ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಒಂದು ಗೋಡೆ ಬಿದ್ದಿದ್ದರೂ ಪೂರ್ಣ ಪರಿಹಾರ'-ಬಿ.ಎಸ್.ಯಡಿಯೂರಪ್ಪ ಸೂಚನೆ

ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
Last Updated 3 ಅಕ್ಟೋಬರ್ 2019, 15:07 IST
ಅಕ್ಷರ ಗಾತ್ರ

ಬೆಳಗಾವಿ: ‘ನೆರೆಯಿಂದಾಗಿ ಒಂದು ಗೋಡೆ ಬಿದ್ದಿದ್ದರೂ ಅಂತಹ ಮನೆಗಳಿಗೆ ಪೂರ್ಣ ಪರಿಹಾರ (₹ 5 ಲಕ್ಷ) ಕೊಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ಗುರುವಾರ ನಡೆದ ನೆರೆ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ಈ ಭಾಗದಲ್ಲಿ ಬಹುತೇಕರು ಮಣ್ಣಿನ ಮನೆ ಕಟ್ಟಿಕೊಂಡಿದ್ದಾರೆ. ಒಂದು ಗೋಡೆ ಬಿದ್ದರೆ ಉಳಿದವೂ ಕ್ರಮೇಣ ಕುಸಿಯುತ್ತವೆ. ಹೀಗಾಗಿ, ಮನೆ ಹಾನಿ ವಿಷಯದಲ್ಲಿ ಎ, ಬಿ, ಸಿ ಎಂದು ವರ್ಗೀಕರಣ ಮಾಡದೇ ಗರಿಷ್ಠ ಪರಿಹಾರ ನೀಡಬೇಕು. ಆಗ, ಎಲ್ಲರೂ ನಿಮ್ಮ ಫೋಟೊ ಹಾಕಿಕೊಳ್ಳುತ್ತಾರೆ’ ಎಂದರು.

ಬಳಿಕ ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಾಖಲೆ, ಹರಿಕಥೆ ಬೇಡ

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಜಿಲ್ಲೆಯಲ್ಲಿ ನೆರೆಯಿಂದ 69,381 ಮನೆಗಳಿಗೆ ಹಾನಿಯಾಗಿದೆ. 57ಸಾವಿರ ಮನೆಗಳ ಮಾಹಿತಿಯನ್ನು ರಾಜೀವ್‌ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಉಳಿದವುಗಳಿಗೆ ದಾಖಲೆ ಇಲ್ಲ’ ಎಂದರು.

‘ದಾಖಲೆ, ಹರಿಕಥೆ ಏನೂ ಬೇಕಾಗಿಲ್ಲ. ಉದಾರವಾಗಿ ವರ್ತಿಸಿ ಸಂತ್ರಸ್ತರಿಗೆ ಸ್ಪಂದಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.

ಕಂದಾಯ ಇಲಾಖೆ ಕಾರ್ಯದರ್ಶಿ ಆದೇಶದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ‘ಕಾರ್ಯದರ್ಶಿ ಜೊತೆ ಮಾತಾಡುವುದೇನಿದೆ, ನಾನೇ ಹೇಳುತ್ತಿಲ್ಲವೇ? ಯಾವ ಕಂದಾಯ ಕಾರ್ಯದರ್ಶಿ ಆದೇಶವನ್ನೂ ಕಾಯಬೇಡಿ’ ಎಂದು ಸೂಚಿಸಿದರು. ತಮ್ಮ ಕಾರ್ಯದರ್ಶಿ ಶಿವಯೋಗಿ ಕಳಸದ ಅವರಿಂದಲೂ ನಿರ್ದೇಶನ ಕೊಡಿಸಿದರು!

ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ‘ಬಾಡಿಗೆ ಮನೆಯಲ್ಲಿ ಇದ್ದವರ ಬದಲಿಗೆ ಮಾಲೀಕರಿಗೆ ₹ 10ಸಾವಿರ ಪರಿಹಾರ ಕೊಡಲಾಗಿದೆ’ ಎಂದು ದೂರಿದರು. ‘ಪರಿಶೀಲಿಸಿ ಅರ್ಹರಿಗೆ ಪರಿಹಾರ ಕೊಡಬೇಕು’ ಎಂದು ಮುಖ್ಯಮಂತ್ರಿ ತಿಳಿಸಿದರು.

1,763 ಮಗ್ಗಗಳಿಗೆ ಹಾನಿ?

‘ನೆರೆಯಿದ ಹಾನಿ ಅನುಭವಿಸಿದ ಮುಖ್ಯ ರಸ್ತೆಗಳ ಬದಿಯ ಸಣ್ಣ ವ್ಯಾಪಾರಿಗಳಿಗೆ ₹ 10ಸಾವಿರ ತಾತ್ಕಾಲಿಕ ಪರಿಹಾರ ಕೊಡಬೇಕು’ ಎಂದು ಸವದತ್ತಿ–ಯಲ್ಲಮ್ಮ ಶಾಸಕ ಆನಂದ ಮಾಮನಿ ಕೋರಿದರು.

‘ಜಿಲ್ಲೆಯಲ್ಲಿ 1,763 ಮಗ್ಗಗಳು ಮುಳುಗಡೆಯಾಗಿದ್ದು, ಎಲ್ಲದಕ್ಕೂ ತಲಾ ₹ 25ಸಾವಿರ ಪರಿಹಾರ ಕಲ್ಪಿಸಬೇಕು’ ಎಂದು ಯಡಿಯೂರಪ್ಪ ಸೂಚಿಸಿದರು.

ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ‘ಇನ್ನೂ ನಗರದಲ್ಲಿ ಮನೆಗಳ ಹಾನಿ ಸಮೀಕ್ಷೆಯೇ ಮುಗಿದಿಲ್ಲ. ಕೂಡಲೇ ಪೂರ್ಣಗೊಳಿಸಿ ಪರಿಹಾರ ಕೊಡಬೇಕು. ರಸ್ತೆಗಳು ಹಾಳಾಗಿದ್ದು, ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಬೆಳೆ ಹಾನಿ ಪರಿಹಾರ ಶೀಘ್ರ

‘ವಿದ್ಯುತ್‌ ಪರಿವರ್ತಕಗಳನ್ನು ಸರಿಯಾಗಿ ಪೂರೈಸುತ್ತಿಲ್ಲ. ತಪ್ಪು ಮಾಹಿತಿ ‌ಕೊಡಬೇಡಿ’ ಎಂದು ಉಪಮುಖ್ಯಮಂತ್ರಿ ಸವದಿ ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

‘ವಾರದೊಳಗೆ ವಿದ್ಯುತ್ ಮಾರ್ಗಗಳನ್ನು ಸರಿಪಡಿಸಬೇಕು. ದೂರು ಬಂದರೆ ಸಹಿಸುವುದಿಲ್ಲ. ಕೇಂದ್ರದಿಂದ ಹಣ ಬಂದ ನಂತರ ಬೆಳೆ ಹಾನಿ ಪರಿಹಾರ ವಿತರಿಸಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ‌ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲನ್ ಬಿಸ್ವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT