ಮಂಗಳವಾರ, ಮೇ 26, 2020
27 °C

ಕರ್ನಾಟಕ - ಕೇರಳ ಗಡಿಯಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ದಿಗ್ಬಂಧನ ವಿಧಿಸಿದ್ದರೂ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಅನ್ನು ಪೊಲೀಸರು ತಡೆದು ನಿಲ್ಲಿಸುವುದು ಅಮಾನವೀಯ. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿ ದಿಗ್ಭಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಹಲವು ಧಾರುಣ ಘಟನೆಗಳು ವರದಿಯಾಗುತ್ತಿದ್ದು, ಕನ್ನಡಿಗರು ಹೆಚ್ಚಾಗಿರುವ ಕಾಸರಗೋಡು, ಮಂಜೇಶ್ವರ ಮುಂತಾದೆಡೆಯಿಂದ ನೂರಾರು ರೋಗಿಗಳು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಬರುತ್ತಾರೆ. ನೂರಕ್ಕೂ ಹೆಚ್ಚು ಆ್ಯಂಬುಲೆನ್ಸ್ಗಳು ಸಂಚರಿಸುತ್ತಿದ್ದವು, ಗಡಿಯಲ್ಲಿ ಸಂಚಾರಕ್ಕೆ ತಡೆ ನೀಡಿರುವುದರಿಂದಾಗಿ ತೊಂದರೆಯುಂಟಾಗಿದೆ. ಇತ್ತೀಚೆಗೆ ಮಂಗಳೂರಿನ ಮಹಿಳೆಯೊಬ್ಬರು ಮಂಜೇಶ್ವರದಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆ್ಯಂಬುಲೆನ್ಸ್ನಲ್ಲಿ ಬಂದದ್ದನ್ನು ತಡೆದು ವಾಪಸ್ ಕಳಿಸಲಾಗಿದೆ. ಇದರಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ. 

ಮತ್ತೊಬ್ಬ ಗರ್ಭಿಣಿ ಕಾಸರಗೋಡಿನಿಂದ ಹೆರಿಗೆಗಾಗಿ ಮಂಗಳೂರಿಗೆ ಬರುವಾಗ ಆ್ಯಂಬುಲೆನ್ಸ್ ತಡೆದು ನಿಲ್ಲಿಸಿದಾಗ ಅಲ್ಲೇ ಹೆರಿಗೆಯಾಗಿದೆ. ಕ್ಯಾನ್ಸರ್, ಹೃದಯ ಮತ್ತು ಮೂತ್ರಕೋಶ ಸಂಬಂಧಿ ತುರ್ತು ಹಾಗೂ ಉನ್ನತ ಚಿಕಿತ್ಸೆಗೆ ಗಡಿಭಾಗದ ಬಹುತೇಕರು ಮಂಗಳೂರನ್ನೇ ಆಶ್ರಯಿಸಿದ್ದಾರೆ. ಪೊಲೀಸರು ತುರ್ತು ಪ್ರಕರಣಗಳಿದ್ದಾಗ ಆ್ಯಂಬುಲೆನ್ಸ್ ನಿಲ್ಲಿಸುವುದು ಅಮಾನವೀಯ. ದಿನಬಳಕೆಯ ವಸ್ತುಗಳ ವಾಹನಗಳನ್ನು ತಡೆಹಿಡಿಯಲಾಗಿದೆ ಮತ್ತು ಈಗಾಗಲೇ 7 ಜನರು ಮೃತಪಟ್ಟಿರುವುದು ವರದಿಯಾಗಿದೆ. ಕೂಡಲೇ ಈ ಘಟನೆಗಳ ಬಗ್ಗೆ ಗಮನಹರಿಸಿ ತುರ್ತು ಪ್ರಕರಣಗಳಲ್ಲಿ ಆ್ಯಂಬುಲೆನ್ಸ್ಗಳನ್ನು ಒಳಗೆ ಬಿಡುವಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುತುವರ್ಜಿ ವಹಿಸಲು ಅಧಿಕಾರಿಗಳನ್ನು ನೇಮಿಸಬೇಕು. 

ಕರಾವಳಿ ಕರ್ನಾಟಕದಲ್ಲಿ ಮೀನು ಜನತೆಯ ಪ್ರಮುಖ ಆಹಾರವಾಗಿದ್ದು ಮೀನುಗಾರಿಕೆ ನಿಷೇಧವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು. ದಿನವೊಂದಕ್ಕೆ ನಿರ್ದಿಷ್ಟ ಬೋಟ್‌ಗಳು ಮೀನುಗಾರಿಕೆ ನಡೆಸುವುದು ಹಾಗೂ ನಿಯಮಗಳ ಪ್ರಕಾರ ದೂರ ದೂರ ಕುಳಿತು ಮೀನು ಮಾರಾಟಕ್ಕೂ ಅವಕಾಶ ನೀಡುವ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು