಒಂದು ಕಾಲಿಗೆ ಗ್ಯಾಂಗ್ರಿನ್ ಆಗಿದೆ. ಬೆರಳನ್ನೂ ಕತ್ತರಿಸಲಾಗಿದೆ. ಈಗ ಕಾಲು ಮತ್ತೇ ಊನಾಗಿದೆ. ನಡೆಯೋಕೆ ಆಗ್ತಿಲ್ಲ ಅಂತಾ ಹೇಳ್ತಿದಾರೆ. ಇಬ್ರು ಮಕ್ಕಳಿದ್ದೇವೆ. ನಮಗೆ ಏನೂ ತೋಚದಾಗಿದೆ.

ನಮ್ಮ ಸಮಸ್ಯೆಗಳನ್ನು ತಮಗೆ ಎಲ್ಲ ಹೇಳಿದ್ದೇನೆ ಸರ್, ನೀವು ತುಂಬಾ ಜನಗಳಿಗೆ ಸಹಾಯ ಮಾಡಿದ್ದೀರಿ ಎಂದು ಗೊತ್ತಿದೆ. ನನಗೆ ಈ ಥರ ಪರಿಸ್ಥಿತಿ ಬಂದಿದೆ. ನನಗೆ ಬರುತ್ತಿದ್ದ ₹16ಸಾವಿರ ಸಂಬಳದಲ್ಲಿ ಕೆಲವರಿಗೆ ನಾನು ಸಹಾಯ ಮಾಡಿದ್ದೇನೆ. ಈಗ ನಾನು ಕೈಚಾಚುತ್ತಿದ್ದೇನೆ. ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಬದುಕಿಸಿ ಕೊಡಿ, ನನಗೆ ಒಂದು ಕೆಲಸ ಕೊಡಿಸಿ’ ಎಂದು ವಿಡಿಯೊದಲ್ಲಿ ಕೋರಿದ್ದಾರೆ.

ವಿಡಿಯೊ ನೋಡಿದ ಶಾಸಕ ಎಸ್‌. ಭೀಮಾ ನಾಯ್ಕ ಅವರು ಆಹಾರ ಸಾಮಗ್ರಿ ವಿತರಿಸಿದ್ದಾರೆ. ತಹಶೀಲ್ದಾರ್‌ ಆಶಪ್ಪ ಪೂಜಾರ್‌ ಅವರು ಬಳ್ಳಾರಿಯ ವಿಮ್ಸ್‌ನಲ್ಲಿ ಯಶೋದಮ್ಮ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

ಈ ಸಂಬಂಧ ಜ್ಯೋತಿ ಅವರನ್ನು ಸಂಪರ್ಕಿಸಿದಾಗ, ಈಗ ಬಳ್ಳಾರಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT