ಲೋಕಸಭೆ ಚುನಾವಣೆ: ಜೋರಾಯ್ತು ‘ಗೋ ಬ್ಯಾಕ್‌ ಶೋಭಾ’ ಅಭಿಯಾನ

ಭಾನುವಾರ, ಮೇ 26, 2019
22 °C
ಉಡುಪಿ–ಚಿಕಮಗಳೂರು ಕ್ಷೇತ್ರದಿಂದ ಟಿಕೆಟ್‌ ನೀಡದಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ

ಲೋಕಸಭೆ ಚುನಾವಣೆ: ಜೋರಾಯ್ತು ‘ಗೋ ಬ್ಯಾಕ್‌ ಶೋಭಾ’ ಅಭಿಯಾನ

Published:
Updated:

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್‌ ನೀಡದಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್‌ ಶೋಭಾ’ ಅಭಿಯಾನ ಆರಂಭವಾಗಿದೆ.

ಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ನೆಟ್ಟಿಗರು ‘ಗೋ ಬ್ಯಾಕ್‌ ಶೋಭಾ’ ಹ್ಯಾಷ್‌ಟ್ಯಾಗ್‌ನಲ್ಲಿ ಅಭಿಯಾನ ಶುರುಮಾಡಿದ್ದು, ಸಾವಿರಾರು ಮಂದಿ ಬೆಂಬಲ ಸೂಚಿಸಿದ್ದಾರೆ. ಜತೆಗೆ, ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡದಂತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಕರ್ನಾಟಕ ಟ್ವಿಟ್ಟರ್‌ ಖಾತೆಗೆ ದೂರಿನ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

‘ಐದು ವರ್ಷ ಕ್ಷೇತ್ರಕ್ಕೆ ಬಾರದೆ ಚುನಾವಣೆಯ ಹೊಸ್ತಿಲಿನಲ್ಲಿ ಉಡುಪಿ–ಚಿಕ್ಕಮಗಳೂರಿಗೆ ಫ್ಲೈಯಿಂಗ್ ವಿಸಿಟ್ ಕೊಡುವ ಸಂಸದೆ ನಮಗೆ ಬೇಡ’, ‘ಮೋದಿ ಮತ್ತೊಮ್ಮೆ’, ಶೋಭಾ ಬೇಡ ಇನ್ನೊಮ್ಮೆ’, ‘ಶೋಭಕ್ಕ ಹಠಾವೋ ಉಡುಪಿ ಬಚಾವೊ’ ಘೋಷಣೆಗಳನ್ನು ಬಹಳಷ್ಟು ಮಂದಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಈ ಬಾರಿ ಸ್ಥಳೀಯ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕು. ವಲಸಿಗರಿಗೆ ಟಿಕೆಟ್‌ ಕೊಟ್ಟರೆ ಪಕ್ಷಕ್ಕೆ ಹಿನ್ನಡೆ ಖಚಿತ. ಕಳೆದ ಬಾರಿ ಮೋದಿ ನೋಡಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದೇವೆ. ನಿರೀಕ್ಷೆಗಳಿಗೆ ತಕ್ಕಂತೆ ಸಂಸದರು ಕೆಲಸ ಮಾಡಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಪರ ಬ್ಯಾಟಿಂಗ್‌: ಇದರ ಮಧ್ಯೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಹಿರಿಯ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರಿಗೆ ಬಿಜೆಪಿ ಟಿಕೆಟ್‌ ನೀಡಬೇಕು ಎಂಬ ಅಭಿಯಾನವೂ ಆರಂಭವಾಗಿದೆ. ‘ಜೆಪಿಎಚ್‌4 ಉಡುಪಿ ಚಿಕ್ಕಮಗಳೂರು2019’ ಹ್ಯಾಷ್‌
ಟ್ಯಾಗ್ ಟ್ವಿಟ್ಟರ್‌ನಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಕೆಲವರು ‘ಈ ಬಾರಿ ಅಭ್ಯರ್ಥಿ ಯಾರಾದರೆ ವೋಟ್ ಮಾಡುತ್ತೀರಿ’ ಎಂಬ ಆನ್‌ಲೈನ್‌ ವೋಟಿಂಗ್ ಸಮೀಕ್ಷೆ ಆರಂಭಿಸಿದ್ದಾರೆ. ಟಿಕೆಟ್‌ ಕೊಡುವ ಮುನ್ನ ಕ್ಷೇತ್ರದಲ್ಲಿ ಸರ್ವೆ ನಡೆಸಿ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

‘ವರಿಷ್ಠರ ನಿರ್ಧಾರ’

ಜಾಲತಾಣಗಳಲ್ಲಿ ‘ಗೋ ಬ್ಯಾಕ್ ಶೋಭಾ’ ಅಭಿಯಾನ ಆರಂಭವಾಗಿರುವುದು ಗಮನಕ್ಕೆ ಬಂದಿದೆ. ಈ ಬಾರಿ ಟಿಕೆಟ್‌ ನೀಡದಂತೆ ಕೆಲವು ಕಾರ್ಯಕರ್ತರು ದೂರು ನೀಡಿದ್ದಾರೆ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ದೂರು: ಬಿಜೆಪಿ ಎಚ್ಚರಿಕೆ

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಫೇಸ್‌ಬುಕ್‌ನಲ್ಲಿ ಬರಹ ಪ್ರಕಟಿಸಿದ ಆರೋಪದ ಮೇಲೆ ಪ್ರವೀಣ್ ಯಕ್ಷಿಮಠ ಎಂಬುವರ ವಿರುದ್ಧ ಗುರುವಾರ ನಗರದ ‘ಸೆನ್‌’ ಠಾಣೆಗೆ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಪೊಲೀಸರು ಮತ್ತೊಮ್ಮೆ ಅವಹೇಳನಕಾರಿ ಬರಹ ಪ್ರಕಟಿಸದಂತೆ ಪ್ರವೀಣ್ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಕೊಡದ ಬಿಜೆಪಿ ಮುಖಂಡರ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಬರಹ ಇಷ್ಟವಾಯಿತೆ?

 • 8

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !