ಕಾಂಗ್ರೆಸ್, ಜೆಡಿಎಸ್ ಬಂಡಾಯ ಶಾಸಕರನ್ನು ಬಿಜೆಪಿಗೆ ಕರೆ ತನ್ನಿ: ಬಿಎಸ್‍ವೈ

7

ಕಾಂಗ್ರೆಸ್, ಜೆಡಿಎಸ್ ಬಂಡಾಯ ಶಾಸಕರನ್ನು ಬಿಜೆಪಿಗೆ ಕರೆ ತನ್ನಿ: ಬಿಎಸ್‍ವೈ

Published:
Updated:

ಬೆಂಗಳೂರು: ರಾಷ್ಟ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿರುವ ಅತೃಪ್ತ ಶಾಸಕರನ್ನು ಬಿಜೆಪಿಗೆ ಕರೆತನ್ನಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ನಡೆದ ಬಳಿಕ ಮೊದಲ ಬಾರಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ವರ್ಷಗಳನ್ನು ಪೂರೈಸುವ ಮೊದಲು ಬಿಜೆಪಿ ಅಧಿಕಾರಕ್ಕೇರುವ ವಿಶ್ವಾಸ ಹೊಂದಿದೆ ಎಂದಿದ್ದಾರೆ.

ಜನಮತ ಬಿಜೆಪಿಗೆ ಇದ್ದ ಕಾರಣ ನಾವು ಅಧಿಕಾರಕ್ಕೇರಬೇಕೆಂದು ಜನರು ಬಯಸುತ್ತಿದ್ದಾರೆ. ಪಕ್ಷವನ್ನು ಸದೃಢಗೊಳಿಸುವುದರ ಜತೆಗೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಗದ್ದುಗೆಗೇರಿಸುವ ಸಲುವಾಗಿ ನಾವು ಕಾಂಗ್ರೆಸ್, ಜೆಡಿಎಸ್‍ನಲ್ಲಿರುವ ಅತೃಪ್ತ ಶಾಸಕರ ಮನೆಗೆ ಹೋಗಿ ಅವರನ್ನು ಬಿಜೆಪಿಗೆ ಕರೆ ತರಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಐದು ವರ್ಷಗಳನ್ನು ಪೂರೈಸುವುದಿಲ್ಲ. ಮುಂದಿನ ಬಜೆಟ್ ವರೆಗೆ ಕಾದು ನೋಡೋಣ, ನಂತರ ಮುಂದಿನ ನಡೆ ಬಗ್ಗೆ ತೀರ್ಮಾನಿಸೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ.
**
‘ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ’
ಬೆಳಗಾವಿ: ‘ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ’ 
ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು 
ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಾರ‍್ಯಾರು ಸಂಪರ್ಕದಲ್ಲಿ ಇದ್ದಾರೆ ಎನ್ನುವುದನ್ನು ಈಗಲೇ ಹೇಳಲಾಗದು’ ಎಂದರು.

ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡಬಾರದೆಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯಂತೆ. ಆ ರೀತಿ ವಿಶ್ಲೇಷಿಸುವವರಿಗೆ ನಾವೇನೂ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಪಕ್ಷಕ್ಕೆ ಉಪಕಾರ ಮಾಡಿದ್ದಾರೆ. ಉಪಕಾರ ಮಾಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ನಾನು ಅವರನ್ನು ಭೇಟಿಯಾಗಲು ಧರ್ಮಸ್ಥಳಕ್ಕೆ ಹೋಗಿದ್ದೆ’ ಎಂದು ಹೇಳಿದರು.

‘ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಬಯಕೆಯಾಗಿತ್ತು. ಅದನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ. ಅವರು ಕೂಡ ಒಪ್ಪಿಕೊಂಡಿದ್ದು, ಯೋಜನೆಗಳು ಮುಂದುವರಿಯಲಿವೆ’ ಎಂದು 
ಹೇಳಿದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕು. ಸಹೋದರ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ, ಎಚ್‌.ಕೆ. ಪಾಟೀಲ– ಈ ಮೂವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಒಳ್ಳೆಯದು’ ಎಂದು 
ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ಬರಹ ಇಷ್ಟವಾಯಿತೆ?

  • 3

    Happy
  • 1

    Amused
  • 1

    Sad
  • 0

    Frustrated
  • 6

    Angry

Comments:

0 comments

Write the first review for this !